»   » ಫತ್ವಾ ಪ್ರಶ್ನಿಸಿದ ಜಾವೇದ್ ಅಖ್ತರ್ ಗೆ ಜೀವ ಬೆದರಿಕೆ

ಫತ್ವಾ ಪ್ರಶ್ನಿಸಿದ ಜಾವೇದ್ ಅಖ್ತರ್ ಗೆ ಜೀವ ಬೆದರಿಕೆ

Posted By:
Subscribe to Filmibeat Kannada
Javed Akthar
ಉದ್ಯೋಗಸ್ಥ ಮುಸ್ಲಿಂ ಮಹಿಳೆಯ ವಿರುದ್ಧದ ಫತ್ವಾವನ್ನು ಟೀಕಿಸಿದ್ದ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರಿಗೆ ಜೀವ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ. ಬೆದರಿಕೆ ಇ ಮೇಲ್ ಕಳಿಸಿದ ವ್ಯಕ್ತಿಯ ಜಾಡನ್ನು ಹಿಡಿಯುವಲ್ಲಿ ಉಗ್ರರ ನಿಗ್ರಹ ದಳ(ATS) ಕಾರ್ಯಗತವಾಗಿದೆ.

ಮುಸ್ಲಿಂ ಮಹಿಳೆಯರು ಹೊರಗೆ ಕೆಲಸ ಮಾಡಬಾರದೆಂಬ ಫತ್ವಾಕುರಿತು ಟಿವಿ ಚಾನೆಲ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೌಲ್ವಿಯನ್ನು ಮತಿಹೀನ ಎಂದ ನಂತರ ಖ್ಯಾತ ಗೀತೆ ರಚನೆಕಾರ, ಕವಿ ಜಾವೇದ್ ಅಖ್ತರ್ ಅವರಿಗೆ ಇ-ಮೇಲ್‌ನಲ್ಲಿ ಜೀವ ಬೆದರಿಕೆ ಸಂದೇಶ ಬಂದಿತ್ತು.

'ನಿನ್ನ ಕಡೆಯ ದಿನಗಳು ಆರಂಭವಾಗಿವೆ' ಎಂದು ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ಅಖ್ತರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 'ಫತ್ವಾವಿರುದ್ಧ ಹೇಳಿಕೆ ನೀಡಿದ ನಂತರ ಇ-ಮೇಲ್‌ನಲ್ಲಿ ಹಗೆತನದ ಸಂದೇಶಗಳು ಬಂದಿವೆ. ಉದ್ಯೋಗಸ್ಥ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾವನ್ನು ಟೀಕಿಸಿದ್ದೇನೆ ಎಂಬ ಕಾರಣಕ್ಕೆ ನಾನು ಮುಸ್ಲಿಂ ವಿರೋಧಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ತಕ್ಷಣ ಅವರು ಕ್ರಮ ಕೈಗೊಂಡು ನನಗೆ ಭದ್ರತೆ ನೀಡಿದ್ದಾರೆ' ಎಂದು ಅಖ್ತರ್ ತಿಳಿಸಿದ್ದಾರೆ. ಈ ಫತ್ವಾಗಳ ಬಗ್ಗೆ ಸಮಾಜ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಹೇಳಿಕೆ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿ, ಇ-ಮೇಲ್ ಕಳುಹಿಸಿದ್ದಾರೆ. ಆದರೆ ಈ ಪೈಕಿ ಒಬ್ಬ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ' ಎಂದು ಅಖ್ತರ್ ತಿಳಿಸಿದರು.

ಮುಸ್ಲಿಂ ಮಹಿಳೆಯರು ಕಚೇರಿಗಳಲ್ಲಿ ಕೆಲಸ ಮಾಡುವುದು ಹಾಗೂ ಕುಟುಂಬದವರು ಅವರ ಹಣ ಪಡೆಯುವುದು ಶರಿಯಾ ಕಾನೂನಿಗೆ ವಿರುದ್ಧ ಎಂದು ದೇವಬಂದ್‌ನ ದರೂಲ್ ಉಲೂಮ್ ಇತ್ತೀಚೆಗೆ ಫತ್ವಾ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada