For Quick Alerts
  ALLOW NOTIFICATIONS  
  For Daily Alerts

  ಅಪ್ಪು ಎಂದರೆ ಎಲ್ಲರೂ ಒಪ್ಪುವ ಅಜಾತಶತ್ರು

  By ವೀರನಾರಾಯಣ
  |

  2003ರಲ್ಲಿ ಭರ್ಜರಿಯಾಗಿ ಬಿಡುಗಡೆಯಾದ ಪುನೀತ್ ಅವರ 'ಅಭಿ' ಚಿತ್ರದ "ಸುಮ್ ಸುಮ್ ನೆ ಓಳು ಬಿಡೋ ಸುಂದರಿ..." ಆ ಕಾಲಕ್ಕೆ ಭರ್ಜರಿ ಹಿಟ್ ಗೀತೆಗಳಲ್ಲೊಂದು. ಪ್ರತಿ ಕಾಲೇಜಿನ ಅಂಗಳದಲ್ಲೂ ಆ ಗೀತೆಯದೇ ಗುನುಗು...

  ಶ್ರೀರಂಗ ಅವರ ರಚನೆಯ ಆ ಹಾಡಿನ ಚರಣದಲ್ಲೊಂದು ಸಾಲು ಬರುತ್ತದೆ...

  "...ಬೆಳಗೊಳದಲ್ಲಿ ಆ ಗೊಮ್ಮಟ ಒಳ್ಳೆ ಪೋಸು...

  ಇಲ್ಲಿ ಒಬ್ಬ ಮಿನಿ ಗೊಮ್ಮಟ..."

  ...ಧಾರ್ಮಿಕ ಕಾರಣಗಳಿಗಾಗಿ ಇದು ಸ್ವಲ್ಪ ವಿವಾದಾತ್ಮಕವಾಯಿತಾದರೂ ಈ ಸಾಲುಗಳನ್ನು ಸುಮ್ಮನೆ ಸೇರಿಸಲಾಗಿರಲಿಲ್ಲ. ಗಮನಿಸಿ ನೋಡಿದರೆ, ಶ್ರವಣಬೆಳಗೊಳದ ಗೊಮ್ಮಟೇಶ ಪ್ರತಿಮೆಯ ಮುಖಭಾವಕ್ಕೂ ಪುನೀತ್ ಅವರ ಮುಖಭಾವಕ್ಕೂ ಢಾಳಾದ ಹೋಲಿಕೆಯನ್ನು ಕಾಣಬಹುದು. ಡಾ. ರಾಜ್ ಕುಮಾರ್ ಅವರು, ತಮ್ಮ ಆಪ್ತ ವಲಯದಲ್ಲಿ ಈ ವಿಚಾರವನ್ನು ಆಗಾಗ್ಗೆ ಪ್ರಸ್ತಾಪಿಸುತ್ತಿದ್ದರು. ಪುನೀತ್ ಅವರನ್ನು ಬಾಹುಬಲಿಯ ಪಾತ್ರದಲ್ಲಿ ನೋಡಬೇಕೆಂಬುದು ಅವರ ಕನಸಾಗಿಯೂ ಇದ್ದಿತು. ಇದಕ್ಕಾಗಿ ವರದಣ್ಣನವರ ಮುಂದಾಳತ್ವದಲ್ಲಿ ಸೂಕ್ತ ಕಥೆಯ ಹುಡುಕಾಟವೂ ನಡೆದಿತ್ತು. ದುರದೃಷ್ಟವಶಾತ್ ಅಂಥದೊಂದು ಪ್ರಯತ್ನ ಫಲ ಕಾಣಲಿಲ್ಲ.

  ಡಾ. ರಾಜ್ ಕುಟುಂಬದ ಕಿರಿಯ ಕುಡಿಯಾದರೂ, ಉಳಿದ ಸಹೋದರರಿಗಿಂತ ಮೊದಲೇ ಬೆಳ್ಳಿತೆರೆ ಪ್ರವೇಶಿಸಿದವರು ಪುನೀತ್. ಆತ ಹುಟ್ಟುತ್ತಲೇ ಸ್ಟಾರ್. ಆರು ತಿಂಗಳ ಕೂಸಾಗಿದ್ದಲೇ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಅವರ ರಂಗಪ್ರವೇಶವಾಗಿತ್ತು. ನಂತರ 80ರ ದಶಕದಲ್ಲಿ ವಸಂತ ಗೀತಾ, ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಹೊಸಬೆಳಕು, ಯಾರಿವನು... ಮುಂತಾಗಿ ಸಾಲು ಸಾಲು ಚಿತ್ರಗಳ ಮೂಲಕ ಸಣ್ಣ ಹುಡುಗರ ಪಾಲಿಗೆ ಐಕಾನ್ ಆಗಿದ್ದವರು ಅಂದಿನ ಮಾಸ್ಟರ್ ಲೋಹಿತ್...

  "ಲೋ ನೀನು ಮಾಸ್ಟರ್ ಲೋಹಿತ್ ಥರ ಕಾಣ್ತೀಯ ಕಣೋ..." ಎನ್ನುವುದು ಆ ಕಾಲಕ್ಕೆ ಸಣ್ಣ ಹುಡುಗರಿಗೆ ನೀಡುವ ಅತಿದೊಡ್ಡ ಕಾಂಪ್ಲಿಮೆಂಟರಿಯಾಗಿತ್ತು.

  ಚುರುಕುಗಣ್ಣಿನ ಹುಡುಗನ ಲೀಲಾಜಾಲ ನಟನೆ, ಮನಸೆಳೆವ ಗಾಯನ ಕನ್ನಡಿಗರ ಮನೆಮಾತಾಗಿತ್ತು. ಆಗೆಲ್ಲಾ ಚಲನಚಿತ್ರಗಳಲ್ಲಿ ಬಾಲನಟ ಇಲ್ಲವೇ ಬಾಲನಟಿಯ ಗೀತೆಗಳನ್ನು ಮಧುರ ದನಿಯ Female Singer ಗಳಿಂದಲೇ ಹಾಡಿಸುವುದು ವಾಡಿಕೆಯಾಗಿತ್ತಷ್ಟೆ. ಸಿನಿಮಾ ಗೀತೆಯೊಂದು ಬೇಡುವ ವೇರಿಯೇಷನ್ನು, ಹಾಡಿನ ಶ್ರುತಿ ಮತ್ತು ಲಯದ ಕಾಂಬಿನೇಷನ್ನು ಬಾಲ ಗಾಯಕರಿಂದ ತೆಗೆಯುವುದು ಕಷ್ಟ ಎಂಬುದು ಮಾತ್ರವಲ್ಲದೆ ದೂರದ ಮದ್ರಾಸು, ಬಾಂಬೆಯ ಆಡಿಯೋ ಸ್ಟುಡಿಯೋಗಳಿಗೆ ಬಾಲ ಗಾಯಕರನ್ನು ಕರೆದೊಯ್ಯುವ ರಿಸ್ಕುಗಳು ಕೂಡಾ ಇದಕ್ಕೆ ಕಾರಣವಾಗಿದ್ದವು. ಆದರೆ 'ಭಾಗ್ಯವಂತ' ಚಿತ್ರದಲ್ಲಿ ಲೆಜಂಡರಿ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ಅವರು ಮಾಸ್ಟರ್ ಲೋಹಿತ್ ಕಂಠದಲ್ಲಿ ಹಾಡಿಸಿದ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...' ಜನಮನ ಸೂರೆಗೊಂಡಿತು. ಇಂದಿಗೂ ಆ ಗೀತೆಯ ಲಾಲಿತ್ಯಕ್ಕೆ ಮನಸೋಲದವರಿಲ್ಲ. ಮುಂದೆ 'ಎರಡು ನಕ್ಷತ್ರಗಳು' ಚಿತ್ರದ 'ನನ್ನ ಉಡುಪು ನಿನ್ನದು... ನಿನ್ನ ಉಡುಪು ನನ್ನದು...", ಬೆಟ್ಟದ ಹೂವು ಚಿತ್ರದ 'ಬಿಸಿಲೇ ಇರಲಿ, ಮಳೆಯೇ ಬರಲಿ...' 'ತಾಯಿ ಶಾರದೆ ಲೋಕಪೂಜಿತೆ'... ಮತ್ತಿತರೆ ಹಾಡುಗಳು ಸಾರ್ವಕಾಲಿಕವಾಗಿ ಜನಮನ ಗೆದ್ದಂಥವು... 'ಬೆಟ್ಟದ ಹೂವು' ಚಿತ್ರದ ನಟನೆಗೆ ಬಾಲಕ ಲೋಹಿತ್ ಗೆ ರಾಷ್ಟ್ರ ಪ್ರಶಸ್ತಿ ಅರಸಿ ಬಂದಿತ್ತು... ಅತ್ಯುತ್ತಮ ನಟನೆಗಾಗಿ ತನಗೂ ಒಲಿಯದ ರಾಷ್ಟ್ರ ಪ್ರಶಸ್ತಿಗೆ ಅಪ್ಪು ಆಗಲೇ ಭಾಜನರಾಗಿದ್ದನೆಂದು ಅಣ್ಣಾವ್ರು ಹಲವು ಸಂದರ್ಭದಲ್ಲಿ ಕೊಂಡಾಡಿದ್ದುಂಟು... ಆನಂತರ ಟೀನೇಜ್ ಕಾಲದಲ್ಲಿ 'ಪರಶುರಾಮ್' ಚಿತ್ರದಲ್ಲಿ ನಟಿಸಿದ ಪುನೀತ್, ಟಿ.ಪಿ. ಕೈಲಾಸಂ ಗೀತೆಯೊಂದನ್ನು ಹಾಡಿದ್ದರು.

  ಟೀನೇಜ್ ದಾಟಿ 20ರ ಹರೆಯದಲ್ಲಿ ನಾಯಕ ನಟನಾಗಿ ಅಪ್ಪುವಿನ ಗ್ರಾಂಡ್ ಎಂಟ್ರಿಯಾಗಲಿದೆ ಎಂದೇ ಗಾಂಧಿನಗರ ನಿರೀಕ್ಷೆಯಲ್ಲಿದ್ದಿತಾದರೂ ಹೀರೊ ಆಗಿ ಮಿಂಚಲು ಅವರು ತರಾತುರಿ ಮಾಡಲಿಲ್ಲ. ಆದರೆ ಇದೇ ಅವಧಿಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಒಂದಿಷ್ಟು ಸುದ್ದಿಯಾದರು. ಒಂದೆರಡು ಪ್ರಕರಣಗಳಿಂದಾಗಿ ಇವರ ಬಗ್ಗೆ ನೆಗೆಟೀವ್ ಜನಾಭಿಪ್ರಾಯ ಮೂಡಿದ್ದುದೂ ಉಂಟು.

  Dear To All Puneeth Rajkumar: By Veeranarayana

  ಒಬ್ಬ ಜನಪ್ರಿಯ ವ್ಯಕ್ತಿಯ ಕುಡಿಯಾದರೆ advantage ಗಿಂತಲೂ ಹೆಚ್ಚಿನ disadvantage ಗಳಿರುತ್ತವೆ. ಇಂಥವರ ಪುತ್ರ/ ಪುತ್ರಿ ಎಂಬ ಟ್ಯಾಗ್ ಸದಾ ಜಗ್ಗುತ್ತಿರುತ್ತದೆ... ಸಾವಿರಾರು ಕಣ್ಣುಗಳು ಗಮನಿಸುತ್ತಿರುತ್ತವೆ.... ಸಣ್ಣ ತಪ್ಪೂ ಭಾರಿ ಸದ್ದು ಮಾಡುತ್ತದೆ... ಸಾಧನೆಯ ಯಾವುದೇ ಪ್ರಯತ್ನದಲ್ಲೂ, ಯಾವುದೇ ಹಂತದಲ್ಲೂ ಗೆಲ್ಲಲೇಬೇಕಾದ ಒತ್ತಡವಿರುತ್ತದೆ. ಯಾವುದೇ ಟ್ಯಾಗ್ ಇಲ್ಲದ ಸಾಮಾನ್ಯ ಪ್ರತಿಭೆಯೊಬ್ಬ ತನ್ನ ಮೊದಮೊದಲ ಪ್ರಯತ್ನಗಳಲ್ಲಿ ಸೋತರೂ... ಸಾವರಿಸಿಕೊಂಡು ಎದ್ದು ಮುನ್ನಡೆಯಲು ದೊರೆಯುವ ಒಂದು ಸ್ಪೇಸ್, ಒಂದು ಒತ್ತಡರಹಿತ ಮನಸ್ಥಿತಿಗೆ ಹೋಲಿಸಿದರೆ, ಸದರಿ ಟ್ಯಾಗ್ ಹೊತ್ತವನಿಗೆ disadvantage ಗಳು ಹೆಚ್ಚು...

  ಆದರೆ ಪುನೀತ್, ಈ ಎಲ್ಲ ನೆಗೆಟಿವ್ ಜನಾಭಿಮತದ ಪ್ರತಿಕೂಲವನ್ನೂ ಕಾಲಾಂತರದಲ್ಲಿ ತಮ್ಮ ಸಂಯಮ, ಸರಳತೆ, ವಿನಯಶೀಲತೆ, ಸಾಮಾಜಿಕ ಕಳಕಳಿ, ಸ್ನೇಹಪರತೆ, ಮೇಲೊಂದು ದಿವ್ಯನಗೆಯಿಂದ ಗೆದ್ದುಕೊಂಡು, ನಿಜ ಅರ್ಥದಲ್ಲಿ ಯೂಥ್ ಐಕಾನ್ ಎನಿಸಿದರು... ಇವತ್ತು ಅಪ್ಪು ಅಕಾಲಿಕ ಸಾವಿಗೆ ಕಣ್ಣೀರಾಗುತ್ತಿರುವ ನಾಡಿನಲ್ಲಿ ಅನುರಣಿಸುತ್ತಿರುವುದು ಅವರ ಘನ ವ್ಯಕ್ತಿತ್ವ ಮತ್ತು ವಿನಮ್ರತೆಯ ಗುಣಗಾನ...

  2002ರಲ್ಲಿ ಅಪ್ಪುವನ್ನು ನಾಯಕನಟನಾಗಿ ಲಾಂಚ್ ಮಾಡುವಾಗಲೂ ಹೂವಿನ ಹಾದಿಯೇನೂ ಇರಲಿಲ್ಲ. ಕುಟುಂಬದ ಮಟ್ಟಿಗೆ ಹೇಳುವುದಾದರೆ ಅದಾಗಲೇ ಶಿವಣ್ಣ 'ಆನಂದ್' ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದರು. ಸತತ ಮೂರು ಚಿತ್ರಗಳ ಹಿಟ್ ನೀಡಿ ಹ್ಯಾಟ್ರಿಕ್ ಹೀರೊ ಎನಿಸಿದ್ದರು. ರಾಘಣ್ಣ ಕೂಡಾ 'ನಂಜುಂಡಿ ಕಲ್ಯಾಣ' ಮತ್ತು 'ಗಜಪತಿ ಗರ್ವಭಂಗ' ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದರು... ಆದರೆ ಅಪ್ಪು ಬರುವ ಹೊತ್ತಿಗೆ ಗಾಂಧಿನಗರ ಸಾಕಷ್ಟು ಬದಲಾವಣೆ ಕಂಡಿತ್ತು. ಚಿತ್ರರಸಿಕರ ಬದಲಾದ ಅಭಿರುಚಿಯ ನಡುವೆ, ಅದ್ದೂರಿ ಚಿತ್ರಗಳ ಯುಗ ಆರಂಭಗೊಂಡಿತ್ತು. ಯುವ ಚಿತ್ರರಸಿಕ ಸಮುದಾಯಕ್ಕೆ ಕನ್ನಡವೊಂದೇ ಆಯ್ಕೆಯಾಗಿ ಉಳಿದಿರಲಿಲ್ಲ. ಉತ್ಕೃಷ್ಟ ತಾಂತ್ರಿಕ ಗುಣಮಟ್ಟ, ನವೀನ ನಿರೂಪಣೆ, ದುಬಾರಿ ಮೇಕಿಂಗ್ ಮೂಲಕ ಯುವಜನರನ್ನು ಸೆಳೆಯುವ ತೆಲುಗು, ತಮಿಳು, ಹಿಂದಿ ಚಿತ್ರಗಳ ನಡುವೆ ಕನ್ನಡ ಚಿತ್ರಗಳು ಸ್ಪರ್ಧಿಸಬೇಕಾದ ಕಾಲಘಟ್ಟ ಅದಾಗಿತ್ತು... ಇನ್ನು ಸಿನಿ ರಂಗಕ್ಕೆ ಹೊಸ ಪ್ರತಿಭೆಗಳ ದಂಡಿಗೇನೂ ಕೊರತೆ ಇರಲಿಲ್ಲ...

  ಇಂಥ ಸನ್ನಿವೇಶದ ನಡುವೆ ಅಪ್ಪು ಗೆಲ್ಲಬೇಕಿತ್ತು. ಎಲ್ಲ ಟ್ಯಾಗ್ ಗಳ ನಡುವೆಯೂ ಸೂಕ್ತ ತಯಾರಿ ಇಲ್ಲದೆ ಅದು ಆಗುವಂತಿರಲಿಲ್ಲ... ನಾಯಕನಟನಾಗಿ ತುಸು ತಡವಾಗಿಯೇ ಎಂಟ್ರಿ ಕೊಟ್ಟ ಅಪ್ಪು, 'ಲೇಟ್ ಆದರೂ, ಲೇಟೆಸ್ಟ್' ಆಗಿ ಬಂದಿದ್ದರು. ವರನಟನ ಹೋಲಿಕೆಯ ಫೇಸ್ ಕಟ್ಟು, ಮಿನಿ ಗೊಮ್ಮಟನ ಮೈಕಟ್ಟು, ಚುರುಕು ಕಣ್ಣಿನ ಖಡಕ್ ಲುಕ್ಕು, ಎಂಥವರನ್ನೂ ಸೆಳೆಯುವ ನೃತ್ಯ ಶೈಲಿ, ಭರ್ಜರಿ ಫೈಟಿಂಗ್, ಡೈಲಾಗ್ ಡೆಲಿವರಿ, ಲೀಲಾಜಾಲದ ನಟನೆ... ಒಟ್ಟಿನಲ್ಲಿ ಮೊದಲ ಚಿತ್ರದಲ್ಲೇ ಪವರ್ ಸ್ಟಾರ್ ಆಗಿ ಹೊರಹೊಮ್ಮಿದವರು ಪುನೀತ್.

  ಆನಂತರ ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್, ಅರಸು, ಮಿಲನ... ಹೀಗೆ ಸಾಲು ಸಾಲು ಹಿಟ್ ಚಿತ್ರಗಳು ಬಂದವು. ಆಯ್ಕೆಯಲ್ಲಿ ಚ್ಯೂಸಿಯಾದ ಪುನೀತ್, ವರ್ಷಕ್ಕೆ ಒಂದೆರಡಕ್ಕಿಂತ ಹೆಚ್ಚಿನ ಚಿತ್ರ ಒಪ್ಪಿಕೊಳ್ಳುತ್ತಿರಲಿಲ್ಲ. ಅದಾಗಲೆ ಮಚ್ಚು-ಲಾಂಗು ಚಿತ್ರಗಳ ಭರಾಟೆಯಲ್ಲಿ ಮುಳುಗಿಹೋಗಿದ್ದ ಗಾಂಧಿನಗರದಲ್ಲಿ ಪುನೀತ್ ಚಿತ್ರಗಳೆಂದರೆ ಸದಭಿರುಚಿಯ, ಕುಟುಂಬ ಸಮೇತ ನೋಡಬಹುದಾದ ಚಿತ್ರಗಳೆಂದು ಹೆಸರು ಮಾಡಿದವು.

  ಚಿತ್ರದಿಂದ ಚಿತ್ರಕ್ಕೆ ಅಪ್ಪು ಮಾಗುತ್ತಾ ಸಾಗಿದರು. ಹರಿದು ಬಂದ ಅಭಿಮಾನ ಪ್ರವಾಹವನ್ನು ವಿನಮ್ರತೆ, ವಿನಯಶೀಲತೆಯಿಂದ ಅಪ್ಪಿಕೊಂಡರು. "ನಾನು ಈ ಜನಗಳಿಗೆ ಏನೂ ಕೊಟ್ಟಿಲ್ಲ. ಆದರೂ ಇಷ್ಟೆಲ್ಲಾ ಆರಾಧಿಸುತ್ತಾರಲ್ಲ" ಎಂದು ಆತ್ಮೀಯರ ಬಳಿ ಪುನೀತ್ ಹಲವು ಬಾರಿ ಭಾವುಕರಾಗಿದ್ದರು. ಈ ಭಾವನೆಯೇ ಅವರಲ್ಲಿ ಸಮಾಜಸೇವೆಗೆ ಪ್ರೇರಣೆ ನೀಡಿತು. ತೆರೆಮರೆಯಲ್ಲೇ ಕೈಲಾದ ಸೇವೆ ಮಾಡಿದರು.

  ಸಿಗಬೇಕಾದ ಪ್ರಚಾರ, ಪ್ರಶಸ್ತಿ, ಸ್ಟಾರ್ ಗಿರಿ... ಎಲ್ಲವನ್ನೂ ಚಿಕ್ಕಂದಿನಲ್ಲೇ ಪಡೆದಿದ್ದ ಪುನೀತ್ ಗೆ ನಾಯಕನಟನಾಗಿ ಸೂಪರ್ ಸ್ಟಾರ್ ಆದ ಮೇಲೆ ಅವೆಲ್ಲವುಗಳ ಹಂಗಿರಲಿಲ್ಲ. ಹೀಗಾಗಿ ತನ್ನ ವಾರಗೆಯ ನಟರೊಂದಿಗೆ ಅವರು ಯಾವತ್ತೂ ಕಾಂಪಿಟೇಷನ್ ಗೆ ತೊಡಗಲಿಲ್ಲ. ಗಾಂಧಿನಗರದ ಪಾಲಿಗೆ ಅಪ್ಪು ಎಲ್ಲರೂ ಒಪ್ಪುವ ಒಬ್ಬ ಅಜಾತಶತ್ರುವಾಗಿ ಬೆಳೆದರು. ನಾಯಕನಟನಾಗಿ ಸುಮಾರು ಎರಡು ದಶಕದ ವೃತ್ತಿಜೀವನದಲ್ಲಿ ಸಣ್ಣದೊಂದು ವಿವಾದ, ಕಳಂಕವಿಲ್ಲದ ಏಕೈಕ ಸೂಪರ್ ಸ್ಟಾರ್ ಎಂದರೆ ಅದು ಅಪ್ಪು ಎಂಬುದು ಅತಿಶಯೋಕ್ತಿಯಲ್ಲ. ಡಾ. ರಾಜ್ ಕುಮಾರ್ ನಿಧನಾನಂತರ ಅವರಿಗಿದ್ದ ಅಭಿಮಾನ ಪ್ರವಾಹ ಹರಿದಿದ್ದು ಪುನೀತ್ ಕಡೆಗೆ. ರೂಪದಲ್ಲಿ ಮಾತ್ರವಲ್ಲದೆ ಸರಳತೆ, ವಿನಯಶೀಲತೆಯಲ್ಲೂ ಡಾ. ರಾಜ್ ಉತ್ತರಾಧಿಕಾರಿಯಾದರು ಪುನೀತ್. ಇಂದು ಬೆಳ್ಳಿತೆರೆಯ ಸೂಪರ್ ಸ್ಟಾರ್ ಗಳ ಪೈಕಿ ಅತ್ಯಂತ ಸುಸಂಸ್ಕೃತ ನಡವಳಿಕೆಯ ಸ್ಟಾರ್ ಎಂದರೆ ಮೊದಲ ಸಾಲಿನಲ್ಲಿ ನಿಲ್ಲುವವರು ಪುನೀತ್.

  ಬದಲಾದ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳ ಮಾರುಕಟ್ಟೆಯ ಡೆಮಾಗ್ರಫಿಯೂ ಸಾಕಷ್ಟು ಬದಲಾಯಿತು. ಹೇಗೆ ಒಂದು ಹಿಂದಿ ಚಿತ್ರ ಬಾಲಿವುಡ್ ಟ್ಯಾಗ್ ನಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗುತ್ತದೋ, ಹಾಗೆ ಒಂದು ತೆಲುಗು, ತಮಿಳು, ಕನ್ನಡ ಚಿತ್ರವೂ ಏಕಕಾಲದಲ್ಲಿ ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುವ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಬಲ್ಲುದು. ಹೀಗಾಗಿ ಪ್ರಾದೇಶಿಕ ಭಾಷಾ ಚಿತ್ರರಂಗದ ಸ್ಟಾರ್ ಗಳು ಸಹ ಪ್ಯಾನ್ ಇಂಡಿಯಾ ತಾರೆಗಳಾಗುತ್ತಿರುವುದು ಇವತ್ತಿನ ಟ್ರೆಂಡು...

  ಆದರೆ ಒಬ್ಬ ಪುನೀತ್ ವಾರಗೆಯ ಸ್ಟಾರ್‌ಗಳಂತೆ ಈ ದಿಕ್ಕಿನಲ್ಲಿ ಹೆಚ್ಚು ಪ್ರಯತ್ನಿಸದೆ, ಕನ್ನಡ ಚಿತ್ರರಂಗದಲ್ಲಿ ಒಂದು ಸಂಸ್ಥೆಯಾಗಿ ಬೆಳೆಯುವ ಯತ್ನ ಮಾಡಿದರು. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಆಧುನಿಕ ಪರಿಕಲ್ಪನೆಯ ಒಂದು ಆಡಿಯೋ ಸಂಸ್ಥೆ ಸ್ಥಾಪಿಸಿ ಚಿತ್ರರಂಗಕ್ಕೆ ಬಲವಾದರು. ಹಲವು ಪ್ರಯೋಗಾತ್ಮಕ ಚಿತ್ರಗಳಿಗೆ ಬಂಡವಾಳ ಹೂಡಿದರು. ಪ್ರಚಾರ ಬಯಸಿ ಬಂದ ಹೊಸಬರ ಸಾಹಸಗಳಿಗೆ ಸಾಥಿಯಾದರು. ಭವಿಷ್ಯದಲ್ಲಿ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಗ್ಗೆ ಅವರಲ್ಲಿ ಹಲವು ಕನಸುಗಳಿದ್ದವು... ಆದರೆ ವಿಧಿಯ ಆಟ ಬೇರೆಯೇ ಇತ್ತು.

  English summary
  Puneeth Rajkumar is dear to all. Writer, Journalist Veeranarayana remembers Puneeth Rajkumar's Journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X