»   » ಅಂಗೈಯಲ್ಲಿ ಆಕಾಶ ತೋರಿಸಿ ಮಾಯವಾದ ದೀಪಿಕಾ!

ಅಂಗೈಯಲ್ಲಿ ಆಕಾಶ ತೋರಿಸಿ ಮಾಯವಾದ ದೀಪಿಕಾ!

Posted By:
Subscribe to Filmibeat Kannada

ಬಾಲಿವುಡ್‌ನ ಎಲ್ಲಾ ನಟಿಯರ 'ಕೆಂಗಣ್ಣಿಗೆ' ಗುರಿಯಾಗಿರುವ ದೀಪಿಕಾ ಪಡುಕೋಣೆ ಎಂಬ 'ಕನ್ನಡತಿ' ಸದ್ಯಕ್ಕೆ ಯಾರ ಕೈಗೂ ಸಿಗುತ್ತಿಲ್ಲ. ಶಾರುಖ್ ಖಾನ್ ಜೊತೆ ನಟಿಸಿರುವ 'ಓಂ ಶಾಂತಿ ಓಂ' ಸೂಪರ್ ಹಿಟ್ ಆಗುತ್ತಿದ್ದಂತೆ ದಕ್ಷಿಣ ಭಾರತದ ಘಟಾನುಘಟಿ ನಟರೊಡನೆ ನಟಿಸಲು ಒಲ್ಲೆ ಎನ್ನುತ್ತಿದ್ದಾಳೆ.

'ಓಂ ಶಾಂತಿ ಓಂ' ಬಿಡುಗಡೆಯಾಗುವ ಕೆಲವೇ ದಿನ ಮೊದಲು ದಕ್ಷಿಣ ಭಾರತ ಸೂಪರ್ ಸ್ಟಾರ್‌ಗಳಾದ ಸೂರ್ಯ ಮತ್ತು ಅಜಿತ್‌ರೊಡನೆ ನಟಿಸುವ ಭರವಸೆಯಿತ್ತಿದ್ದ ದೀಪಿಕಾ ಈಗ ಕೋಟಿ ಕೊಡುತ್ತೇನೆಂದರೂ ಕಾಟಾಚಾರಕ್ಕೂ ಇತ್ತ ತಿರುಗಿ ಕೂಡ ನೋಡುತ್ತಿಲ್ಲ. ನಂಬಲರ್ಹ ಮೂಲಗಳ ಪ್ರಕಾರ, ತಮ್ಮ ಹಳೆಯ ಗೆಣೆಕಾರ ರಣಬೀರ್ ಕಪೂರ್ ಜೊತೆ ನಟಿಸುತ್ತಿರುವ ಹೊಸ ಚಿತ್ರಕ್ಕಾಗಿ ದೀಪಿಕಾ ಪಡೆದಿರುವುದು ಅನಾಮತ್ ಎರಡು ಕೋಟಿ! ಚಿತ್ರವನ್ನು ಸಿದ್ದಾರ್ಥ್ ಆನಂತ್ ನಿರ್ಮಿಸುತ್ತಿದ್ದಾರೆ.

ಕನ್ನಡದ 'ಐಶ್ವರ್ಯ' ದೀಪಿಕಾಳ ಆನ್ ದಿ ರೆಕಾರ್ಡ್ ಪ್ರಥಮ ಚಿತ್ರವಾದರೂ ಆಫ್ ದಿ ರೆಕಾರ್ಡ್ ಹಿಂದಿಯ 'ಓಂ ಶಾಂತಿ ಓಂ'ನೇ ಅವರ ಆರಂಗ್ರೇಟಂ ಆಗಿದೆ. ದಕ್ಷಿಣ ಭಾರತದಿಂದ ಬಂದಿದ್ದರಿಂದ ಮತ್ತು ಪ್ರಥಮ ಚಿತ್ರ ಕನ್ನಡವಾದ್ದರಿಂದ ತಮಿಳು, ತೆಲುಗಿನಲ್ಲೂ ಅವಕಾಶಗಳನ್ನು ಬಾಚಿಕೊಳ್ಳಬಹುದೆಂದು ಅಲ್ಲಿಯ ನಿರ್ಮಾಪಕರು ಕನಸು ಕಾಣುತ್ತಿದ್ದರು. ಘಟಾನುಘಟಿ ನಟರೂ ಆಕೆಯೊಡನೆ ಡ್ಯುಯೆಟ್ ಹಾಡಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಎಲ್ಲರಿಗೂ ಅಂಗೈಯಲ್ಲಿ ಆಕಾಶ ತೋರಿಸಿದ್ದಾಳೆ ದೀಪಿಕಾ.

ದೀಪಿಕಾ ಆಗಲಿ, ಆಕೆಯ ಮ್ಯಾನೇಜರ್ ಆಗಲಿ ದಕ್ಷಿಣದ ನಿರ್ಮಾಪಕರ ಯಾವುದೇ ಕರೆಗಳಿಗೆ ಉತ್ತರ ನೀಡುತ್ತಿಲ್ಲ. ಹಿಂದಿಯಲ್ಲಿ ತೋಪುಹೊಡೆದ ಸಾಲೋಸಾಲು ನಟನಾಮಣಿಗಳನ್ನು ಹಣದ ಆಸೆ ತೋರಿಸಿ ದಕ್ಷಿಣಕ್ಕೆ ಎಳೆದು ತಂದಿದ್ದಾರೆ ಇಲ್ಲಿನ ನಿರ್ಮಾಪಕರು. ತ್ರಿಶಾ, ಕೀರತ್, ನಗ್ಮಾ, ಸಿಮ್ರಾನ್, ಆಸಿನ್, ಮೋನಾಲಿಸಾ, ಜೆನೆಲಿಯಾ, ರೀಮಾ ಸೇನ್, ಆರತಿ ಛಾಬ್ರಿಯಾ ಮುಂತಾದವರೆಲ್ಲಾ ಹಿಂದಿಯಲ್ಲಿ ನೈಯಾ ಪೈಸೆಯ ಚಾನ್ಸು ಸಿಗದೇ ದಕ್ಷಿಣಕ್ಕೆ ಓಡಿಸಿಕೊಂಡು ಬಂದ ಸುಂದರಿಯರೇ. ಹಿಂದಿ ಚಿತ್ರರಂಗದ ಸೌಂದರ್ಯವತಿ ಐಶು ಕೂಡ ಇದಕ್ಕೆ ಹೊರಲ್ಲ.

ದೀಪಿಕಾಳ ವಿಷಯದಲ್ಲೂ ಹೀಗೆ ಆಗುತ್ತದೆಂದು ಅನೇಕ ನಿರ್ಮಾಪಕರು ಹಗಲುಕನಸು ಕಾಣುತ್ತಿದ್ದರು. ಈಗ ಇವರೆಲ್ಲರಿಗೆ ದೀಪಿಕಾ ಕೊಟ್ಟಿದ್ದಾಳೆ ಠೇಂಗಾ. ದೀಪಿಕಾ ಕೈ ಎತ್ತಿದ್ದರಿಂದ ನಿರ್ಮಾಪಕರು ಕ್ರೋಧಕ್ಕೊಳಗದೇ ಓಂ ಶಾಂತಿ ಓಂ ಮಂತ್ರ ಪಠಿಸುವುದೇ ಲೇಸು. ಅಥವ ಹಿಂದಿಯ ಚಿತ್ರಗಳೆಲ್ಲ ತೋಪಾಗಿ ಮತ್ತೆ ದಕ್ಷಿಣದತ್ತ ಮುಖ ಮಾಡುವವರೆಗೆ ಕಾಯಬೇಕು.

ಲಿರಿಲ್, ಕ್ಲೋಸ್ ಅಪ್, ಕಿಂಗ್‌ಫಿಷರ್ ಮುಂತಾದ ಕಂಪನಿ ಉತ್ಪಾದನೆಗಳಿಗೆ ಬ್ರಾಂಡ್ ಅಂಬಾಸಡರ್ ಆಗಿರುವ ದೀಪಿಕಾ ಪ್ರತಿ ಪ್ರಾಡಕ್ಟ್‌ಗೆ ಒಂದು ಕೋಟಿ ಬ್ಯಾಗಿಗಿಳಿಸುತ್ತಿದ್ದಾಳೆ.

ಹೇಗಿದ್ದರೂ ಕನ್ನಡತಿ, ಕನ್ನಡದ ನಿರ್ಮಾಪಕರು ಕೇಳಿದರೆ ಇಲ್ಲವೆನ್ನಳಾರಳು, ಹತ್ತಿದ ಏಣಿಯನ್ನು ನೂಕಲಾರಳು ಎಂದು ಕನ್ನಡದ ದಿಗ್ಗಜ ನಿರ್ಮಾಪಕರು ಅಂದುಕೊಂಡಿದ್ದರೆ ಅವರು ಕನಸಿನಿಂದ ಹೊರಬರುವುದೇ ಲೇಸು. ಏಕೆಂದರೆ, ಆಕೆ ಏಣಿಯನ್ನು ಒದ್ದಾಗಿದೆ, ಬಾಲಿವುಡ್‌ಗಳಿಯುವ ಮೊದಲೇ ಇನ್ನೆಂದೂ ಕನ್ನಡದಲ್ಲಿ ನಟಿಸಲಾರೆ ಎಂದು ಅವಳು ಹೇಳಿಕೆ ಕೊಟ್ಟಾಗಿದೆ. ಅದಲ್ಲದೇ, ಆಕೆ ಪ್ರತಿ ಸಿನೆಮಾಕ್ಕೆ ಕೇಳುತ್ತಿರುವುದು ಎರಡು ಕೋಟಿ ರೂಪಾಯಿ! ಮಲ್ಲಿಕಾ ಶೇರಾವತ್‌ಳಂಥ ರೂಪಸಿಯರಿಗೆ ಕೇವಲ ಒಂದು ಹಾಡಿಗಾಗಿ ಎಪ್ಪತ್ತೈದು ಲಕ್ಷ ಸುರಿಯುವ ಇವರು ಈ ಪ್ರಯತ್ನವನ್ನೂ ಒಮ್ಮೆ ಮಾಡಿ ನೋಡಲಿ.

ದೀಪಿಕಾ ಪಡುಕೋಣೆ ವಾಲ್ ಪೇಪರ್
ದೀಪಿಕಾ ಚಿತ್ರಪಟ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X