»   » 'ಬಾಜಿರಾವ್ ಮಸ್ತಾನಿ' ಟ್ರೈಲರ್: 10 ಕಣ್ಸೆಳೆಯುವ ಅಂಶಗಳು

'ಬಾಜಿರಾವ್ ಮಸ್ತಾನಿ' ಟ್ರೈಲರ್: 10 ಕಣ್ಸೆಳೆಯುವ ಅಂಶಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಜಮೌಳಿ ಅವರ 'ಬಾಹುಬಲಿ' ಎಂಬ ಕಾಲ್ಪನಿಕ ಕಥೆಯುಳ್ಳ ಐತಿಹಾಸಿಕ ಚಿತ್ರದ ಗುಂಗಿನಲ್ಲಿ ಸಿನಿರಸಿಕರು ಮಿಂದೇಳುತ್ತಿರುವ ಸಂದರ್ಭದಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಐತಿಹಾಸಿಕ ಚಿತ್ರ 'ಬಾಜಿರಾವ್ ಮಸ್ತಾನಿ' ಮೊದಲ ಲುಕ್, ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ಮೂಲಕ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ವೈಭವೋಪೇತ ಚಿತ್ರಗಳ ಹೆಬ್ಬಾಗಿಲು ತೆರೆಯುವ ಸಾಧ್ಯತೆ ಕಂಡು ಬಂದಿದೆ. ಚಿತ್ರದ ಟ್ರೈಲರ್ ನಲ್ಲಿ ಕಂಡು ಬಂದ 10 ಪ್ರಮುಖ ಕಣ್ಸೆಳೆಯುವ ಅಂಶಗಳು ಇಲ್ಲಿವೆ.[ಮೋದಿಗೆ ಮನವಿ ಮಾಡಿಕೊಂಡ ಸಲ್ಲೂ 'ಭಾಯಿ ಜಾನ್']

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ರಾಜ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ. ಯುದ್ಧದ ಸೀನ್ ನೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಮರಾಠಾ ಯೋಧ 'ಬಾಜಿರಾವ್' ಆಗಿ ರಣವೀರ್ ಗಮನ ಸೆಳೆಯುತ್ತಾರೆ. ರಣವೀರ್ ಪ್ರೇಯಸಿಯಾಗಿ ದೀಪಿಕಾ ಕೂಡಾ ಕತ್ತಿವರಸ್ತೆ ಫೈಟ್ ಮಾಡಿದ್ದಾರೆ.['ಬಾಜಿರಾವ್ ಮಸ್ತಾನಿ' ಟ್ರೈಲರ್ ಸೂಪರ್]

ದೀಪಗಳ ಮಧ್ಯೆ ರಾಯಲ್ ಲುಕ್ ನಲ್ಲಿ ಕಣ್ಮುಂದೆ ಬರುವ ಪ್ರಿಯಾಂಕಾ ಚೋಪ್ರಾ ಅಪ್ಪಟ ಗೃಹಿಣಿಯಂತೆ ಬಾಜಿರಾವ್ ಮಡದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೇ ರಣವೀರ್ ಸ್ಟೈಲಿನಲ್ಲಿ ಹೇಳುವುದಾದರೆ ಒಬ್ಬಳು ಕಿಚಡಿ ಮತ್ತೊಬ್ಬಳು ಬಿರ್ಯಾನಿ. ಬಾಜಿರಾವ್ ಗೆ ಹಾಟ್ ಪತ್ನಿ ಹಾಗೂ ಹಾಟ್ ಗರ್ಲ್ ಫ್ರೆಂಡ್ ಸಿಕ್ಕಿದ್ದಾರೆ.

ಶಾರುಖ್ ಖಾನ್ ಅವರ ದಿಲ್ವಾಲೆ ಜೊತೆಗೆ ಡಿಸೆಂಬರ್ 18, 2015ರಲ್ಲಿ ಬಿಡುಗಡೆಯಾಗಲಿರುವ ಬಾಜಿರಾವ್ ಮಸ್ತಾನಿ ಸದ್ಯಕ್ಕೆ ತನ್ನ ಫಸ್ಟ್ ಲುಕ್ ಹಾಗೂ ಟ್ರೈಲರ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದೆ.

ಯುದ್ಧದ ದೃಶ್ಯಗಳ ಸಂಯೋಜನೆ

ಮರಾಠಾ ಯೋಧ 'ಬಾಜಿರಾವ್' ಲುಕ್ ನಲ್ಲಿ ರಣವೀರ್ ಸಿಂಗ್ ಕಣ್ಮನ ಸೆಳೆಯುತ್ತಾರೆ. ಟೀಸರ್ ನ ಮೊದಲ ಕೆಲ ಸೆಕೆಂಡುಗಳ ವೀಕ್ಷಕರನ್ನು ಹಿಡಿದಿಡುವಲ್ಲಿ ರಣವೀರ್ ಲುಕ್, ಸ್ಟೈಲ್, ವೀರಾವೇಶದ ನೋಟ ಸಫಲವಾಗಿದೆ.

ದೀಪಿಕಾ ರೌದ್ರಾವತಾರದ ನೋಟ

ದೀಪಿಕಾ ಪಡುಕೋಣೆ 'ಮಸ್ತಾನಿ' ಪಾತ್ರದಲ್ಲಿ ರೌದ್ರಾವತಾರದ ನೋಟ, ಕತ್ತಿ ಝಳಪಿಸುವ ರೀತಿ, ಮಗುವನ್ನು ಬೆನ್ನಿಗೆ ಹಾಕಿಕೊಂಡು ಯುದ್ಧ ಮಾಡುವ ದೃಶ್ಯ ಮೊದಲ ನೋಟಕ್ಕೆ ಸೆಳೆಯುತ್ತದೆ.

ಅಪ್ಪಟ ಮರಾಠಿ ದಿರಿಸಿನಲ್ಲಿ ಪ್ರಿಯಾಂಕಾ

ಅಪ್ಪಟ ಮರಾಠಿ ದಿರಿಸಿನಲ್ಲಿ ಪ್ರಿಯಾಂಕಾ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಬಾಜಿರಾವ್ ನ ಮಡದಿಯಾಗಿ ಮರಾಠಿ ಹೆಂಗಸಿನ ಪಾತ್ರದಲ್ಲಿ ಪ್ರಿಯಾಂಕಾ ಕಂಗೊಳಿಸಿದ್ದಾರೆ.

ದೃಶ್ಯ ವೈಭವ, ಅದ್ಭುತ ಸೆಟ್ ಗಳು

ಸಂಜಯ್ ಲೀಲಾ ಬನ್ಸಾಲಿ ಈ ಹಿಂದಿನ ದೇವದಾಸ್ ಸೇರಿದಂತೆ ತಮ್ಮ ಚಿತ್ರಗಳಲ್ಲಿ ಅದ್ಭುತ ಸೆಟ್, ದೊಡ್ಡ ದೊಡ್ಡ ಮಹಲುಗಳನ್ನು ತೋರಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದರು. ಈಗ ರಾಜ ಪರಿವಾರ, ಅರಮನೆ, ಐತಿಹಾಸಿಕ ನಗರಿಗಳ ನಿರ್ಮಾಣ, ಅಂದಿನ ಕಾಲದ ದೃಶ್ಯ ವೈಭವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಗಮನ ಸೆಳೆಯುವ ದೀಪಿಕಾ ಕಣ್ಣೋಟ

ದೀಪಿಕಾ ಲುಕ್ ಹಾಗೂ ಕಣ್ಣೋಟ ಗಮನಿಸಿದರೆ, ಕ್ರೌಂಚಿಂಗ್ ಟೈಗರ್ ಹಿಡನ್ ಡ್ರ್ಯಾಗನ್ ಚಿತ್ರದ ಮಹಿಳಾ ಪಾತ್ರಧಾರಿಗಳ ಶೌರ್ಯ ಪ್ರದರ್ಶನದ ಸೀನ್ ಗಳು ನೆನಪಿಗೆ ಬರುತ್ತವೆ. ದೀಪಿಕಾ ವೀರಯೋಧೆಯಂತೆ ಕಾಣುತ್ತಿದ್ದು ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಆ ಕಾಲದ ಉಡುಗೆ ತೊಡುಗೆ, ಆಭರಣ

ಮರಾಠರ ಉಡುಗೆ- ತೊಡುಗೆ, ಆಭರಣ, ವಸ್ತ್ರ ವಿನ್ಯಾಸ ಎಲ್ಲವೂ ಮೊದಲ ನೋಟಕ್ಕೆ ಸೆಳೆಯುತ್ತದೆ. ಪ್ರಿಯಾಂಕಾ-ರಣವೀರ್-ದೀಪಿಕಾ ಅವರು ವಿಶಿಷ್ಟವಾದ ದಿರಿಸಿನಿಂದ ಕಾಣಿಸಿಕೊಂಡಿದ್ದಾರೆ.

ಹಿನ್ನೆಲೆ ಸಂಗೀತದಲ್ಲೂ ಮಿಂಚಿದ ಸಂಜಯ್ ಲೀಲಾ ಬನ್ಸಾಲಿ

ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಹಿನ್ನಲೆ ಸಂಗೀತವನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಅವರು ಮಿಂಚಿದ್ದಾರೆ.

ಅಪೂರ್ವ ನೃತ್ಯ ವೈಭವ

ಬನ್ಸಾಲಿ ಅವರ ಚಿತ್ರದಲ್ಲಿ ಹಾಡು ನೃತ್ಯಕ್ಕೆ ಹೆಚ್ಚಿನ ಆದ್ಯತೆ ಇರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲೂ ಸಾಂಪ್ರದಾಯಿಕ ನೃತ್ಯ ಶೈಲಿಗಳ ಪರಿಚಯ ನಿಮಗೆ ಸಿಗುತ್ತದೆ. ಅಪೂರ್ವ ನೃತ್ಯ ವೈಭವವನ್ನು ಅಚ್ಚುಕಟ್ಟಾಗಿ ಸೆರೆ ಹಿಡಿಯಲಾಗಿದೆ.

ರಣವೀರ್ ಸಿಂಗ್ ಡೈಲಾಗ್ ಗಳು

ಚಿತ್ರದಲ್ಲಿ ಪಂಚಿಂಗ್ ಡೈಲಾಗ್ ಗಳು ಸಾಕಷ್ಟಿವೆ ಎಂದು ಬನ್ಸಾಲಿ ಸುಳಿವು ನೀಡಿದ್ದಾರೆ. ರಣವೀರ್ ಕೂಡಾ ತಮ್ಮ ಮ್ಯಾನರಿಸಂ ಬದಲಾಯಿಸಿಕೊಂಡು ಯೋಧನ ಪರಿಭಾಷೆಯಲ್ಲಿ 'ಬಾಜಿರಾವ್ ನೆ ಮಸ್ತಾನಿ ಸೆ ಮೊಹಬ್ಬತ್ ಕೀ ಹೇ, ಅಯ್ಯಾಷಿ ನಹಿ' ಎಂದು ಪ್ರೇಮಿಯಾಗಿ ಕೂಡಾ ಡೈಲಾಗ್ ಹೊಡೆದಿದ್ದಾರೆ.

ಬನ್ಸಾಲಿ ಅವರ ಕನಸಿನ ಚಿತ್ರ ಇದಾಗಿದೆ

ಬನ್ಸಾಲಿ ಅವರ ಕನಸಿನ ಚಿತ್ರ ಇದಾಗಿದ್ದು, ರಾಮ್ ಲೀಲಾ ನಂತರ ಮತ್ತೊಮ್ಮೆ ರಣವೀರ್- ದೀಪಿಕಾ ಜೋಡಿ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

English summary
Finally, the much awaited official teaser of Sanjay Leela Bhansali's magnum opus Bajirao Mastani has released and the team of Bajirao Mastani is inundated with the appreciations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada