ನೂರೈವತ್ತು ಕೋಟಿ ಹಣ ನಿರಾಕರಿಸಿದ ಅಮೀರ್ ಖಾನ್
ಹೌದು, ಅಮೀರ್ ಖಾನ್ ಅವರಿಗೆ ಮೊದಲಿನಿಂದಲೂ ಸಾಮಾಜಿಕ ಜಾಗೃತಿ ಹಾಗೂ ಕಾಳಜಿ ಬಗ್ಗೆ ಯೋಚನೆ ಹೆಚ್ಚು. ಅದು ಈಗೀಗ ಇನ್ನೂ ಹೆಚ್ಚಾಗುತ್ತಿದೆ. ಅದಕ್ಕೂ ಉದಾಹರಣೆ ಇಲ್ಲಿದೆ. ಇತ್ತೀಚಿಗೆ ತಮ್ಮ 'ಸತ್ಯಮೇವ ಜಯತೆ' ಕಾರ್ಯಕ್ರಮವನ್ನು ನ್ಯಾಷನಲ್ ಕಮೀಷನ್ ಮೂಲಕ ಹಿಂದುಳಿದ ವರ್ಗಗಳಿಗೆ ತಲುಪಿಸಿದ ಅಮೀರ್, ಈ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಬಳಿಕ ತಮಗೆ ಬಂದಿದ್ದ ರು. 150 ಕೋಟಿ ಜಾಹೀರಾತು ಒಪ್ಪಂದವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ 'ಸತ್ಯಮೇವ ಜಯತೆ' ಎರಡನೇ ಕಂತನ್ನು ಪ್ರಾರಂಭಿಸಲಿದ್ದಾರೆ ಅಮೀರ್ ಖಾನ್.
ಸುದ್ದಿಮೂಲಗಳ ಪ್ರಕಾರ, ನಮ್ಮ ಅಮೀರ್ ಖಾನ್ ಈ ನಡುವೆ ಸಾಮಾಜಿಕ ಪ್ರಜ್ಞೆ, ಜಾಗೃತಿ ಹಾಗೂ ಸೇವೆಯ ಬಗ್ಗೆ ಹೆಚ್ಚು ಮಾತನಾಡತೊಡಗಿದ್ದಾರೆ. ಅಷ್ಟೇ ಅಲ್ಲ, ಇಂತಹ ವಿಷಯಗಳಲ್ಲಿ ಭಾರಿ ಆಸಕ್ತಿ ತೋರಿಸುತ್ತಿರುವ ಅಮೀರ್, ನೊಂದವರಿಗೆ ತಮ್ಮ ಸಹಾಯಹಸ್ತವನ್ನೂ ಚಾಚುತ್ತಿದ್ದಾರೆ. ಹಿಂದುಳಿದ ಪ್ರದೇಶ ಹಾಗೂ ಜನಾಂಗಗಳಿಗೆ ಬೇಟಿ ನೀಡುತ್ತಿರುವ ಅಮೀರ್, ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕಾಯಕದಲ್ಲೂ ನಿರತರಾಗಿದ್ದಾರೆ.
ಇದೀಗ ತಮ್ಮ ತಾಯಿಯೊಂದಿಗೆ ಹಜ್ ಯಾತ್ರೆಯನ್ನು ಕೈಗೊಂಡಿರುವ ಅಮೀರ್, ಹಿಂದೊಮ್ಮೆ ಈ ಬಗ್ಗೆ ತಮ್ಮ ತಾಯಿಗೆ ವಚನ ನೀಡಿದ್ದರಂತೆ. ಹೀಗಾಗಿ ಈಗ ತಾಯಿಯೊಂದಿಗೆ ಹಜ್ ಯಾತ್ರೆಯಲ್ಲಿರುವ ಅಮೀರ್ ಅವರಿಗೆ ಕೇವಲ ಸಾಮಾಜಿಕ ಕಾಳಜಿ ಮಾತ್ರವಲ್ಲ, ಕೌಟುಂಬಿಕ ಕಾಳಜಿಯೂ ಇದೆ ಎಂಬುದನ್ನು ಗಮನಿಸಬಹುದು. ಒಟ್ಟಿನಲ್ಲಿ ಈಗಾಗಲೇ ಮಿ ಪರ್ಫೆಕ್ಟ್ ಪಟ್ಟ ಗಳಿಸಿರುವ ಅಮೀರ್ ಇನ್ನೂ ಏನೇನು ಹೆಸರನ್ನು ಸಂಪಾದಿಸುತ್ತಾರೋ! (ಏಜೆನ್ಸೀಸ್)


Click it and Unblock the Notifications












