For Quick Alerts
  ALLOW NOTIFICATIONS  
  For Daily Alerts

  ರಣಬೀರ ಮತ್ತು ದೀಪಿಕಾ ನಡುವೆ ಖುಲ್ಲಂಖುಲ್ಲಾ ಪ್ಯಾರ್

  By Staff
  |

  ಆಸ್ಟ್ರೇಲಿಯಾದಲ್ಲಿ ಶೂನ್ಯ ಸಂಪಾದನೆ ಮಾಡಿ ತವರಿಗೆ ಮರಳಿರುವ ಭಾರತದ ಕ್ರಿಕೆಟ್ ಯುವರಾಜನಿಗೆ ಹೃದಯಾಘಾತ ಆಗುವುದೊಂದು ಬಾಕಿಯಿದೆ. ಕನಸಿನ ರಾಣಿ ಸ್ವತಃ ಬಂದು ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂತಾಗ ಭಾರತದ ಅಭಿಮಾನಿಗಳಿಗೆ ಮೆಚ್ಚಿಸುವಂತೆ ಆಡದೆ ಮನದರಸಿಗೆ ಮೆಚ್ಚುವಂತೆ ಆಡಿ ಪೆವಿಲಿಯನ್‌ಗೆ ದೌಡಾಯಿಸಿದ ಯುವಿಯ ಲವಿಡವಿ ಕೊನೆಗೊಂಡಿದೆ.

  ಯುವರಾಜ್‌ನ ಹೃದಯೇಶ್ವರಿ ಎಂದೇ ಎಲ್ಲೆಡೆ ಬಿಂಬಿತವಾಗಿದ್ದ ದೀಪಿಕಾ ಪಡುಕೋಣೆ ಅಂತೂ ಇಂತೂ ಯುವಿಗೆ ಕೈಕೊಟ್ಟು ಹಿಂದಿ ಚಿತ್ರರಂಗದ ಸದ್ಯದ ಹಾರ್ಟ್‌ಥ್ರೋಬ್ ರಣಬೀರ್ ಕಪೂರ್ ಜೊತೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅದರ ಮೇಲೆ ಉಪ್ಪು ಸುರಿದಂತೆ ರಣಬೀರ್ ಕೂಡ ದೀಪಿಕಾ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಡಾಣಾಡಂಗುರ ಸಾರುತ್ತಿದ್ದಾನೆ. ಆತ ಓಳು ಬಿಡುತ್ತಿಲ್ಲ ಅವರಿಬ್ಬರೂ ಮದುವೆಯಾಗುವುದು ಗ್ಯಾರಂಟಿ ಎಂಬುದು ರಣ'ಬೀರ್‌'ಬಲ್ಲವರ ಅಂಬೋಣ.

  ಆಸ್ಟ್ರೇಲಿಯಾದಲ್ಲಿ 'ಬಚನಾ ಏ ಹಸೀನೋ' ಚಿತ್ರೀಕರಣ ನಡೆಯುವಾಗ ತಾವಿಬ್ಬರೂ ಪ್ರೇಮಪಾಶದಲ್ಲಿ ಸಿಲುಕಿದೆವು. ನಮ್ಮಿಬ್ಬರ ಆಸಕ್ತಿ, ಇಷ್ಟಗಳು ಒಂದೇ ಆಗಿದ್ದು, ನಾವಿಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೇವೆ ಎಂದು ರಣಬೀರ್ ಹೇಳಿದ್ದಾನೆ. ಕ್ರಿಕೆಟ್ ನೆಪವೊಡ್ಡಿ ಆಸ್ಟ್ರೇಲಿಯಾಗೆ ದೀಪಿಕಾ ದೌಡಾಯಿಸಿದ್ದು ರಣಬೀರ್ ಜೊತೆ ಲಲ್ಲೆ ಹೊಡೆಯಲು ಎಂದು ಈ ಯುವಿ ಹುಚ್ಚಪ್ಪನಿಗೆಲ್ಲಿ ಗೊತ್ತಾಗಬೇಕು? ದೀಪಿಕಾ ತನ್ನನ್ನೇ ಭೇಟಿ ಮಾಡಲು ಬಂದಿರಬಹುದೆಂದು ನಂಬಿ ವಿಕೆಟ್ ಚೆಲ್ಲಿ ಪೆವಿಲಿಯನ್‌ಗೆ ದೌಡಾಯಿಸಿದರೇ ಯುವಿ?

  ಲವ್, ಡೇಟಿಂಗ್ ಎಲ್ಲಾ ಫ್ರೀಯಾಗಿದ್ದಾಗ ಮಾಡಿಕೊಂಡು ಸದ್ಯಕ್ಕೆ ನಾವಿಬ್ಬರೂ ನಮ್ಮ ಅಭಿನಯ ವೃತ್ತಿಯ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದು ರಣಬೀರ್ ಕಳ್ಳನಗೆ ಬೀರಿದ್ದಾನೆ. ತಮಾಷೆಯೆಂದರೆ, ರಣಬೀರ್ ದೀಪಿಕಾಳ ಪಾಲಕರನ್ನು ಭೇಟಿಯಾದ ನಂತರ ಅವರನ್ನು ಭಾರೀ ಮೆಚ್ಚಿಕೊಂಡಿದ್ದಾನಂತೆ, ದೀಪಿಕಾಳನ್ನು ಭಾರೀ ಹಚ್ಚಿಕೊಂಡಿದ್ದಾನಂತೆ. ಯುವಿ ಟ್ವೆಂಟಿ20 ಮ್ಯಾಚ್‌ಗಳಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದಾಗ ಯುವಿ ಮತ್ತು ದೀಪಿಕಾಳ ಮ್ಯಾಚ್ ಮೇಕಿಂಗ್ ಬಗ್ಗೆ ಭಾರೀ ಚರ್ಚೆಗಳಾಗಿದ್ದವು, ಯವರಾಜ್ ಪಾಲಕರು ಕೂಡ ಮದುವೆಗೆ ಆಗಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಕೂಡ ಬಂದಿದ್ದವು. ಈಗ ಯುವಿ ತನಗೆ ಮಿಸ್‌ಮ್ಯಾಚ್ ಎಂದು ದೀಪಿಕಾ ರಣಬೀರ್ ಕೈಹಿಡಿದಿದ್ದಾಳೆ. ಚಿತ್ರನಟರ ಬದುಕು ಕೂಡ ಟ್ವೆಂಟಿ20 ಮ್ಯಾಚ್‌ನಂತೆಯೇ ಅಲ್ಲವೇ?

  ಹಾಗೆ ನೋಡಿದರೆ, ರಣಬೀರ್ ಮತ್ತು ದೀಪಿಕಾ ಕೈಕೈಹಿಡಿದು ಓಡಾಡುತ್ತಿರುವುದು ಇದು ಮೊದಲೇನಲ್ಲ. ದೀಪಿಕಾಳ ಓಂ ಶಾಂತಿ ಓಂ ಮತ್ತು ರಣಬೀರ್‌ನ ಸಾವರಿಯಾ ಬಿಡುಗಡೆಯಾಗುವ ಮೊದಲೇ ಅವರಿಬ್ಬರ ಗೆಳೆತನ ಜಾರಿಯಲ್ಲಿತ್ತು. ಅದ್ಯಾವುದೋ ಕಾರಣದಿಂದ ಸಖ್ಯ ಜಾರಿಯೂ ಬಿದ್ದಿತ್ತು. ಓಂ ಶಾಂತಿ ಓಂ ಮತ್ತು ಸಾವರಿಯಾ ಎರಡೂ ಚಿತ್ರಗಳು ಒಟ್ಟಿಗೇ ಬಿಡುಗಡೆಯಾಗಿ ಬರಕತ್ತಾಗದೇ ನಷ್ಟ ಅನುಭವಿಸಿದರೂ ಲಾಭವಾಗಿದ್ದು ಮಾತ್ರ ಈ ಯುವಪ್ರೇಮಿಗಳಿಗೆ. ಅದೇ ಸಮಯದಲ್ಲಿ ರಣಬೀರ್ ಸಾವರಿಯಾ ನಾಯಕಿ ಸೋನಂ ಕಪೂರ್‌ಳನ್ನು ಪ್ರೇಮಿಸುತ್ತಿದ್ದಾನೆಂಬ ಗಾಳಿಸುದ್ದಿ ಹಬ್ಬಿತ್ತು. ಅಳನ್ಬಿಟ್ ಇವಳ್ಯಾರು ಆಟದಲ್ಲಿ ಸೋನಂಳನ್ನು ಬಿಟ್ಟು ದೀಪಿಕಾಳನ್ನು ರಣಬೀರ್ ಹಿಡಿದುಕೊಂಡಿರುವುದರಿಂದ ಸೋನಂ ಮತ್ತು ಯವರಾಜ್ ಸದ್ಯಕ್ಕೆ ಒಂದೇ ದೋಣಿಯಲ್ಲಿ ಪಯಣಿಸುತ್ತಿರುವ ಪಯಣಿಗರು. ಅಂದ ಹಾಗೆ, ಇದೇ ದೋಣಿಯಲ್ಲಿ ಇನ್ನೊಬ್ಬರಿದ್ದಾರೆ. ಅವರು ಮಹೇಂದ್ರ ಸಿಂಗ್ ಧೋನಿ!

  ದೀಪಿಕಾ ಪಡುಕೋಣೆ ಚಿತ್ರಪಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X