ಇನ್ನೂರು ಕೋಟಿ ದಾಟಿದ ಏಕ್ ಥಾ ಟೈಗರ್ ಕಲೆಕ್ಷನ್
ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಚಿತ್ರ ಬಾಕ್ಸಾಫೀಸಲ್ಲಿ ಕಾಸಿನ ಮಳೆ ಸುರಿಸುತ್ತಿದೆ. ಚಿತ್ರ ಬಿಡುಗಡೆಯಾದ 12 ದಿನಕ್ಕೆ ರು.210 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಭಾರತದಲ್ಲಿ ಒಟ್ಟು ರು.175 ಕೋಟಿ ಕಲೆಕ್ಷನ್ ಮಾಡಿದ್ದರೆ ವಿದೇಶಗಳಲ್ಲಿ ರು.35 ಕೋಟಿ ಬಾಚಿದೆ 'ಏಕ್ ಥಾ ಟೈಗರ್'. ಮೊದಲ ಹನ್ನೆರಡು ದಿನಗಳಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಸಲ್ಲು ಮಿಯಾ ಮತ್ತೊಮ್ಮೆ ಶರ್ಟ್ ಬಿಚ್ಚಿ ಕುಣಿದಾಡುವಂತಾಗಿದೆ.
ಈ ಬಗ್ಗೆ ಬಾಕ್ಸಾಫೀಸ್ ಟ್ರೇಡ್ ಪಂಡಿತ ತರಣ್ ಆದರ್ಶ್ ಅವರು ಟ್ವೀಟಿಸಿದ್ದು, "ಏಕ್ ಥಾ ಟೈಗರ್ ಇಂಡಿಯಾ ಪ್ಲಸ್ ವಿದೇಶಗಳಲ್ಲಿ ಎರಡು ವಾರಗಳಲ್ಲಿ 210 ಕೋಟಿ ಕಲೆಕ್ಷನ್ ಮಾಡಿದೆ. ಆಲ್ ಟೈಮ್ ಬ್ಲಾಕ್ ಬಸ್ಟರ್" ಎಂದಿದ್ದಾರೆ.
ಈ ಹಿಂದೆ ಅಮೀರ್ ಖಾನ್ ಅವರ '3 ಈಡಿಯಟ್ಸ್' ಚಿತ್ರ ಭಾರತದಲ್ಲಿ ರು.202 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ 'ಏಕ್ ಥಾ ಟೈಗರ್' ಭಾರತದಲ್ಲಿ ರು.175 ಕೋಟಿ ಕಲೆಕ್ಷನ್ ಮಾಡಿದ್ದು ಅಮೀರ್ ಚಿತ್ರದ ದಾಖಲೆಯನ್ನು ಶೀಘ್ರದಲ್ಲೇ ನಿರ್ನಾಮ ಮಾಡುವ ಎಲ್ಲ ಸೂಚನೆಗಳನ್ನೂ ನೀಡಿದೆ.
ಯಶ್ ರಾಜ್ ಫಿಲಂಸ್ ಬ್ಯಾನರ್ ನಿರ್ಮಾಣದ ಈ ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ. ಸಲ್ಲುಗೆ ಜೊತೆಯಾಗಿ ಕತ್ರಿನಾ ಕೈಫ್ ಅಭಿನಯಿಸಿದ್ದರು. ಈ ಚಿತ್ರದ ಮೂಲಕ ಸಲ್ಲು ಮುಂದಿನ ಚಿತ್ರಕ್ಕಾಗಿ ರು.100 ಕೋಟಿ ಆಫರ್ ಬಂದಿದೆ.
ಆಕ್ಷನ್, ರೊಮ್ಯಾನ್ಸ್, ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಈ ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಗೂಢಚಾರಿ ಪಾತ್ರಗಳಲ್ಲಿ ಅಭಿನಯಿಸಿದ್ದು ಇವರಿಬ್ಬರ ನಡುವೆ ಪ್ರೀತಿ ಚಿಗುರುತ್ತದೆ. ಕತೆ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. (ಏಜೆನ್ಸೀಸ್)


Click it and Unblock the Notifications











