For Quick Alerts
  ALLOW NOTIFICATIONS  
  For Daily Alerts

  ಕಂಗನಾ ವಿರುದ್ಧ ಕೆಂಡವಾದ ಹಿರಿಯ ಚಿತ್ರಸಾಹಿತಿ ಜಾವೇದ್ ಅಖ್ತರ್

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ಕಂಗನಾಗೆ ಇರುವಷ್ಟು ವಿರೋಧಿಗಳು ಬಾಲಿವುಡ್‌ನ ಇನ್ಯಾವ ಸೆಲೆಬ್ರಿಟಿಗಳಿಗೂ ಇದ್ದಂತಿಲ್ಲ. ಅದಕ್ಕೆ ಕಾರಣ ಸ್ವತಃ ಕಂಗನಾ ರನೌತ್ ಎಂದರೆ ತಪ್ಪಲ್ಲ.

  ಸಿಕ್ಕ-ಸಿಕ್ಕವರ ವಿರುದ್ಧವೆಲ್ಲಾ ಟ್ವೀಟ್ ಮೂಲಕ ನಾಲಗೆ ಹರಿಬಿಡುವ ಕಂಗನಾಗೆ ಸಹಜವಾಗಿಯೇ ಸ್ನೇಹಿತರಿಗಿಂತಲೂ ವಿರೋಧಿಗಳು ಹೆಚ್ಚಾಗಿದ್ದಾರೆ. ಹೃತಿಕ್ ರೋಷನ್‌ ಇಂದ ಆರಂಭಿಸಿ ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಊರ್ಮಿಳಾ ಮತೋಡ್ಕರ್, ಮಹೇಶ್ ಭಟ್, ಸೋನು ಸೂದ್, ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ಕರೀನಾ ಕಪೂರ್, ರಿಯಾ ಚಕ್ರವರ್ತಿ, ಅನು ಮಲ್ಲಿಕ್, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಇನ್ನೂ ಹಲವಾರು ಟಾಪ್ ಸೆಲೆಬ್ರಿಟಿಗಳ ವಿರುದ್ಧ ಕಂಗನಾ ಟ್ವೀಟ್ ಮಾಡಿದ್ದಾರೆ. ಬಾಲಿವುಡ್‌ನ ಹಿರಿಯ ಜಾವೇದ್ ಅಖ್ತರ್ ಅನ್ನೂ ಕಂಗನಾ ಬಿಟ್ಟಿಲ್ಲ.

  ಕಂಗನಾ ಟ್ವೀಟ್‌ಗಳಿಗೆ ಕೆಲವು ನಟ-ನಟಿಯರಷ್ಟೆ ಸಿಟ್ಟಿನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಆದರೆ ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಮಾತ್ರ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಜಾವೇದ್ ಹೂಡಿದ್ದು ಅದೇ ವಿಷಯವಾಗಿ ಜಾವೇದ್ ಕಂಗನಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  ನಟಿ ಕಂಗನಾ ಟಿವಿ ಸಂದರ್ಶನವೊಂದರಲ್ಲಿ ಜಾವೇದ್ ಅಖ್ತರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೆ ಅಪಮಾನಕರ ರೀತಿಯಲ್ಲಿ ಮಾತನಾಡಿದ್ದರು. ಇದರಿಂದ ಕೆರಳಿದ್ದ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ವಿರದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ಇದರ ವಿರುದ್ಧ ನಟಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿ ತಮ್ಮ ವಿರುದ್ಧ ತನಿಖೆಯನ್ನು ರದ್ದು ಮಾಡುವಂತೆ ಕೋರಿದ್ದರು ಅದಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿರಲಿಲ್ಲ.

  ಇದೀಗ ಹೊಸ ಅಫಿಡವಿಟ್ ಅನ್ನು ಜಾವೇದ್ ಅಖ್ತರ್ ಸಲ್ಲಿಸಿದ್ದು ಕಂಗನಾ ರನೌತ್ ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆ ತಡವಾಗುವಂತೆ ಮಾಡುತ್ತಿದ್ದಾರೆ. ಕಂಗನಾಗೆ ಕಠಿಣ ಸಂದೇಶವನ್ನು ನ್ಯಾಯಾಲಯವು ರವಾನಿಸಬೇಕು ಎಂದು ಜಾವೇದ್ ಅಖ್ತರ್ ಒತ್ತಾಯಿಸಿದ್ದಾರೆ.

  ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ತನಿಖೆ ಆದೇಶಕ್ಕೆ ವಿರುದ್ಧವಾಗಿ ಉತ್ತರ ನೀಡಿದ್ದ ಕಂಗನಾ ರನೌತ್, ''ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿನಾಕಾರಣ ಪೊಲೀಸ್ ತನಿಖೆಗೆ ಆದೇಶ ನೀಡಿದೆ. ಪೊಲೀಸರು ಯಾವುದೇ ತನಿಖೆ ನಡೆಸದೆ ಕೇವಲ ಹೇಳಿಕೆಗಳನ್ನು ಸಹ ದಾಖಲಿಸಿ ಸಹಿ ಪಡೆದುಕೊಳ್ಳುತ್ತಿದ್ದಾರೆ. ಸಾಕ್ಷಿಧಾರರ ಮೇಲೆ ಪೊಲೀಸರು ಪ್ರಭಾವ ಬಳಿಸಿದ್ದಾರೆ'' ಎಂದಿದ್ದರು. ಅಲ್ಲದೆ ಹಲವು ಬಾರಿ ನ್ಯಾಯಾಲಯವು ನೊಟೀಸ್ ನೀಡಿದಾಗಲೂ ಕಂಗನಾ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ.

  ನಟಿ ಕಂಗನಾ ರನೌತ್‌ಗೆ ಈ ರೀತಿಯ ಪ್ರಕರಣಗಳು ಹೊಸದೇನೂ ಅಲ್ಲ. ಈ ಹಿಂದೆ ಕಂಗನಾ ರನೌತ್ ರೈತರ ಪ್ರತಿಭಟನೆ ವಿರುದ್ಧ ಮಾಡಿದ್ದ ಟ್ವೀಟ್ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಕರ್ನಾಟಕದ ತುಮಕೂರು, ಬೆಳಗಾವಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಂಗನಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಶಿವಸೇನಾ ಪಕ್ಷ ಹಾಗೂ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಮಾಡಿರುವ ಆರೋಪಗಳಿಗೆ ವಿರುದ್ಧವಾಗಿಯೂ ಕೆಲವು ಪ್ರಕರಣಗಳು ದಾಖಲಾಗಿವೆ.

  ನಟಿ ಕಂಗನಾ ರನೌತ್ ಪ್ರಸ್ತುತ 'ದಾಖಡ್' ಸಿನಿಮಾದ ಚಿತ್ರೀಕರಣವನ್ನು ಬುಡಾಪೆಸ್ಟ್‌ನಲ್ಲಿ ಮಾಡುತ್ತಿದ್ದಾರೆ. ಅವರ ನಟನೆಯ 'ತಲೈವಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನದ ಮೇಲೆ ಆಧರಿತವಾಗಿದೆ. ಅದರ ಬಳಿಕ ಅಪರ್ಜಿತಾ 'ಅಯೋಧ್ಯ', 'ತೇಜಸ್', 'ಇಮ್ಲಿ' ಸಿನಿಮಾಗಳಲ್ಲಿ ಕಂಗನಾ ನಟಿಸಲಿದ್ದಾರೆ. ಅದರ ಬಳಿಕ ಸ್ವತಃ ತಾವೇ ಐತಿಹಾಸಿಕ ಕತೆಯುಳ್ಳ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ 'ಮಣಿಕರ್ಣಿಕಾ' ಸಿನಿಮಾವನ್ನು ಕಂಗನಾ ನಿರ್ದೇಶನ ಮಾಡಿದ್ದರು. ಅದ್ಭುತವಾದ ನಟಿಯಾಗಿರುವ ಕಂಗನಾಗೆ ಈವರೆಗೆ ಮೂರು ರಾಷ್ಟ್ರಪ್ರಶಸ್ತಿಗಳು ಧಕ್ಕಿವೆ.

  English summary
  Famous writer Javed Akhtar accused that actress Kangana Ranuat intentionally slowing down the court proceedings in his defamation suit against Kangana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X