ಪ್ರೇಮ್ ಮಾತು ಕೇಳಿ 'ಕೆಡಿ'ಗಾಗಿ ಸೆರಗು ಸರಿಸಿದ ತಪ್ಪಿಗೆ ನೋರಾ ಫತೇಹಿ ವಿರುದ್ಧ ಫತ್ವಾ
ಸೃಜನಾತ್ಮಕ ಸ್ವಾತಂತ್ಯ್ರ ಮತ್ತು ಧಾರ್ಮಿಕ ಭಾವನೆಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇದಕ್ಕೆ ಕಾರಣಗಳು ಬೇರೆ ಬೇರೆಯಾದರೂ ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆಯಾದಾಗ ಈ ವಿವಾದ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಲ್ಲ. ಬದಲಿಗೆ ದೇಶವ್ಯಾಪಿ ಆಕ್ರೋಶದ ಕಿಚ್ಚು ಧಗಧಗಿಸುತ್ತೆ. ಸದ್ಯ ಇಂತಹದ್ದೇ ಒಂದು ಕಿಚ್ಚು ಹೊತ್ತಿಸಿದ ಅಪಕೀರ್ತಿಗೆ ಪ್ರೇಮ್ ಪಾತ್ರರಾಗಿದ್ದಾರೆ.
''ಕೆಡಿ'' ಚಿತ್ರದ 'ಸರಸೆ ನಿನ್ನ ಸೆರಗಾ'' ಹಾಡು ಸದ್ಯ ಹಲವರನ್ನು ಕೆರಳಿಸಿದೆ. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎಂಬಂತೆ ಹಾಡು ಯೂಟ್ಯೂಬ್ ಸೇರಿ ಬೇರೆ ಡಿಜಿಟಲ್ ವೇದಿಕೆಯಲ್ಲಿ ಡಿಲೀಟ್ ಆಗಿದ್ದರು ಕೂಡ ಆಕ್ರೋಶದ ಅಲೆ ಮಾತ್ರ ಕಡಿಮೆಯಾಗಿಲ್ಲ.

ಹಲವರು ಈಗಲೂ ಪ್ರೇಮ್ ವಿರುದ್ಧ ಕೆರಳಿ ಕೆಂಡವಾಗುತ್ತಿದ್ದಾರೆ. ಪ್ರೇಮ್ ಸಾಹಿತ್ಯಾಭಿರುಚಿಯ ಚರ್ಚೆ ಮಾಡುತ್ತಿದ್ದಾರೆ. ಇನ್ನೂ ನಿಮಗೆ ಗೊತ್ತು. ಆ ಹಾಡಿಗೆ ಕುಣಿಯಲು ಲಕ್ಷಾಂತರ ರೂಪಾಯಿ ಪಡೆದ ನೋರಾ ಫತೇಹಿ ಸದ್ಯ ಪ್ರೇಮ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಾನು ಅವತ್ತೇ ಬಡ್ಕೊಂಡೇ ನನ್ನ ಮಾತನ್ನು ಯಾರು ಕೇಳಲಿಲ್ಲ ಎಂದು ಹೇಳಿದ್ದಾರೆ. ನನಗೆ ಕನ್ನಡ ಗೊತ್ತಿಲ್ಲ, ಸಾಹಿತ್ಯ ಅರ್ಥ ಆಗಲಿಲ್ಲ, ಎಂದೆಲ್ಲಾ ಹೇಳಿ ಡ್ಯಾಮೇಜ್ ಆದ ತಮ್ಮ ಇಮೇಜ್‌ನ ಸರಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.
ಕೇವಲ ನೋರಾ ಮಾತ್ರವಲ್ಲ ಹಿಂದಿಯಲ್ಲಿ ಹಾಡು ಬರೆದ ರಕೀಬ್ ಆಲಂ ಕೂಡ ತಪ್ಪು ಪ್ರೇಮ್ ಅವರದ್ದೇ ಎಂದು ಹೇಳಿದ್ದಾರೆ. ಹಿಂದಿಯಲ್ಲಿ ಹಾಡನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಾನು ಆರಂಭದಲ್ಲೇ ಹೇಳಿದ್ದೆ, ಆದರೆ ಅವರು ಕೇಳಲಿಲ್ಲ ಎಂದಿರುವ ರಕೀಬ್ ನಾನು ಹಾಡು ಬರೆದಿಲ್ಲ ಕೇವಲ ಕನ್ನಡದಿಂದ ಹಿಂದಿಗೆ ಅನುವಾದ ಮಾತ್ರ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ವಿವಾದದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ತಮ್ಮಿಂದ ದುಡ್ಡು ಪಡೆದು ತಮ್ಮ ವಿರುದ್ಧವೇ ತಿರುಗಿ ಬಿದ್ದ ಈ ಬಾಲಿವುಡ್‌ನವರನ್ನು ಕಂಡು ಪ್ರೇಮ್ ಕೂಡ ಬೆಚ್ಚಿ ಬಿದ್ದಿದ್ಧಾರೆ. ಬೇರೆ ದಾರಿ ಇಲ್ಲದೇ ಕ್ಷಮೆ ಕೇಳಿದ್ಧಾರೆ. ಹಿಂದಿಯಲ್ಲಿ ಹಾಡಿಗೆ ಸಾಹಿತ್ಯ ಬರೆದ ರಕೀಬ್ ಅಲಂ ಹಾಗೂ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನೋರಾ ಫತೇಹಿ ಯಾಕೆ ಆ ರೀತಿ ಮಾತನಾಡಿದ್ರೋ ಗೊತ್ತಿಲ್ಲ. ಮುಂದೆ ನಾನು ಈ ಹಾಡಿಗೆ ಹೊಸದಾಗಿ ಸಾಹಿತ್ಯ ಬರೆದು ಸಾಂಗ್ ರೆಕಾರ್ಡ್ ಮಾಡಿ ರಿಲೀಸ್ ಮಾಡ್ತೀನಿ ಎಂದು ಶಪಥ ಕೂಡ ಮಾಡಿದ್ದಾರೆ.
ಇಷ್ಟೆಲ್ಲ ಆದರೂ ಕೂಡ ಸದ್ಯ ಈ ವಿವಾದ ತಣ್ಣಗಾಗುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಸದ್ಯ ಅಲಿಗಢದ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆ, ಕನ್ನಡದ ''ಕೆಡಿ'' ವಿರುದ್ಧ ಕಿಡಿ ಕಾರಿದೆ. ಇಷ್ಟೇ ಅಲ್ಲ ಪ್ರೇಮ್ ಮಾತನ್ನು ಕೇಳಿ ''ಕೆಡಿ''ಗಾಗಿ ಸೆರಗು ಸರಿಸಿದ ತಪ್ಪಿಗೆ ನೋರಾ ಫತೇಹಿ ವಿರುರ್ದಧ ಫತ್ವಾ ಹೊರಡಿಸಿದೆ. ಹಾಡಿನಲ್ಲಿ ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾದ ಮತ್ತು ಆಕ್ಷೇಪಾರ್ಹ ವಿಷಯಗಳಿವೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ.ಅಶ್ಲೀಲತೆಯನ್ನು ಉತ್ತೇಜಿಸುವ ಹಾಡಿದು ಎಂದು ಆಕ್ರೋಶವನ್ನು ಹೊರ ಹಾಕಿದೆ.

ಒಟ್ನಲ್ಲಿ ಸದ್ಯ ''ಕೆಡಿ'' ಹಾಡು ಇಡೀ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಲೋಕಸಭೆಯಲ್ಲಿ ಕೂಡ ಈ ಹಾಡಿನ ಕುರಿತು ಚರ್ಚೆಯಾಗಿದೆ ಅಂದರೆ ನೀವೆ ಲೆಕ್ಕ ಹಾಕಿ. ಸದ್ಯ ಈ ಏಪ್ರಿಲ್ 30ರಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಆದರೆ ಈ ವಿವಾದ ಮುಳುಗುವಾಗುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಚಾರಕ್ಕೆ ಪ್ರೇಮ್ ಮುಂಬೈ ಅಥವಾ ಬೇರೆ ಕಡೆ ಹೋದರೆ ಅಲ್ಲಿನ ಪತ್ರಕರ್ತರು ಪ್ರೇಮ್‌ಗೆ ಸಾಹಿತ್ಯದ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಕೂಡ ಇದೆ.


Click it and Unblock the Notifications











