'ಕೆಡಿ' ಹಾಡಿನ ಸಾಹಿತ್ಯ ವಿವಾದ; ಪ್ರೇಮ್ ವಿರುದ್ಧ ದೂರು ದಾಖಲು, ನೋಟಿಸ್ ಜಾರಿ
ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರದ ಹಾಡು ವಿವಾದಕ್ಕೆ ಕಾರಣವಾಗಿದೆ. ಅರ್ಜುನ್ ಜನ್ಯಾ ಸಂಗೀತದ ಹಾಡಿನಲ್ಲಿ ಬಾಲಿವುಡ್ ಸುಂದರಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಹಿಂದಿಯಲ್ಲಿ ಕೂಡ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
'ಸರ್ಸೆ ನಿನ್ನ ಸೆರಗ' ಎಂದು ಶುರುವಾಗುವ ಹಾಡಿಗೆ ಕನ್ನಡದಲ್ಲಿ ಜೋಗಿ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಅಸಭ್ಯ ಎನಿಸುವ ಸಾಲುಗಳು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಇನ್ನು ಹಿಂದಿಯಲ್ಲಿ ಕೂಡ ಹಾಡಿನ ಸಾಹಿತ್ಯ ವಿವಾದಕ್ಕೀಡಾಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಹಿಂದಿಯಲ್ಲಿ 'ಸರ್ಕೆ ಚುನಾರ್' ಎಂದು ಹಾಡು ಶುರುವಾಗುತ್ತದೆ. ಈ ಅಶ್ಲೀಲ ಮತ್ತು ಅಸಭ್ಯ ಹಾಡಿನ ಬಗ್ಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತೆ ವಿನೀತ್ ಜಿಂದಾಲ್ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ನೋರಾ ಫತೇಹಿ, ಸಂಜಯ್ ದತ್, ಹಿಂದಿ ಗೀತರಚನೆಕಾರ ರಕೀಬ್ ಆಲಂ ಮತ್ತು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 294 ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸುವುದರ ಜೊತೆಗೆ, ಹಾಡನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇದೀಗ 'KD' ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
'ಸರ್ಕೆ ಚುನಾರ್' ಹಾಡಿನಲ್ಲಿ ಆಕ್ಷೇಪಾರ್ಹ ಮತ್ತು ಡಬಲ್ ಮೀನಿಂಗ್ ಸಾಹಿತ್ಯ ಇರುವುದು ಸಿನಿರಸಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿವಾದ ತಾರಕ್ಕಕ್ಕೆ ಏರುತ್ತಿದ್ದಂತೆ ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಕೆಡಿ' ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ 4 ಹಾಡುಗಳು ಬಿಡುಗಡೆ ಆಗಿದೆ. ಮೊದಲ 3 ಹಾಡುಗಳು ಹಿಟ್ ಲಿಸ್ಟ್ ಸೇರಿತ್ತು. ಆದರೆ ಸ್ಪೆಷಲ್ ಸಾಂಗ್ ಮಾತ್ರ ನಿರಾಸೆ ಮೂಡಿಸಿದೆ. ಜೊತೆಗೆ ಟೀಕೆಗೆ ಗುರಿಯಾಗಿ ಈಗ ವಿವಾದ ಹುಟ್ಟಾಕ್ಕಿದೆ. ಕನ್ನಡದಲ್ಲಿ ಐಶ್ವರ್ಯ ರಂಗರಾಜನ್ ಹಾಡು ಹಾಡಿದ್ದಾರೆ. ತಮಿಳಿನಲ್ಲಿ ರಾಜಲಕ್ಷ್ಮಿ ಸೆಂಥಿಲ್‌ಗಣೇಶನ್, ಮಲಯಾಳಂನಲ್ಲಿ ಸಿತಾರ ಕೃಷ್ಣ ಕುಮಾರ್ ಹಾಗೂ ಹಿಂದಿ ಹಾಗೂ ತೆಲುಗಿನಲ್ಲಿ ಮಂಗ್ಲಿ ಹಾಡಿಗೆ ದನಿಯಾಗಿದ್ದಾರೆ.
ಚಿತ್ರದಲ್ಲಿ 60-70ರ ದಶಕದ ಭೂಗತ ಲೋಕದ ಕಥೆಯನ್ನು ಪ್ರೇಮ್ ಕಟ್ಟಿಕೊಟ್ಟಿದ್ದಾರೆ. ಕಾಳಿದಾಸ ಎಂಬ ಪಾತ್ರದಲ್ಲಿ ಧ್ರುವ ಅಬ್ಬರಿಸುತ್ತಿದ್ದಾರೆ. 4 ವರ್ಷಗಳ ಹಿಂದೆ ಸೆಟ್ಟೇರಿದ್ದ 'ಕೆಡಿ' ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾ ಮೂಲಕ ನೋರಾ ಫತೇಹಿ ಕನ್ನಡದಕ್ಕೆ ಬಂದಂತಾಗಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸೆಟ್ ಹಾಕಿ ಸಾಂಗ್ ಶೂಟ ಮಾಡಲಾಗಿದೆ. ರಾಜು ಸುಂದರಂ ಮಾಸ್ಟರ್ ಈ ಸ್ಪೆಷಲ್ ಸಾಂಗ್‌ಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಕೆಡಿ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹವಾ ಎಬ್ಬಿಸಲು ಮುಂದಾಗಿದ್ದಾರೆ. ಕೆವಿಎನ್ ಸಂಸ್ಥೆ ಅದಕ್ಕೆ ಸಾಥ್ ಕೊಟ್ಟಿದೆ. ಶೀಘ್ರದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಪ್ರಚಾರ ಆರಂಭಿಸುವ ಪ್ರಯತ್ನ ನಡೀತಿದೆ.


Click it and Unblock the Notifications











