»   » ಶಿಲ್ಟಾ ಶೆಟ್ಟಿ ಅದ್ದೂರಿ ಮದುವೆ ಆರತಕ್ಷತೆ

ಶಿಲ್ಟಾ ಶೆಟ್ಟಿ ಅದ್ದೂರಿ ಮದುವೆ ಆರತಕ್ಷತೆ

Subscribe to Filmibeat Kannada

ಈ ವರ್ಷದ ಅತ್ಯಂತ ಅದ್ದೂರಿ ಮದುವೆ ಆರತಕ್ಷತೆ ಸಮಾರಂಭ ಮಂಗಳವಾರ ಸಂಜೆ ಮುಂಬೈನಲ್ಲಿ ಜರುಗಿತು. ಜಗಮಗಿಸುವ ದೀಪಗಳು, ಕಣ್ಣುಕೋರೈಸುವ ಆಭರಣಗಳು, ವಿಶೇಷ ವಿನ್ಯಾಸದ ಉಡುಗೆ ತೊಡುಗೆ ಮತ್ತು ಭೂರಿ ಭೋಜನದ ಐಶಾರಾಮಿ ಔತಣಕೂಟಕ್ಕೆ ಗ್ರಾಂಡ್ ಹಯಾತ್ ಹೋಟೆಲಿನ ಸಭಾಂಗಣ ಸಾಕ್ಷಿಯಾಯಿತು.

ಬಾಲಿವುಡ್ಡಿನ ತಾರೆಯರು ಹಿಂಡುಹಿಂಡಾಗಿ ಆಗಮಿಸಿದ್ದರು. ಮುಂಬೈ ನಗರದ ಗಣ್ಯವ್ಯಕ್ತಿಗಳು ಮತ್ತು ನಟ, ನಟಿ, ನಿರ್ದೇಶಕ, ನಿರ್ಮಾಪಕ ತಂತ್ರಜ್ಞರಿಂದ ತುಂಬಿತುಳುಕುತ್ತಿದ್ದ ಸಭಾಂಗಣಕ್ಕೆ ಶಿಲ್ಪಾಕುಂದೇರ ಮತ್ತು ರಾಜ್ ಕುಂದೇರ ಕೈಯಲ್ಲಿಕೈಯಿಟ್ಟು ಆಗಮಿಸುತ್ತಿದ್ದಂತೆಯೇ ಆಮಂತ್ರಿತರು ಭಾರೀ ಕರತಾಡನದಿಂದ ವಧೂವರರನ್ನು ಸ್ವಾಗತಿಸಿದರು.

ಮದುವಣಗಿತ್ತಿ ಶಿಲ್ಪಾ ಇನ್ನೂ ಸುಂದರವಾಗಿ ಕಾಣುತ್ತಿದ್ದರು. ಖ್ಯಾತ ಉಡುಪು ವಿನ್ಯಾಸಕಾರ ತರುಣ್ ತಹಿಲಾನಿ ಸಿದ್ಧಪಡಿಸಿದ ಬಂಗಾರಲೇಪಿತ ವಿಶೇಷ ವಸ್ತ್ರಧಾರಿಯಾಗಿದ್ದರು ಶಿಲ್ಪಾ. ವಸ್ತ್ರಕ್ಕೆ ಒಪ್ಪುವ ರಾಶಿರಾಶಿ ಆಭರಣಗಳಿಂದ ಶಿಲ್ಪಾ ನಿಜಕ್ಕೂ ಮಿನುಗು ತಾರೆಯಾಗಿದ್ದರು. ಈ ಆಭರಣಗಳನ್ನು ಪ್ರಸಿದ್ಧ ಅನ್ ಮೋಲ್ ಜ್ಯೂವಲ್ಸ್ ಮಳಿಗೆ ತಯಾರಿಸಿತ್ತು. ರಾಜ್ ಕಪ್ಪು ಬಣ್ಣದ ಶೇರ್ ವಾನಿ ಧರಿಸಿ ರಾರಾಜಿಸುತ್ತಿದ್ದರು. ಅಂತೂ ಸರಿಸುಮಾರು ಎಂಟು ಕಣ್ಣುಗಳು ಶಿಲ್ಪಾಳತ್ತ ಹೊರಳಿದರೆ ರಾಜ್ ಕುಂದೇರ ಕಡೆಗೆ ಎರಡು ಕಣ್ಣುಗಳಾದರೂ ನೋಟ ಹರಿಸುತ್ತಿದ್ದವು.

ಆರತಕ್ಷತೆಯ ಊಟ ಭರ್ಜರಿಯಾಗಿತ್ತು ಎಂದು ಹೇಳಲೇಬೇಕಾಗಿಲ್ಲ. ಭಾರತೀಯ, ಪಾಶ್ಚಿಮಾತ್ಯ ( ಇಟಾಲಿಯನ್), ಏಷಿಯಾ ( ಥೈ ಮತ್ತು ಚೀನೀ) ಶೈಲಿಯ ವಿವಿಧ ಭಕ್ಷ್ಯ ಭೋಜ್ಯಗಳನ್ನು ಬಿಸಿಬಿಸಿಯಾಗಿ ಬಡಿಸುವ ಕೌಂಟರುಗಳ ಮೂಲಕ ಸರಬರಾಜು ಮಾಡಲಾಗಿತ್ತು.

ಆರತಕ್ಷತೆ ಸಮಾರಂಭದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ 80 ಕೆಜಿ ತೂಕದ, ಒಂಭತ್ತು ಅಂತಸ್ತಿನ ಕೇಕ್. ಈ ಕೇಕಿನ ಅಲಂಕಾರವನ್ನು ಶಿಲ್ಪಾ ಮತ್ತು ಅವರ ತಂಗಿ ಶಮಿತಾ ಶೆಟ್ಟಿ ಖುದ್ದಾಗಿ ಮಾಡಿದ್ದರು. ಟಾಕೋಲೇಟು, ಹೂವು ಮತ್ತು ಅಲಂಕಾರಿಕ ಚಿಟ್ಟೆಗಳಿಂದ ನಿರ್ಮಿತವಾಗಿದ್ದ ಕೇಕು ಸಭಿಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಆರತಕ್ಷತೆಗೆ ಬಂದಿದ್ದ ಗಣ್ಯರ ಪಟ್ಟಿ ಹೀಗಿತ್ತು : ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತವರ ಪತ್ನಿ ಗೌರಿ, ಹೃತಿಕ್ ರೋಷನ್ ಮತ್ತು ಸುಸಾನೆ ರೋಷನ್, ರಾಣಿ ಮುಖರ್ಜಿ, ಫರ್ದೀನ್ ಖಾನ್, ವಿವೇಕ್ ಒಬೆರಾಯ್, ಸಮೀರಾ ರೆಡ್ಡಿ, ಅಮೀಷಾ ಪಟೇಲ್, ಕಂಗನಾ ರನಾವತ್, ನೀಲ್ ನಿತಿನ್ ಮುಖೇಶ್, ಮನೀಶ್ ಮಲ್ಹೋತ್ರಾ, ಕರನ್ ಜೋಹಾರ್, ಗೋವಿಂದ, ರೇಖಾ ಮತ್ತು ಜಯಪ್ರದಾ ಆಗಮಿಸಿದ್ದರು. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಖ್ಯಸ್ಥ ಲಲಿತ್ ಮೋದಿ ಮತ್ತು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಪ್ರಪುಲ್ ಪಟೇಲ್ ಮತ್ತು ಗುಜರಾತ್ ಮುಖಮಂತ್ರಿ ನರೇಂದ್ರ ಮೋದಿ ಸಹ ಆರತಕ್ಷತೆ ಸಮಾರಂಭಕ್ಕೆ ಆಗಮಿಸಿದ್ದದ್ದು ವಿಶೇಷವಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada