'ಬೇಡುವೆನು ವರವನ್ನು' To 'ಸರ್ಸೆ ನಿನ್ನ ಸೆರಗ'; ಮೊದಲ ಬಾರಿ ಸೋತ ಪ್ರೇಮ್, ವ್ಯಾಪಕ ಆಕ್ರೋಶ
ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಆಲ್ಬಮ್ ಅಂತೂ ಹಿಟ್ ಆಗಿಬಿಡುತ್ತದೆ. ಹಾಡುಗಳ ವಿಚಾರದಲ್ಲಿ ಪ್ರೇಮ್ ಅವರಿಗೆ ಸಿನಿಪ್ರೇಮಿಗಳ ನಾಡಿಮಿಡಿತ ಚೆನ್ನಾಗಿ ಗೊತ್ತು. ಒಳ್ಳೆ ಟ್ಯೂನ್ ಹಾಕಿಸಿ ಅದಕ್ಕೆ ಒಪ್ಪುವ ಸಾಹಿತ್ಯ ಬರೆದು ಅಥವಾ ಬರೆಸಿ ಆಲ್ಬಮ್ ಹಿಟ್ ಮಾಡಿಬಿಡುತ್ತಾರೆ. ಅದು ದೇವರ ಗೀತೆ ಆಗಿರಲಿ, ಮಾಸ್, ಕ್ಲಾಸ್, ರೊಮ್ಯಾಂಟಿಕ್, ಫ್ಯಾಥೋ ಹೀಗೆ ಯಾವುದೇ ಆಗಿರಲಿ. ಪ್ರೇಮ್ ಮಾರ್ಕ್ ಇರುತ್ತದೆ.
ಧ್ರುವ ಸರ್ಜಾ ಜೊತೆ ಪ್ರೇಮ್ 'KD' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಚಿತ್ರದ 4 ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದೆ. 'ಶಿವ ಶಿವ' ಎಂಬ ಮಾಸ್ ಸಾಂಗ್, 'ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ' ಎನ್ನುವ ಬಿಂದಾಸ್ ಡ್ಯಾನ್ಸಿಂಗ್ ನಂಬರ್ ಜೊತೆಗೆ 'ಅಣ್ತಮ್ಮ ಜೋಡೆತ್ತು' ಅಂತ ಶುರುವಾಗುವ ಮೆಲೋಡಿ ಟ್ರ್ಯಾಕ್ ಕೂಡ ಹಿಟ್ ಆಗಿದೆ. ಪ್ರೇಮ್ ಮ್ಯೂಸಿಕ್ ಮ್ಯಾಜಿಕ್ ಹೇಗಿರುತ್ತೆ ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿತ್ತು. ಆದರೆ ಇತ್ತೀಚೆಗೆ ಬಂದಿರೋ ಸ್ಪೆಷಲ್ ಸಾಂಗ್ ಮಾತ್ರ ನಿರಾಸೆ ಮೂಡಿಸಿದೆ.

ಬಾಲಿವುಡ್ ನಟಿ ನೋರಾ ಫತೇಹಿ ಹೆಜ್ಜೆ ಹಾಕಿರುವ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆ ಆಗಿತ್ತು. ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ನಡೆದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಧ್ರುವ, ಪ್ರೇಮ್ ಜೊತೆಗೆ ನೋರಾ ಕೂಡ ಭಾಗಿ ಆಗಿದ್ದರು. ಕನ್ನಡದಲ್ಲಿ ಐಶ್ವರ್ಯ ರಂಗರಾಜನ್ ಈ ಹಾಡಿಗೆ ದನಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಹಾಡಿಗೆ ಸ್ವತಃ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಈ ಬಗ್ಗೆ ಬಹಳ ಟೀಕೆ ವ್ಯಕ್ತವಾಗುತಿದೆ. ಪ್ರೇಮ್ ಅವರಿಂದ ಇಂತಹ ಹಾಡು, ಸಾಹಿತ್ಯ ನಿರೀಕ್ಷೆ ಮಾಡಿರಲಿಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.
ಇದೇ ಪ್ರೇಮ್ 'ಬೇಡುವೆನು ವರವನ್ನು' ರೀತಿಯ ಅದ್ಭುತ ಗೀತೆಗಳನ್ನು ಬರೆದಿದ್ರಾ? ಇಂದೆಂತಹ ಹಾಡು, ಇದೆಂಥ ಸಾಹಿತ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಡಿನ ಮೊದಲ ಸಾಲು, ಅದಕ್ಕೆ ಮಾಡಿಸಿರುವ ಡ್ಯಾನ್ಸ್ ಸ್ಟೆಪ್ಸ್ ಅತಿಯಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಡಬಲ್ ಮೀನಿಂಗ್ ಸಾಲುಗಳು, ಅಶ್ಲೀಲ ಸಾಹಿತ್ಯ ಅಂತೆಲ್ಲಾ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ. ಮೇಲೆತ್ತಿ ಕೆಳಗೆ ಇಳಿಸಿ..ತುತಿಕ್ದಂಗ್ ಒಳಗೆ ಇಳಿಸಿ.. ಒಳಗೋಗಿ ಹೊರಗೆ ಬಂದ್ರೆ ಖಾಲಿ.. ಮೈಮೇಲಂತು ಚಲ್ ಬೇಡ್ರಪ್ಪ ಬೇಜಾರ್ ಆಯ್ತದೆ, ಮನೇಗೋದ್ರೆ ನಿನ್ನ ಗುಟ್ಟು ರಟ್ಟು ಆಯ್ತದೆ. ಇಲ್ಲೇ ನೆಕ್ಕೊಂಡ್ ಹೋಗ್ಬೇಡಿ.. ಇಲ್ಲೆ ಒರ್ಸ್ಬುಡಿ.. ಕೈಯಲ್ ಬಾಟ್ಲಂತು ಮನೆತಂಕ ತಗೊಂಡೋಗ್ಬೇಡಿ" ಎನ್ನುವ ಸಾಹಿತ್ಯ ಬಹಳ ಕೆಟ್ಟದಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
4 ವರ್ಷಗಳ ಹಿಂದೆ ಶುರುವಾಗಿದ್ದ 'KD' ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಟೀಸರ್, ಸಾಂಗ್ಸ್ ಎಲ್ಲವೂ ರಿಲೀಸ್ ಆಗಿದೆ. 'ಸರ್ಸೆ ನಿನ್ನ ಸೇರಗ ಸರ್ಸೆ' ಸಾಂಗ್‌ನಲ್ಲಿ ಸೋರಾ ಫತೇಹಿ ಜೊತೆ ಬಾಲಿವುಡ್ ನಟ ಸಂಜಯ್ ದತ್ ಹೆಜ್ಜೆ ಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಸಾಥ್ ಸಿಕ್ಕಿದೆ. ಅದ್ಧೂರಿಯಾಗಿ ಸೆಟ್ ಹಾಕಿ ಸಾಂಗ್ ಶೂಟ್ ಮಾಡಲಾಗಿದೆ.
ಧ್ರುವ ಸರ್ಜಾ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರವಿಚಂದ್ರನ್, ರಮೇಶ್ ಅವರಿಂದ್, ಶಿಲ್ಪಾ ಶೆಟ್ಟಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ 'KD' ಚಿತ್ರ ನಿರ್ಮಾಣವಾಗಿದೆ ಎನ್ನಲಾಗ್ತಿದೆ.


Click it and Unblock the Notifications











