Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ವಾತಂತ್ರ್ಯ ಹೋರಾಟದಲ್ಲಿ ಸಿನಿಮಾಗಳ ಪಾತ್ರ
1913 ರಲ್ಲಿ ಆರಂಭವಾದ ಭಾರತ ಸಿನಿಮಾಗಳು ಹಲವು ವರ್ಷ ಕೇವಲ ಪೌರಾಣಿಕ ಕತೆಗಳಿಗೇ ಜೋತು ಬಿದ್ದಿದ್ದವು. ಆದರೆ ವರ್ಷದಿಂದ ವರ್ಷಕ್ಕೆ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಾ ಸಾಗಿದಂತೆ ಸಮಾಜಕ್ಕೆ ಹತ್ತಿರವಾಗುತ್ತಾ, ಜನರ ಪರ ದನಿಯಾಗುವತ್ತ ಮೆಲ್ಲಗೆ ಹೊರಳಿದವು.
1930ರ ಬಳಿಕ ಭಾರತೀಯ ಸಿನಿಮಾ ಬಹುವೇಗವಾಗಿ ಮುಂದಡಿ ಇಡಲು ಆರಂಭಿಸಿತು. ದಾದಾ ಸಾಹೇಬ್ ಫಾಲ್ಕೆ, ಬಾಬುರಾವ್ ಪೇಂಟರ್, ಕಾಜಿಭಾಯ್ ರಾಥೋಡ್, ಧಿರೇಂದ್ರನಾಥ ಗಂಗೂಲಿ, ಹೋಮಿ ಮಾಸ್ಟರ್, ಚಂದುಲಾಲ್ ಶಾ, ನಾನುಬಾಯಿ ವಕೀಲ್, ಆರ್.ನಟರಾಜನ್ ಇನ್ನೂ ಹಲವರು ಸಿನಿಮಾಗಳನ್ನು ಮಾಡಲು ಆರಂಭಿಸಿದ್ದರು. ಸಿನಿಮಾಗಳ ಶಕ್ತಿಯನ್ನು ಬಹುಬೇಗ ಅರಿತ ಬಾಲಗಂಗಾಧರ ತಿಲಕರು, ಭಾರತದ ಮೊತ್ತ ಮೊದಲ ಸಿನಿಮಾ ನಿರ್ಮಿಸಿದ್ದ ದಾದಾ ಸಾಹೇಬ್ ಫಾಲ್ಕೆಗೆ ಮತ್ತೊಂದು ಸಿನಿಮಾ ಮಾಡುವಂತೆ ಉತ್ತೇಜಿಸಲು 1916ರಲ್ಲಿ ಹಣ ಸಂಗ್ರಹಿಸಿ ಕೊಡುವ ಅಭಿಯಾನವನ್ನೇ ಮಾಡಿದ್ದರು. ಆದರೆ ಆ ಅಭಿಯಾನ ಯಶಸ್ವಿಯಾಗಲಿಲ್ಲ.
1920 ರಿಂದ ಸ್ವಾತಂತ್ರ್ಯ ಬರುವವರೆಗೆ ಭಾರತೀಯ ಸಿನಿಮಾಗಳು ಸ್ವಾತಂತ್ರ್ಯ ಚಳವಳಿಯ ಭಾಗವಾಗಿಯೇ ಇದ್ದವು. 1930ರ ನಂತರವಂತೂ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಹೆಚ್ಚು ಚುರುಕು ಪಡೆದುಕೊಂಡಿತು, ಅದೇ ಸಮಯದಲ್ಲಿ ಭಾರತೀಯ ಸಿನಿಮಾಗಳು ಸಹ ಭಾರತ ಸ್ವಾತಂತ್ರ್ಯ ಚಳವಳಿಗೆ ತಮ್ಮದೇ ಮಾದರಿಯಲ್ಲಿ ಯೋಗದಾನ ನೀಡಿದವು. ಬ್ರಿಟೀಷರ ಕಣ್ಗಾವಲು ಸಿನಿಮಾಗಳ ಮೇಲೆ ಇತ್ತಾದರೂ ಭಾರತೀಯ ಸಿನಿಮಾಗಳು ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿಯಲಿಲ್ಲ.

1921ರಲ್ಲಿ ಮೊದಲ ಸಿನಿಮಾ ಬ್ಯಾನ್ ಮಾಡಿದ್ದ ಬ್ರಿಟೀಷರು
1921ರಲ್ಲಿ 'ಭಕ್ತ ವಿಧುರ' ಹೆಸರಿನ ಸಿನಿಮಾವನ್ನು ಬ್ರಿಟೀಷರು ಬ್ಯಾನ್ ಮಾಡಿದರು. ಸಿನಿಮಾದಲ್ಲಿ ವಿಧುರ ಪಾತ್ರವು ಟೋಪಿ ಮತ್ತು ನೂಲಿನ ಮಹತ್ವ ಹೇಳುವ ದೃಶ್ಯವಿತ್ತು. ಇದು ಬ್ರಿಟೀಷರಿಗೆ ಸರಿ ಬರಲಿಲ್ಲ. ಹೀಗೆ ಪೌರಾಣಿಕ ಸಿನಿಮಾಗಳಲ್ಲಿಯೂ ಸ್ವಾತಂತ್ರ್ಯದ ಸಂದೇಶ ನೀಡುವ ದೃಶ್ಯಗಳನ್ನು, ಸಂಭಾಷಣೆಗಳನ್ನು ಅಡಕ ಮಾಡಿ ಸಿನಿಮಾ ಕರ್ಮಿಗಳು ಜನರಿಗೆ ತಲುಪಿಸುವ ಯತ್ನ ಮಾಡುತ್ತಲೇ ಬಂದರು. ಕೆಲವು ಯತ್ನಗಳು ಬ್ರಿಟೀಷರ ಕಣ್ಣಿಗೆ ಬಿದ್ದು ಬ್ಯಾನ್ ಆದವು, ಕೆಲವು ಸಿನಿಮಾ ಕರ್ಮಿಗಳು ಬಂಧನಕ್ಕೆ ಒಳಗಾದರು.

ಸ್ವರಾಜ್ ಹೆಸರು ಕಂಡು ಉರಿದು ಹೋಗಿದ್ದ ಬ್ರಿಟೀಷರು
1931ರಲ್ಲಿ ಶಾಂತಾರಾಮ್ ನಿರ್ದೇಶನದ 'ಸ್ವರಾಜ್ಯಚೇ ತೋರಣ್' ಹೆಸರಿನ ಸಿನಿಮಾವನ್ನು ಬಿಡುಗಡೆಗೆ ಅಣಿಗೊಂಡಿತ್ತು. ಆ ಚಿತ್ರದ ಪೋಸ್ಟರ್‌ನಲ್ಲಿ ಶಿವಾಜಿ ಮಹಾರಾಜರು ಬಾವುಟ ಹಾರಿಸುತ್ತಿರುವ ಚಿತ್ರವೂ ಇತ್ತು. ಇದು ಬ್ರಿಟೀಷರ ಕಣ್ಣು ಕೆಂಪಗೆ ಮಾಡಿತು. ಸಿನಿಮಾಕ್ಕೆ ನಿರ್ಬಂಧ ಹೇರಿದರು. ಬ್ರಿಟೀಷರೊಟ್ಟಿಗೆ ಹಲವು ಹಂತದ ತಿಕ್ಕಾಟದ ನಂತರ ಸಿನಿಮಾದ ಹೆಸರನ್ನು ಬದಲಾಯಿಸಿ 'ಉದಯಕಾಲ' ಎಂದಿಟ್ಟು, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿದ್ದ ಬಾವುಟ ಹಾರಿಸು ದೃಶ್ಯವನ್ನು ಕತ್ತರಿಸಿ ಬಿಸಾಕಿ ಸಿನಿಮಾ ಪ್ರದರ್ಶಿಸಲಾಗಿತ್ತು.

ಬ್ರಿಟೀಷರ ವಿರುದ್ಧ ಜನಾಭಿಪ್ರಾಯ
1937ರಲ್ಲಿ ಬಿಡುಗಡೆ ಆದ 'ದುನಿಯಾ ನಾ ಮಾನೆ' ಸಿನಿಮಾ ಸಹ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಯಿತು. ಆ ಸಿನಿಮಾದಲ್ಲಿ ಬಾಲ್ಯವವಿಹಾವ, ಸತಿಸಹಗಮನ ಪದ್ಧತಿ ವಿರುದ್ಧ ಸಂದೇಶ ಇತ್ತು. ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ವಲ್ಲಭಾಯಿ ಪಟೇಲರ ಭಾಣದ ತುಣುಕನ್ನು ಸಿನಿಮಾದಲ್ಲಿ ಬಳಸಲಾಗಿತ್ತು. ಆ ದೃಶ್ಯ ತೆಗೆಯುವಂತೆ ಬ್ರಿಟೀಷರು ಆದೇಶಿಸಿದ್ದರು. 1939ರಲ್ಲಿ ಬಿಡುಗಡೆ ಆದ 'ಬ್ರಾಂಡಿ ಕಿ ಬಾಟೆಲ್' ಸಿನಿಮಾವು ಮದ್ಯಪಾನದ ವಿರೋಧಿ ಸಂದೇಶ ನೀಡುವ ಜೊತೆಗೆ ಗಾಂಧಿವಾದವನ್ನು ಜನರಿಗೆ ಸ್ಪಷ್ಟವಾಗಿ ತಲುಪಿಸಿತ್ತು. 1940ರಲ್ಲಿ ಬಿಡುಗಡೆ ಆದ 'ಘರ್ ಕಿ ರಾಣಿ' ಸಿನಿಮಾವು ವಿದೇಶಿ ಸಂಸ್ಕೃತಿಯ ಸಮಸ್ಯೆಗಳ ಬಗ್ಗೆ ಪಾಠ ಮಾಡಿತ್ತು. ಹೀಗೆ ಒಂದಲ್ಲ ಒಂದು ಮಾದರಿಯಲ್ಲಿ ಬ್ರಿಟೀಷರ ವಿರುದ್ಧ ಜನಾಭಿಪ್ರಾಯ ರೂಪಿಸಲು ಸಿನಿಮಾಗಳು ಯತ್ನಿಸುತ್ತಲೇ ಇದ್ದವು.

'ಅಚೂತ್' ಸಿನಿಮಾ ನೋಡಿದ್ದ ಮಹಾತ್ಮಾ ಗಾಂಧಿ
ಸ್ವಾತಂತ್ರ್ಯ ಚಳವಳಿಯ ಜೊತೆಗೆ ಸಮಾಜ ಸುಧಾರಣೆಯೂ ಸಹ ಆಗಿನ ಕಾಲದ ಸಿನಿಮಾಗಳ ಮುಖ್ಯ ಉದ್ದೇಶವಾಗಿತ್ತು. 1940ರ 'ಅಚೂತ್' ಸಿನಿಮಾವು ಆಗಿನ ಕಾಲಕ್ಕೆ ಜಾತಿ ಪದ್ಧತಿ ವಿರುದ್ಧ ಮಾತನಾಡಿತ್ತು. ಈ ಸಿನಿಮಾಕ್ಕೆ ಮಹಾತ್ಮಾ ಗಾಂಧಿ ಶುಭ ಹಾರೈಸಿದ್ದರಲ್ಲದೆ, ಸಿನಿಮಾ ವೀಕ್ಷಣೆಯನ್ನೂ ಮಾಡಿದ್ದು ವಿಶೇಷ. ಅದೇ ಸಮಯಕ್ಕೆ ಬಿಡುಗಡೆ ಆದ 'ಮಹಾತ್ಮಾ' ಹೆಸರಿನ ಸಿನಿಮಾವನ್ನು ಬ್ರಿಟೀಷರು ತಡೆ ಹಿಡಿದರು, ಅದನ್ನು 'ಧರ್ಮಾತ್ಮ' ಎಂದು ಹೆಸರು ಬದಲಿಸಿ ಬಿಡುಗಡೆ ಮಾಡಬೇಕಾಗಿ ಬಂತು.

ಹಾಡುಗಳ ಮೂಲಕ ಸ್ವಾತಂತ್ರ್ಯ ಸಂದೇಶ
ಹಾಡುಗಳ ಮೂಲಕ ಸ್ವಾತಂತ್ರ್ಯ ಸಂದೇಶವನ್ನು ಜನರಿಗೆ ತಲುಪಿಸುವ ಯತ್ನವನ್ನು ಸಿನಿಮಾ ಕರ್ಮಿಗಳು ಮಾಡುತ್ತಿದ್ದರು. 'ಆಜ್ ಕಾ ಹಿಂದೂಸ್ಥಾನಿ' ಸಿನಿಮಾದಲ್ಲಿ 'ಚಕ್ರ ಚಲಾವೊ ಬೆಹನೊ' (ಚಕ್ರ ತಿರುಗಿಸಿ ಸೋದರಿಯರೆ) ಹಾಡು ಪರೋಕ್ಷವಾಗಿ ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡುತ್ತಿತ್ತು. 'ಬಂಧನ್' ಸಿನಿಮಾದ 'ಚಲ್ ರೆ ಚಲ್ ನವ್ ಜವಾನ್' ಹಾಡಂತೂ ಸ್ವಾತಂತ್ರ್ಯ ಚಳವಳಿಗೆ ಯುವಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 1943ರಲ್ಲಿ ಬಿಡುಗಡೆ ಆದ 'ಕಿಸ್ಮತ್' ಸಿನಿಮಾದ ಹಾಡು ಹೀಗಿದೆ, 'ದೂರ್ ಹಟೊ ದುನಿಯಾ ವಾಲೊ ಹಿಂದೂಸ್ಥಾನ್ ಹಮಾರಾ ಹೈ' (ದೂರ ಸರಿಯಿರಿ ವಿದೇಶಿಗರೆ ಭಾರತ ನಮ್ಮದು). ಈ ಹಾಡಂತೂ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಹಾಡು ಬರೆದವರ ವಿರುದ್ಧ ಹಾಗೂ ನಿರ್ದೇಶಕ, ನಿರ್ಮಾಪಕರ ವಿರುದ್ಧ ಬಂಧನ ವಾರೆಂಟ್ ಅನ್ನು ಬ್ರಿಟೀಷರು ಹೊರಡಿಸಿದ್ದರು.

ಭಾರತೀಯರ ವಿರುದ್ದ ಸಿನಿಮಾ ಮಾಡಿದ್ದ ಬ್ರಿಟೀಷರು
ವಿಚಿತ್ರವೆಂದರೆ ಸಿನಿಮಾಗಳ ಮೂಲಕ ಕಟ್ಟಲು ಯತ್ನಿಸುತ್ತಿದ್ದ ಚಳವಳಿಯನ್ನು ಸಿನಿಮಾಗಳ ಮೂಲಕವೇ ಒಡೆಯಲು ಯೋಜಿಸಿತ್ತು ಬ್ರಿಟೀಷ್ ಸರ್ಕಾರ. ಈಸ್ಟ್ ಇಂಡಿಯಾ ಕಂಪೆನಿಯು 1938ರಲ್ಲಿ 'ದಿ ಡ್ರಮ್' ಸಿನಿಮಾವನ್ನು ಪ್ರದರ್ಶಿಸಿತು. ಈ ಸಿನಿಮಾದಲ್ಲಿ ಬ್ರಿಟೀಷರು ಭಾರತದಲ್ಲಿ ತರಲು ಇಚ್ಛಿಸಿದ್ದ ಬದಲಾವಣೆಗೆ ಭಾರತೀಯ ಅಡ್ಡಿಪಡಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು. 'ದಿ ಡ್ರಮ್' ಸಿನಿಮಾದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫರ್ ಖಾನ್ ನೇತೃತ್ವದಲ್ಲಿ ಮುಂಬೈನಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು.

ಸುಭಾಷ್ ಚಂದ್ರ ಭೋಸರ ಚಿತ್ರವಿದ್ದ ಪೋಸ್ಟರ್
1945ರ ಬಳಿಕ ಬ್ರಿಟೀಷರು ಭಾರತ ಬಿಟ್ಟು ಹೊರಡಲು ಬಹುತೇಕ ತಯಾರಾಗಿದ್ದರು, ಆದರೆ ಆ ವೇಳೆಗಾಗಲೇ ಪ್ರತ್ಯೇಕ ರಾಷ್ಟ್ರದ ಕೂಗು ಸಣ್ಣಕ್ಕೆ ಎದ್ದಿತ್ತು, ಅದರ ವಿರುದ್ಧವಾಗಿ 'ಹಮ್ ಏಕ್ ಹೈ', ನೇತಾಜಿ ಸುಭಾಷ್ ಚಂದ್ರ ಭೋಸ್‌ರ ಚಿತ್ರಗಳಿದ್ದ 'ಏಕ್ ಕದಂ' ಸಿನಿಮಾಗಳು ಬಿಡುಗಡೆ ಆದವು. ಒಟ್ಟಿನಲ್ಲಿ ಭಾರತೀಯ ಸಿನಿಮಾವು ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿತ್ತು, ಸ್ವಾತಂತ್ರ್ಯ ಚಳವಳಿಗೆ ತಮ್ಮ ಯೋಗದಾನವನ್ನು ಭಾರತೀಯ ಸಿನಿಮಾ ಸಹ ನೀಡಿತ್ತು.