Don't Miss!
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕರಿಯ'ನಿಗೆ 20 ವರ್ಷ: ಸಿನಿಮಾ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೆ?
'ಮೆಜೆಸ್ಟಿಕ್' ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದ ದರ್ಶನ್‌ಗೆ ಶಾಶ್ವತ ಮಾಸ್ ಹೀರೋ ಆಗಿ ಬ್ರ್ಯಾಂಡ್ ಮಾಡಿದ್ದು 'ಕರಿಯ' ಸಿನಿಮಾ. 'ಮೆಜಿಸ್ಟಿಕ್'ನ ಮೂಲಕ ಸೃಷ್ಟಿಯಾಗಿದ್ದ ದರ್ಶನ್‌ರ ಮಾಸ್ ಇಮೇಜನನ್ನು ಖಾಯಂ ಗೊಳಿಸಿದ್ದು 'ಕರಿಯ' ಸಿನಿಮಾ.
'ಕರಿಯ' ಸಿನಿಮಾ ದರ್ಶನ್ ಸ್ಟಾರ್ ನಟರಾಗಿ ಬದಲಾದರೆ, ನಿರ್ದೇಶಕರಾಗಿ ಪ್ರೇಮ್‌ಗೆ ಕನ್ನಡ ಚಿತ್ರರಂಗದಲ್ಲಿ ನೆಲೆ ಧಕ್ಕಿಸಿಕೊಟ್ಟ ಸಿನಿಮಾ. ಈ ಸಿನಿಮಾದ ಮೂಲಕ ಪ್ರೇಮ್ ಕನ್ನಡದ ಭರವಸೆಯ ನಟರಾಗಿ ನೆಲೆ ನಿಂತರು.
'ಕರಿಯ' ಸಿನಿಮಾ ಬಿಡುಗಡೆ ಆಗಿ ಇಂದಿಗೆ ಅಂದರೆ ಜನವರಿ 03, 2023 ಕ್ಕೆ 20 ವರ್ಷಗಳಾದವು. ಎರಡು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನವಾದ, ಈಗಲೂ ಕಲ್ಟ್ ಕ್ಲಾಸಿಕ್ ರೌಡಿಸಂ ಸಿನಿಮಾ ಎನಿಸಿಕೊಂಡಿರುವ ಈ ಸಿನಿಮಾದ ಹಿಂದೆ ಅಷ್ಟೇ ಕುತೂಹಲಕಾರಿ ಆಸಕ್ತಿದಾಯಕ ಕತೆಗಳಿವೆ.
'ಕರಿಯ' ಸಿನಿಮಾ ಮಾಡುವ ಮುನ್ನ ಪ್ರೇಮ್ ಹಲವು ನಿರ್ಮಾಪಕರ ಬಳಿ ಕತೆ ಹೇಳಿ ನೋ ಎನಿಸಿಕೊಂಡಿದ್ದರು. ಅವರ ಗೆಳೆಯ ಹಾಗೂ ಚಿತ್ರರಂಗದ ಅನುಭವವಿದ್ದ ಮೈ ಕೋ ನಾಗರಾಜ್ ಸಹ ನಿರ್ಮಾಣ ಮಾಡಲು ಮುಂದೆ ಬಂದು ಅನಿವಾರ್ಯ ಕಾರಣಗಳಿಂದ ಹಿಂದುಳಿದರು. ಕೊನೆಗೆ ಆನೆಕಲ್ ಬಾಲರಾಜ್ ಎಂಬುವರು ನಿರ್ಮಾಣ ಮಾಡಲು ಮುಂದು ಬಂದರು. ಮೈಕೋ ನಾಗರಾಜ್ ಸಹ ನಿರ್ಮಾಣಕ್ಕೆ ಬೆಂಬಲ ಸೂಚಿಸಿ ಪ್ರೇಮ್‌ಗೆ ಹಾಗೂ ಬಾಲಕರಾಜ್‌ಗೆ ಜೊತೆಯಾಗಿ ನಿಂತರು.

27 ಮಂದಿ ನಿಜವಾದ ರೌಡಿಗಳಿಂದ ನಟನೆ!
'ಕರಿಯ' ಸಿನಿಮಾದಲ್ಲಿ 27 ಮಂದಿ ನಿಜವಾದ ರೌಡಿಗಳು ನಟಿಸಿದ್ದಾರೆ. ಕೆಲವರಿಗೆ ಬೇಲ್ ನೀಡಿ ಜೈಲಿನಿಂದ ನೇರ ಶೂಟಿಂಗ್ ಸೆಟ್‌ಗೆ ಕರೆತಂದಿದ್ದು ಸಹ ಇದೆಯಂತೆ. ಸಿನಿಮಾದ ನಟಿಸಿದವರು ಬೇರೆ ಯಾವುದೋ ಕೇಸ್‌ನಲ್ಲಿ ಜೈಲು ಪಾಲಾಗಿ ಅವರು ಬಿಡುಗಡೆ ಆಗುವವರೆಗೂ ಕಾದ ಉದಾಹರಣೆಯೂ ಇದೆಯಂತೆ. ಇದು ಮಾತ್ರವೇ ಅಲ್ಲದೆ. ಕೆಲವು ಕ್ರೈಂಗಳು ನಡೆದ ನಿಜ ಸ್ಥಳದಲ್ಲಿಯೇ 'ಕರಿಯ' ಸಿನಿಮಾದ ಶೂಟಿಂಗ್ ನಡೆದಿದೆ. ರೌಡಿಗಳ ನಿಜವಾದ ಅಡ್ಡಾಗಳಲ್ಲಿಯೇ ಕ್ಯಾಮೆರಾ ಇಟ್ಟು ಶೂಟ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್. ಸಿನಿಮಾದ ಶೂಟಿಂಗ್ ಮುಗಿವ ವೇಳೆಗೆ 'ಕರಿಯ' ಸಿನಿಮಾದಲ್ಲಿ ನಟಿಸಿದ್ದ ಮೂವರು ರೌಡಿಗಳು ಗ್ಯಾಂಗ್‌ವಾರ್‌ನಲ್ಲಿ ತೀರಿಕೊಂಡರಂತೆ!

ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ ದರ್ಶನ್!
ಸಿನಿಮಾ ಮಾಡುವಾಗಲೂ ಹಲವು ಅಡಚಣೆಗಳು ಎದುರಾದವಂತೆ. ರೌಡಿಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು ದೊಡ್ಡ ಸಮಸ್ಯೆ ಆಗಿದ್ದರೆ. ಒಮ್ಮೆ ಯಾವುದೋ ಕಾರಣಕ್ಕೆ ಪ್ರೇಮ್ ಮೇಲೆ ದರ್ಶನ್ ಮುನಿಸಿಕೊಂಡು ಸಿನಿಮಾ ಮಾಡುವುದಿಲ್ಲ ಎಂದುಬಿಟ್ಟಿದ್ದರಂತೆ. ಪ್ರೇಮ್‌ರ ಒರಟು ಮಾತಿನಿಂದ ದರ್ಶನ್ ಬೇಸರ ಮಾಡಿಕೊಂಡು ಸಿನಿಮಾ ಮಾಡೊಲ್ಲ ಎಂದಿದ್ದರಂತೆ. ಆಗ ಮೈಕೋ ನಾಗರಾಜ್, ಅನೆಕಲ್ ಬಾಲರಾಜ್ ಹಾಗೂ ಇನ್ನೂ ಇತರರು ಸೇರಿ ದರ್ಶನ್ ಅವರನ್ನು ಒಪ್ಪಿಸಿ ಸಿನಿಮಾ ಮುಗಿಸಿಕೊಂಡರಂತೆ. ಮೈ ಕೋ ನಾಗರಾಜ್ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೊದಲ ವಾರ ನೀರಸ ಪ್ರತಿಕ್ರಿಯೆ
ಜನವರಿ 03, 2003 ರಂದು ಸಿನಿಮಾ ಬಿಡುಗಡೆ ಆದಾಗ ಮೊದಲ ವಾರ ಬಹಳ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ವಾರ ಜನರೇ ಇರಲಿಲ್ಲವಂತೆ. ಇದು ಫ್ಲಾಪ್ ಗ್ಯಾರೆಂಟಿ ಎಂದುಕೊಂಡಿದ್ದರಂತೆ. ನಿರ್ಮಾಪಕರು ಬೆಂಗಳೂರು-ಕೋಲಾರ-ತುಮಕೂರು ವಿತರಣೆ ಹಕ್ಕನ್ನು ಕೇವಲ 5 ಲಕ್ಷಕ್ಕೆ ಮಾರಾಟ ಮಾಡಲು ಮುಂದಾಗಿದ್ದರಂತೆ. ಕೊನೆಗೆ ಮುಸ್ಲಿಂ ವಿತರಕರೊಬ್ಬರು 6 ಲಕ್ಷಕ್ಕೆ ಹಕ್ಕು ಖರೀದಿ ಮಾಡಿದರಂತೆ. ದಿನೇ-ದಿನೇ ಸಿನಿಮಾಕ್ಕೆ ಜನ ಹೆಚ್ಚಿತಾದರೂ ತೀರ ಸಾಮಾನ್ಯ ಗಳಿಕೆ ಅಷ್ಟೆ ಆಗಿತ್ತಂತೆ ಮೊದಲ ಬಾರಿಗೆ ಐವತ್ತು ದಿನ ಪೂರೈಸಿ ಚಿತ್ರಮಂದಿರದಿಂದ ಸಿನಿಮಾವನ್ನು ಬೇರೊಂದು ಸಿನಿಮಾಕ್ಕಾಗಿ ಎತ್ತಂಗಡಿ ಮಾಡಲಾಯ್ತಂತೆ.

ಎರಡು ಕೋಟಿಗೂ ಹೆಚ್ಚು ಹಣ ಗಳಿಕೆ!
ಆ ನಂತರ ಒತ್ತಾಯದ ಮೇರೆಗೆ ಮರುಬಿಡುಗಡೆ ಮಾಡಿದ ಬಳಿಕ ಸಿನಿಮಾ ಸೂಪರ್ ಡೂಪರ್ ಹಿಟ್. ಕೇವಲ ಆರು ಲಕ್ಷ ಕೊಟ್ಟು ವಿತರಣೆ ಹಕ್ಕು ಖರೀದಿಸಿದ ವಿತರಕ ಏನಿಲ್ಲವೆಂದರೂ ಎರಡು ಕೋಟಿ ಹಣ ಸಂಪಾದನೆ ಮಾಡಿದರು. ಸಿನಿಮಾದ ಯಶಸ್ಸಿನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದರಂತೆ. ಸಿನಿಮಾದಲ್ಲಿನ ನಟನೆಗೆ ದರ್ಶನ್‌ಗೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿ ರೌಡಿಸಂ ಸಿನಿಮಾ ಎಂದರೆ ದರ್ಶನ್ ಎಂಬಂತಾಗಿದ್ದು ಇತಿಹಾಸ.

ಸಿನಿಮಾದಲ್ಲಿ ಮಾರುಮುತ್ತು ನಟಿಸಬೇಕಿತ್ತು!
ಈ ಸಿನಿಮಾದಲ್ಲಿ ಮಾಜಿ ರೌಡಿ ಮಾರಿ ಮುತ್ತು ಸಹ ನಟಿಸಬೇಕಿತ್ತು. ಆದರೆ ಆಗ ಮಾರಿ ಮುತ್ತು ಕೌನ್ಸಲರ್ ಆಗಿ ಆಯ್ಕೆ ಆಗಿದ್ದ ಕಾರಣ ಈ ಸಿನಿಮಾದಲ್ಲಿ ನಟಿಸಿದರೆ ತಮ್ಮ ರಾಜಕೀಯ ಇಮೇಜಿಗೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ನಟಿಸಲಿಲ್ಲವಂತೆ. ಆದರೂ ಹಲವಾರು ರೌಡಿಗಳನ್ನು ಪ್ರೇಮ್ ಈ ಸಿನಿಮಾಕ್ಕಾಗಿ ಗುಡ್ಡೆ ಹಾಕಿದರು. ಅವರಿಂದ ನಟನೆ ತೆಗೆಯಲು ಸಫಲರಾದರು.

ಸೇಠು ಹುಡುಗಿ ನೋಡಿ ಸ್ಪೂರ್ತಿ ಪಡೆದ ಪ್ರೇಮ್
ಕರಿಯ ಸಿನಿಮಾದ ಹಾಡುಗಳಿಗೆ ಟ್ಯೂನ್ ಮಾಡಿಸಲು ಪ್ರತಿದಿನ ಗುರುಕಿರಣ್ ಮನೆಗೆ ಬೆಳ್ಳಂಬೆಳಿಗ್ಗೆ ಹೋಗಿ ಕಾಟ ಕೊಡುತ್ತಿದ್ದರಂತೆ ಪ್ರೇಮ್. ಅವರ ಮನೆಯಲ್ಲೇ ಊಟ-ತಿಂಡಿಗಳೂ ಆಗಿಬಿಡುತ್ತಿದ್ದವಂತೆ. ಕರಿಯ ಸಿನಿಮಾದ ಸಾಹಿತ್ಯ ಕೇಳಿ ಗುರುಕಿರಣ್ ನಕ್ಕಿದ್ದರಂತೆ ಆದರೆ ಅದು ಬೆಂಗಳೂರು ಅಂಡರ್ವಲ್ಡ್ ಭಾಷೆ ಎಂಬ ಕಾರಣಕ್ಕೆ ಅದೇ ಇರಬೇಕೆಂಬುದು ಪ್ರೇಮ್ ಹಠ. ಇನ್ನು ಗಾಂಧಿನಗರದಲ್ಲಿ ಪ್ರೇಮ್ ಇರುವ ಕಡೆ ಒಬ್ಬ ಸೇಠು ಹುಡುಗಿ ಪ್ರೇಮ್‌ರನ್ನು ನೋಡುತ್ತಿದ್ದಳಂತೆ. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು 'ಸೇಠು ಹುಡುಗಿ ಬುಟ್ಟಿಗೆ ಬೀಳುತಾ ಇದೆ'' ಹಾಡು ಬರೆದರಂತೆ ಪ್ರೇಮ್.

ಮಹಿಳಾ ಆಯೋಗದ ಆಕ್ಷೇಪ
ಹಾಡಿನಲ್ಲಿ 'ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ' ಎಂಬ ಸಾಲೊಂದು ಇದೆ. ಈ ಸಾಲಿಗೆ ರಾಜ್ಯ ಮಹಿಳಾ ಸಬಲೀಕರಣ ಆಯೋಗವು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಾಡು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಲು ಪ್ರೇರಣೆ ನೀಡುತ್ತಿದೆ ಎಂದಿದ್ದರು. ಸೆನ್ಸಾರ್ ಬೋರ್ಡ್‌ನವರು ಈ ಸಾಲನ್ನು ತೆಗೆಯಬೇಕು ಎಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಹಾಡು ಭಾರಿ ದೊಡ್ಡ ಹಿಟ್ ಆಯಿತು. ಸಿನಿಮಾ ಸಹ ಭಾರಿ ಹಿಟ್ ಆಗಿ ದರ್ಶನ್ ಗೆ ಮಾಸ್ ಇಮೇಜು ತಂದುಕೊಟ್ಟಿತು. ಪ್ರೇಮ್ ಅವರನ್ನು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿತು.