For Quick Alerts
  ALLOW NOTIFICATIONS  
  For Daily Alerts

  ಐದು ತಾಸು ಐಶ್ವರ್ಯ ರೈ ವಿಚಾರಣೆ, ಸಂಸತ್ತಿನಲ್ಲಿ ಅತ್ತೆ ಜಯಾ ಬಚ್ಚನ್ ರುದ್ರಾವತಾರ!

  |

  ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ಸತತ ಐದು ತಾಸುಗಳ ಕಾಲ ವಿಚಾರಣೆ ನಡೆಸಿದೆ.

  2016ರ ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಐಶ್ವರ್ಯಾ ರೈ ಹೆಸರು ಕೇಳಿ ಬಂದಿತ್ತು. ಐಶ್ವರ್ಯಾ ರೈ, ನಕಲಿ ವಿದೇಶದಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಬಳಿಕ ಇಂದು ಐಶ್ವರ್ಯಾ ರೈ ವಿಚಾರಣೆ ಎದುರಿಸಿದರು.

  ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದೂರು ದಾಖಲಿಸಿಕೊಂಡಿದ್ದು ಐಶ್ವರ್ಯಾ ರೈಗೆ ನೊಟೀಸ್ ಜಾರಿ ಮಾಡಿತ್ತು. ಸತತ ಐದು ಗಂಟೆಗಳ ಕಾಲ ಇಂದು ದೆಹಲಿಯ ಕಚೇರಿಯಲ್ಲಿ ಐಶ್ವರ್ಯಾ ರೈಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಯಿತು.

  ಅತ್ತ ಐಶ್ವರ್ಯಾ ರೈ ಅನ್ನು ಜಾರಿ ನಿರ್ದೇಶನಾಲಯದ ಅಧಿಕಾರಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಇತ್ತ ಸಂಸತ್ತಿನಲ್ಲಿ ಐಶ್ವರ್ಯಾ ರೈ ಅತ್ತೆ ಜಯಾ ಬಚ್ಚನ್ ಕೆಂಡಾಮಂಡಲವಾಗಿದ್ದರು. ಸಾಮಾನ್ಯವಾಗಿ ಸಂಸತ್ತಿನಲ್ಲಿ ಶಾಂತವಾಗಿ ವರ್ತಿಸುವ ಜಯಾ ಬಚ್ಚನ್ ಇಂದು ರಾಜ್ಯಸಭೆಯಲ್ಲಿ ಉಗ್ರರೂಪ ತಾಳಿದ್ದರು. ಅಷ್ಟೇ ಅಲ್ಲ ಬಿಜೆಪಿಗೆ ಶಾಪ ಸಹ ಹಾಕಿದರು.

  ಉಚ್ಛಾಟಿತ ಸದಸ್ಯರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು, ಜಯಾ ಬಚ್ಚನ್ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿಯ ಸದಸ್ಯರೊಬ್ಬರು ಜಯಾ ಬಚ್ಚನ್ ಬಗ್ಗೆ ವೈಯಕ್ತಿಕ ಹೇಳಿಕೆಯೊಂದನ್ನು ಹರಿಬಿಟ್ಟರು, ಇದು ಜಯಾ ಬಚ್ಚನ್ ಅನ್ನು ಕೆರಳಿಸಿತು. ''ಏನು ಹೇಳುತ್ತಿದ್ದೀರಿ ನೀವು, ಎದ್ದು ನಿಂತು ಮಾತನಾಡುವ ಧೈರ್ಯ ಇಲ್ಲವೇ ನಿಮಗೆ'' ಎಂದು ಜಯಾ ಆಕ್ರೋಶದಿಂದ ಪ್ರಶ್ನೆ ಮಾಡಿದರು.

  ಸ್ಪೀಕರ್‌ ಅನ್ನು ಉದ್ದೇಶಿಸಿಯೂ ಆಕ್ರೋಶ ವ್ಯಕ್ತಪಡಿಸಿದ ಜಯಾ ಬಚ್ಚನ್, '' ಆ ವ್ಯಕ್ತಿ ನನ್ನ ವಿರುದ್ಧ ವೈಯಕ್ತಿಕ ಹೇಳಿಕೆ ನೀಡಿದ್ದಾನೆ. ನೀವು ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ. ನೀವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ'' ಎಂದರು. ಆದರೆ ಸ್ಪೀಕರ್‌ ಜಯಾ ಅವರ ಮಾತಿಗೆ ಮೌಲ್ಯ ನೀಡಲಿಲ್ಲ.

  ಆಗ ಮತ್ತೆ ಕೋಪೋದ್ರಿಕ್ತರಾದ ಜಯಾ ಬಚ್ಚನ್, ''ನಮ್ಮಗಳ (ವಿಪಕ್ಷದ ಸದಸ್ಯರ) ಕತ್ತು ಹಿಸುಕಿಬಿಡಿ, ನೀವೊಬ್ಬರೇ ಆಡಳಿತ ಮಾಡಿ'' ಎಂದರು. ಇದಕ್ಕೆ ಬಿಜೆಪಿ ಸದಸ್ಯರು ನಕ್ಕರು. ಆಗ ಮತ್ತಷ್ಟು ಕೋಪಗೊಂಡ ಜಯಾ ಬಚ್ಚನ್, ''ನಿಮ್ಮ ಕೆಟ್ಟ ದಿನಗಳು ಅತ್ಯಂತ ಬೇಗ ಬರುತ್ತವೆ, ಇದು ನನ್ನ ಶಾಪ'' ಎಂದರು ಜಯಾ. ಸಾಮಾನ್ಯವಾಗಿ ಜಯಾ ಬಚ್ಚನ್ ಸಂಸತ್ತಿನಲ್ಲಿ ಆಕ್ರೋಶದಿಂದ ವರ್ತಿಸುವುದಿಲ್ಲ ಆದರೆ ಇಂದು ಬಹಳ ಸಿಟ್ಟಿನಿಂದಲೇ ಮಾತನಾಡಿದರು. ಜಯಾ ಬಚ್ಚನ್ ಸಮಾಜವಾದಿ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

  ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಜಯಾ ಬಚ್ಚನ್, ''ಅದೊಂದು ನಾಚಿಕೆಗೇಡಿನ ಸಂಗತಿ, ನಾಚಿಕೆಗೇಡಿನ ವರ್ತನೆ. ಕಾಂಗ್ರೆಸ್ ಪಕ್ಷವು ಆ ಶಾಸಕ (ರಮೇಶ್ ಕುಮಾರ್) ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಆ ಮೂಲಕ ಎಲ್ಲರಿಗೂ ಮಾದರಿಯಾಗಬೇಕು. ಯಾರೂ ಇನ್ನು ಮುಂದೆ ಹೀಗೆ ಮಾತನಾಡುವ ಧೈರ್ಯ ತೋರಬಾರದು. ಸದನದಲ್ಲಿ ಈ ರೀತಿ ಮಾತನಾಡುವುದಿರಲಿ, ಯೋಚನೆ ಸಹ ಮಾಡಬಾರದು. ಇದೊಂದು ನೀಚ ಘಟನೆ. ಈ ರೀತಿಯ ಯೋಚನೆಯುಳ್ಳ ಜನರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅರ್ಹತೆ ಸಹ ಇಲ್ಲ. ಆಡಿದ ಮಾತು ಹಿಂಪಡೆಯಲು ಸಾಧ್ಯವಿಲ್ಲ. ಅವರ ಪಕ್ಷವು ಆ ಶಾಸಕನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು'' ಎಂದು ಜಯಾ ಬಚ್ಚನ್ ಆಗ್ರಹಿಸಿದ್ದರು.

  ಎಮಿಕ್ ಕಾರ್ಪೊರೇಷನ್ಸ್ ಹೆಸರಿನ ಸಂಸ್ಥೆಯು ಬ್ರಿಟೀಷ್ ವರ್ಜಿನ್ ಐಲೆಂಡ್ಸ್‌ನಲ್ಲಿ ನೊಂದಾವಣೆ ಆಗಿದ್ದು, ಈ ಸಂಸ್ಥೆಯ ನಿರ್ದೇಶಕಿಯಾಗಿ ಐಶ್ವರ್ಯಾ ರೈ ಇದ್ದರು. ಆದರೆ 2004 ರ ಬಳಿಕ ಐಶ್ವರ್ಯಾ ರೈ ಹೆಸರನ್ನು ನಿರ್ದೇಶಕಿ ಸ್ಥಾನದಿಂದ ಶೇರ್ ಹೋಲ್ಡರ್ ಎಂದು ಬದಲಾವಣೆ ಮಾಡಲಾಯಿತು. ಈ ಸಂಸ್ಥೆಯ ಇತರ ಆಡಳಿತ ವರ್ಗಗಳ ಹುದ್ದೆಯಲ್ಲಿ ಐಶ್ವರ್ಯಾ ರೈ ಅವರ ಕುಟುಂಬ ಸದಸ್ಯರೇ ಇದ್ದರು. ನಂತರ ಇವರ ಹೆಸರುಗಳು ಸಹ ಶೇರ್ ಹೋಲ್ಡರ್ಸ್ ಎಂದು ಬದಲಾಯಿತು. ಈ ಬಗ್ಗೆ ಪನಾಮಾ ಪೇಪರ್ಸ್ ಲೀಕ್ ಆದಾಗ ಬಹಿರಂಗವಾಗಿತ್ತು. ಈಗ ಇಡಿ ಸಹ ಇದೇ ವಿಷಯವಾಗಿ ಐಶ್ವರ್ಯಾ ರೈ ಅವರನ್ನು ಪ್ರಶ್ನೆ ಮಾಡಿದೆ.

  2004 ರ ವರೆಗೆ ಯಾವ ಭಾರತೀಯರು ಸಹ ವಿದೇಶದಲ್ಲಿ ಹಣ ಹೂಡಿಕೆ ಮಾಡುವಂತಿರಲಿಲ್ಲ. 2004 ರ ನಂತರ ಆರ್‌ಬಿಐ ಈ ನಿಯಮವನ್ನು ಬದಲಾಯಿಸಿ, ವಿದೇಶಿ ಸಂಸ್ಥೆಗಳ ಶೇರು ಖರೀದಿಗೆ ಭಾರತೀಯರಿಗೆ ಅವಕಾಶ ನೀಡಿತು. ಆದರೆ ಯಾವುದೇ ಸಂಸ್ಥೆಯನ್ನು ಭಾರತೀಯರು ವಿದೇಶದಲ್ಲಿ ಹೊಂದುವಂತಿರಲಿಲ್ಲ. ಆದರೆ ಐಶ್ವರ್ಯಾ ರೈ ಹಾಗೂ ಇತರರು ವಿದೇಶದಲ್ಲಿ ತಮ್ಮದೇ ಸಂಸ್ಥೆಗಳನ್ನು ಹೊಂದಿದ್ದರು. ಅದರಲ್ಲಿಯೂ ತೆರಿಗೆ ಕಳ್ಳರ ಸ್ವರ್ಗ ಎಂದು ಕರೆಯಲ್ಪಡುವ ಬ್ರಿಟೀಷ್ ವರ್ಜಿನ್ ಐಸ್‌ಲ್ಯಾಂಡ್‌ನಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಆ ಸಂಸ್ಥೆಗೆ ತಮ್ಮ ಹಣ ರವಾನೆ ಮಾಡಿ, ಅಕ್ರಮ ಹಾದಿಯಲ್ಲಿ ತೆರಿಗೆ ಉಳಿಸಿದ್ದರು. ಪನಾಮಾ ಪೇಪರ್ಸ್‌ನಿಂದ ಈ ಅಕ್ರಮಗಳು ಹೊರಬಿದ್ದವು.

  ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್, ನಟ ಅಜಯ್ ದೇವಗನ್, ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ, ದಾವೂದ್ ಇಬ್ರಾಹಿಂ ಬಲಗೈ ಭಂಟ ಇಬ್ರಾಹಿಂ ಮಿರ್ಚಿ, ಉದ್ಯಮಿ ವಿಜಯ್ ಮಲ್ಯ, ಅಪೋಲೊ ಟೈರ್ಸ್‌ ಎಂಡಿ ಓಂಕಾರ್ ಕನ್ವರ್, ಅಬಾಸಾಹೇಬ್ ಗರ್ವಾರೆ, ಮೆಕ್ಸ್ ಬಟ್ಟೆ ಬ್ರ್ಯಾಂಡ್‌ನ ಮಾಲೀಕ ಮೋಹನ್‌ಲಾಲ್ ಲೋಹಿಯಾ, ಎಸ್‌ಕೆ ಬಜೋರಿಯಾ ಗ್ರೂಪ್‌ನ ಶಿಶಿರ್ ಭಜೋರಿಯಾ, ಕಾಂಗ್ರೆಸ್ ಮುಖಂಡ ಹರೀಶ್ ಸಾಲ್ವೆ, ಬಿಜೆಪಿ ಮುಖಂಡ ರವೀಂದ್ರ ಕಿಶೋರ್ ಸಿನ್ಹಾ, ಲೋಕ್ ಸತ್ತಾ ಪಕ್ಷದ ಅನುರಾಗ್ ಕೇಜ್ರಿವಾಲ್, ಗೋವಾ ಶಾಸಕ ಅನಿಲ್ ವಾಸುದೇವ್ ಸಾಲ್ಗೋಂಕರ್ ಇನ್ನೂ ಹಲವು ಭಾರತೀಯರ ಹೆಸರುಗಳು ಪನಾಮಾ ಪೇಪರ್ಸ್‌ನಿಂದ ಲೀಕ್ ಆಗಿದ್ದವು.

  English summary
  ED department officials drills Aishwarya Rai for five hours in Delhi office regarding her foreign investments. Other side Aishwarya's mother in law Jaya Bachchan looses cool in parliament today.
  Tuesday, December 21, 2021, 9:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X