»   » ಮೆಹಬೂಬಾ ಹಾಡನ್ನು ಕುಲಗೆಡಿಸಿದ ಹಿಮೇಶ್ ಮೇಲೆ ಆಶಾ ಕೆಂಡ

ಮೆಹಬೂಬಾ ಹಾಡನ್ನು ಕುಲಗೆಡಿಸಿದ ಹಿಮೇಶ್ ಮೇಲೆ ಆಶಾ ಕೆಂಡ

Subscribe to Filmibeat Kannada

ಮುಂಬೈ, ಅ.30 : ಮೂವತ್ತು ವರ್ಷಗಳ ಹಿಂದೆ ರಮೇಶ್ ಸಿಪ್ಪಿ ನಿರ್ದೇಶನದಲ್ಲಿ ದೃಶ್ಯಕಾವ್ಯವಾಗಿ ಮೂಡಿಬಂದಿದ್ದ ಶೋಲೆಯನ್ನು ನೆನೆಸಿಕೊಂಡರೆ 'ಮೆಹಬೂಬಾ ಮೆಹಬೂಬಾ' ಹಾಡಿನ ಗುಂಗಿನಿಂದ ಈಗಲೂ ಹೊರಬರಲಾರಿರಿ.

ಚಿತ್ರಕ್ಕೆ ಸಂಗೀತ ನೀಡಿದ್ದ 'ಪಂಚಮ್‌ದಾ' ಎಂದೇ ಖ್ಯಾತರಾಗಿದ್ದ ರಾಹುಲ್ ದೇವ್ ಬರ್ಮನ್, ತಮ್ಮ ವಿಚಿತ್ರ ಧ್ವನಿಯಲ್ಲಿ ಹಾಡಿದ್ದ ಮೆಹಬೂಬಾ ಮೆಹಬೂಬಾ ಹಾಡು ಚಿತ್ರಪ್ರೇಮಿಗಳ ಎದೆಯಲ್ಲಿ ಇನ್ನೂ ಹಸಿರಾಗಿದೆ. ಈಗ ಅದೇ ಹಾಡನ್ನು ತನ್ನ ಅನುನಾಸಿಕ ಸ್ವರದಲ್ಲಿ ಹಾಡಿ ಕುಲಗೆಡಿಸಿಟ್ಟಿರುವ ಟೋಪಿವಾಲಾ ಹಿಮೇಶ್ ರೇಶ್ಮಿಯಾ ಮೇಲೆ ಆರ್‌ಡಿ ಬರ್ಮನ್‌ರ ಎರಡನೇ ಹೆಂಡತಿ ಆಶಾ ಭೋಸ್ಲೆ ಕೆಂಡಕಾರಿದ್ದಾರೆ. ಮೂಲ ಧಾಟಿಯನ್ನು ತಿರುಚಿ ಇಲ್ಲಸಲ್ಲದ ಶಬ್ದಗಳನ್ನೆಲ್ಲ ಬಳಸಿ ಹಾಡಿನ ಮಾಧುರ್ಯವನ್ನು ಕೆಡಿಸಿಟ್ಟಿದ್ದಾನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆತ್ತಿಯಮೇಲೆ ನಾಲ್ಕು ಕೂದಲಿಲ್ಲದಿದ್ದರೂ ತಲೆಯ ಮೇಲೆ ಟೋಪಿಯಂತಿರುವ ಹಿಮೇಶ್ ಮೆಹಬೂಬಾ ಹಾಡಿನ ಮಧ್ಯದಲ್ಲಿ 'ಸಾಲಾ' ಎಂಬ ಪದವನ್ನು ಬಳಸಿದ್ದಾನೆಂದು ಆಶಾ ಕೆನಲಿ ಕೆಂಡವಾಗಿದ್ದಾರೆ.

ಮೂಗಿನಿಂದ ಹೊರಬಂದ ಹಾಡುಗಳು ಹಿಟ್ ಆಗುತ್ತಿದ್ದಂತೆ ಸಾಲೋಸಾಲು ಅಲ್ಬಂಗಳನ್ನು ತಂದು, ಸಂಗೀತ ನಿರ್ದೇಶಕನಾಗಿ ಕೊನೆಗೆ ನಟನಾಗಿಯೂ ಮಿಂಚಬೇಕೆಂಬ ಹಪಾಹಪಿಯಿಂದ 'ಆಪ್ ಕಾ ಸುರೂರ್' ಮುಖಾಂತರ ಬೆಳ್ಳಿತೆರೆಯ ಮೇಲೆ ಬಂದರೂ ಹಿಮೇಶ್ ಟೋಪಿ ತೆಗೆಯಲಿಲ್ಲ. ಆಶಾಗೆ ಮೊದಲೇ ಮಾತು ಕೊಟ್ಟಂತೆ ನಡೆದುಕೊಳ್ಳದೇ ಟೋಪಿ ಹಾಕುವುದನ್ನೂ ನಿಲ್ಲಿಸಲಿಲ್ಲ.

ಆಪ್ ಕಾ ಸುರೂರ್‌ಗಾಗಿ ಆಶಾ ಮೆಹಬೂಬಾ ಹಾಡು ಹಾಡಿ ಎಲ್ಲಿಯೂ ಕೆಡಿಸಬಾರದೆಂದು ಹಿಮೇಶ್‌ನಿಂದ ಮಾತು ತೆಗೆದುಕೊಂಡಿದ್ದರು. ಆಗಲಿ ಎಂದು ಮಾತು ಕೊಟ್ಟಿದ್ದ ಹಿಮೇಶ್ ಈಗ ಹಾಡನ್ನು ಕುಲಗೆಡಿಸಿ ಇಟ್ಟಿದ್ದಾನೆ. ತನ್ನ ಮೊದಲ ಚಿತ್ರ ಗೆದ್ದೇ ಗೆಲ್ಲಬೇಕೆಂಬ ದೂರಾಲೋಚನೆಯಲ್ಲಿ ಹಾಡನ್ನು ಮನಬಂದಂತೆ ತಿರುಚಿದ್ದಲ್ಲದೆ ಮಲ್ಲಿಕಾ ಶೇರಾವತ್‌ಳಿಂದ ಮಾದಕವಾಗಿಯೂ ಕುಣಿಸಿದ್ದಾನೆ.

ನಾಲ್ಕು ಹಾಡು ಹಿಟ್ ಆದ ಮಾತ್ರಕ್ಕೆ ಮಹಾ ಗಾಯಕನಂತೆ ವರ್ತಿಸುತ್ತಿರುವ ಹಿಮೇಶ್ ನೆತ್ತಿಯ ಮೇಲೆ, ಟೋಪಿಯ ಜೊತೆ ದುರಹಂಕಾರವೂ ಏರಿಕೊಂಡಿರುವುದು ಅಷ್ಟೇ ಸತ್ಯ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada