ಐದು ಪೈಸೆಯ ನಾಣ್ಯಗಳಲ್ಲೇ ಹತ್ತು ಸಾವಿರ ಸಂಭಾವನೆ ನೀಡಿದ್ದ ನಿರ್ಮಾಪಕರು
ನಿರ್ಮಾಪಕರನ್ನು ಡಾ. ರಾಜ್ ಕುಮಾರ್ ಅನ್ನದಾತರು ಎಂದು ಕರೆದಿದ್ದರು. ಹಿಂದಿನ ತಲೆಮಾರಿನ ನಿರ್ಮಾಪಕರನ್ನು ಹಾಗೆಯೇ ಗೌರವಿಸುತ್ತಿದ್ದರು. ನಿರ್ಮಾಪಕರು ಕೂಡ ಕಲಾವಿದರು ಮತ್ತು ತಂತ್ರಜ್ಞರಿಗೆ ತೊಂದರೆಯಾಗದಂತೆ ಕಾಳಜಿವಹಿಸುತ್ತಿದ್ದರು. ಇದೇ ಪರಿಸ್ಥಿತಿ ಈಗಲೂ ಇದೆ ಎನ್ನಲಾಗುವುದಿಲ್ಲ. ಸಿನಿಮಾಗಳ ಬಗ್ಗೆ ಕನಸು ಮತ್ತು ಬದ್ಧತೆಯುಳ್ಳ ನಿರ್ಮಾಪಕರ ಸಂಖ್ಯೆ ಕಡಿಮೆಯಾಗಿದೆ. ಸಿನಿಮಾದಲ್ಲಿ ಲಾಭವಷ್ಟೇ ಅವರ ತಲೆಯಲ್ಲಿ ಇರುತ್ತದೆ ಎಂಬ ಆರೋಪಗಳಿವೆ.
Recommended Video
ಈ ಹಿಂದಿನ ನಿರ್ಮಾಪಕರಲ್ಲಿ ಲಾಭ ನಷ್ಟಗಳಿಗಿಂತಲೂ ಒಳ್ಳೆಯ ಸಿನಿಮಾ ಮಾಡಬೇಕು, ವ್ಯವಹಾರ ಚಟುವಟಿಕೆಗಳಲ್ಲಿ ಲೋಪವಾಗಬಾರದು ಮತ್ತು ತಮ್ಮಿಂದ ಯಾರಿಗೂ ಸಮಸ್ಯೆಯಾಗಬಾರದು ಎಂಬ ಕಾಳಜಿ ಇರುತ್ತಿತ್ತು. ಇದಕ್ಕೆ ನಟ ಸುಂದರ್ ಕೃಷ್ಣ ಅರಸ್ ಅವರ ಸಹೋದರ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಉತ್ತಮ ಉದಾಹರಣೆಯೊಂದನ್ನು ನೀಡಿದ್ದಾರೆ. ಕೆ.ಎಸ್. ಪರಮೇಶ್ವರ್ ಅವರ 'ಕಲಾಮಾಧ್ಯಮ' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಅಪರೂಪದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

ಮನೆಗೇ ಸಂಭಾವನೆ ತಲುಪಿಸುತ್ತಿದ್ದರು
ಅವರು ಎಂತಹ ನಿರ್ಮಾಪಕರು ಎಂದರೆ ನಾವು ಅವರ ಬಳಿ ಸಂಬಳವನ್ನು ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಅದು ಗೆಲ್ಲಲಿ, ಸೋಲಲಿ ಯಾವ ಕಲಾವಿದನಿಗೂ, ತಂತ್ರಜ್ಞರಿಗೂ ಹೇಳಿದ ಸಂಭಾವನೆ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಇಲ್ಲದಿದ್ದರೂ ಕವರ್ ಕೊಟ್ಟು ಹೋಗಿರುತ್ತಿದ್ದರು. ಅದರಲ್ಲಿ ಒಂದು ರೂಪಾಯಿ ಕೂಡ ಕಡಿಮೆಯಾಗದಂತೆ ಸಂಭಾವನೆ ಇರುತ್ತಿತ್ತು. ನಿನಗೆ ಯಾವ ಡಿನಾಮಿನೇಷನ್‌ನಲ್ಲಿ ದುಡ್ಡು ಬೇಕು ಎಂದು ಕೇಳುತ್ತಿದ್ದವರು ಅವರು ಎಂದಿದ್ದಾರೆ.
ಬಾವಾ ಮೂವೀಸ್‌ನವರು ಮೂರು ಜನ ಪಾರ್ಟ್ನರ್‌ಗಳು. ಒಬ್ಬರು ಪ್ರೊಡಕ್ಷನ್ ಕೆಲಸ ನೋಡಿಕೊಳ್ಳುತ್ತಿದ್ದರು. ಮೂರನೇ ಪಾರ್ಟ್ನರ್ ಪ್ರೊಡಕ್ಷನ್ ನೋಡಿಕೊಳ್ಳುವವರು. ಒಬ್ಬರು ಕ್ಯಾಮೆರಾ ಮತ್ತೊಬ್ಬರು ನಿರ್ದೇಶನ. ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ಮೂಗು ತೂರಿಸುತ್ತಿರಲಿಲ್ಲ.

ಚೆಕ್ ಬೌನ್ಸ್ ಆಗುತ್ತಾ ಕೇಳಿದ ನಟಿ
ಒಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಡೆಯುವಾಗ ಡಬ್ಬಿಂಗ್‌ಗಾಗಿ ಪೋಷಕ ನಟಿಯೊಬ್ಬರು ಬಂದರು. ಅವರಿಗೆ ಹತ್ತು ಸಾವಿರ ರೂ ಸಂಭಾವನೆ ನೀಡುವುದು ಬಾಕಿ ಇತ್ತು. ಪ್ರೊಡಕ್ಷನ್ ಮ್ಯಾನೇಜರ್ ಚೆಕ್ ನೀಡಿದರು. ಆ ನಟಿ 'ಇದು ಬೌನ್ಸ್ ಆಗುತ್ತಾ' ಎಂದರು. ಅದನ್ನು ಕೇಳಿದ್ದೇ ಮೂರು ಜನಕ್ಕೂ ಕೋಪ ಬಂತು. ಅವರಿಗೆ ಯಾರೂ ಹಾಗೆ ಕೇಳಿರಲಿಲ್ಲ. ಯಾವ ಡಿನಾಮಿನೇಷನ್‌ದು ಬೇಕು ಹೇಳಿ? ಐದು ಪೈಸೆ, ಹತ್ತು ಪೈಸೆ, 25 ಪೈಸೆ, 50 ಪೈಸೆಯದು ಬೇಕಾ ತರಿಸಿಕೊಡ್ತೀನಿ ಎಂದು ಅಲ್ಲಿಯೇ ಸಿಡಿದು ನಿಂತರು.

ಐದು ಪೈಸೆ ಚಿಲ್ಲರೆಯಲ್ಲಿ ಹತ್ತು ಸಾವಿರ
ಹತ್ತು ಸಾವಿರ ರೂಪಾಯಿ ಬ್ಯಾಲೆನ್ಸ್ ಇದ್ದಿದ್ದು. ನಂಬುತ್ತೀರೋ ಬಿಡುತ್ತೀರೋ. ಒಂದು ಗಂಟೆಯಲ್ಲಿ ಹತ್ತು ಸಾವಿರ ರೂಪಾಯಿ ತರಿಸಿದರು. ಪ್ರತಿಯೊಂದೂ ಐದು ಪೈಸೆಯ ನಾಣ್ಯ. ಆ ಪೋಷಕ ನಟಿ ಅಲ್ಲಾಡಿಹೋದರು. ಸಾರಿ ಸಾರಿ ಎಂದು ಕೇಳಿದರೂ ಅವರು ಕ್ಷಮಿಸಲೂ ತಯಾರಿರಲಿಲ್ಲ. ನಮ್ಮ ಕಂಪೆನಿ ಬಗ್ಗೆ ಹಾಗೆ ಹೇಗೆ ಹೇಳುತ್ತೀರಿ ಎಂದು ನಾಣ್ಯದಲ್ಲಿಯೇ ಸಂಭಾವನೆ ನೀಡಿದರು ಎಂದು ಅರಸ್ ಸ್ಮರಿಸಿಕೊಂಡಿದ್ದಾರೆ.

ಅಂತಹವರನ್ನು ನೋಡಿದ್ದು ಅದೇ ಮೊದಲು
ಅವರದು ಅಂತಹ ಒಳ್ಳೆಯ ಕಂಪೆನಿ. ನಾವು ಅವರಿಂದ ಬದ್ಧತೆ ಕಲಿಯಬೇಕು. ಒಂದು, ಎರಡು, ಹತ್ತು ರೂ ಇರಲಿ, ಎಷ್ಟು ಕಮಿಟ್ ಆಗರುತ್ತೇವೋ ಅಷ್ಟು ಕೊಡಬೇಕು. ಅವರಿಂದ ಕೆಲಸ ಮಾಡಿಸಿರುತ್ತೇವೆ, ಅದಕ್ಕೆ ತಕ್ಕಂತೆ ಕೊಡುತ್ತೇವೆ ಎಂದು ಒಪ್ಪಿಕೊಂಡಿರುವುದನ್ನು ಕೊಡಬೇಕು ಎನ್ನುವುದು ಅವರ ನಿಲುವು. ಇದನ್ನೆಲ್ಲ ನೋಡಿದಾಗ ಎಷ್ಟು ಖುಷಿಯಾಗುವುದು ಎಂದರೆ ಇಂತಹ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಮಾಡಿದರೆ ಬದುಕೋದು ಸುಲಭ ಎಂದು ಎನಿಸುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅಂತಹ ನಿರ್ಮಾಪಕರನ್ನು ನಾನು ನೋಡಿದ್ದು ಅದೇ ಮೊದಲು. ತಂತ್ರಜ್ಞರನ್ನು ನಿರ್ಮಾಪಕರು ಚೆನ್ನಾಗಿ ನೋಡಿಕೊಂಡರೆ ಉದ್ಯಮ ಚೆನ್ನಾಗಿ ಇರುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications











