twitter
    For Quick Alerts
    ALLOW NOTIFICATIONS  
    For Daily Alerts

    'ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ

    By Harshitha
    |

    ಪ್ರೀತಿಗೆ, ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಸೃಷ್ಟಿಸಿರುವ ಸಿನಿಮಾ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ''. 1995, ಅಕ್ಟೋಬರ್ 19 ರಂದು ತೆರೆಗೆ ಬಂದ ಈ ಸಿನಿಮಾ ಇಲ್ಲಿಯವರೆಗೂ ಚಿತ್ರಮಂದಿರದಿಂದ ಎತ್ತಂಗಡಿ ಆಗಿಲ್ಲ. ಮುಂಬೈನ 'ಮರಾಠಾ ಮಂದಿರ್' ಚಿತ್ರಮಂದಿರದಲ್ಲಿ ಇವತ್ತಿಗೆ (ಡಿಸೆಂಬರ್ 12) ಸತತ 1000 ವಾರಗಳ ಪ್ರದರ್ಶನವನ್ನು ಪೂರೈಸುವ ಮೂಲಕ ಡಿ.ಡಿ.ಎಲ್.ಜೆ ಹೊಸ ದಾಖಲೆ ಬರೆದಿದೆ. [1000 ವಾರ ಕಂಡ 19ರ ಹರೆಯ ಶಾರುಖ್- ಕಾಜೋಲ್]

    DDLJ10

    ಡಿ.ಡಿ.ಎಲ್.ಜೆ ಚಿತ್ರದಲ್ಲಿ ಅಂತದ್ದೇನಿದೆ?

    'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಇವತ್ತಿಗೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿರುವುದಕ್ಕೆ ಕಾರಣ, ಚಿತ್ರದಲ್ಲಿರುವ ಕೆಲ ಸೂಕ್ಷ್ಮ ಅಂಶಗಳು. 'ಹೀರೋ' ಅಂದ್ರೆ ಬರೀ ಬಂಡಾಯ ಏಳಬೇಕು ಅಂತ ನಂಬಿದ್ದ ಕಾಲದಲ್ಲಿ, ಸಂಸ್ಕೃತಿಗೆ ತಲೆಬಾಗುವ ಎನ್.ಆರ್.ಐ ಹುಡುಗನ (ರಾಜ್) ಪಾತ್ರ, ಇಡೀ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿತು.

    ವಿದೇಶದಲ್ಲಿ ನೆಲೆಸಿರುವ ಭಾರತೀಯ ಹುಡುಗ, ಗುರು-ಹಿರಿಯರನ್ನ ಒಪ್ಪಿಸಿ ಮದುವೆಯಾಗುವುದಕ್ಕೆ ಪಡುವ ಹರಸಾಹಸವನ್ನು ಚಿತ್ರೀಕರಿಸಿರುವ ರೀತಿ ಎಷ್ಟು ಮನಮುಟ್ಟುವಂತಿದೆಯೋ, ಅಷ್ಟೇ ಮಜವಾಗಿರುವುದು ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡುವುದಕ್ಕೆ ಕಾರಣವಾಗಿದೆ.

    DDLJ1

    'ಸೈಫ್' ಬಿಟ್ಟಿದ್ದು 'ಶಾರೂಖ್' ಪಾಲಾಯ್ತು!

    ಕಿಂಗ್ ಖಾನ್ ಶಾರೂಖ್ ವೃತ್ತಿಜೀವನದಲ್ಲೇ ಬಿಗ್ ಹಿಟ್ ಆಗಿರುವ ಡಿ.ಡಿ.ಎಲ್.ಜೆ ಚಿತ್ರಕ್ಕೆ ಶಾರೂಖ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ. ವಿದೇಶದಲ್ಲಿ ನೆಲೆಸಿರುವ ಎನ್.ಆರ್.ಐ ಹುಡುಗ 'ರಾಜ್' ಪಾತ್ರಕ್ಕಾಗಿ ಆದಿತ್ಯ ತಲೆಗೆ ಮೊದಲು ಹೊಳೆದವರು ಸೈಫ್ ಅಲಿ ಖಾನ್. ಸೈಫ್ ಅದನ್ನ ನಿರಾಕರಿಸಿದ್ದರ ಪರಿಣಾಮ, ಚಿತ್ರ ಶಾರೂಖ್ ಪಾಲಾಯ್ತು. ಇವತ್ತಿಗೂ ತಮ್ಮ ನಿರ್ಧಾರದ ಬಗ್ಗೆ ಸೈಫ್ ಗೆ ಬೇಜಾರಿದೆ.

    'ರಾಜ್ ಕಪೂರ್'ಗೆ ಸಲಾಂ

    ಡಿ.ಡಿ.ಎಲ್.ಜೆ ಚಿತ್ರದಲ್ಲಿ ಶಾರೂಖ್ ಅಭಿನಯಿಸಿದ ಪಾತ್ರದ ಹೆಸರು 'ರಾಜ್ ಮಲ್ಹೋತ್ರ'. ನಾಯಕನ ಪಾತ್ರಕ್ಕೆ 'ರಾಜ್' ಅಂತ ಹೆಸರಿಡುವುದಕ್ಕೂ ಒಂದು ಕಾರಣ ಇದೆ. ನಿರ್ದೇಶಕ ಆದಿತ್ಯ ಛೋಪ್ರಾಗೆ 'ರಾಜ್ ಕಪೂರ್' ಅಂದ್ರೆ ಸಖತ್ ಇಷ್ಟ. ಅವರಿಗೆ ಟ್ರಿಬ್ಯೂಟ್ ಕೊಡಬೇಕು ಅನ್ನುವ ಕಾರಣಕ್ಕೆ, ನಾಯಕನ ಪಾತ್ರಕ್ಕೆ 'ರಾಜ್' ಅಂತ ನಾಮಕಾರಣ ಮಾಡಿದ್ರಂತೆ. ಅಂದಿನಿಂದ ಇಂದಿನವರೆಗೂ 'ಯಶ್ ರಾಜ್ ಬ್ಯಾನರ್'ನ ಅನೇಕ ಚಿತ್ರಗಳ ನಾಯಕನ ಪಾತ್ರಧಾರಿಯ ಹೆಸರು 'ರಾಜ್' ಅಂತಲೇ.

    DDLJ2

    24 ಬಾರಿ ಸಾಹಿತ್ಯ ರಿಜೆಕ್ಟ್

    ಡಿ.ಡಿ.ಎಲ್.ಜೆ ಇವತ್ತಿಗೂ ಪ್ರೇಕ್ಷಕರಿಗೆ ಮನದಲ್ಲಿ ಹಚ್ಚಹಸಿರಾಗಿ ಉಳಿದಿರುವುದು ಚಿತ್ರದ ಹಾಡುಗಳಿಂದ. ಡಿ.ಡಿ.ಎಲ್.ಜೆ ಚಿತ್ರದ ಒಂದೊಂದು ಹಾಡೂ, ಒಂದಕ್ಕಿಂತ ಒಂದು ವಿಭಿನ್ನ. ಅಂತ ವಿಭಿನ್ನ ಹಾಡುಗಳನ್ನ ಸೆಲೆಕ್ಟ್ ಮಾಡುವುದಕ್ಕೆ ಆದಿತ್ಯ ಹರಸಾಹಸ ಪಟ್ಟಿದ್ದಾರೆ. ಮೊದಲು ರೆಕಾರ್ಡ್ ಆದ 'ಮೇರೆ ಕ್ವಾಬೋಂ ಮೇನ್ ಜೋ ಆಯೆ' ಹಾಡಿಗೂ ಮುನ್ನ, ಸಾಹಿತಿ ಆನಂದ್ ಬಕ್ಷಿ ಬರೆದ ಬರೋಬ್ಬರಿ 24 ಹಾಡುಗಳನ್ನ ಆದಿತ್ಯ ರಿಜೆಕ್ಟ್ ಮಾಡಿದ್ದರಂತೆ!

    'ದುಲ್ಹನಿಯಾ'ಗೆ ಇರಲಿಲ್ಲ 'ಮೆಹೆಂದಿ'!

    ಹಿಟ್ ನಂಬರ್ 'ಮೆಹೆಂದಿ ಲಗಾಕೆ ರಕ್ನಾ' ಡಿ.ಡಿ.ಎಲ್.ಜೆ ಚಿತ್ರಕ್ಕೋಸ್ಕರ ಬರೆದಿದ್ದ ಹಾಡಲ್ಲ. ಬೇರೆ ಯಾವುದೋ ಚಿತ್ರಕ್ಕಾಗಿ ಬರೆದು ರಿಜೆಕ್ಟ್ ಆಗಿದ್ದ ಮೆಹೆಂದಿ ಹಾಡನ್ನ ಡಿ.ಡಿ.ಎಲ್.ಜೆ ಚಿತ್ರದಲ್ಲಿ ಆದಿತ್ಯ ಬಳಸಿಕೊಂಡರು.

    DDLJ3

    ಹಲವು ಮೊದಲುಗಳಿಗೆ ಡಿ.ಡಿ.ಎಲ್.ಜೆ. ನಾಂದಿ

    ಇಂದು ಕಿರುತೆರೆಯಲ್ಲಿ ಬಹುಬೇಡಿಕೆಯಾಗಿರುವ ನಟಿ ಮಂದಿರಾ ಬೇಡಿಗೆ ಡಿ.ಡಿ.ಎಲ್.ಜೆ, ಬಣ್ಣ ಹಚ್ಚಿದ ಮೊದಲ ಸಿನಿಮಾ. ಹಾಗೇ, ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತೆರೆಮೇಲೆ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿದ್ದೂ ಈ ಚಿತ್ರದಲ್ಲೇ. ಇನ್ನೂ ನಿರ್ದೇಶಕ ಆದಿತ್ಯ ಛೋಪ್ರಾಗೂ ಇದು ಮೊದಲ ಪ್ರಯತ್ನ.

    DDLJ4

    ಕಾಜೋಲ್ ಗೆ ಏನಾಗ್ತಿದೆ ಅನ್ನೋದೇ ಗೊತ್ತಿರಲಿಲ್ಲ!

    ಆದಿತ್ಯ ಛೋಪ್ರಾಗಿದು ಮೊದಲ ನಿರ್ದೇಶನವಾದರೂ, ನಟರನ್ನ ಪಳಗಿಸುವುದರಲ್ಲಿ ನಿಸ್ಸೀಮ ಅನ್ನುವುದಕ್ಕೆ ಕೆಲ ದೃಶ್ಯಗಳಿಗೆ ಅವರು ಆಕ್ಷನ್ ಕಟ್ ಹೇಳಿದ ರೀತಿಯೇ ಸಾಕ್ಷಿ. 'ನಟನೆ' ಅನ್ನುವುದಕ್ಕಿಂತ ನಿಜವಾದ 'ಭಾವನೆ'ಗಳಿಗೆ ಆದಿತ್ಯ ಛೋಪ್ರಾ ಹೆಚ್ಚು ಒತ್ತು ಕೊಡುತ್ತಿದ್ದರು.

    'ರುಕ್ ಜಾ ಓ ದಿಲ್ ದಿವಾನೆ' ಹಾಡಲ್ಲಿ ಶಾರೂಖ್, ಕಾಜೋಲ್ ರನ್ನ ಕೆಳಗೆ ಬೀಳಿಸುವ ಬಗ್ಗೆ, ಕಾಜೋಲ್ ಗೆ ಗೊತ್ತೇ ಇರಲಿಲ್ಲ. ಒರಿಜಿನಲ್ ರಿಯಾಕ್ಷನ್ ಬೇಕು ಅನ್ನುವ ಕಾರಣಕ್ಕೆ ಆದಿತ್ಯ ಕಾಜೋಲ್ ಗೆ ತಿಳಿಸಿರಲಿಲ್ಲ. ಒಂದೇ ಟೇಕ್ ನಲ್ಲಿ ಶಾಟ್ ಓಕೆ ಆಯ್ತು. ಹಾಗೆ ಕಾಜೋಲ್ ಗೆ ಬಲವಾದ ಪೆಟ್ಟು ಬಿತ್ತು.

    ಇನ್ನೂ, ಶಾರೂಖ್ ರೇಗಿಸುವ ಅನೇಕ ಸೀನ್ ಗಳಲ್ಲಿ ಕಾಜೋಲ್ ಕೊಟ್ಟಿರುವ ಎಕ್ಸ್ ಪ್ರೆಶನ್ ಗಳು ಕೂಡ ಒರಿಜಿನಲ್. ಯಾಕಂದ್ರೆ, ಅವ್ರಿಗೆ ಏನಾಗಲಿದೆ, ಏನಾಗಬೇಕು ಅನ್ನುವುದನ್ನ ಯಾರೂ ತಿಳಿಸುತ್ತಿರಲಿಲ್ಲ.

    DDLJ5

    ಹಿಂದು ಮುಂದು ನೋಡಿದ್ದ ಅನುಪಮ್ ಖೇರ್

    ಡಿ.ಡಿ.ಎಲ್.ಜೆ ಚಿತ್ರದಲ್ಲಿ ಶಾರೂಖ್ ಖಾನ್ ಅಪ್ಪನ ಪಾತ್ರದಲ್ಲಿ ನಟಿಸುವುದಕ್ಕೆ ಹಿರಿಯ ನಟ ಅನುಪಮ್ ಖೇರ್ ಮೊದಲು ಹಿಂದು ಮುಂದು ನೋಡಿದ್ದರು. ಚಿತ್ರದಲ್ಲಿ ತಮ್ಮ ಪಾತ್ರಕ್ಕಿಂತ ಅಮರೀಶ್ ಪುರಿ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ ಅಂತ ಭಾವಿಸಿದ್ದ ಅನುಪಮ್ ಖೇರ್ ಗೆ, ಸಿನಿಮಾ ರಿಲೀಸ್ ಆದ್ಮೇಲೆ ಸಿಕ್ಕ ಪ್ರತಿಕ್ರಿಯೆ ನೋಡಿ, ಅವರ ಪಾತ್ರದ ಮಹತ್ವ ಅರಿವಾಯಿತಂತೆ.

    ಟೈಟಲ್ ಸೂಚಿಸಿದವರು ಅನುಪಮ್ ಖೇರ್ ಪತ್ನಿ!

    'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಅನ್ನುವ ಟೈಟಲ್ ನ ಸೂಚಿಸಿದ್ದು ಅನುಪಮ್ ಖೇರ್ ಪತ್ನಿ ಕಿರಣ್ ಖೇರ್. ಟೈಟಲ್ ತುಂಬಾ ಉದ್ದ ಆಯ್ತು ಅಂತ ಕೆಲವರು ಹೇಳಿದ್ರೆ, ಶಾರೂಖ್ ಖಾನ್ ಗಂತೂ ಬಿಲ್ ಕುಲ್ ಇಷ್ಟವಾಗ್ಲಿಲ್ಲ. ಆದ್ರೆ, ಆದಿತ್ಯ ಛೋಪ್ರಾ ಮಾತ್ರ 'ಡಿ.ಡಿ.ಎಲ್.ಜೆ'ಗೆ ಮನಸೋತರು.

    DDLJ6

    ಚಿತ್ರಕ್ಕೆ 'ಸಹಾಯಕ'ನಾಗಿದ್ದ ಕರಣ್ ಜೋಹರ್

    ಇಂದು ಬಾಲಿವುಡ್ ನ ಸೂಪರ್ ಡ್ಯೂಪರ್ ಡೈರೆಕ್ಟರ್ ಆಗಿರುವ ಕರಣ್ ಜೋಹರ್, ಡಿ.ಡಿ.ಎಲ್.ಜೆ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದರು. ಶಾಟ್ ಗೆ ಕ್ಲಾಪ್ ಮಾಡುವುದರಿಂದ ಹಿಡಿದು ಕಾಸ್ಟ್ಯೂಮ್ ಗಳನ್ನ ನೋಡಿಕೊಳ್ಳುವವರೆಗೂ ಕರಣ್, ತೆರೆಹಿಂದೆ ಮತ್ತು ಮುಂದೆ ಬೆವರು ಹರಿಸಿದ್ದಾರೆ.

    ಪ್ರೀಮಿಯರ್ ಶೋನಲ್ಲಿ ಮೂಕ ಪ್ರೇಕ್ಷಕರಾದ ಬಾಲಿವುಡ್ ದಿಗ್ಗಜರು

    ಡಿ.ಡಿ.ಎಲ್.ಜೆ ಚಿತ್ರದ ಪ್ರೀಮಿಯರ್ ಶೋ, ದಕ್ಷಿಣ ಮುಂಬೈನಲ್ಲಿರುವ New Excelsior ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಬಾಲಿವುಡ್ ನ ಅತಿರಥ ಮಹಾರಥರೇ ಈ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೋಡಿ, ಎಲ್ಲರೂ ಒಂದು ಕ್ಷಣ ಮೂಕವಿಸ್ಮಿತರಾಗಿದ್ರಂತೆ. ನಂತ್ರ ಅವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದನ್ನ ನೋಡಿ ಯಶ್ ರಾಜ್ ಫುಲ್ ಖುಷ್ ಆದರು.

    DDLJ8

    ಕೇವಲ 20 ರೂಪಾಯಿಗೆ ಡಿ.ಡಿ.ಎಲ್.ಜೆ ದರ್ಶನ

    ಮುಂಬೈನ 'ಮರಾಠಾ ಮಂದಿರ್' ಚಿತ್ರಮಂದಿರಲ್ಲಿ 19 ವರ್ಷಗಳಿಂದ ಸತತ ಪ್ರದರ್ಶನ ಕಾಣುತ್ತಿರುವ ಡಿ.ಡಿ.ಎಲ್.ಜೆಗೆ ತೆರಬೇಕಾಗಿರುವ ಟಿಕೆಟ್ ಬೆಲೆ ಕೇವಲ 20 ರೂಪಾಯಿ. ಬಾಲ್ಕನಿಗೆ 20 ರೂಪಾಯಿ, ಸೆಕೆಂಡ್ ಕ್ಲಾಸ್ (ಡಿ ಸರ್ಕಲ್)ಗೆ 17 ರೂಪಾಯಿ ಮತ್ತು ಗಾಂಧಿಕ್ಲಾಸ್ (ಸ್ಟಾಲ್)ಗೆ 15 ರೂಪಾಯಿ ಕೊಟ್ಟು ಜನ ಈಗಲೂ ಸಿನಿಮಾ ವೀಕ್ಷಿಸುತ್ತಾರೆ.

    'ಮೇಕಿಂಗ್ ಆಫ್ ಡಿ.ಡಿ.ಎಲ್.ಜೆ' ಬಗ್ಗೆ ಬುಕ್

    ಬಾಲಿವುಡ್ ಇತಿಹಾಸದಲ್ಲೇ ಹೊಸ ಸಂಚಲನ ಮೂಡಿಸಿರುವ ಡಿ.ಡಿ.ಎಲ್.ಜೆ ಚಿತ್ರದ ಕಂಪ್ಲೀಟ್ ಮೇಕಿಂಗ್ ಮತ್ತು ಅನುಭವಗಳ ಬಗ್ಗೆ ಆದಿತ್ಯ ಛೋಪ್ರಾ 'ಮೇಕಿಂಗ್ ಆಫ್ ಡಿ.ಡಿ.ಎಲ್.ಜೆ' ಅನ್ನುವ ಪುಸ್ತಕ ಬರೆದಿದ್ದಾರೆ. ಹಾಗೆ, ಸಹಸ್ರ ಸಂಭ್ರಮಕ್ಕಾಗಿ ಹೊಸ ಟ್ರೇಲರ್ ನೂ ರಿಲೀಸ್ ಮಾಡಿದ್ದಾರೆ. ಇದರೊಂದಿಗೆ ಚಿತ್ರದ ಆನಿಮೇಷನ್ ಟ್ರೇಲರ್ ಕೂಡ ರಿಲೀಸ್ ಆಗಿದೆ. [ಶಾರುಖ್ 'ಡಿಡಿಎಲ್ ಜೆ' ಅನಿಮೇಷನ್ ಟ್ರೇಲರ್ ನೋಡಿ]

    DDLJ9

    ದಾಖಲೆಗಳ ಮೇಲೆ ದಾಖಲೆ

    1995 ಅಕ್ಟೋಬರ್ 20 ರಂದು ತೆರೆಕಂಡ ಡಿ.ಡಿ.ಎಲ್.ಜೆ ಸಿನಿಮಾ ವಿದೇಶಗಳಲ್ಲಿ 16 ಕೋಟಿ ಕಲೆಕ್ಟ್ ಮಾಡಿದ್ರೆ, ಭಾರತದಲ್ಲಿ ಬರೋಬ್ಬರಿ 106 ಕೋಟಿಯನ್ನು ಬಾಚಿ 'ಆಲ್-ಟೈಮ್ ಬ್ಲಾಕ್ ಬಸ್ಟರ್' ಅನ್ನುವ ಖ್ಯಾತಿ ಪಡೆದಿದೆ. 1996ನೇ ಸಾಲಿನಲ್ಲಿ 10 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಡಿ.ಡಿ.ಎಲ್.ಜೆ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿದೆ.

    English summary
    All time Block-Buster movie 'Dilwale Dulhania Le Jayenge', has completed the successful screening of 1,000 weeks today (December 12th). Here are the few intereseting facts about Making of the film.
    Friday, December 12, 2014, 18:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X