»   » ಮಲ್ಲಿಕಾ ಶೆರಾವತ್ ಮದುವೆಗೆ ರಿಯಾಲಿಟಿ ಶೋ

ಮಲ್ಲಿಕಾ ಶೆರಾವತ್ ಮದುವೆಗೆ ರಿಯಾಲಿಟಿ ಶೋ

Posted By:
Subscribe to Filmibeat Kannada

ಈಗ ರಿಯಾಲಿಟಿ ಶೋಗಳ ಜಮಾನಾ. ಮದುವೆಗೊಂದು ರಿಯಾಲಿಟಿ ಶೋ, ಡೈವೋರ್ಸ್ ಗೊಂದು, ಮಕ್ಕಳಾಗೋದಕ್ಕೆ ಇನ್ನೊಂದು ಸ್ಟಾಪ್ ಸ್ಟಾಪ್ ಸ್ಟಾಪ್ ಕೊನೆಯ ಎರಡು ರಿಯಾಲಿಟು ಶೋಗಳು ಇನ್ನೂ ಬಂದಿಲ್ಲ ಬಿಡಿ. ಮುಂದೆ ಬರಲೂ ಬಹುದೋ ಏನೋ.

ಈಗ ವಿಷಯ ಅದಲ್ಲ. ಬಾಲಿವುಡ್ ನಿಂದಲೂ, ಐಟಂ ಸಾಂಗ್ ಗಳಿಂದಲೂ ಕಾಣೆಯಾಗಿರುವ ಮಲ್ಲಿಕಾ ಶೆರಾವತ್ ಎಲ್ಲಿ ಹೋದರು. ಕಳೆದ ಕೆಲ ತಿಂಗಳಿಂದ ಅವರ ಸುದ್ದಿಯೇ ಇಲ್ಲದಂತಾಗಿದೆ. ಈಗ ಅವರು ರಿಯಾಲಿಟಿ ಶೋ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಅಬ್ಬಾ ಮಲ್ಲಿಕಾ ಶೆರಾವತ್ ಕಡೆಗೂ ಪತ್ತೆಯಾದರಲ್ಲಾ. ಇಲ್ಲದಿದ್ದರೆ ಅವರ ಅಭಿಮಾನಿಗಳು ಪೊಲೀಸ್ ಕಂಪ್ಲೇಂಟ್ ಕೊಡುವುದೊಂದು ಬಾಕಿ ಇತ್ತು ನೋಡಿ. ಮಲ್ಲಿಕಾ ವಯಸ್ಸು ಈಗ 36ರ ಪ್ರಾಯ. ಸರ್ಕಾರಿ ಲೆಕ್ಕದ ಪ್ರಕಾರ ಅದ್ಯಾವಾಗಲೋ ಮದುವೆ ವಯಸ್ಸು ಮೀರಿದೆ.

ಲೈಫ್ ಪಾರ್ಟನರ್ ಗಾಗಿ ಮಲ್ಲಿಕಾ ಶೋ

ಆದರೂ ವಯಸ್ಸು ಮೀರಿದ ಮೇಲೆ ಅವರಿಗೆ ಬುದ್ಧಿ ಬಂದಂತಿದೆ. ರಿಯಾಲಿಟಿ ಶೋ ಮೂಲಕ ವರನನ್ನು ಹುಡುಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 'ಲೈಫ್ ಓಕೆ' ವಾಹಿನಿಯ "The Bachelorette India - Mere Khayalon Ki Mallika" ಎಂಬ ಕಾರ್ಯಕ್ರಮದ ಮೂಲಕ ಕಿರುತೆರೆ ವಾಹಿನಿಗೆ ಅಡಿಯಿಡುತ್ತಿದ್ದಾರೆ.

ಯುಎಸ್ ರಿಯಾಲಿಟಿ ಶೋ ಸ್ಫೂರ್ತಿ

ಇದೇನೂ ಒರಿಜಿನಲ್ ರಿಯಾಲಿಟಿ ಶೋ ಅಲ್ಲ ಬಿಡಿ. ಯುಎಸ್ ನ ಕಿರುತೆರೆ ಕಾರ್ಯಕ್ರಮ 'ದಿ ಬ್ಯಾಚುಲರ್' ಕಾರ್ಯಕ್ರಮದ ನಕಲು ಎನ್ನಿ ಅಥವಾ ಸ್ಫೂರ್ತಿ ಎಂದು ಭಾವಿಸಬಹುದು. ಈಗ ಮಲ್ಲಿಕಾ ಈ ಕಾರ್ಯಕ್ರಮದ ಮೂಲಕ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಆತನೊಂದಿಗೆ ಡೇಟಿಂಗ್. ಒಪ್ಪಿಗೆಯಾದರೆ ಹಾರ ಬದಲಾಯಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ದೋಸ್ತಿ ಖತಮ್.

ಹುಡುಗ ನನಗೆ ಒಳ್ಳೆಯ ಗೆಳೆಯನಾಗಿರಬೇಕು

ಈ ಕಾರ್ಯಕ್ರಮದ ಬಗ್ಗೆ ಜಿಲೇಬಿ ಗರ್ಲ್ ಮಲ್ಲಿಕಾ ಮಾತನಾಡುತ್ತಾ, "ಹುಡುಗ ನನಗೆ ಹೇಳಿ ಮಾಡಿಸಿದಂತಿರಬೇಕು. ವಿದ್ಯಾವಂತನಾಗಿರಬೇಕು. ಎಲ್ಲರಿಗಿಂತಲೂ ಉತ್ತಮನಾಗಿರಬೇಕು. ನನ್ನನು ಪ್ರೀತಿಸುವುದಕ್ಕಿಂತಲೂ ಒಳ್ಳೆಯ ಗೆಳೆಯನಾಗಿರಬೇಕು" ಎಂದಿದ್ದಾರೆ.

ನನ್ನ ಕೈಹಿಡಿಯುವವ ಅಂಜದ ಗಂಡಾಗಿರಬೇಕು

ಮಲ್ಲಿಕಾ ಬಯಸಿರುವ ಹುಡುಗ ಸಿಗುವುದು ಕಷ್ಟ ಅನ್ನಿಸುತ್ತದೆ. ಆದರೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲವಲ್ಲಾ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಪುರುಷರೆಂದರೆ ಮಲ್ಲಿಕಾಗೆ ಇಷ್ಟವಂತೆ. ತಮ್ಮ ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ಹೇಳಲು ಅಂಜದ ಗಂಡಾಗಿರಬೇಕು. ಈ ರಿಯಾಲಿಟಿ ಶೋ ಮೂಲಕ ತನ್ನ ಮನ ಮೆಚ್ಚಿದ ಹುಡುಗ ಸಿಗುತ್ತಾನೆ ಎಂದು ಮಲ್ಲಿಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೈಫ್ ಓಕೆ ವಾಹಿನಿಯಿಂದ ಮತ್ತೊಂದು ಕೊಡುಗೆ

ಲೈಫ್ ಓಕೆ ವಾಹಿನಿಯ ಪ್ರಧಾನ ವ್ಯವಸ್ಥಾಪಕ ಅಜಿತ್ ಠಾಕೂರ್ ಮಾತನಾಡುತ್ತಾ, "ತಮ್ಮ ವಾಹಿನಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಈ ಬಗ್ಗೆ ತಮಗೆ ಹೆಮ್ಮೆ ಇದೆ. ಈಗಾಗಲೆ ತಮ್ಮ ವಾಹಿನಿ ಇದೇ ರೀತಿಯ ಹಲವಾರು ಕಾರ್ಯಕ್ರಮಗಳನ್ನು 25 ದೇಶಗಳಲ್ಲಿ ನಿರ್ವಹಿಸಿದ ಯಶಸ್ವಿಯಾಗಿದೆ.

ಇದೊಂದು ಅತ್ಯುತ್ತಮ ಮನರಂಜನಾ ಕಾರ್ಯಕ್ರಮ

ಈ ಕಾರ್ಯಕ್ರಮ ಮಲ್ಲಿಕಾ ಅವರಿಗೆ ನಿಜವಾದ ಬಾಳಸಂಗಾತಿಯನ್ನು ಹುಡುಕಿಕೊಡುವಲ್ಲಿ ಸಹಕಾರಿಯಾಗುತ್ತದೆ. ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳಿಗೆ ಹೆಸರಾಗಿರುವ ಲೈಫ್ ಓಕೆ ವಾಹಿನಿ ಈ ಕಾರ್ಯಕ್ರಮ ಮೂಲಕ ಮತ್ತೊಂದು ಮೈಲುಗಲ್ಲು ತಲುಪಲಿದೆ ಎಂದಿದ್ದಾರೆ.

ಆಗಸ್ಟ್ ತಿಂಗಳಿಂದ ಶೋ ಪ್ರಾರಂಭ?

ಈ ಕಾರ್ಯಕ್ರಮ ಎಂದಿನಿಂದ, ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಬಹುಶಃ ಆಗಸ್ಟ್ ತಿಂಗಳಿಂದ ಆರಂಭವಾಗಬಹುದು. 'ಮರ್ಡರ್' ಬೆಡಗಿ ಮಲ್ಲಿಕಾಗೆ ಮನ ಮೆಚ್ಚಿದ ಹುಡುಗ ಸಿಗಲಿ ಎಂದು ಹಾರೈಸೋಣ.

English summary
Bollywood actress Mallika Sherawat to find her Mr. Right through a television show. The actress will feature in "The Bachelorette India - Mere Khayalon Ki Mallika", which will air on Life OK is expected to go on air in August.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada