»   » ಬಿಗ್ ಬಾಸ್‌ನಿಂದ ಋಷಿಯನ್ನು ಹೊರಹಾಕಿದ್ದು ಏಕೆ?

ಬಿಗ್ ಬಾಸ್‌ನಿಂದ ಋಷಿಯನ್ನು ಹೊರಹಾಕಿದ್ದು ಏಕೆ?

Posted By:
Subscribe to Filmibeat Kannada

ಟಿಆರ್‌ಪಿ ಏರಿಸಲೆಂದೇ ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನಿಸಲಾಗಿದ್ದ ವಿವಾದಾತ್ಮಕ ಸ್ವಾಮೀಜಿ ಋಷಿ ಕುಮಾರನನ್ನು ಎರಡೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದು ಏಕೆ? ಮೊದಲೇ ಕಳೆದುಕೊಂಡಿದ್ದ ಮಾನವನ್ನು ಇನ್ನಷ್ಟು ಮುಕ್ಕಾಗಿಸಿಕೊಂಡಿದ್ದು ಏಕೆ? ಈ ಪ್ರಶ್ನೆಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಲ್ಲಕ್ಕಿಯಲ್ಲಿ ಬರುವ ಮುಖಾಂತರ ಬಿಗ್ ಬಾಸ್ ಮನೆಯಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದ್ದ ಋಷಿ ಕುಮಾರ ಮಿಂಚಿನಷ್ಟೇ ವೇಗದಲ್ಲಿ ಮಿಂಚಿಯೂ ಮಿಂಚದಂತೆ ಕಾಣೆಯಾಗಿದ್ದಾರೆ. ಟಿಆರ್‌ಪಿ ಏರಿಸಲೆಂದು ಬಂದವರೇ ಟಿಆರ್‌ಪಿ ಇಳಿಕೆಗೆ ಕಾರಣರಾದರೆ? ಒಂದರ್ಥದಲ್ಲಿ ಬಿಗ್ ಬಾಸ್ ಲೆಕ್ಕಾಚಾರವನ್ನೆಲ್ಲಾ ಕಾಳಿ ಸ್ವಾಮಿ ಬುಡಮೇಲು ಮಾಡಿದರೆ?

ಋಷಿ ಕುಮಾರನನ್ನು ಮೊದಲು ಟಿವಿಯಲ್ಲಿ ನೋಡಿದಾಗ ವೀಕ್ಷಕರು ಇಂಥದೊಂದು ಪರ್ಸನಾಲಿಟಿ ಕಂಡು ಅಚ್ಚರಿಗೊಂಡಿದ್ದರು. ಆತನ ಮಾತಿನ ಓಘ, ಕಣ್ಣೀರಿಗೆ ಮರುಳಾಗಿದ್ದರು, ನಿತ್ಯಾನಂದನ ಆತನ ಹೋರಾಟಕ್ಕೆ ಜೈಜೈಕಾರ ಹೇಳಿದ್ದರು. ಅಷ್ಟರಲ್ಲಿ ಬಂದ ಸ್ಟಿಂಗ್ ಆಪರೇಷನ್‌ನಿಂದಾಗಿ ಛೀಥೂ ಎಂದು ಕೂಡ ಅನೇಕರು ಉಗಿದಿದ್ದರು.

ಇಂಥ ಡ್ರಾಮಾ ಮಾಸ್ಟರ್ ಶೋನಲ್ಲಿ ಇದ್ದರೆ ಮಜಾನೇ ಬೇರೆ ಅಂದುಕೊಂಡ ಸುದೀಪ್ ಋಷಿ ಕುಮಾರನನ್ನು ಕರೆಸಿಯೇಬಿಟ್ಟರು. ಇಂಥದೊಂದು ಪ್ಲಾನ್ ಉಲ್ಟಾ ಹೊಡೆಯುತ್ತದೆಂದು ಬಿಗ್ ಬಾಸ್ ಕೂಡ ಊಹಿಸಿರಲಿಲ್ಲ, ಸ್ಪರ್ಧಾಳುಗಳು ಮೊದಲೇ ಊಹಿಸಿರಲಿಲ್ಲ. ಈಗ ಅವರನ್ನು ಹೊರಹಾಕಲು ಕಾರಣಗಳೇನಿರಬಹುದು ಎಂಬುದರತ್ತ ಒಂದು ನೋಟ ಹರಿಸೋಣ.

ಓತಪ್ರೋತವಾಗಿ ಹರಿಯುವ ಮಾತುಗಳು

ಋಷಿ ಕುಮಾರ ಆಡುವುದಕ್ಕೂ ನಡೆದುಕೊಳ್ಳುವುದಕ್ಕೂ ಸಂಬಂಧವೇ ಇರುವುದಿಲ್ಲ. ಓತಪ್ರೋತವಾಗಿ ಹರಿಯುವ ಮಾತುಗಳಲ್ಲಿ ನೈಜತೆಯೆಂಬುದೇ ಇರುವುದಿಲ್ಲ. ಆ ಮಾತುಗಳಲ್ಲಿ ನಂಬಿಕೆ ಗಳಿಸುವ ಶಕ್ತಿಯೂ ಇರುವುದಿಲ್ಲ ಎಂದು ಸ್ಪರ್ಧಾಳುಗಳಿಗೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.

ಬರಬರುತ್ತಲೇ ಗುಂಪುಗಾರಿಕೆ ಆರಂಭ

ನಾಟಕೀಯವಾಗಿ ಪ್ರವೇಶ ಪಡೆದ ಕಾಳಿಸ್ವಾಮಿ ಕಾಲಿಟ್ಟ ಘಳಿಗೆಯಿಂದಲೇ ಗುಂಪುಗಾರಿಕೆ ಆರಂಭಿಸಿದರು. ಒಂದು ಗುಂಪು ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಪರವಾಗಿದ್ದರೆ, ಮತ್ತೊಂದು ಗುಂಪನ್ನು ಕಾಳಿಸ್ವಾಮಿ ಸೃಷ್ಟಿಸಿದ್ದರು. ಈ ಮನುಷ್ಯನನ್ನು ಹೊರಹಾಕದಿದ್ದರೆ ಮುಂಡಾಮೋಚ್ಕೊಂಡು ಹೋಗ್ತೀರಾ ಎಂದು ಬಿಗ್ ಬಾಸ್ಗೆ ಎಚ್ಚರಿಸಿ, ಸುತ್ತಲಿರುವವರಿಗೆ ದೃಷ್ಟಿ ತೆಗೆದಿದ್ದರು.

ಶರ್ಮಾರನ್ನೇ ಬುಟ್ಟಿಗೆ ಹಾಕಿಕೊಂಡ ಕಾಳಿ

ಬರಬರುತ್ತ, ಏ ರಿಷಿ ಬಾರೋ ಇಲ್ಲಿ ಏಕವಚನದಲ್ಲಿ ಕರೆಯುತ್ತಿದ್ದ ಶರ್ಮಾರನ್ನೇ, ಹಾಗೆ ಹೇಳಬೇಡಿ ಮರ್ಯಾದೆ ಹೋಗತ್ತೆ ಅಂತ ಬುಟ್ಟಿಗೆ ಹಾಕಿಕೊಳ್ಳಲು ಕಾಳಿಸ್ವಾಮಿ ಯಶಸ್ವಿಯಾಗಿದ್ದರು. ನಂತರ ಇಬ್ಬರೂ ಚಡ್ಡಿದೋಸ್ತುಗಳು ಎನ್ನುವಂತೆ ಒಬ್ಬರಿಗೊಬ್ಬರು ಬಿಟ್ಟಿರಲಾರದಂತೆ ನಡೆದುಕೊಳ್ಳಲು ಪ್ರಾರಂಭಿಸಿದರು. ಅಂಗಿ ಬದಲಾಯಿಸಿದಷ್ಟು ನಿಯತ್ತು ಬದಲಾಯಿಸುವ ಋಷಿ ಮೇಲೆ ಅನೇಕರಿಗೆ ಅನುಮಾನ ಮೂಡಿತ್ತು. [ಬಿಗ್ ಬಾಸ್‌ಗೆ ಶರ್ಮಾ ಧಮ್ಕಿ]

ಎಲ್ಲಿಯ ಕಾವಿ, ಎಲ್ಲಿಯ ಪ್ಯಾಂಟು ಶರ್ಟು

ನರೇಂದ್ರ ಬಾಬು ಶರ್ಮಾ ಜಪ್ಪಯ್ಯ ಅಂದ್ರೂ ಬೇರೆ ಬಟ್ಟೆ ಧರಿಸಲು ನಿರಾಕರಿಸಿದರೆ, ಕಾಳಿ ಸ್ವಾಮಿ ಅಯ್ಯ ಅದರಲ್ಲೇನೈತೆ ಅಂತ ಕಾವಿಯನ್ನು ಬಿಸಾಡಿ ಪ್ಯಾಂಟು ಶರ್ಟು ಧರಿಸಿದ್ದರು. ಸಮುದ್ರ ಮಂಥನ ಟಾಸ್ಕ್‌ನಲ್ಲಿ ನಾನಾ ವೇಷಗಳನ್ನೂ ಧರಿಸಿದರು. ಝಕ್ಕಣಕ್ಕ ಝಕ್ಕಣಕ್ಕ ಎಂದು ಯದ್ವಾತದ್ವಾ ಕುಣಿದೂಬಿಟ್ಟರು.

ನಿಖಿತಾ ಮೇಲೆ ಕೈಮಾಡಿದ ಕಾಳಿ

ನಿಖಿತಾ ನನ್ನ ಮಗಳಿದ್ದ ಹಾಗೆ ಎನ್ನುತ್ತಲೇ ಕೋಪೋದ್ರಿಕ್ತನಾಗಿ ನಿಖಿತಾಳನ್ನು ತಳ್ಳಿದ್ದಲ್ಲದೆ ಆಕೆಯ ಮೇಲೆ ಕೈ ಮಾಡಿದ್ದ ಕಾಳಿಸ್ವಾಮಿಯ ವ್ಯಕ್ತಿತ್ವವನ್ನು ಜಗಜ್ಜಾಹೀರು ಮಾಡಿತ್ತು. ಸುದೀಪ್ ಕೂಡ 'ಹೆಂಗಸಿನ ಮೇಲೆ ಕೈ ಮಾಡಲು ನಾಚ್ಕೆ ಆಗಲ್ವಾ' ಎಂದು ಕೇಳಿದ್ದಕ್ಕೆ, 'ಆಗಲ್ಲ, ಯಾಕಂದ್ರೆ...' ಎಂದು ತಾವು ಮಾಡಿದ್ದೇ ಸರಿ ಎಂಬಂತೆ ವಾದ ಮಂಡಿಸಿದ್ದರು ಋಷಿ ಕುಮಾರ.

ಚಂದ್ರಿಕಾಗೆ ಡಾರ್ಲಿಂಗ್ ಎಂದ ಋಷಿ

ಆಪ್ತಮಿತ್ರ ಚಿತ್ರದ ಟಾಸ್ಕ್ ಬಂದಾಗ, ಚಂದ್ರಿಕಾ ಜೊತೆ ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ ಎಂದು ಧಿಗ್ಗಧಿಗ್ಗನೆ ಕುಣಿದರು. ಟಾಸ್ಕ್ ಮುಗಿದ ಮೇಲೆ ಚಂದ್ರಿಕಾಳನ್ನು 'ಡಾರ್ಲಿಂಗ್' ಎಂದು ಕರೆದು ಛೀಥೂ ಎಂದು ಉಗಿಸಿಕೊಂಡಿದ್ದರು. ಇದರ ಬಗ್ಗೆ ಎಲ್ಲ ಸ್ಪರ್ಧಾಳುಗಳಲ್ಲಿ ಭಾರೀ ಚರ್ಚೆ ನಡೆಯಿತು. ಎಲ್ಲರೂ ಗುಸುಗುಸು ಮಾತಾಡಲು ಆರಂಭಿಸಿದರು.

ಆವ್ ಟಚ್ಚಿಂಗ್ ಟಚ್ಚಿಂಗ್ ಸ್ವಾಮಿ

ಕೊನೆಗೆ ಅನುಶ್ರೀ ಕೂಡ ತನ್ನನ್ನು 'ಟಚ್' ಮಾಡಲು ಕಾಳಿ ಸ್ವಾಮಿ ಯತ್ನಿಸಿದ್ದರು ಎಂದು ಬಾಯಿಬಿಟ್ಟರು. ಆಪ್ತಮಿತ್ರದ ಟಾಸ್ಕ್ ನಡೆದಾಗ ಗದ್ದಲದಲ್ಲಿ ನಿಖಿತಾ ಅವರ ದೇಹವನ್ನು ಅಸಭ್ಯವಾಗಿ ಟಚ್ ಕೂಡ ಮಾಡಲು ಕಾಳಿಸ್ವಾಮಿ ಯತ್ನಿಸಿದ್ದು ಕ್ಯಾಮೆರಾದಲ್ಲಿ ದಾಖಲಾಗಿ ಹೋಯಿತು. 47 ಕ್ಯಾಮೆರಾಗಳಲ್ಲಿ ತನ್ನ ವ್ಯಕ್ತಿತ್ವ ಏನೆಂದು ತೋರಿಸುತ್ತೇನೆ ಎಂದವರ ವ್ಯಕ್ತಿತ್ವ ಅದೇ 47 ಕ್ಯಾಮೆರಾಗಳಲ್ಲಿ ಬಟಾಬಯಲಾಗಿ ಹೋಯಿತು.

English summary
Why was Rishi Kumar evicted from Kannada Bigg Boss reality show? What made Bigg Boss to kick the controversial swamiji out of the show hosted by E-TV? Here are few reasons why he was removed.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada