»   » ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ

ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ

Posted By:
Subscribe to Filmibeat Kannada

''ಇವರ ಸಂಗೀತ ಕೇಳಿದ್ರೆ ಕಿವಿ ದೂಗುತ್ತೆ. ಇವರ ಮಾತು ಕೇಳಿದ್ರೆ ತುಟಿ ಅರಳುತ್ತೆ. ಇವರ ನಟನೆಗೆ ಇಡೀ ಕರ್ನಾಟಕವೇ ಬಿದ್ದು ಬಿದ್ದು ನಗುತ್ತೆ''

- ಹೀಗಂತ ಹೇಳ್ತಾ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ ರವರನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದು ನಟ ರಮೇಶ್ ಅರವಿಂದ್. [ನಗುವಿನ ಅರಸನ ನೋವಿನ ಕಥೆ ಈ ವೀಕೆಂಡ್ ನಲ್ಲಿ ಅನಾವರಣ]

ರಮೇಶ್ ಕರೆಗೆ ಓಗೊಟ್ಟು ನಗು ನಗುತ್ತಲೇ ಹಾಜರಾದ ಸಾಧು ಕೋಕಿಲ ತಮ್ಮ ಕಷ್ಟದ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಿದರು. ತಮ್ಮನ್ನ ಸಾಕುವುದಕ್ಕೆ ಅಪ್ಪ-ಅಮ್ಮ ಪಟ್ಟ ಕಷ್ಟವನ್ನ ನೆನೆದು ಭಾವುಕರಾದರು.

ತುತ್ತು ಅನ್ನ ತಿನ್ನುವುದಕ್ಕೂ ಪರದಾಡಿರುವ ಸಾಧು ಕೋಕಿಲ ರವರ ಬಾಲ್ಯದ ಬದುಕು ಹೇಗಿತ್ತು ಅಂತ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ಸಾಧು ಕೋಕಿಲ ಬಗ್ಗೆ.....

ನಿಜ ನಾಮ - ಸಹಾಯ ಶೀಲನ್ ಸಾಧ್ರಕ್ (ಸಾಧು ಕೋಕಿಲ)
ಜನ್ಮ ದಿನಾಂಕ - ಮಾರ್ಚ್ 24, 1966
ತಂದೆ - ನಟೇಶ್, ತಾಯಿ - ಮಂಗಳ
ಸಹೋದರರು - ಲಯೇಂದ್ರ, ಲೇಟ್. ಬೆನೆಡಿಕ್ಟ್
ಸಹೋದರಿ - ಉಷಾ
ಪತ್ನಿ - ಸೆಲೀನಾ
ಮಕ್ಕಳು - ಸುರಾಗ್, ಸೃಜನ್

ತಂಗಳು ಅನ್ನ ತಿಂದು ಬೆಳೆದ ಸಾಧು

''ಬಿನ್ನಿಪೇಟೆಯಲ್ಲಿ ಹುಟ್ಟಿದ್ದು. ಆಗಲೇ ಗುಂಡು ಗುಂಡಾಗಿ ಚೆನ್ನಾಗಿದ್ದ. ಅವಾಗ ತುಂಬಾ ಕಷ್ಟ ಮನೆಯಲ್ಲಿ. ತಂಗಳು ಅನ್ನ ಇದ್ದರೂ, ಅದೇ ಹಾಕಮ್ಮ ತಿನ್ತೀನಿ ಅಂತಿದ್ದ. Tomato ಗೊಚ್ಚು ಮಾಡಿಕೊಟ್ಟು ಬಿಟ್ಟರೆ, ಅಷ್ಟು ಸಂತೋಷ. ಚಿಕ್ಕವಯಸ್ಸಲ್ಲೇ ಕಷ್ಟ ಅಂದ್ರೇನು ಅಂತ ತಿಳ್ಕೊಂಡಿದ್ದ. ಈಗ ಅವನಿಂದ ನಾವು ಸುಖ ನೋಡ್ತಾಯಿದ್ದೀವಿ'' - ಮಂಗಳ, ಸಾಧು ಕೋಕಿಲ ತಾಯಿ

ಮ್ಯೂಸಿಕಲ್ ಫ್ಯಾಮಿಲಿ

''ನಮ್ಮ ತಾಯಿ ಆರ್ಕೇಸ್ಟ್ರಾದಲ್ಲಿ ತುಂಬಾ ದೊಡ್ಡ ಸಿಂಗರ್. ನಮ್ಮ ತಾಯಿನ ಮದುವೆ ಆದರೆ, ಆರ್ಕೇಸ್ಟ್ರಾದಲ್ಲಿ ವಾದ್ಯ ನುಡಿಸಬಹುದು ಅಂತ ನಮ್ಮ ತಂದೆ ಮದುವೆ ಆದರು. ನಮ್ಮ ತಾಯಿ ಕ್ರಿಸ್ಚಿಯನ್, ನಮ್ಮ ತಂದೆ ಪಕ್ಕಾ ಹಿಂದು. ಸುಬ್ರಮಣ್ಯ (ಮುರುಗ) ದೇವಸ್ಥಾನದಲ್ಲಿ ನಮ್ಮ ತಂದೆ ತಬಲ ನುಡಿಸ್ತಾಯಿದ್ದರು. ನಮ್ಮ ತಾಯಿ ಹಾಡುವುದನ್ನ ನೋಡಿ, ಮ್ಯೂಸಿಕಲ್ ಫ್ಯಾಮಿಲಿ ಆಗಬಹುದು ಅಂತ ಮದುವೆ ಆದರು'' - ಸಾಧು ಕೋಕಿಲ

ಸಂಗೀತದಲ್ಲೇ ಜೀವನ

''ಒಂದೇ ಆರ್ಕೇಸ್ಟ್ರಾದಲ್ಲಿ ಇದ್ದವರು ನಮ್ಮ ತಂದೆ-ತಾಯಿ. ಆರ್ಕೇಸ್ಟ್ರಾದಲ್ಲಿ ದುಡಿದು ಏನು ತರ್ತಿದ್ರು. ಅದರಲ್ಲೇ ನಮ್ಮ ಜೀವನ'' - ಸಾಧು ಕೋಕಿಲ

ನಾನು ತುಂಬಾ 'ಸಾಧು'

''ನಾನು ಮನೆಯಲ್ಲಿ ಇದ್ದಾಗ ತುಂಬಾ ಸಾಧು. ಅದಕ್ಕೆ ನನಗೆ ಸಾಧು ಅಂತ ಹೆಸ್ರಿಟ್ಟಿದ್ದು. ಮೊದಲು ಹೆಸರು ಇಟ್ಟಿದ್ದು, ಸಹಾಯ ಶೀಲನ್ ಸಾಧ್ರಕ್ ಅಂತ. ಸಾಧ್ರಕ್ ಅಂದ್ರೆ, ನಾನು ಹುಟ್ಟಿದಾಗ ನಮ್ಮ ತಂದೆ-ತಾಯಿ ಬೈಬಲ್ ತೆಗೆದು ಹೆಸರು ಹುಡುಕುತ್ತಿದ್ದಾಗ, ಅದರಲ್ಲಿ ಜೀಸಸ್ ಹುಟ್ಟಿದಾಗ ಒಂಟೆ, ಕುದುರೆಯನ್ನ ಹಿಡ್ಕೊಂಡು ಮೂರು ರಾಜರು ಹೋಗ್ತಿರ್ತಾರೆ. ಆ ಮೂವರು ರಾಜರಲ್ಲಿ ಒಬ್ಬರ ಹೆಸರು ಸಾಧ್ರಕ್ ಅಂತ. ಬೈಬಲ್ ನಲ್ಲಿ ಈ ಹೆಸರು ನೋಡಿ ಹೊಸದಾಗಿ ಇದ್ಯಲ್ಲಾ ಅಂತ ಇಟ್ಟಿದ್ದಾರೆ. ಸಾಧ್ರಕ್ ಶಾರ್ಟ್ ಫಾರ್ಮ್ ಆಗಿ ಸಾಧು ಆಗಿದ್ದೀನಿ. ನಾನು ತುಂಬಾ ಸೈಲೆಂಟ್'' - ಸಾಧು ಕೋಕಿಲ

ಇಂತಹ ತಂದೆ ಪಡೆಯುವುದು ಪುಣ್ಯ

''ನಮ್ಮ ತಂದೆ ಅಂತಹ ಒಬ್ಬ ತಂದೆ ಸಿಗಬೇಕು ಅಂದ್ರೆ ಎಷ್ಟೋ ಜನ್ಮದ ಪುಣ್ಯ. ಮನೆಯಲ್ಲಿ ಇರುವೆ ಇದ್ದರೂ, ಪೇಪರ್ ನಲ್ಲಿ ಸಕ್ಕರೆ ಹಾಕೊಂಡು ಇರುವೆಯನ್ನ ಹೊರಗಡೆ ಬಿಡುವ ವ್ಯಕ್ತಿತ್ವ ಅವರದ್ದು. ಆದರೆ ಅವರು ಪೊಲೀಸ್. ಮೊದಲು ಬಿನ್ನಿಮಿಲ್ ನಲ್ಲಿ ಆಫೀಸರ್ ಆಗಿದ್ದರು. ಆದ್ರೆ, ಸಂಗೀತದ ಹುಚ್ಚು ಇದ್ದಿದ್ರಿಂದ ಪೊಲೀಸ್ ಆರ್ಕೇಸ್ಟ್ರಾಗೆ ಸೇರಿದರು'' - ಸಾಧು ಕೋಕಿಲ

ಅಪ್ಪ ಹೇಗೆ ಅಂದ್ರೆ....

''ನಂತರ ಅವರಿಗೂ ಪೊಲೀಸ್ ಡ್ಯೂಟಿ ಹಾಕಿದರು. ಆದರೆ ಅವರು ಇರುವೆ ಕೂಡ ಸಾಯಿಸಿದವರಲ್ಲ. ರಿಸರ್ವ್ ಪೊಲೀಸ್ ಆಗಿದ್ರು. ತುಂಬಾ ಗಲಾಟೆ ಆದಾಗ ಮಾತ್ರ ಹೋಗ್ತಿದ್ರು. ಅದರಲ್ಲೂ ಮೂರು ಬಾರಿ ಸಸ್ಪೆಂಡ್ ಆಗಿದ್ರು. ಸಂಗೀತದ ಮೇಲೆ ತುಂಬಾ ಪ್ರೀತಿ. ಇವತ್ತಿಗೂ ಅವರು ಚರ್ಚ್ ಮುಂದೆ ಬೆಳಗ್ಗೆ ಆರು ಗಂಟೆಗೆ ವೈಲಿನ್ ಹಿಡಿದು ನಿಂತಿರ್ತಾರೆ. ದೇವರಿಗೋಸ್ಕರ'' - ಸಾಧು ಕೋಕಿಲ

ತಂದೆ-ತಾಯಿ ಹೇಗೆ ಅಂದ್ರೆ....

''ನಮ್ಮ ತಂದೆ-ತಾಯಿ ಹೇಗೆಲ್ಲಾ ನಮ್ಮನ್ನ ಸಾಕಿದ್ದಾರೆ ಅಂದ್ರೆ, ಮದುವೆ ಮನೆಯಲ್ಲಿ ಆರ್ಕೇಸ್ಟ್ರಾ ಮುಗಿಸಿ, ಮೊದಲು ತಾಂಬೂಲ ತೆಗೆದುಕೊಂಡು, ತಾಂಬೂಲದ ಕವರ್ ನಲ್ಲಿ ಮದುವೆ ಮನೆ ಊಟ ಹಾಕಿಸಿಕೊಂಡು ಮನೆಗೆ ತರೋರು. ಅವರಿಬ್ಬರು ಊಟ ಮಾಡ್ತಿರ್ಲಿಲ್ಲ. ಮನೆಗೆ ತಂದು, ನಾವು ತಿಂದು ಬಿಟ್ಟಿದ್ದನ್ನ ಅವರು ತಿನ್ನೋರು. ಅಂತಹ ತಂದೆ-ತಾಯಿ'' - ಸಾಧು ಕೋಕಿಲ

ಕಷ್ಟದಲ್ಲೇ ಜೀವನ

''ನನಗೆ ಬುದ್ಧಿ ಬಂದಾಗಿನಿಂದ ನಾವು ಕಷ್ಟದಲ್ಲೇ ಇದ್ವಿ. ನಮ್ಮ ತಂದೆ ಪೊಲೀಸ್ ಜೀವನಕ್ಕೆ ಸೇರಿದ ಮೇಲೆ ಸ್ವಲ್ಪ ಕಷ್ಟ ಕಡಿಮೆ ಆಯ್ತು'' - ಸಾಧು ಕೋಕಿಲ

ಓದಿನಲ್ಲಿ ನಂಬರ್ 1

''ಓದಿನಲ್ಲಿ ನಾನು ನಂಬರ್ 1. ರ್ಯಾಂಕ್ ಸ್ಟೂಡೆಂಟ್ ನಾನು. ಇಲ್ಲಿವರೆಗೂ ನಾನು ಎಷ್ಟು ಓದಿದ್ದೀನೋ, ಎಲ್ಲದರಲ್ಲೂ ನಾನು ನಂಬರ್ 1. ಸ್ಪೋರ್ಟ್ಸ್ ನಲ್ಲಿ ನಾನು ಫುಟ್ ಬಾಲ್ ಪ್ಲೇಯರ್. ಇಂಡಿಯನ್ ಹೈ ಸ್ಕೂಲ್, ಸ್ಟೇಟ್ ಲೆವೆಲ್ ಫುಟ್ ಬಾಲ್ ಟೀಮ್ ನಲ್ಲಿ ಕ್ಯಾಪ್ಟನ್ ನಾನು. ಹೈಯ್ಟ್ ಪ್ರಾಬ್ಲಂ ಆಗಿ ವಾಪಸ್ ಕಳುಹಿಸಿಬಿಟ್ಟರು'' - ಸಾಧು ಕೋಕಿಲ

ಹಸಿವು ಜಾಸ್ತಿ

''ಸೇಂಟ್ ಜೋಸೆಫ್ ಚರ್ಚ್ ಸ್ಕೂಲ್ ನಲ್ಲಿ ಓದಿದ್ದು. ನಾವು ಸ್ಕೂಲ್ ನಲ್ಲಿದ್ದಾಗ ಮನೆಯಿಂದ ಊಟ ಬರ್ತಿರ್ಲಿಲ್ಲ. ಅಮ್ಮ ಒಂದು ಮಾವಿನ ಹಣ್ಣು ತರೋರು. ಸ್ಕೂಲ್ ನಲ್ಲಿ ತುಂಬಾ ಮಾರ್ವಾಡಿ ಹುಡುಗರು ಇರ್ತಿದ್ರು. ತುಪ್ಪದ ದೋಸೆ, ಚಪಾತಿ ಎಲ್ಲಾ ತರೋರು. ಆ ವಾಸನೆಗೆ ಹಸಿವು ಜಾಸ್ತಿ ಆಗೋದು. ಅವರು ನಮಗೆ ಕೊಡ್ತಿರ್ಲಿಲ್ಲ. ಸಾಕಾದ್ರೆ, ಎಲ್ಲಾ ಹದ್ದಿಗೆ ಹಾಕ್ತಿದ್ರು. ನಾನು ಆಗ ಸ್ಕೂಲ್ ಪ್ರೆಸಿಡೆಂಟ್. ನಾನು ಹೆಡ್ ಮಾಸ್ಟರ್ ಹತ್ರ ಹೇಳಿದೆ. ಊಟ ವೇಸ್ಟ್ ಆಗ್ತಿದೆ. ಅದರ ಬದಲು ಅನಾಥ ಮಕ್ಕಳಿಗೆ ಕೊಡಲಿ ಅಂತ ಹೇಳಿದೆ. ಅವರು ರೂಲ್ ಪಾಸ್ ಮಾಡಿ, ಅನಾಥ ಮಕ್ಕಳಿಗೂ ಊಟ ಸಿಗುವ ಹಾಗೆ ಮಾಡಿದ್ವಿ. ಅನಾಥ ಮಕ್ಕಳ ಜೊತೆ ನಾನು ಕೂಡ ತಿನ್ತಿದ್ದೆ'' - ಸಾಧು ಕೋಕಿಲ

ಎಂಟನೇ ಕ್ಲಾಸಿಗೆ ಓದು ಸ್ಟಾಪ್!

''ಎಂಟನೇ ಕ್ಲಾಸ್ ನಲ್ಲೇ ಓದೋದು ನಿಲ್ಲಿಸಿದೆ. ಮನೆಯಲ್ಲಿ ಕಷ್ಟ ಇತ್ತು. ನಮ್ಮ ಅಣ್ಣ ಕಸ್ತೂರಿ ಶಂಕರ್ ಅವರ ಮ್ಯೂಸಿಕ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದ. ಬೆಳಗ್ಗೆ ಅಂಗಡಿ ತೆಗೆದು, ಕಸ ಗೂಡಿಸಿ, ಕ್ಲೀನ್ ಮಾಡಿ, ಅಂಗಡಿ ನೋಡಿಕೊಳ್ಳುವುದು ನನ್ನ ಕೆಲಸ ಆಗಿತ್ತು. ಆಗಲೇ ನನಗೆ ಎಲ್ಲಾ ವಾದ್ಯಗಳ ಬಗ್ಗೆ ತಿಳುವಳಿಕೆ ಬಂದಿದ್ದು'' - ಸಾಧು ಕೋಕಿಲ

ಸಂಗೀತದ ಬಗ್ಗೆ ಆಸಕ್ತಿ ಮೂಡಿದ್ದು ಅಲ್ಲೇ!

''ಕಸ್ತೂರಿ ಶಂಕರ್ ಅವರ ಮನೆಯಲ್ಲೇ ನಾನು 10 ವರ್ಷ ಇದ್ದೆ. ಮ್ಯೂಸಿಕ್ ಇಂಟ್ರೆಸ್ಟ್ ಬಂತು. ದುಡ್ಡು ಇರ್ಲಿಲ್ಲ. ಸ್ಕೂಲ್ ಬಿಟ್ಟೆ. ಮ್ಯೂಸಿಕಲ್ ಪ್ಲೇಯರ್ ಆಗ್ಬೇಕು ಅನ್ನೋದು ಒಂದೇ ನನಗೆ ಆಸೆ ಇದ್ದದ್ದು'' - ಸಾಧು ಕೋಕಿಲ

ದೇವರ ಸಮಾನ

''ಕಸ್ತೂರಿ ಶಂಕರ್ ಅವರ ಮನೆಯಲ್ಲಿ ಕ್ರಿಸ್ಚಿಯನ್ ಆಗಿ ಲಿಂಗಾಯತರ ಮನೆಯಲ್ಲಿ ಮಗನಾಗಿ ಇದ್ದೆ. ಯಾವುದಕ್ಕೂ ಅವರು ನನಗೆ ಕಮ್ಮಿ ಮಾಡಿಲ್ಲ. ಅವರು ತಿನ್ನುವ ತಟ್ಟೆಯಲ್ಲಿ ನನಗೆ ಊಟ ಹಾಕ್ತಿದ್ರು. ಎಷ್ಟೋ ಜನ ನಮ್ಮನ್ನ ತಿರಸ್ಕಾರ ಮಾಡಿದ್ರು. ಎಷ್ಟೋ ಮ್ಯೂಸಿಶಿಯನ್ಸ್ ನಮ್ಮನ್ನ ಮನೆ ಒಳಗೆ ಸೇರಿಸ್ತಾ ಇರ್ಲಿಲ್ಲ. ಯಾಕಂದ್ರೆ ನಾವು ಕ್ರಿಸ್ಚಿಯನ್, ಕೀಳು ಮಟ್ಟದ ಜನ ಅಂತ. ನೀರು ಕೂಡ ಕೊಡ್ತಿರ್ಲಿಲ್ಲ. ಅಂತದ್ರಲ್ಲಿ, ಕಸ್ತೂರಿ ಶಂಕರ್ ಅವರ ಮನೆಯಲ್ಲಿ ಮಗನಾಗಿ ಇದ್ದೆ. ಇಂತಹ ಆಶ್ರಯ ಸಿಕ್ಕಿರ್ಲಿಲ್ಲ ಅಂದ್ರೆ ಏನೂ ಮಾಡೋಕೆ ಆಗ್ತಿರ್ಲಿಲ್ಲ. ನನ್ನ ಜೀವನದಲ್ಲಿ ಅವರು ದೇವರ ಸಮಾನ. ನಾನು ಯಾವತ್ತೂ ಅವರನ್ನ ಮರೆಯೋದಿಲ್ಲ'' - ಸಾಧು ಕೋಕಿಲ

ಏನೇನೋ ಕೆಲಸ ಮಾಡಿದ್ದೀವಿ!

''ನಾನು - ಸಾಧು. ಒಬ್ಬರನ್ನ ಬಿಟ್ಟರೆ ಮತ್ತೊಬ್ಬರು ಇರ್ತಿಲಿಲ್ಲ. ಬದುಕುವುದಕ್ಕಾಗಿ ಯಾವ್ಯಾವ್ದೋ ಕೆಲಸ ಮಾಡಿಬಿಟ್ಟಿದ್ದೀವಿ. ನಮಗೆ ಕಸ್ತೂರಿ ಶಂಕರ್ ಅವರು ಎರಡನೇ ತಾಯಿ ಇದ್ದ ಹಾಗೆ. ಅವರ ಮನೆಯಲ್ಲೇ ನಾನು ಎಲ್ಲಾ ವಾದ್ಯಗಳನ್ನ ಕಲಿತುಕೊಂಡಿದ್ದು. ಅವಾಗಿನ ಪರಿಸ್ಥಿತಿಯಲ್ಲಿ ಒಂದು ಕೀ ಬೋರ್ಡ್ ತೆಗೆದುಕೊಳ್ಳುವುದಕ್ಕೂ ದುಡ್ಡು ಇರ್ಲಿಲ್ಲ'' - ಲಯೇಂದ್ರ, ಸಾಧು ಕೋಕಿಲ ಸಹೋದರ

ಅಣ್ಣನೇ ಸಾಕಿದ್ದು

''ನನ್ನನ್ನ ಸಾಕಿದ್ದು ನಮ್ಮ ಅಣ್ಣ ಲಯೇಂದ್ರ. ಅವನು ದುಡಿದದ್ದು ಎಲ್ಲಾ ನಮ್ಮ ತಂದೆ-ತಾಯಿ ಹತ್ರ ಬಂದು ಕೊಡೋಣು. ನನ್ನ ಕೂಸುಮರಿ ಮಾಡಿಕೊಂಡು ಹೋಗಿ, ಸಿನಿಮಾ ತೋರಿಸೋನು. ನಾನು ಇವತ್ತು ಈ ಮಟ್ಟಕ್ಕೆ ಬಂದಿರುವುದಕ್ಕೆ ಒಂದು ದಾರಿ ತೋರಿಸಿಕೊಟ್ಟವನು ನಮ್ಮ ಅಣ್ಣ'' - ಸಾಧು ಕೋಕಿಲ

ತಂಗಿ ಉಷಾ ಕಣ್ಣೀರು

''ನನ್ನ ಸಾಕಿದ್ದು ಸಾಧು ಅಣ್ಣ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಕೇಳಿಕೊಳ್ಳುವುದು ಇಷ್ಟೆ. ಮುಂದಿನ ಜನ್ಮದಲ್ಲಿ ಅವರು ನನಗೆ ತಂದೆ ಆಗ್ಬೇಕು'' - ಉಷಾ, ತಂಗಿ

English summary
Kannada Actor, Music Director, Director, Singer Sadhu Kokila's childhood life was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada