ಸೇನೆ ಸಮವಸ್ತ್ರಕ್ಕೆ ಅವಮಾನ: ದೃಶ್ಯ ಹಿಂಪಡೆವಂತೆ ವಾಯುಸೇನೆ ಆಗ್ರಹ
ಅನಿಲ್ ಕಪೂರ್ ಹಾಗೂ ಅನುರಾಗ್ ಕಶ್ಯಪ್ ಒಟ್ಟಿಗೆ ನಟಿಸಿರುವ ಎಕೆ v/s ಎಕೆ ಸಿನಿಮಾ ಕೆಲವು ದಿನಗಳಿಂದಲೂ ವಿವಾದಗಳಲ್ಲಿಯೇ ಇದೆ. ಜೊತೆಗೆ ಈಗೊಂದು ಗಂಭೀರವಾದ ವಿವಾದಕ್ಕೆ ಸಿಲುಕಿಕೊಂಡಿದೆ ಸಿನಿಮಾ.
ಎಕೆ vs ಎಕೆ ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು, ಟ್ರೇಲರ್ ನ ಕೆಲವು ದೃಶ್ಯದಲ್ಲಿ ಅನಿಲ್ ಕಪೂರ್ ವಾಯುಸೇನೆಯ ಸಮವಸ್ತ್ರ ಹಾಕಿಕೊಂಡಿದ್ದರು. ಆದರೆ ಈ ಸಮವಸ್ತ್ರ ವಾಯುಸೇನೆಯ ನಿಯಮಗಳ ಅನುಸಾರವಿಲ್ಲ ಎಂದು ಭಾರತೀಯ ವಾಯು ಸೇನೆ ಹೇಳಿದೆ.
ಈ ದೃಶ್ಯಗಳಲ್ಲಿ ಅನಿಲ್ ಕಪೂರ್ ಧರಿಸಿರುವ ವಾಯುಸೇನೆಯ ಸಮವಸ್ತ್ರ ನಿಯಮಗಳ ಅನುಸಾರವಿಲ್ಲ, ಅಲ್ಲದೆ, ವಾಯುಸೇನೆಯ ಸಮವಸ್ತ್ರ ಧರಿಸಿ ಅನಿಲ್ ಕಪೂರ್ ಆಡುತ್ತಿರುವ ಮಾತುಗಳು ವಾಯುಸೇನೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತಿವೆ. ಅನಿಲ್ ಕಪೂರ್ ಆಡುತ್ತಿರುವ ಮಾತುಗಳು ವಾಯುಸೇನೆಯ ಸೈನಿಕರ ಗುಣಧರ್ಮವಲ್ಲ, ಕೂಡಲೇ ಈ ದೃಶ್ಯವನ್ನು ಸಿನಿಮಾದಿಂದ ಹಿಂದೆ ಪಡೆಯಬೇಕು ಎಂದು ಐಎಎಫ್ ಹೇಳಿದೆ.

ಟ್ರೈಲರ್ ನಲ್ಲಿರುವಂತೆ, ಅನಿಲ್ ಕಪೂರ್ ಹಲವು ದೃಶ್ಯಗಳಲ್ಲಿ ವಾಯುಸೇನೆಯ ಸಮವಸ್ತ್ರ ಧರಿಸಿದ್ದಾರೆ. ಅದೇ ಸಮವಸ್ತ್ರ ಧರಿಸಿ ಅನುರಾಗ್ ಕಶ್ಯಪ್ ಅನ್ನು ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ವೇದಿಕೆ ಮೇಲೆ ಕುಣಿಯುತ್ತಾರೆ. ಅನುರಾಗ್ ಕಶ್ಯಪ್ ಅನ್ನು ಕಾಲಿನಿಂದ ಒದೆಯುತ್ತಾರೆ. ಬಂದೂಕು ಹಿಡಿದು ಬೆದರಿಸುತ್ತಾರೆ.
ವಾಯುಸೇನೆ ಹೇಳಿರುವಂತೆ ವಾಯುಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿ ಈ ರೀತಿ ವರ್ತಿಸುವುದು ಸಮಂಜಸವಲ್ಲ. ಸಮವಸ್ತ್ರವನ್ನು ದಿನವೂ ಧರಿಸುವ ಸೈನಿಕನ ಗುಣ ಹೀಗೆ ಇರುವುದಿಲ್ಲ ಹಾಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ಹಿಂಪಡೆಯಬೇಕು ಎಂದು ಹೇಳಿದೆ ವಾಯುಸೇನೆ.


Click it and Unblock the Notifications











