»   » ಬಾಲಿವುಡ್ನಲ್ಲಿ ಮೋಡಿ ಮಾಡ್ತಾನಾ ಕ್ರಿಕೆಟ್ ಬ್ಯಾಡ್ ಬಾಯ್ ಅಖ್ತರ್?

ಬಾಲಿವುಡ್ನಲ್ಲಿ ಮೋಡಿ ಮಾಡ್ತಾನಾ ಕ್ರಿಕೆಟ್ ಬ್ಯಾಡ್ ಬಾಯ್ ಅಖ್ತರ್?

Subscribe to Filmibeat Kannada

ಬೆಂಗಳೂರು, ಡಿ.8 :  Bad boy of cricket ನಾಮಾಂಕಿತ ಶೋಯೇಬ್ ಅಖ್ತರ್ ಹಿಂದಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ, ಚಿತ್ರದ ಹೆಸರು 'ಮೆ ಔರ್ ಮೇರಿ ಹಿಮ್ಮತ್" ಅಂತ. ಇದೊಂದು ಪಕ್ಕಾ ಹಾಸ್ಯಪ್ರಧಾನ ಚಿತ್ರ ಅಂತ ತಿಳಿದುಬಂದಿದೆ.

ಪ್ರಸ್ತುತ ಬೆಂಗಳೂರಿನಲ್ಲೇ ಇರುವ ಅಖ್ತರ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಭಾರತ ಮತ್ತು ಪಾಕ್ ಟೆಸ್ಟ್ ನಲ್ಲಿ ಆಡಲಿದ್ದಾರೆ. ಆಮೇಲೆ ಸಿನಿಮಾದತ್ತ ಲಕ್ಷ್ಯ. 'ಮೇ ಔ ಮೇ ಹಿ" ಚಿತ್ರಕತೆಯನ್ನು ಒಪ್ಪಿರುವುದಾಗಿ ಅಖ್ತರ್ ತಿಳಿಸಿದ್ದು, ನಿಶಾ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಚಿತ್ರಕ್ಕೆ  ಸಂಘ್‌ಮಿತ್ರಾ ಚೌಧುರಿ ನಿರ್ದೇಶಕಿ.

ಪ್ರಸ್ತುತ ಹೋಟೆಲ್ ಗ್ರಾಂಡ್ ಅಶೋಕದಲ್ಲಿ ಭಾರತ ಮತ್ತು ಪಾಕ್ ತಂಡಗಳು ತಂಗಿವೆ. ಅದೇ ಹೋಟಲ್‌ನಲ್ಲಿ ಉಳಿದುಕೊಂಡಿರುವ ನಿರ್ದೇಶಕಿ ಹೇಗೋ ಕಷ್ಟಪಟ್ಟು ಅಖ್ತರ್‌ರ ಅಪಾಯಿಂಟ್‌ಮೆಂಟ್ ಗಿಟ್ಟಿಸಿ ಕೈಗೆ ಸ್ಕ್ರಿಪ್ಟ್ ಕೊಟ್ಟರು, ಅಖ್ತರ್ ಓದಿ ಓಕೆ ಎಂದರು. ಈಗ ಚಿತ್ರೀಕರಣ ಶುರುವಾಗುವುದೊಂದು ಬಾಕಿ ಉಳಿದಿದೆ ಅಷ್ಟೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಸಂಘ್‌ಮಿತ್ರಾ, ಕತೆ ಕೇಳಿ ಅಖ್ತರ್ ಉತ್ತೇಜಿತರಾಗಿದ್ದಾರೆ. ಕೆಲವೊಂದು ಕಟ್ಟುಪಾಡುಗಳಿವೆ. ಅವೆಲ್ಲಾ ಮುಗಿದರೆ ಚಿತ್ರೀಕರಣ ಅಡೆತಡೆ ಇಲ್ಲದೆ ಸಾಗುತ್ತದೆ. ಚಿತ್ರದಲ್ಲಿ ಅಖ್ತರ್ ಅವರನ್ನು ಒಬ್ಬ ವ್ಯಕ್ತಿಯಾಗಿ ತೋರಿಸಲಾಗುತ್ತಿದೆ ವಿನಾ ಕ್ರೀಡಾಕಾರನಾಗಿ ಅಲ್ಲ. ಅಖ್ತರ್ ಅವರ ಜೀವನಕ್ಕಿಂತಲೂ ಭಿನ್ನವಾದ ರೋಲ್‌ನ್ನು ತೆರೆಯ ಮೇಲೆ ತರುತ್ತಿದ್ದೇವೆ. ಪಂಜಾಬ್, ಲಾಹೋರ್, ಲಖನೌನಲ್ಲಿ ಹೊರಾಂಗಣ ಚಿತ್ರೀಕರಣ ಮಾಡಲಿದ್ದೇವೆ.  ಸಾಲದಕ್ಕೆ ಪಾಕಿಸ್ತಾನ ಮತ್ತು ಭಾರತ ತಂಡಗಳ ಮತ್ತಷ್ಟು ಕ್ರೀಡಾಪಟುಗಳನ್ನು ಚಿತ್ರಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಮ್ಮದು ಎಂದರು. ಓಕೆ. ಸಂಘಮಿತ್ರ ಪ್ರಯತ್ನ ಮುಂದುವರೆಯಲಿ.

ಚಿತ್ರದ ನಾಯಕಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಬಹುಶಃ  ದೀಪಿಕಾ ಪಡುಕೋಣೆ ಅಥವಾ ಹಂಸಿಕಾ ಮೋಟ್‌ವಾನಿ ಕಾಲ್‌ಷೀಟ್‌ಗಾಗಿ ಪ್ರಯತ್ನಿಸಲಾಗುತ್ತಿದೆ. ಮತ್ತೊಂದು ಕುತೂಹಲಕರವಾದ ಸಂಗತಿ ಎಂದರೆ ಶೋಯೇಬ್ ಅಖ್ತರ್ ಸಂಭಾವನೆ ಎಷ್ಟು ಅನ್ನುವ ಪ್ರಶ್ನೆಗೆ ನಿಮ್ಮಷ್ಟೇ ಕುತೂಹಲ ನಮಗೂ ಇದೆ. ಈ ಬಗ್ಗೆ ವಿಚಾರಿಸಲಾಗಿ ತಿಳಿದ ವಿಷಯ ಇಷ್ಟು; 1ಕೋಟಿ ರೂ. ಕೊಡ್ತೀವಿ ಎಂದರು ನಿರ್ದೇಶಕಿ. ಅದಕ್ಕೆ ಅಖ್ತರ್ , ಇಲ್ಲಾ ಇಲ್ಲಾ  8 ಕೊಡಿ ಅಂದ್ರು. ನಿರ್ದೇಶಕರು ಸ್ವಲ್ಪ ಯೋಚಿಸಿ ಓಕೆ ಎಂದರು ಅಂತ ತಿಳಿದುಬಂದಿದೆ. ಒಟ್ಟಾರೆ ಬಜೆಟ್‌ನಲ್ಲಿ ಇದು ಮೂರನೆ ಒಂದು ಭಾಗವಾಗಿರುವ ಕಾರಣ ಸಂಭಾವನೆ ವಿಷಯದಲ್ಲಿ ಇನ್ನೂ ಹಗ್ಗಾಜಗ್ಗಾಟ ನಡೆಯುತ್ತಿದೆ.

(ದಟ್ಸ್‌ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada