»   » ವರ್ಮಾರ ಹೊಸ ಬೇಟೆ ಅಮೃತಾ ಖಾನ್ವಿಲ್ಕರ್

ವರ್ಮಾರ ಹೊಸ ಬೇಟೆ ಅಮೃತಾ ಖಾನ್ವಿಲ್ಕರ್

Subscribe to Filmibeat Kannada

ಬಾಲಿವುಡ್‌ನ ರಂಭೆ, ಮೇನಕೆ, ಊರ್ವಶಿಯರನ್ನು ಪರಿಚಯಿಸುವುದರಲ್ಲಿ ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಎತ್ತಿದ್ದ ಕೈ. ಊರ್ಮಿಳಾ ಮಾತೊಂಡ್ಕರ್, ಅಂತರ ಮಾಲಿ, ನಿಶಾ ಕೊಠಾರಿ, ಜಿಯಾ ಖಾನ್‌ರ ಹೊಸ ಅನ್ವೇಷಣೆಗಳ ನಂತರ ವರ್ಮಾ ಮತ್ತೆ ಹುಡುಕಾಟದಲ್ಲಿ ನಿರತರಾದರು. ಆಡ್‌ಲ್ಯಾಬ್ಸ್‌ನ ಆಡಿಷನ್ ಗೆ ಬಂದಿದ್ದ ಅಮೃತಾ ಖಾನ್ವಿಲ್ಕರ್ ಎಂಬ ಬಳಕುವ ಬಳ್ಳಿ ಕಣ್ಣಿಗೆ ಬಿದ್ದು ಕಂಗಾಲಾದರು. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದರೆ ಇನ್ನೇನಾಗುತ್ತದೆ! ದೂರದರ್ಶನ ಜಾಹೀರಾತು ಹಾಗೂ ಸಿನಿಮಾ ಒಂದರಲ್ಲಿ ನಟಿಸಿದ ಅನುಭವವಿದೆ. ಜೊತೆಗೆ ಅಂದಚೆಂದವನ್ನು ಬೆರಳು ಮಾಡಿ ತೋರಿಸದಂತಹ ವೈಯಾರ. ವರ್ಮಾ ಸಿನಿಮಾಗೆ ಹೇಳಿ ಮಾಡಿಸಿದ ಅರ್ಹತೆ.

ರಂಗೀಲಾ ಚಿತ್ರಕ್ಕಾಗಿ ಊರ್ಮಿಳಾರನ್ನು ಕರೆತಂದು ಕುಣಿಸಿದ್ದೇ ತಡ. ಊರ್ಮಿಳಾ ರಾತ್ರೋ ರಾತ್ರಿ ಪಡ್ಡೆಗಳ ಆರಾಧ್ಯ ದೈವವಾಗಿ ಬದಲಾದರು. ಹಾಗೆಯೇ ನಾಚ್ ಚಿತ್ರಕ್ಕಾಗಿ ಅಂತರಮಾಲಿ, ಜೇಮ್ಸ್ ಹಾಗೂ ಶಿವ ಚಿತ್ರಕ್ಕಾಗಿ ನಿಶಾ ಕೊಠಾರಿ, ನಿಶಬ್ದ್‌ನಲ್ಲಿ ನಟಿಸಿದ ಜಿಯಾಖಾನ್ ಯುವಕರ ಎದೆಬಡಿತವನ್ನು ಹೆಚ್ಚಿಸಿದರು. ವರ್ಮಾರ ವಿಭಿನ್ನ ಚಿತ್ರಕಥೆಗಳಿಗೆ ತಕ್ಕಂತೆ ಅಷ್ಟೇ ವಿಭಿನ್ನ ಬೆಡಗಿಯರು ಹಾಗೆ ಬಂದು ಹೀಗೆ ಮರೆಯಾದರು. ಈಗ ಅಮೃತಾ ಎಂಬ ಬಳುಕುವ ಬಳ್ಳಿ ವರ್ಮಾರ ಚಿತ್ರದಲ್ಲಿ ಅವಕಾಶಗಿಟ್ಟಿಸಿದ್ದಾರೆ.

ವರ್ಮಾ ನಿರ್ದೇಶನದ, ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ 'ಫೂಂಕ್ ' ಹಾಗೂ 'ಕಾಂಟ್ರಾಕ್ಟ್' ಚಿತ್ರಗಳಲ್ಲಿ ಅಮೃತಾ ನಾಯಕಿಯಾಗಿ ಈಗಾಗಲೇ ಆಯ್ಕೆಯಾಗಿ ನಟಿಸುತ್ತಿದ್ದಾರೆ. ವರ್ಮಾ ನಿರ್ದೇಶನದ ಎರಡು ಚಿತ್ರಗಳು ಹಾಗೂ ಸೂರ್ಯ ನಿರ್ದೇಶನದ, ವರ್ಮಾ ನಿರ್ಮಾಣದ '340' ಎಂಬ ಚಿತ್ರದಲ್ಲಿ ನಟಿಸಲು ಅಮೃತಾ ಅಣಿಯಾಗಿದ್ದಾರೆ. ನಟಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಈಕೆಗೆ 'ಮುಂಬೈ ಸಾಲ್ಸಾ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ಮುಂದೆ ದಾರಿ ಕಾಣದೆ ಅಮೃತಾರ ಬದುಕು ಮೂರಾಬಟ್ಟೆಯಾಗಿತ್ತು. ಈಗ ವರ್ಮಾರ ಅವಕಾಶಗಳ ಮಹಾಪೂರವನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ.

ಅಭಿನಯ ಹೇಗೋ ಏನೋ ಗೊತ್ತಿಲ್ಲ. ಆದರೆ ನೃತ್ಯದಲ್ಲಿ ಅನುಭವವಿದೆ. ಹಾಸ್ಯ, ಪ್ರೀತಿ, ಪ್ರೇಮ, ಪ್ರಣಯ... ಕಥೆಗಳ ಕಡೆಗೆ ಒಲವು. ರಿತೇಶ್ ದೇಶ್‌ಮುಖ್, ಜೂಹಿ ಚಾವ್ಲಾ ಈಕೆಯ ಇಷ್ಟದ ನಟ-ನಟಿಯರಂತೆ. ಎಂಥಾ ಪಾತ್ರವಾದರೂ ಸರಿ ಕರಣ್ ಜೋಹರ್ ಚಿತ್ರದಲ್ಲಿ ನಟಿಸಲು ಸಿದ್ಧವಿರುವುದಾಗಿ ಅಮೃತಾ ಜಂಭ ಕೊಚ್ಚಿಕೊಳ್ಳುತ್ತಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada