»   » 'ರಣ್' ಚಿತ್ರ ವಿಮರ್ಶೆ: ಕಿಚ್ಚ ಹಚ್ಚಿದ 'ರಣ್' ನೀತಿ!

'ರಣ್' ಚಿತ್ರ ವಿಮರ್ಶೆ: ಕಿಚ್ಚ ಹಚ್ಚಿದ 'ರಣ್' ನೀತಿ!

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ರಾಮ್‌ಗೋಪಾಲ್ ವರ್ಮಾ ಸಿನಿಮಾ ಎಂದಾಗ ನೆನಪಾಗುವುದು ಚಿತ್ರ ವಿಚಿತ್ರ ದೃಶ್ಯ ಜೋಡಣೆ, ಮನ ಸೆಳೆಯುವ ರೀ ರೆಕಾರ್ಡಿಂಗ್, ಕುತೂಹಲದ ಬೆಂಕಿಗೆ ತುಪ್ಪ ಸುರಿಯುವ ಕ್ಯಾಮೆರಾ ಆಂಗಲ್‌ಗಳು, ಶಾಟ್‌ಗಳು, ಸಾಮಾನ್ಯ ಕತೆಗೆ ಅಸಾಮಾನ್ಯ ಚಿತ್ರಕತೆ ಹೆಣೆಯುವ ಪರಿ, ನಿಟ್ಟುಸಿರು ಬಿಡುವಂತೆ ಮಾಡುವ ನಿರೂಪಣೆ...

'ರಣ್' ಚಿತ್ರದಲ್ಲೂ ಅದು ಮುಂದುವರಿದಿದೆ. ಆ ಮೂಲಕ ವರ್ಮಾ ಮತ್ತೊಮ್ಮೆ 'ರಣ್"ಕಹಳೆ ಊದಿದ್ದಾರೆ. ಒಂದು ಸಾಮಾನ್ಯ ಕತೆಗೆ 'ವರ್ಮಾ ಸ್ಟೈಲ್" ಕೊಡುವ ಮೂಲಕ 'ಸರ್ಕಾರ್"ಗೆ ಸವಾಲು ಹಾಕಿದ್ದಾರೆ ! ನ್ಯೂಸ್ ಚಾನೆಲ್ ಮಾಲೀಕನ ಮಗನೊಬ್ಬ ಹಣ ಹಾಗೂ ಕೀರ್ತಿ ಗಳಿಸುವ ಆಸೆಯಿಂದ ರಾಜಕೀಯ ನಾಯಕನ ಪರ ಪ್ರಚಾರಕ್ಕಿಳಿಯುತ್ತಾನೆ. ತಂದೆಗೆ ಗೊತ್ತಾಗದಂತೆ ಡೀಲ್ ಮಾಡುತ್ತಾನೆ. ಬಹುಕೋಟಿ ಹಗರಣದಲ್ಲಿ ಶಾಮೀಲಾಗುತ್ತಾನೆ. ಸರಕಾರ ಉರುಳಿಸುವ ಸಲುವಾಗಿ ನಕಲೀ ಸಾಕ್ಷಿ ಸೃಷ್ಟಿಸುತ್ತಾನೆ. ಪತ್ರಿಕಾ ಸಂಹಿತೆಯ ನೀತಿ ನಿಯಮ ಮೀರಿ ಮೋಸದಾಟ ಆಡುತ್ತಾನೆ.

ಇಷ್ಟಾದರೂ ವಿಜಯ್ ಹರ್ಷವರ್ಧನ್ ಮಲೀಕ್‌ಗೆ ಮಗ ಜಯ್ ಮಲೀಕ್‌ನ ಕತ್ತಲೆಯ ಆಟ ಗೊತ್ತಾಗುವುದಿಲ್ಲ. ಅದೇ ಚಾನೆಲ್ ನ ಒಬ್ಬ ಸಹೋದ್ಯೋಗಿ ಕುತಂತ್ರವನ್ನು ಬಯಲಿಗೆಳೆಯಲು ಮುಂದಾಗುತ್ತಾನೆ. ಅಲ್ಲಿಂದ ಶುರುವಾಗುತ್ತದೆ ರಣ್‌ ದುಂಧುಬಿ...!ಹಾಗಾದರೆ ಇಡೀ ಕತೆಯ ಕೇಂದ್ರಬಿಂದು ಯಾರು? ಅನುಮಾನಿಸದೇ ಹೇಳಿಬಿಡಬಹುದು ಅದು ಜಯ್ ಮಲೀಕ್ ಅಂತ. ಆ ಪಾತ್ರವನ್ನು ಕನ್ನಡದ ಸುದೀಪ್ ಮಾಡಿರುವುದು ಇಲ್ಲಿನ ಹೈಲೈಟ್. ಇಡೀ ಕತೆಯ ಮುಕ್ಕಾಲು ಭಾಗ ಸುದೀಪ್‌ಮಯ. ಒಂದು ಆಂಗಲ್‌ನಿಂದ ಕಿಚ್ಚ ವಿಲನ್ ಥರ ಕಾಣುತ್ತಾರೆ. ಇನ್ನೊಂದು ಆಯಾಮದಿಂದ ಪರಿಸ್ಥಿತಿಯ ವ್ಯಂಗ್ಯಕ್ಕೆ ಸಿಲುಕಿ ನಲುಗುವ ಅಸಹಾಯಕನಂತೆ ಕಾಡುತ್ತಾರೆ. ಅಮಿತಾಭ್ ಎಂಬ ಆಗರ್ಭ ನಟನ ಎದುರು ನಿಂತು, ಗಂಟೆಗಟ್ಟಲೇ ನಟಿಸುವುದು ಸುಲಭದ ಮಾತಲ್ಲ.

ಅದನ್ನು ಸುದೀಪ್ ನೀರು ಕುಡಿದಂತೆ ಮಾಡಿದ್ದಾರೆ. ಹೆಚ್ಚಿನ ಕಡೆ ಅಮಿತಾಭ್ ನಟನೆಯಷ್ಟೇ ಸ್ಕೋರ್ ಮಾಡಿದ್ದಾರೆ ! ಅಮಿತಾಭ್ ಬಗ್ಗೆ ಹೇಳುವುದಾದರೆ, ಒಮ್ಮೆ ತನ್ನ ಸುತ್ತ ಮೌನದ ಗೋಡೆ ಹಾಕಿಕೊಂಡವನಂತೆ, ಮತ್ತೊಮ್ಮೆ ಅಂತರಂಗದ ಅಲೆಯಲ್ಲೇ ತೇಲುತ್ತಿರುವ ಅಂತರ್ಮುಖಿಯಂತೆ, ಮಗದೊಮ್ಮೆ ಪುಟಿಯುವ ಚೆಂಡಿನಂತೆ... ಕೊನೆಯ ಹತ್ತು ನಿಮಿಷ ಅವರು ಕಣ್ಣೀರಿಡುತ್ತಾ ಮಾತನಾಡುವ ಪರಿ ನಿಜಕ್ಕೂ ಅವಿಸ್ಮರಣೀಯ.

ರಿತೇಶ್ ದೇಶಮುಖ್ ಪಾತ್ರವನ್ನು ಅನುಭವಿಸಿ ಮಾಡಿದ್ದಾರೆ.ರಾಜ್‌ಪಲ್ ಯಾದವ್ ಕಾಮಿಡಿ ಕೆಲವು ಕಡೆ ಅತಿ ಮಧುರ-ಅದೇ ರಾಗ. ಹಣೆತುಂಬ ಕುಂಕುಮ ಶೋಭಿತನಾಗಿ, ಕಪ್ಪು ಕನ್ನಡಕಧಾರಿಯಾಗಿ, ಭಿನ್ನ ಗೆಟಪ್‌ನಲ್ಲಿ ಕಾಣುವ ಪರೇಶ್ ರಾವಲ್ ಕೆಲವು ಕಡೆ ನಟನೆಯ ಪರಮಾವ ತಲುಪುತ್ತಾರೆ.ಇಡೀ ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ತುಂಡು ತುಂಡಾದ ಹಾಸ್ಯ, ಪ್ರೇಕ್ಷಕರ ಗಮನ ಇನ್ನೊಂದು ಕಡೆಹೋಗದಂತೆ ನಿಗಾ ವಹಿಸುವ ಪರಿ ಇಷ್ಟವಾಗುತ್ತದೆ.

ಅಲ್ಲಲ್ಲಿ ಬರುವ ಬಿಟ್ ಹಾಡುಗಳು ಕತೆಯ ಓಘಕ್ಕೆ ಪೂರಕ. ಸಣ್ಣ ಸಣ್ಣ ದೃಶ್ಯಗಳ ಜೋಡಣೆ, ಕಣ್ಣಿನ ರೆಟಿನಾ ಒಳಗಿಂದ ಫೋಕಸ್ ಆದ ಕ್ಯಾಮೆರಾ, ಕೊನೆಗೆ ಇಡೀ ಊರನ್ನು ತೋರಿಸುತ್ತದೆ. ಟಿವಿ ರಿಮೋಟ್‌ನಿಂದ ಚಾನೆಲ್ ಆನ್ ಮಾಡುವ ಮೂಲಕ ಚಿತ್ರ ಶುರುವಾಗುತ್ತೆ. ಮತ್ತೊಮ್ಮೆ ಪವರ್ ಆಫ್ ಮಾಡಿದಾಗ ದಿ ಎಂಡ್ ! ಒಟ್ಟಾರೆ ಸಿನಿಮಾ ನೋಡಿ ಹೊರಬಂದವರಿಗೆ ಪ್ರಸ್ತುತ ಮಾಧ್ಯಮ ಜಗತ್ತಿನ ಬಗ್ಗೆ ಇರುವ ಕೆಲ ಸಂಶಯಗಳಿಗೆ ಮತ್ತಷ್ಟು ಗರಿ ಸೇರಿಕೊಳ್ಳುತ್ತವೆ. ಕೆಲ ದೃಶ್ಯ-ಸನ್ನಿವೇಶಗಳು ಹಲವು ಹೊತ್ತು ಕಾಡುತ್ತವೆ ! (ಸ್ನೇಹಸೇತು: ವಿಜಯಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada