»   »  'ರಾಖಿಕಾ ಸ್ವಯಂವರ್' ಯಾರ ಕೊರಳಿಗೆ ಮಾಲೆ?

'ರಾಖಿಕಾ ಸ್ವಯಂವರ್' ಯಾರ ಕೊರಳಿಗೆ ಮಾಲೆ?

Subscribe to Filmibeat Kannada

ಬಾಲಿವುಡ್ ನಟಿ ರಾಖಿ ಸಾವಂತ್ ಪ್ರೇಕ್ಷಕರ ತಹತಹವನ್ನು ಹೆಚ್ಚಿಸುವ ಮತ್ತೊಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ತಕ್ಕ ವರನಿಗಾಗಿ ಬಲೆ ಬೀಸಿದ್ದಾರೆ. 'ರಾಖಿಕಾ ಸ್ವಯಂವರ್' ಎನ್ ಡಿಟಿವಿ ಇಮ್ಯಾಜಿನ್ ನಲ್ಲಿ ಇಂದಿನಿಂದ ಪ್ರಸಾರವಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9 ಗಂಟೆಗೆ ಸ್ವಯಂವರ ಪ್ರಸಾರವಾಗಲಿದೆ. ರಾಖಿ ಸಾವಂತರನ್ನು ಕೈಹಿಡಿಯಲು 16 ಮಂದಿ ವರರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. 16 ಮಂದಿ ವರರನ್ನು ಒಂದೇ ವೇದಿಕೆಗೆ ಕರೆಸಿ ಅವರ ನಡುವೆ ವಿವಿಧ ನಮೂನೆಯ ಪ್ರಶ್ನೆಗಳನ್ನು ಹಾಕಿ, ವರರನ್ನು ಇಕ್ಕಟ್ಟಿಗೆ ಸಿಲುಕಿಸಿ ನಂತರ ಪ್ರತಿಭಾವಂತ ವರನನ್ನು ಸ್ವತಃ ರಾಖಿ ಕೈಹಿಡಿಯಲಿದ್ದಾರೆ.

ಪ್ರತಿವಾರ ತಮ್ಮ ವ್ಯಕ್ತಿತ್ವ, ಸ್ವಭಾವ, ಶಾರೀರಿಕ ದೃಢತೆ, ಬುದ್ಧಿಮತ್ತೆ ಮುಂತಾದ ಅಂಶಗಳನ್ನೂ ಪ್ರದರ್ಶಿಸಿ ರಾಖಿ ಮೇಲೆ ಪ್ರೇಮಾಭಿಷೇಕ ಮಾಡಬೇಕು. ಈ ಪ್ರಯಾಣದಲ್ಲಿ ಕೊನೆಗೆ ರಾಖಿ ಅದೃಷ್ಟವಂತನನ್ನು ಅದ್ದೂರಿ ಕಾರ್ಯಕ್ರಮದ ಮೂಲಕ ಮದುವೆಯಾಗಲಿದ್ದಾರೆ! ದೇಶದಾದ್ಯಂತ ಇದುವರೆಗೂ 16 ಮಂದಿ ವರರು ಸ್ವಯಂ ವರ ಕಾರ್ಯಕ್ರಮಕ್ಕೆ ಸಿದ್ಧರಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ನೃತ್ಯ ಕಾರ್ಯಕ್ರಮಗಳಿಗೆ ಹೆಸರಾದ ರಾಮ್ ಕಪೂರ್ ಈ ಸ್ವಯಂವರ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಈ ಕುರಿತು ರಾಖಿ ಮಾತನಾಡುತ್ತಾ, ನನಗೆ ತುಂಬಾ ಭಯ, ಉತ್ಸಾಹ ಒಮ್ಮೆಲೆ ಉಂಟಾಗುತ್ತಿದೆ. ಮದುವೆ ಎಂಬುದು ಬಹಳಷ್ಟು ಮುಖ್ಯವಾದ ವಿಷಯ. ನನ್ನ ಜೀವನದಲ್ಲಿ ತಕ್ಕ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬ ನಂಬಿಕೆ ನನಗಿದೆ. ಈ ವಿಚಾರದಲ್ಲಿ ನನ್ನ ಪರಮಾಪ್ತ ಗೆಳೆಯ ರಾಮ್ ಮತ್ತು ನನ್ನ ಶ್ರೇಯೋಭಿಲಾಷಿಗಳ ಸಲಹೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ರಾಖಿ ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಯುತ್ತಿರುವ ಉದಯಪುರ, ಪತೇಗಢ್ ರಾಜಭವನಗಳ ಬಗ್ಗೆ ಮಾತನಾಡುತ್ತಾ, ಅದ್ಭುತವಾದ, ಅಂದವಾದ ಸ್ಥಳಗಳೆಂದು ಬಣ್ಣಿಸಿದರು. ನನ್ನ ಸ್ವಯಂ ವರಕ್ಕೆ ಇದಕ್ಕಿಂತಲೂ ಅಂದವಾದ ಸ್ಥಳನ್ನು ಊಹಿಸಿಕೊಳ್ಳುತ್ತಿದ್ದೇನೆ. ಎಲ್ಲ ವರರೊಂದಿಗೂ ಸ್ವಲ್ಪ ಸಮಯ ಮಾತನಾಡಿದ್ದೇನೆ. ಎಲ್ಲರೂ ಚೆನ್ನಾಗಿದ್ದಾರೆ. ಆದರೆ ಗೆಲುವು ಯಾರ ಕೊರಳಿಗೆ ಬೀಳುತ್ತದೆ ಎಂಬುದನ್ನು ಈಗಲೇ ಹೇಳಲಾರೆ ಎಂದು ರಾಖಿ ನಾಚಿ ನೀರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada