»   » ಜೀ ಕನ್ನಡಕ್ಕೆ ಪರಮೇಶ್ವರ ಗುಂಡ್ಕಲ್ ರಾಜಿನಾಮೆ

ಜೀ ಕನ್ನಡಕ್ಕೆ ಪರಮೇಶ್ವರ ಗುಂಡ್ಕಲ್ ರಾಜಿನಾಮೆ

Posted By: ಶ್ರೀರಾಮ್ ಭಟ್
Subscribe to Filmibeat Kannada
Parameshwara Gundkal
ಜೀ ಕನ್ನಡದ 'ಪ್ರೋಗ್ರಾಮಿಂಗ್ ಹೆಡ್' ಪರಮೇಶ್ವರ್ ಗುಂಡ್ಕಲ್, ಜೀ ಕನ್ನಡ ವಾಹಿನಿಗೆ ರಾಜಿನಾಮೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜೀ ಕನ್ನಡದಲ್ಲಿ ಪ್ರೋಗ್ರಾಮಿಂಗ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಪರಮೇಶ್ವರ್ ಗುಂಡ್ಕಲ್, ತಮ್ಮ ಜೀ ಕನ್ನಡ ವಾಹಿನಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರನಡೆದಿದ್ದಾರೆ. ಮೊನ್ನೆ ಅಂದರೆ 03 ಸೆಪ್ಟೆಂಬರ್ 2012, ಜೀ ಕನ್ನಡದಲ್ಲಿ ಅವರ ಕೊನೆಯ ದಿನ. ಕಥೆಗಾರ, ಕಾದಂಬರಿಕಾರ ಪರಮೇಶ್ವರ ಗುಂಡ್ಕಲ್ ಅವರು ಸದ್ಯದಲ್ಲೇ ಈಟಿವಿ ಕನ್ನಡ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಪತ್ರಕರ್ತರಾಗಿ 'ವಿಜಯ ಕರ್ನಾಟಕ'ದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪರಮೇಶ್ವರ್ ಗುಂಡ್ಕಲ್, ನಂತರ ಅತ್ಯಲ್ಪ ಕಾಲದಲ್ಲೇ 'ಉದಯವಾಣಿ' ಪತ್ರಿಕೆಗೆ ಸೇರಿದರು. ಅಲ್ಲಿ ಏಳು ವರ್ಷಗಳಷ್ಟು ಕಾಲ ಕೆಲಸ ಮಾಡಿದ ನಂತರ ಅವರು ಜೀ ಕನ್ನಡ ವಾಹಿನಿಯ 'ಸಿನಿಮಾ ಖರೀದಿ' ವಿಭಾಗಕ್ಕೆ ಸೇರಿಕೊಂಡರು. ಅಲ್ಲಿಂದ ಮುಂದೆ ಅತೀ ಕಡಿಮೆ ಅವಧಿಯಲ್ಲೇ 'ಧಾರಾವಾಹಿ' ವಿಭಾಗ ಸೇರಿಕೊಂಡು ಅಲ್ಲಿ ಧಾರಾವಾಹಿಗಳ ವಿಭಾಗಕ್ಕೆ ಮುಖ್ಯಸ್ಥರಾದರು.

ವೃತ್ತಿಯ ಮಧ್ಯೆಯೇ ಸಾಕಷ್ಟು ಕಥೆಗಳನ್ನು ಬರೆದಿರುವ ಪರಮೇಶ್ವರ ಗುಂಡ್ಕಲ್ ಈ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡರು. 'ನದಿ ಗುಂಟ ಕಾಲು ದಾರಿ' ಎಂಬ ಕಾದಂಬರಿ ಬರೆದಿರುವ ಅವರು, ಸಾಕಷ್ಟು ಧಾರಾವಾಹಿಗಳ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡುವ ಕನಸನ್ನೂ ಒಮ್ಮೆ ಹೇಳಿಕೊಂಡಿದ್ದರು. ಆದರೆ ಈಗ ಅವರು 'ಪ್ರವೃತ್ತಿ'ಗಿಂತ ಹೆಚ್ಚು 'ವೃತ್ತಿ'ಗೆ ಪ್ರಾಶಸ್ತ್ಯ ನೀಡುತ್ತಿದ್ದಾರೆ

'ಜೋಗುಳ' ಧಾರಾವಾಹಿಯ ಮೂಲಕ, ಜೀ ಕನ್ನಡದ ಸೀರಿಯಲ್ 'ಟಿಆರ್ ಪಿ'ಯನ್ನು ಬಹುಎತ್ತರಕ್ಕೆ ಕೊಂಡೊಯ್ದ ಶ್ರೇಯಸ್ಸು ಪರಮೇಶ್ವರ ಗುಂಡ್ಕಲ್ ಅವರಿಗೆ ಸಲ್ಲುತ್ತದೆ. 'ಜೋಗುಳ' ನಂತರ ಜೀ ಕನ್ನಡದಲ್ಲಿ ಮೂಡಿಬಂದ ಸಾಲುಸಾಲು ಸೀರಿಯಲ್ ಗಳ ಯಶಸ್ಸಿನ ಕೀರ್ತಿಗೆ ಭಾಜನರಾದ ಅವರು ನಂತರ ಜೀ ಕನ್ನಡ ಧಾರಾವಾಹಿ ಮಾರುಕಟ್ಟೆಯನ್ನು ಬಹಳ ವಿಸ್ತಾರ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದವರು. ಧಾರಾವಾಹಿ ಜೊತೆಗೆ ಸಾಕಷ್ಟು ರಿಯಾಲಿಟಿ ಶೋಗಳನ್ನೂ ಜೀ ಕನ್ನಡದ ಮೂಲಕ ಪ್ರೇಕ್ಷಕರಿಗೆ ಕೊಟ್ಟರು.

ಧಾರಾವಾಹಿ ವಿಭಾಗದಲ್ಲಿ ಮಾಡಿದ ಅತ್ಯುತ್ತಮ ಸೇವೆಯಿಂದ ಪ್ರಭಾವಿತವಾದ ಜೀ ಕನ್ನಡ ಆಡಳಿತ ಮಂಡಳಿ ಅವರನ್ನು ಈ ವರ್ಷದ ಪ್ರಾರಂಭದಲ್ಲಿ 'ಪ್ರೋಗ್ರಾಮಿಂಗ್ ಹೆಡ್' ಆಗಿ ನಿಯಮಿಸಿತು. ಅಲ್ಲಿಂದ ಮುಂದೆ ಮೊನ್ನೆ ಸೋಮವಾರದವರೆಗೂ ಅವರು ಜೀ ಕನ್ನಡದ ಪ್ರೋಗ್ರಾಮಿಂಗ್ ಮುಖ್ಯಸ್ಥರಾಗಿ ಕೆಲಸ ಮಾಡಿ ಇದೀಗ ಆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.  ಬಂದಿರುವ ಮಾಹಿತಿಯಂತೆ, ಈಟಿವಿ ಕನ್ನಡಕ್ಕೆ ಯಾವಾಗ ಸೇರಿಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲದ ಸಂಗತಿ. (ಒನ್ ಇಂಡಿಯಾ ಕನ್ನಡ)

English summary
Zee Kannada Channel Programming Head Parameshwara Gundkal resigned from Zee Kannada Channel Services on 03 september 2012. According to the sources, he may join Etv Kannada Channel very shortly. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada