»   » ಬಾಲಿವುಡ್ ನಟ ಸಂಜೀವ್ ಕುಮಾರ್ ಮತ್ತೆ ಹುಟ್ಟಿ ಬರಬಾರದೇ?

ಬಾಲಿವುಡ್ ನಟ ಸಂಜೀವ್ ಕುಮಾರ್ ಮತ್ತೆ ಹುಟ್ಟಿ ಬರಬಾರದೇ?

By: ಡಾ.ವಿನೋದ ಕುಲಕರ್ಣಿ,ವೈದ್ಯ ಸಾಹಿತಿ, ಹುಬ್ಬಳ್ಳಿ.
Subscribe to Filmibeat Kannada

ಅವನು ಬಿಳಿಯ ಚಪ್ಪಲುಗಳು, ಬಿಳಿಯ ಪ್ಯಾಂಟ್ ಹಾಗೂ ಬಿಳಿಯ ಕುರ್ತಾ ಧರಿಸುತ್ತಿದ್ದನು. ಹಿಂದಿ ಸಿನಿಮಾ ರಂಗದಲ್ಲಿ ಒಬ್ಬ ಅತ್ಯುನ್ನತ ಕಲಾವಿದ, ಒಬ್ಬ ಪ್ರತಿಭಾವಂತ ನಟ. ಅವನಿಗೆ ನಟನೆಯಲ್ಲಿ ಹಾಗೂ ಕಲೆಯಲ್ಲಿ ಸರಿಸಾಟಿ ಎಂದರೆ, ಇನ್ನಿಬ್ಬರಾದ, ಸಿನಿಮಾ ರಂಗದ ದಿಗ್ಗಜರಾದ ದಿಲೀಪಕುಮಾರ ಹಾಗೂ ದಿ. ರಾಜೇಶ ಖನ್ನಾ. ನವಂಬರ್ 6 ರಂದು ಈ ಮೇರು ಕಲಾವಿದನ ನೆನಪು ಮರುಕಳಿಸುತ್ತದೆ.

Interesting Facts of Bollywood's Legendary Actor Sanjeev Kumar

ಅವನು ತನ್ನ ಇಹಲೋಕ ಯಾತ್ರೆಯನ್ನು ಮಗಿಸಿದ್ದು ದಿನಾಂಕ 6-11-1985 ರಂದು. ಹುಟ್ಟಿದ್ದು 9-7-1938 ರಂದು. ಅಂದರೆ, ಅವನು ಬದುಕಿದ್ದು ಕೇವಲ 47 ವರ್ಷ. ಆದರೆ ಅವನ ಸಾಧನೆ ಅಪ್ರತಿಮ. ಅವನೇ ಬಾಲಿವುಡ್ ಚಿತ್ರರಂಗದ ಖ್ಯಾತ ಚಿತ್ರನಟ ಸಂಜೀವಕುಮಾರ.

ಅವರ ನಟನೆಯನ್ನು ನೀವು ನೋಡಬೇಕೆಂದರೆ, ಅವರ ಚಿತ್ರಗಳಾದ ಅನಾಮಿಕ, ಆಂಧಿ, ಶೋಲೆ, ಅಂಗೂರ, ತ್ರಿಶೂಲ್, ಹಾಗೂ ಮೌಸಮ್, ಸಿನಿಮಾಗಳನ್ನು ನೋಡಲೇಬೇಕು. ಸಂಜೀವಕುಮಾರ ಹುಟ್ಟಿದ್ದು ಗುಜರಾತಿನ ಸೂರತನಲ್ಲಿ. ಅವನ ಮೂಲ ಹೆಸರು ಹರಿಹರ ಜರಿವಾಲಾ. ಅವನು 5 ಫೂಟ್ 8 ಇಂಚ್ ಎತ್ತರವಾಗಿದ್ದ, ಆದರೆ ಅವನ ಸಾಧನೆ ಅಳತೆ ಮೀರಿದ್ದು, ಬಾನೆತ್ತರ, ಎಂದರೂ ಉತ್ಪ್ರೇಕ್ಷೆ ಆಗಲಿಕಿಲ್ಲ!.

ದಿ. ಸಂಜೀವಕುಮಾರರವರು, ಜೀವನ ಪರ್ಯಂತ ಅವಿವಾಹಿತರಾಗಿಯೇ ಉಳಿದದ್ದು ವಿಪರ್ಯಾಸ. ಕನಸಿನ ಕನ್ಯೆಯಾದ ಹೇಮಾಮಾಲಿನಿಯನ್ನು, ಸಂಜೀವಕುಮಾರ ಪ್ರೀತಿಸಿದರು. ಆದರೆ ಈ ನಟಿ ಅವನ ಆಹ್ವಾನವನ್ನು ತಿರಸ್ಕರಿಸಿ, ಅವನನ್ನು ಮಾನಸಿಕ ಖಿನ್ನತೆಗೆ ಜಾರುವಂತೆ ಮಾಡಿದಳು.

ಇನ್ನೋರ್ವ ಗಾಯಕಿ ಹಾಗೂ ನಟಿ, ಸುಲಕ್ಷಣಾ ಪಂಡಿತ, ಸಂಜೀವ ಕುಮಾರ ಅವರ ನಟನೆಗೆ, ಸ್ಪುರದ್ರೂಪಕ್ಕೆ ಮಾರು ಹೋಗಿದ್ದಳು. ಅವನನ್ನು ಅತ್ಯಂತ ಪ್ರೀತಿಸಿದಳು. ಆದರೆ, ಸಂಜೀವಕುಮಾರ, ಅವಳನ್ನು ಪ್ರತಿಯಾಗಿ ಪ್ರೀತಿಸಲಿಲ್ಲ. ಅವಳ ಬಗ್ಗೆ, ಸಂಜೀವಕುಮಾರ ಅವರಿಗೆ ಕಿಂಚಿತ್ತೂ ಮೋಹ ಹುಟ್ಟಲೇ ಇಲ್ಲ. ಸಂಜೀವಕುಮಾರರ ನೆನಪಿನಲ್ಲಿ, ಇಂದಿಗೂ, ಈ ಸುಲಕ್ಷಣಾ ಪಂಡಿತ, ತನ್ನ ವರುಷಗಳನ್ನು ದೂಡುತ್ತಲೇ ಇದ್ದಾಳೆ. ಈ ಗಾಯಕಿ ಹಾಗೂ ನಟಿ ಸುಲಕ್ಷಣಾ ಪಂಡಿತ, ಈಗ ವಿಲಕ್ಷಣ ಹೊಂದಿ, ಮಾನಸಿಕ ಕಾಯಿಲೆಗೆ ಗುರಿಯಾಗಿ, ತನ್ನ ನಿಗೂಢವಾದ ಕೋಣೆಯಿಂದ ಹೊರ ಬರುತ್ತಲೇ ಇಲ್ಲ!

ಸಂಜೀವಕುಮಾರವರಿಗೆ, ತಮ್ಮ ಸಾವಿನ ಬಗ್ಗೆ ಪ್ರಾಯಶಃ ಮುನ್ಸೂಚನೆ ಇತ್ತು. ಅವರು ಪದೇ ಪದೇ ಹೇಳುತ್ತಿದ್ದರು - "ನಮ್ಮ ಈ ಜರಿವಾಲಾ ಕುಟುಂಬದಲ್ಲಿ, ಯಾವ ಪುರುಷನೂ ತನ್ನ ಆಯುಷ್ಯನ್ನು 50 ವರುಷಗಳ ಮೀರಿ ಜೀವಿಸಿಲ್ಲ". ಅವರ ಹೇಳಿಕೆಗೆ ತಕ್ಕಂತೆ, ಸಂಜೀವಕುಮಾರರ ಇಬ್ಬರು ಅಣ್ಣ ತಮ್ಮಂದಿರು, ತಮ್ಮ ಜೀವಮಾನದ, 50 ವರುಷಗಳ ಒಳಗೆ ತೀರಿಕೊಂಡರು.

ಸಂಜೀವಕುಮಾರವರು ನಟಿಸಿದ ಅತ್ಯಂತ ಮೇರು ಚಿತ್ರಗಳೆಂದರೆ, ಶೋಲೆ (1975) ಹಾಗೂ ತ್ರಿಶೂಲ್ (1978). ಅವರು, ಖ್ಯಾತ ನಿರ್ದೇಶಕ ಗುಲ್ಜರ ಅವರ ಒಟ್ಟಿಗೆ 9 ಚಲನ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಸಂಜೀವಕುಮಾರರವರು, ಅನೇಕ ಪ್ರಾದೇಶಿಕ ಭಾಷೆಗಳಾದ ಮರಾಠಿ, ತಮಿಳು, ತೆಲುಗು, ಸಿಂಧಿ ಹಾಗೂ ಗುಜರಾತಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

ಅವರಿಗೆ ಹುಟ್ಟಿದಾಗಿನಿಂದಲೇ ಹೃದಯ ಕಾಯಿಲೆ ಇತ್ತು. ಅದರ ಶಸ್ತ್ರ ಚಿಕಿತ್ಸೆಗೆ ದೂರದ ಅಮೇರಿಕಾಕ್ಕೆ ತೆರಳಿದರೂ ಅವರು, "ಅಮ್ಮಾ" ಎಂದು ನರಳಾಡಿದರೂ ಆ ಚಿಕಿತ್ಸೆ ಫಲಕಾರಿಯಾಗಲಿಲ್ಲ!.

ಪ್ರಪ್ರಥಮವಾಗಿ ಸಂಜೀವಕುಮಾರ ಒಬ್ಬ ಮೇರು ನಟ ಎಂದು ಜನ ಗುರುತಿಸಿದ್ದು ಅವರ ಸಿನಿಮಾ "ಖಿಲೋನಾ" ದಲ್ಲಿ. ಈ ಚಿತ್ರದಲ್ಲಿ, ಅವರು ಓರ್ವ ಹುಚ್ಚನಾಗಿ, ಗಮನಾರ್ಹ ನಟನೆ ನೀಡಿದ್ದರು. ಈ ಚಿತ್ರದ ಹಿರೋಯಿನ್ ಮಮತಾಜಳನ್ನು ಈ ಚಿತ್ರದಲ್ಲಿ, ಸಂಜೀವಕುಮಾರ ಗಾಢವಾಗಿ ಪ್ರೀತಿಸುತ್ತಿದ್ದರು.

ಸಂಜೀವಕುಮಾರರ ಗೆಳೆಯರು ಅವರನ್ನು "ಹರಿಭಾಯಿ" ಎಂದು ಸಂಬೋಧಿಸುತ್ತಿದ್ದರು. ಈ ಹರಿಭಾಯಿ, ಸೆಂಟ್ರಲ್ ಮುಂಬೈಯ ಗಿರಗಾಂವದಲ್ಲಿ ಒಂದು ಸಾದಾ ಚಾಳಿನಲ್ಲಿ ಮೊದಮೊದಲು ವಾಸಿಸುತ್ತಿದ್ದರು. (ಮುಂಬೈ ಎಂಬ ಮಾಯಾನಗರಿಯನ್ನು ಪ್ರವೇಶಿಸಿದಾಗ). ಚಿತ್ರ ರಂಗದಲ್ಲಿ ಹೆಸರು ಹಾಗೂ ದುಡ್ಡು ಎರಡೂ ಸಂಪಾದಿಸಿದ ನಂತರ ಅವರು ಮುಂಬಯಿಯ ಪಾಲಿ ಹಿಲ್ಲಲ್ಲಿ "ಪೇರಿನ ವಿಲ್ಲಾ" ಎಂಬ ಕಟ್ಟಡದ ಮಾಲೀಕರಾದರು. ಆಗ ಇವರ ನೆರೆಹೊರೆಯವರು ಎಂದರೆ ದಿಲೀಪಕುಮಾರ, ಸೈರಾಬಾನು, ಸುನೀಲದತ್ತ, ನರ್ಗೀಸ, ಗುಲ್ಜರ ಹಾಗೂ ರಾಖಿ !.

ಉನ್ನತ ಹೆಸರು, ಸಂಪತ್ತು, ಖ್ಯಾತಿ ಇವೆಲ್ಲವುಗಳನ್ನೂ ಸಂಪಾದಿಸಿದ ನಂತರವೂ ಹರಿಭಾಯಿ ಅತ್ಯಂತ ಸೀದಾ ಸಾದಾ ವ್ಯಕ್ತಿಯಾಗಿದ್ದರು. ಅವರಿಗೆ ಸೊಕ್ಕು ಘಮಂಡಿ, ಅಹಂಕಾರ, ಎಂದಿಗೂ ಬರಲಿಲ್ಲ. ಅವರ ಕಾಲುಗಳು ಯಾವತ್ತೂ ಭೂಮಿಯ ಮೇಲೆಯೇ ಗಾಢವಾಗಿ ಉಳಿದಿದ್ದವು.

ಈ ಸಂಜೀವಕುಮಾರ ಅವರ ಮೂರು ದೊಡ್ಡ ಅಸಹಾಯಕತೆಗಳೆಂದರೆ ಮರ್ಸಿಡೀಸ್ ಬೆಂಜ್ ಕಾರು, 555 ಸಿಗರೇಟ್, ಅತ್ಯುನ್ನತ ಗುಣಮಟ್ಟದ ವಿಸ್ಕಿ. ಹುಟ್ಟಿನಿಂದ ಶಾಖಾಹಾರಿಯಾಗಿದ್ದರೂ, ಸಂಜೀವಕುಮಾರ ಅವರು ಮುಂಬೈಯ ಬಾಂದ್ರಾ ಪ್ರದೇಶದ ಲಿಂಕಿಂಗ್ ರೋಡನಲ್ಲಿ ನಡುರಾತ್ರಿಯ ನಂತರ (ಗಡದ್ದಾಗಿ ಸ್ಕಾಚ್ ವಿಸ್ಕಿ ಗಂಟಲಿಗೆ ಇಳಿಸಿದ ನಂತರ) ಚಿಕ್ಕನ್ ತಂದೂರಿ ಸವಿಯಲು ಆಗಮಿಸುತ್ತಿದ್ದರು!.

ಅವರ ಇನ್ನೊಂದು ಅಸಹಾಯಕತೆ ಎಂದರೆ "ಹೆಣ್ಣು". ಹಿಂದಿ ಚಿತ್ರ ರಂಗದ ನಟಿ ನೂತನ ಅವಳನ್ನು ಮದುವೆಯಾಗುವದಾಗಿ ಹೇಳಿ ಅವರಿಂದ ಸಾರ್ವಜನಿಕರ ಎದುರಿಗೇನೇ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದರು.

ಈ ಸಂಜೀವಕುಮಾರ ಅವರು ಯಾವುದೇ ಕೆಲಸವಾಗಲಿ ಶೂಟಿಂಗನಲ್ಲಾಗಲಿ ಆಗಮಿಸುವದು ಯಾವತ್ತೂ ವಿಳಂಬವಾಗಿಯೇ.! ಆದರೆ ಒಮ್ಮೆ ಶೂಟಿಂಗ್ ಪ್ರಾರಂಭಗೊಂಡಿತೆಂದರೆ ಇತರರು ತಮ್ಮ ನಟನೆಗೆ ಹಲವಾರು ಗಂಟೆ ತೆಗೆದುಕೊಂಡರೆ ಸಂಜೀವಕುಮಾರ 1-2 ಗಂಟೆಗಳಲ್ಲಿ ತಮ್ಮ ಮೇರು ಪ್ರತಿಭೆ ಹಾಗೂ ನಟನಾ ಸಾಮರ್ಥ್ಯವನ್ನು ಬಿಂಬಿಸಿ ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತಿದ್ದರು.

ಸಂಜೀವಕುಮಾರವರು, ಖ್ಯಾತ ನಿರ್ದೇಶಕ ಕೆ.ಆಸಿಫರ ಗಳಸ್ಯ ಕಂಠಸ್ಯ ಮಿತ್ರರಾಗಿದ್ದರು. ಇನ್ನೋರ್ವ ಮೇರು ನಟ ದಿಲೀಪಕುಮಾರ, ಸಂಜೀವಕುಮಾರರ ಪ್ರತಿಭೆಯನ್ನು ನಿರರ್ಗಳವಾಗಿ ಕೊಂಡಾಡುತ್ತಿದ್ದರು!.

ನವಂಬರ್, 6, 1985 ರಂದು ಸಂಜೀವಕುಮಾರ ತೀರಿಕೊಂಡರು. ಆದರೆ, ಅವರ ಶವ ಸಂಸ್ಕಾರವನ್ನು ಮುಂದಿನ 3 ದಿನಗಳವರೆಗೆ ಮಾಡಲಿಕ್ಕೆ ಆಗಲಿಲ್ಲ. ಕಾರಣ, ದೇಶ ವಿದೇಶಗಳಿಂದ ಲಕ್ಷಾನುಗಟ್ಟಲೇ ಹರಿದು ಬಂದ, (ಅವರ ಅಂತಿಮ ದರ್ಶನ ಪಡೆಯಲು) ಜನಸಾಗರ !. ಇಂತಹ ಮೇರು ಪ್ರತಿಭೆ ಇನ್ನೋರ್ವ ಸಂಜೀವಕುಮಾರ ಹುಟ್ಟಿ ಬರಲಾರ.

ಲೇಖಕರು:
ಡಾ. ವಿನೋದ ಕುಲಕರ್ಣಿ,ವೈದ್ಯ ಸಾಹಿತಿ, ಹುಬ್ಬಳ್ಳಿ.

English summary
Bollywood's legendary versatile actor Sanjeev Kumar died on November 6, 1985. One of the most famous stars in the 60s and 70s, Kumar was popular for bringing offbeat characters to life. With a small debut role in Hum Hindustaani, Sanjeev Kumar became one of the most influential actors of Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada