ಮುಂಬೈ ಭೂಗತ ಜಗತ್ತಿನ ಮೇಲೆ ವರ್ಮಾ ಮತ್ತೆ ಕಣ್ಣು
ಬಾಲಿವುಡ್ ಚಿತ್ರರಂಗದಲ್ಲಿ ಒಂದು ರೀತಿ ಹೊಸ ಭಾಷ್ಯೆ ಬರೆದ ಚಿತ್ರ 'ಸತ್ಯ'. ಭೂಗತ ಕಥಾಹಂದರದ ಈ ಚಿತ್ರದ ಮೇಕಿಂಗ್ ಗೆ ಮರುಳಾಗದವರಿಲ್ಲ. 1998ರಲ್ಲಿ ತೆರೆಕಂಡ ಈ ಚಿತ್ರ ಇಂದಿಗೂ ಮಾದರಿ ಚಿತ್ರ.
ಜೆ.ಡಿ.ಚಕ್ರವರ್ತಿ, ಊರ್ಮಿಳಾ ಮಾತೋಂಡ್ಕರ್, ಮನೋಜ್ ಬಾಜ್ ಪೇಯಿ ಹಾಗೂ ಶೆಫಾಲಿ ಷಾ ಅಭಿನಯದ ಈ ಚಿತ್ರ ಬಾಲಿವುಡ್ ನ ಅಪರೂಪದ ಚಿತ್ರಗಳ ಸಾಲಿಗೆ ಸೇರಿದೆ. ಈಗ ಅದರ ಮುಂದುವರಿದ ಭಾಗವಾಗಿ 'ಸತ್ಯ 2' ಚಿತ್ರಗೆ ಬರಲು ಸಿದ್ಧವಾಗುತ್ತಿದೆ.
ಈ ಬಾರಿ ಪಾರ್ಟ್ 2ನಲ್ಲಿ ಹೊಸಬ ಶೆರ್ವಾನಂದ್ ಎಂಬುವವರನ್ನು ಪರಿಚಯಿಸುತ್ತಿದ್ದಾರೆ ವರ್ಮಾ. ಈ ಬಾರಿಯ ಕಥೆ ಒಂಥರಾ ಇಂಟರೆಸ್ಟಿಂಗ್ ಆಗಿದೆ. ಮುಂಬೈ ಭೂಗತ ಸಾಮ್ರಾಜ್ಯವನ್ನು ಆಳುವ ಚೋಟಾ ರಾಜನ್, ದಾವೂದ್ ಇಬ್ರಾಹಿಂ ಹಾಗೂ ಅಬೂ ಸಲೇಂಗೆ ಪ್ರಬಲ ಸ್ಪರ್ಧಿ ಹುಟ್ಟಿಕೊಳ್ಳಲಿದ್ದಾನೆ.
ಅದೆಲ್ಲಾ ಸರಿ ಮುಂಬೈ ಭೂಗತ ಜಗತ್ತು ಇನ್ನೂ ಆಕ್ಟೀವ್ ಆಗಿದೆಯೇ? ಕಾಲಕ್ಕೆ ತಕ್ಕಂತೆ ಭೂಗತ ಜಗತ್ತಿನ ಕರಾಳ ಹಸ್ತಗಳು ವಿಸ್ತರಿಸಿವೆ. ಮುಂಬೈ ಭೂಗತ ಜಗತ್ತು ಇನ್ನೂ ಸತ್ತಿಲ್ಲ. ಬೇರೆ ಬೇರೆ ರೂಪಗಳಲ್ಲಿ ತನ್ನ ಹಸ್ತಗಳನ್ನು ಚಾಚಿರುವುದನ್ನು ಈ ಬಾರಿಯ 'ಸತ್ಯ 2' ಚಿತ್ರ ಬೆಳಕು ಬೀರಲಿದೆ ಎನ್ನಲಾಗಿದೆ.
ಈಗಾಗಲೆ ಬಿಡುಗಡೆಯಾಗಿರುವ ಟ್ರೇಲರ್ ಕೂಡ ಕುತೂಹಲ ಮೂಡಿಸಿದೆ. ವಿಕ್ರಮ್ ಬಿಸ್ವಾಸ್ ಅವರ ಸಂಗೀತ, ವಿಕಾಸ್ ಸರಫ್ ಅವರ ಛಾಯಾಗ್ರಹಣವಿರುವ ಚಿತ್ರವನ್ನು ಮಮ್ಮೂತ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈ.ಲಿ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ನಿಮ್ಮ ಮುಂದೆ. (ಏಜೆನ್ಸೀಸ್)


Click it and Unblock the Notifications












