ಸಲ್ಮಾನ್ ಖಾನ್ ಗೆ 'ಕಿಕ್' ಕೊಟ್ಟ ಚೇತನ್ ಭಗತ್

ಅಮೀರ್ ಖಾನ್ ನಾಯಕತ್ವದ, 'ತ್ರೀ ಈಡಿಯಟ್ಸ್' ಬಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ. ಪ್ರೇಕ್ಷಕರು ಹಾಗೂ ವೀಕ್ಷಕರಿಂದ ಬಹಳಷ್ಟು ಪ್ರಶಂಸೆ ಪಡೆದ ಆ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ. ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಸಿದ ದಾಖಲೆ ಹೊಂದಿರುವ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ ಎಂದ ಮೇಲೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅದರ ಕಥೆಗಾರರು ಚೇತನ್ ಭಗತ್.
ಇತ್ತೀಚಿಗಷ್ಟೇ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಚಿತ್ರವು ಅಮೀರ್ ಖಾನ್ ಅಭಿನಯದ 'ತ್ರೀ ಈಡಿಯಟ್ಸ್' ದಾಖಲೆಯಾದ ರು 203 ಕೋಟಿಗೆ ಅತೀ ಹತ್ತಿರ ಎನ್ನಬಹುದಾದ ರು. 200 ಕೋಟಿ ಗಳಿಸಿ ಸಂಚಲನ ಸೃಷ್ಟಿಸಿದೆ. ಈಗ ಅಮೀರ್ ದಾಖಲೆಯ ಚಿತ್ರ 'ತ್ರೀ ಈಡಿಯಟ್ಸ್' ಕಥೆ ಬರೆದ ಚೇತನ್ ಭಗತ್ ಅವರೇ ಸಲ್ಲೂರ ಬರಲಿರುವ 'ಕಿಕ್' ಚಿತ್ರಕ್ಕೆ ಚಿತ್ರಕಥೆ ಮಾಡುತ್ತಿರುವುದು ಅಚ್ಚರಿಯ ಬೆಳಬಣಿಗೆಯೇ ಸರಿ!
ಈಗಾಗಲೇ ಬಾಲಿವುಡ್ ನಲ್ಲಿ ಸಲ್ಲೂ ಬರಲಿರುವ ಚಿತ್ರಗಳ ಬಗ್ಗೆ ಭಾರೀ ನಿರೀಕ್ಷೆ ಶುರುವಾಗಿದೆ. ಅದು 'ದಬಾಂಗ್-2' ಇರಬಹುದು ಅಥವಾ 'ಕಿಕ್' ಆಗಿರಬಹುದು, ಸಲ್ಲೂ ಚಿತ್ರವೀಗ ಎಲ್ಲರ ಗಮನಸೆಳೆಯಲಿರುವುದು ಖಂಡಿತ. ಕೆಲದಿನಗಳ ಹಿಂದಷ್ಟೇ ಆದ ಬದಲಾವಣೆಯಲ್ಲಿ ಶಿರಿಶ್ ಕುಂದರ್ ಜಾಗಕ್ಕೆ ಸಾಜಿದ್ ನಾಡಿಯಾದ್ ಬಂದಿದ್ದಾಗಿದೆ. ಏಂಜಲಾ ಜಾನ್ಸನ್ ಜಾಗಕ್ಕೆ ಕರೀನಾ ಕಪೂರ್ ಅಥವಾ ದೀಪಿಕಾ ಪಡುಕೋಣೆ ಬರಲಿರುವ ಸಾಧ್ಯತೆ ಇದೆ.
ಇದೆಲ್ಲಕ್ಕಿಂತ ಮಿಗಿಲಾಗಿ, ಚಿತ್ರಕ್ಕೆ ಆಧಾರ ಸ್ತಂಭದಲ್ಲೊಂದಾಗಿರುವ ಚಿತ್ರಕಥೆಗೆ ದಾಖಲೆ ಚಿತ್ರದ ಕಥೆಗಾರರಾದ ಚೇತನ್ ಭಗತ್ ಬಂದಿರುವುದು 'ಕಿಕ್' ಚಿತ್ರತಂಡಕ್ಕೆ ಸಖತ್ ಖುಷಿ ನೀಡಿರುವುದರ ಜೊತೆಗೆ 'ಭಾರಿ ಕಿಕ್' ನೀಡಿದೆ. ಒಟ್ಟಿನಲ್ಲಿ ಅಮೀರ್ ದಾಖಲೆಯನ್ನು 'ಏಕ್ ಥಾ ಟೈಗರ್' ಚಿತ್ರದ ಮೂಲಕ ಅಳಿಸಲಾಗದ ಸಲ್ಲೂ, ಬರಲಿರುವ ಚೇತನ್ ಭಗತ್ ಅವರದೇ ಚಿತ್ರಕಥೆಯ 'ಕಿಕ್' ಮೂಲಕ ಅಳಿಸಿಹಾಕಿ ಹೊಸ ದಾಖಲೆ ಬರೆದರೆ ಆಶ್ಚರ್ಯವೇನೂ ಇಲ್ಲ. (ಏಜೆನ್ಸೀಸ್)


Click it and Unblock the Notifications











