For Quick Alerts
  ALLOW NOTIFICATIONS  
  For Daily Alerts

  ಆಶ್ರಮದಲ್ಲಿ ನಡೆದ 'ಮಾಧವಿ'ಯ ಮದುವೆ ಕಥೆ

  |

  ''ನಿನ್ನ ಚೆಲುವ ವದನ ಕಮಲ ನಯನ.. ಸೆಳೆಯಲು ನಾ..''

  ಕನ್ನಡದ ಸೂಪರ್ ಹಿಟ್ 'ಜೀವನ ಚೈತ್ರ' ಚಿತ್ರದ ಈ ಹಾಡನ್ನು ಕೇಳಿದ ಕೂಡಲೆ ನಿಮ್ಮ ಮನ ಮಾಧವಿ ಕಡೆ ಜಾರಿದರೆ ಆಶ್ಚರ್ಯ ಇಲ್ಲ. ಯಾಕಂದ್ರೆ, ಮಾಧವಿಯ ಚೆಲುವ ವದನ ಸಿನಿ ಪ್ರಿಯರ ಹೃದಯದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ.

  80-90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ಕಂಡುಕೊಂಡಿದ್ದ ನಟಿ ಮಾಧವಿ. ಬರೀ ಚಂದನವನ ಮಾತ್ರ ಅಲ್ಲ.. ತೆಲುಗು, ತಮಿಳು, ಮಲಯಾಳಂ, ಒರಿಯಾ ಮತ್ತು ಹಿಂದಿ ಚಿತ್ರರಂಗದಲ್ಲೂ ಮಾಧವಿ ತಮ್ಮದೇ ಆದ ಛಾಪು ಮೂಡಿಸಿದ್ದರು.

  ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್.. ಈ ಎಲ್ಲಾ ಚಿತ್ರರಂಗದ ಸೂಪರ್ ಸ್ಟಾರ್ ಗಳ ಜೊತೆಗೆ ತೆರೆಹಂಚಿಕೊಂಡಿರುವ ಮಾಧವಿ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಬದುಕಿಗೆ ಕಾಲಿಟ್ಟರು.

  ಚಿತ್ರರಂಗದಲ್ಲಿರುವ ನಟ-ನಟಿಯರು ಲವ್ ಮ್ಯಾರೇಜ್ ಆಗುವುದು ಕಾಮನ್. ಅದರೆ, ಮಾಧವಿಯದ್ದು ಅಪ್ಪಟ ಅರೇಂಜ್ಡ್ ಮ್ಯಾರೇಜ್. ತಮ್ಮ ತಂದೆ-ತಾಯಿ ಹಾಗೂ ಗುರುಗಳು ತೋರಿಸಿದ ಯುವಕನನ್ನ ಹಿಂದು ಮುಂದು ನೋಡದೆ ಮಾಧವಿ ಮದುವೆ ಆದರು. ಹೀಗಾಗಿ, ಮದುವೆಗೂ ಮುನ್ನ ರಾಲ್ಫ್ ಜಯದೀಪ್ ಶರ್ಮಾ ಬಗ್ಗೆ ಮಾಧವಿಗೆ ಏನಂದ್ರೆ ಏನೂ ಗೊತ್ತಿರಲಿಲ್ಲ. ಅತ್ತ ಮಾಧವಿಯ ಪರಿಚಯ ಕೂಡ ರಾಲ್ಫ್ ಜಯದೀಪ್ ಶರ್ಮಾಗೆ ಇರಲಿಲ್ಲ.

  ಗೊತ್ತು ಗುರಿಯಿಲ್ಲದ ವಿದೇಶಿಗನನ್ನು ಮದುವೆ ಆದ ಮಾಧವಿಯ 'ಮ್ಯಾರೇಜ್ ಸ್ಟೋರಿ' ಇಲ್ಲಿದೆ ಓದಿರಿ...

  1996

  1996

  ಅಷ್ಟೊತ್ತಿಗಾಗಲೇ ನಟಿ ಮಾಧವಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳು ತುಂಬಿದ್ದವು. ವರನಟ ಡಾ.ರಾಜ್ ಕುಮಾರ್, ಮೆಗಾ ಸ್ಟಾರ್ ಚಿರಂಜೀವಿ, ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಸೂಪರ್ ಸ್ಟಾರ್ ರಜನಿಕಾಂತ್, ಬಿಗ್ ಬಿ ಅಮಿತಾಬ್ ಬಚ್ಚನ್, ಸಕಲಕಲಾವಲ್ಲಭ ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟಿ ಸೇರಿದಂತೆ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೆ ಮಾಧವಿ ಅಭಿನಯಿಸಿದ್ದರು. ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಯಶಸ್ಸೆಂಬ ಏಣಿಯ ಎತ್ತರದಲ್ಲಿ ಇರುವಾಗಲೇ ಮಾಧವಿ ಮದುವೆ ಆಗಲು ಮನಸ್ಸು ಮಾಡಿದ್ದರು.

  ನ್ಯೂಜೆರ್ಸಿಯಲ್ಲಿ ತಾಳೆ ಹೂವ ಪೊದೆಯಿಂದ ಮಾಧವಿನ್ಯೂಜೆರ್ಸಿಯಲ್ಲಿ ತಾಳೆ ಹೂವ ಪೊದೆಯಿಂದ ಮಾಧವಿ

  ಮಾಧವಿಗಿದ್ದ ಬಹುದೊಡ್ಡ ಆಸೆ

  ಮಾಧವಿಗಿದ್ದ ಬಹುದೊಡ್ಡ ಆಸೆ

  ನಟಿ ಮಾಧವಿ ಅಪ್ಪಟ ಸಂಪ್ರದಾಯಸ್ಥೆ. ಭಾರತೀಯ ಸಂಪ್ರದಾಯ, ಆಚಾರ, ವಿಚಾರಗಳು ಅಂದ್ರೆ ಮಾಧವಿಗೆ ಎಲ್ಲಿಲ್ಲದ ಗೌರವ. ಹೀಗಾಗಿ ಗುರು ಹಿರಿಯರು ನಿಶ್ಚಯಿಸಿದಂತೆ ತಮ್ಮ ಮದುವೆ ನಡೆಯಬೇಕು ಎಂಬ ಆಸೆ ಮಾಧವಿಗೆ ಚಿಕ್ಕವಯಸ್ಸಿನಿಂದಲೂ ಇತ್ತು. ಅದರಂತೆ ತಂದೆ-ತಾಯಿ ಮತ್ತು ತಮ್ಮ ಗುರುಗಳು ಹುಡುಕಿದ ಹುಡುಗನನ್ನೇ ವರಿಸಲು ಮಾಧವಿ ಮುಂದಾದರು.

  ಮಾಧವಿಗೆ ಸಿಕ್ಕ ವರ ಈತ...

  ಮಾಧವಿಗೆ ಸಿಕ್ಕ ವರ ಈತ...

  ಗುರುಗಳಾದ ಸ್ವಾಮಿ ರಾಮ ಮತ್ತು ತಂದೆ-ತಾಯಿ ಮಾಧವಿಗೆ ತೋರಿಸಿದ ಹುಡುಗ ರಾಲ್ಫ್ ಜಯದೀಪ್ ಶರ್ಮಾ. ಅಸಲಿಗೆ, ಈ ರಾಲ್ಫ್ ಜಯದೀಪ್ ಶರ್ಮಾ ಕೂಡ ಸ್ವಾಮಿ ರಾಮ ಶಿಷ್ಯವೃಂದದಲ್ಲಿ ಗುರುತಿಸಿಕೊಂಡಿದ್ದವರು. ರಾಲ್ಫ್ ಜಯದೀಪ್ ಶರ್ಮಾ ತಂದೆ ಪಂಜಾಬಿ ಆಗಿದ್ದರೆ, ತಾಯಿಯ ಮೂಲ ಜರ್ಮನಿ.

  1996 ಫೆಬ್ರವರಿ 14

  1996 ಫೆಬ್ರವರಿ 14

  ಅಂದು ಪ್ರೇಮಿಗಳ ದಿನಾಚರಣೆ ಆದರೂ ಸ್ವಾಮಿ ರಾಮ ಆಶ್ರಮದಲ್ಲಿ ಅಪ್ಪಟ ಅರೇಂಜ್ಡ್ ಮ್ಯಾರೇಜ್ ನಡೆಯಿತು. ವಿದೇಶಿ ಹಿನ್ನಲೆ ಹೊಂದಿದ್ದ ರಾಲ್ಫ್ ಜಯದೀಪ್ ಶರ್ಮಾ ಜೊತೆಗೆ ಮಾಧವಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆ ಮೂಲಕ ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳಬೇಕು ಎಂಬ ಮಾಧವಿಯ ಆಸೆ ಈಡೇರಿತು.

  ಗೊತ್ತು ಗುರಿ ಇರಲಿಲ್ಲ.!

  ಗೊತ್ತು ಗುರಿ ಇರಲಿಲ್ಲ.!

  ''ನಾನು ಯಾರು ಅನ್ನೋದು ಅವರಿಗೆ (ರಾಲ್ಫ್ ಜಯದೀಪ್ ಶರ್ಮಾ) ಗೊತ್ತಿರಲಿಲ್ಲ. ಅವರು ಯಾರು ಅನ್ನೋದು ನನಗೆ ಗೊತ್ತಿರಲಿಲ್ಲ. ನಾವಿಬ್ಬರು ಒಳ್ಳೆ ಜೋಡಿ ಆಗುತ್ತೇವೆ ಅಂತ ಸ್ವಾಮೀಜಿ ಮತ್ತು ತಂದೆ-ತಾಯಿ ಹೇಳಿದರು. ಸ್ವಾಮಿ ರಾಮ ಆಶ್ರಮದಲ್ಲಿ ನಮ್ಮ ಮದುವೆ ನಡೆಯಿತು. ಸ್ವಾಮೀಜಿ, ತಂದೆ-ತಾಯಿಯ ಆಯ್ಕೆ ಸರಿಯಾಗಿದೆ. ನಾವು ಖುಷಿಯಾಗಿದ್ದೇವೆ'' ಎಂದು ಸಂದರ್ಶನವೊಂದರಲ್ಲಿ ಮಾಧವಿ ಹೇಳಿಕೊಂಡಿದ್ದಾರೆ.

  ಭೇಟಿ ಆಗಿದ್ದಾಗ ಮಾತನಾಡಿದ್ದೇನು.?

  ಭೇಟಿ ಆಗಿದ್ದಾಗ ಮಾತನಾಡಿದ್ದೇನು.?

  ''ನಮ್ಮ ಮದುವೆಗೆ ಮುನ್ನ ಒಮ್ಮೆ ಮಾತ್ರ ಫೋನ್ ನಲ್ಲಿ ಮಾತಾಡಿದ್ವಿ. ಒಮ್ಮೆ ಮಾತ್ರ ಮೀಟ್ ಮಾಡಿದ್ವಿ. ಏರ್ ಪೋರ್ಟ್ ನಲ್ಲಿ ನನಗೆ ಅವರು ಎಂಗೇಜ್ ಮೆಂಟ್ ರಿಂಗ್ ಕೊಟ್ಟಿದ್ದರು. ಅದಾದ ಬಳಿಕ ಒಂದು ವಾರದ ಒಳಗೆ 1996, ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ನಮ್ಮ ಮದುವೆ ನಡೆಯಿತು. ಮದುವೆ ಆಗುವ ಮುನ್ನ ನನ್ನ ಪತಿಯನ್ನ ಭೇಟಿ ಮಾಡಿದ್ದಾಗ ನಾವು ಮಾತನಾಡಿದ್ದು ಎರಡೇ ವಿಷಯ... ಒಂದು... ನಮ್ಮ ತಂದೆ-ತಾಯಿ ಬದುಕಿರುವಷ್ಟು ಕಾಲ ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತೊಂದು... ಸಂಪಾದಿಸುವ ಹಣದಲ್ಲಿ ಸ್ವಲ್ಪ ಭಾಗವನ್ನ ಚಾರಿಟಿಗೆ ಬಳಸಿಕೊಳ್ಳಬೇಕು. ಈ ಎರಡು ವಿಷಯವನ್ನು ಬಿಟ್ಟರೆ ನಾವು ಬೇರೆ ಏನ್ನನ್ನೂ ಚರ್ಚೆ ಮಾಡಲಿಲ್ಲ. ಇವತ್ತಿನವರೆಗೂ ನಾವಿಬ್ಬರೂ ಈ ಮಾತಿನ ಮೇಲೆ ನಿಂತಿದ್ದೇವೆ'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಟಿ ಮಾಧವಿ.

  ಮಾಧವಿ ಹಾಕಿದ್ದ ಕಂಡೀಷನ್ ಏನು.?

  ಮಾಧವಿ ಹಾಕಿದ್ದ ಕಂಡೀಷನ್ ಏನು.?

  ಮದುವೆ ಆದರೂ ಎಷ್ಟೋ ವರ್ಷಗಳ ಕಾಲ ತಮ್ಮ ಸಿನಿಮಾಗಳನ್ನ ಪತಿ ರಾಲ್ಫ್ ಶರ್ಮಾಗೆ ಮಾಧವಿ ತೋರಿಸಿರಲಿಲ್ವಂತೆ. ಯಾಕಂದ್ರೆ, ಅವರದ್ದು ಅರೇಂಜ್ಡ್ ಮ್ಯಾರೇಜ್. ತಮ್ಮ ಸಿನಿಮಾಗಳನ್ನು ನೋಡಿ ಪತಿ ಏನನ್ನುತ್ತಾರೋ ಎಂಬ ಭಯ ಮಾಧವಿಗೆ ಇತ್ತಂತೆ. ಹೀಗಾಗಿ, ''ಯಾರಾದರೂ ನನ್ನ ಸಿನಿಮಾಗಳನ್ನು ನೋಡಿದ್ದೀರಾ ಅಂತ ಕೇಳಿದರೆ ಹೌದು ಎನ್ನಬೇಕು ಆದರೆ ನನ್ನ ಚಿತ್ರಗಳನ್ನು ನೋಡಬಾರದು'' ಅಂತ ಪತಿಗೆ ಮಾಧವಿ ಕಂಡೀಷನ್ ಹಾಕಿದ್ದರಂತೆ.

  ಹಾಗಾದ್ರೆ, ಪತ್ನಿಯ ಚಿತ್ರವನ್ನ ರಾಲ್ಫ್ ನೋಡಿಲ್ವಾ.?

  ಹಾಗಾದ್ರೆ, ಪತ್ನಿಯ ಚಿತ್ರವನ್ನ ರಾಲ್ಫ್ ನೋಡಿಲ್ವಾ.?

  ಮಾಧವಿ ಅಭಿನಯದ ಎರಡು ಚಿತ್ರಗಳನ್ನ ಮಾತ್ರ ಪತಿ ರಾಲ್ಫ್ ಶರ್ಮಾ ವೀಕ್ಷಿಸಿದ್ದಾರೆ. ಒಂದು 'ಮಾತೃ ದೇವೋ ಭವ', ಇನ್ನೊಂದು 'ಅಮಾವಾಸ್ಯ ಚಂದ್ರುಡು'. ಈ ಎರಡು ಚಿತ್ರಗಳನ್ನು ನೋಡಿದ್ಮೇಲೆ, ''ಆಕ್ಟಿಂಗ್ ಬಿಡಬೇಡ, ನೀನು ಉತ್ತಮ ನಟಿ'' ಅಂತ ಪತಿ ರಾಲ್ಫ್ ಶರ್ಮಾ ಬೆನ್ನು ತಟ್ಟಿದ್ದರಂತೆ. ''ಅದು ನನಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್'' ಎನ್ನುತ್ತಾರೆ ನಟಿ ಮಾಧವಿ.

  ಪತಿಯ ಬಿಸಿನೆಸ್ ನೋಡಿಕೊಳ್ಳುತ್ತಾರೆ ಮಾಧವಿ

  ಪತಿಯ ಬಿಸಿನೆಸ್ ನೋಡಿಕೊಳ್ಳುತ್ತಾರೆ ಮಾಧವಿ

  ಜರ್ಮನ್ ಮೂಲದ ರಾಲ್ಫ್ ಜಯದೀಪ್ ಶರ್ಮಾ ಅಮೇರಿಕಾದಲ್ಲಿ ಎರಡು ಫಾರ್ಮಸ್ಯುಟಿಕಲ್ ಕಂಪನಿ ಹೊಂದಿದ್ದಾರೆ. ಎರಡೂ ಕಂಪನಿಗಳಿಗೆ ಮಾಧವಿ ಉಪಾಧ್ಯಕ್ಷೆ ಆಗಿದ್ದಾರೆ. ಮದುವೆ ಆದ್ಮೇಲೆ ಅಮೇರಿಕಾದ ನ್ಯೂಜರ್ಸಿಯಲ್ಲೇ ಮಾಧವಿ ಸೆಟಲ್ ಆಗಿದ್ದಾರೆ. ಮಾಧವಿ ಮತ್ತು ರಾಲ್ಫ್ ಜಯದೀಪ್ ಶರ್ಮಾ ದಾಂಪತ್ಯಕ್ಕೆ ಸಾಕ್ಷಿಯಾಗಿ ಟಿಫಾನಿ ಶರ್ಮಾ, ಪ್ರಿಸಿಲ್ಲಾ ಶರ್ಮಾ ಮತ್ತು ಎವ್ಲಿನ್ ಶರ್ಮಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.

  ಬ್ಲಿಸ್ ಫುಲ್ ಮ್ಯಾರೇಜ್

  ಬ್ಲಿಸ್ ಫುಲ್ ಮ್ಯಾರೇಜ್

  ''ನನ್ನದು ಅರೇಂಜ್ಡ್ ಮ್ಯಾರೇಜ್. ಹೂವಿನ ಹಾಗೆ ನೋಡಿಕೊಳ್ಳುವ ಪತಿ ಸಿಕ್ಕಿದ್ದಾರೆ. ನಮ್ಮದು ಹ್ಯಾಪಿ ಮ್ಯಾರೇಜ್ ಮಾತ್ರ ಅಲ್ಲ.. ಬ್ಲಿಸ್ ಫುಲ್ ಮ್ಯಾರೇಜ್'' ಅಂತ ಎಲ್ಲಾ ಸಂದರ್ಶನಗಳಲ್ಲೂ ಖುಷಿಯಿಂದ ಅಷ್ಟೇ ಹೆಮ್ಮೆಯಿಂದ ಮಾಧವಿ ಹೇಳಿಕೊಳ್ಳುತ್ತಾರೆ. ಇನ್ನೂ ''ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮ ಮಕ್ಕಳಿಗೆ ಇವಳೇ ರೋಲ್ ಮಾಡೆಲ್'' ಅಂತಾರೆ ಪತಿ ರಾಲ್ಫ್ ಶರ್ಮಾ. ಮದುವೆ ಆದ್ಮೇಲೆ ಮಕ್ಕಳ ಲಾಲನೆ ಪಾಲನೆಯಲ್ಲೇ ಬಿಜಿಯಾದ ಮಾಧವಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು.

  ಮಕ್ಕಳ ಬಗ್ಗೆ ಮಾಧವಿ ಮಾತು

  ಮಕ್ಕಳ ಬಗ್ಗೆ ಮಾಧವಿ ಮಾತು

  ''ಭಾರತದಲ್ಲಿ ಇರುವಾಗ ದೇವಸ್ಥಾನಗಳಿಗೆ ಹೋಗುವುದು.. ದೇವರಿಗೆ ಹೂವು ಇಡುವುದು.. ಮಂತ್ರಪಟನ.. ಇದ್ಯಾವುದನ್ನೂ ಮಾಡುತ್ತಿರಲಿಲ್ಲ. ಮದುವೆಯಾಗಿ ಅಮೇರಿಕಾಗೆ ಹೋದ ಬಳಿಕ ನಮ್ಮ ಸಂಪ್ರದಾಯ, ಪದ್ಧತಿಯನ್ನು ಮಕ್ಕಳಿಗೆ ಹೇಳಿಕೊಡಬೇಕು ಅಂತ ಗಾಯತ್ರಿ ಮಂತ್ರ, ಮಹಾ ಮೃತ್ಯುಂಜಯ ಮಂತ್ರ, ಗಣಪತಿ ಸ್ತೋತ್ರ.. ಇವೆಲ್ಲವನ್ನೂ ನಾನು ಕಲಿತು, ನನ್ನ ಮೂವರು ಮಕ್ಕಳಿಗೆ ಹೇಳಿಕೊಟ್ಟಿದ್ದೇನೆ. 22ನೇ ವಿವಾಹ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡ್ತೀವಿ ಅಂತ ಹೇಳಿ ನಮ್ಮಿಬ್ಬರನ್ನೂ ಕೂರಿಸಿ, ನಮ್ಮ ಪಾದಗಳಿಗೆ ನನ್ನ ಮಕ್ಕಳು ನಮಸ್ಕಾರ ಮಾಡಿದರು. ನನ್ನ ಮಕ್ಕಳಿಗೆ ಇಲ್ಲಿನ ಸಂಸ್ಕೃತಿ ಬಗ್ಗೆ ಚೆನ್ನಾಗಿ ಅರಿವಿದೆ'' ಎಂದಿದ್ದಾರೆ ಮಾಧವಿ.

  ಮತ್ತೆ ನಟಿಸುತ್ತಾರಾ ಮಾಧವಿ.?

  ಮತ್ತೆ ನಟಿಸುತ್ತಾರಾ ಮಾಧವಿ.?

  ''ಒಳ್ಳೆ ಸಿನಿಮಾ ನೋಡಿದಾಗ ಮತ್ತೆ ಆಕ್ಟಿಂಗ್ ಮಾಡಬೇಕು ಅನಿಸುತ್ತದೆ. ಆದ್ರೆ, ನನಗೆ ಮೂವರು ಮಕ್ಕಳಿದ್ದಾರೆ. ಈಗಲೂ ಆಫರ್ಸ್ ಬರುತ್ತಿದೆ. ಅದನ್ನ ಒಪ್ಪಿಕೊಂಡು ಒಂದು ತಿಂಗಳು ಹೊರಗೆ ಹೋದರೆ, ನನ್ನ ಮಕ್ಕಳನ್ನು ನೋಡಿಕೊಳ್ಳುವವರು ಯಾರು.? ಮಕ್ಕಳ ಬಗ್ಗೆ ಕಾಳಜಿ ವಹಿಸಲು ಫ್ಯಾಮಿಲಿ ಇದೆ ನಿಜ. ಆದರೆ ನನಗೆ ಸಮಾಧಾನ ಇರುವುದಿಲ್ಲ. ಹೀಗಾಗಿ, ನಟನೆ ಮಾಡಲು ಮನಸ್ಸಿಲ್ಲ'' ಅಂತ ಮಾಧವಿ ಹೇಳುತ್ತಾರೆ. ಮಕ್ಕಳಿಗೆ ನಟನೆ ಬಗ್ಗೆ ಆಸಕ್ತಿ ಇದ್ಯಾ ಅಂತ ಕೇಳಿದರೆ, ''ಹೌದು, ಮೂವರು ಮಕ್ಕಳಲ್ಲಿ ಯಾರಾದರೂ ಒಬ್ಬರು ನಟಿಸುವೆ ಅಂದರೂ ಸಂತೋಷ ಪಡುವೆ'' ಎಂದು ಮುಗುಳ್ನಗುತ್ತಾರೆ ಮಾಧವಿ. ಅಂದ್ಹಾಗೆ, ಹಾಡುವುದರಲ್ಲಿ, ಪಿಯಾನೋ ನುಡಿಸುವುದರಲ್ಲಿ ಮಾಧವಿಯ ಮೂರೂ ಮಕ್ಕಳು ಎತ್ತಿದ ಕೈ.

  ನಟಿ ಮಾಧವಿ ಕುರಿತು...

  ನಟಿ ಮಾಧವಿ ಕುರಿತು...

  1962 ಆಗಸ್ಟ್ 12 ರಂದು ಹೈದರಾಬಾದ್ ನಲ್ಲಿ ಸಸಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಗೆ ಹುಟ್ಟಿದ ಪ್ರತಿಭಾವಂತೆ ಮಾಧವಿ. ಐದು ವರ್ಷವಿದ್ದಾಗಲೇ, ಭಾರತನಾಟ್ಯ ಅಭ್ಯಾಸ ಆರಂಭಿಸಿದ ಮಾಧವಿ ಸಾವಿರಕ್ಕೂ ಹೆಚ್ಚು ಪರ್ಫಾಮೆನ್ಸ್ ಕೊಟ್ಟಿದ್ದಾರೆ. 13 ವರ್ಷವಿದ್ದಾಗ ವೇದಿಕೆ ಮೇಲೆ ಮಾಧವಿಯ ನೃತ್ಯ ನೋಡಿ 'ತೂರ್ಪು ಪಾದಮರಾ' ಚಿತ್ರಕ್ಕೆ ತೆಲುಗು ನಿರ್ದೇಶಕ ದಾಸರಿ ನಾರಾಯಣ ರಾವ್ ಆಫರ್ ನೀಡಿದರು. ಆ ಚಿತ್ರ ಬಿಡುಗಡೆ ಆಗುವ ಮುನ್ನವೇ ಮಾಧವಿಗೆ ಅವಕಾಶಗಳ ಸುರಿಮಳೆಯಾಯಿತು. ಅಲ್ಲಿಂದ ಸಿನಿ ಲೋಕದಲ್ಲಿ ಆಕೆ ಹಿಂದಿರುಗಿ ನೋಡಿದ್ದೇ ಇಲ್ಲ. ''ನನ್ನದು ಬ್ಯೂಟಿಫುಲ್ ಲೈಫ್. ಅತ್ಯುತ್ತಮ ನಟ, ನಿರ್ದೇಶಕರು, ನಿರ್ಮಾಪಕರ ಜೊತೆಗೆ ಕೆಲಸ ಮಾಡಿದ್ದೇನೆ. ಅತ್ಯುತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾನು ತುಂಬಾ ಲಕ್ಕಿ'' ಎಂಬುದು ಮಾಧವಿ ಮಾತು.

  ಸುಖೀ ಜೀವಿ

  ಸುಖೀ ಜೀವಿ

  ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗ, ಮಾಧವಿ 20 ಗಂಟೆ ಕೆಲಸ ಮಾಡುತ್ತಿದ್ದರು. ಆದ್ರೆ ಈಗ ಅವರ ಜೀವನ ತುಂಬಾ ಶಾಂತವಾಗಿದೆ, ಸುಖವಾಗಿದೆ. ಬಿಸಿನೆಸ್ ಮತ್ತು ಮಕ್ಕಳ ಬಗ್ಗೆ ಮಾತ್ರ ಮಾಧವಿ ಗಮನ ಹರಿಸುತ್ತಿದ್ದಾರೆ. ನಿಮಗೆ ಗೊತ್ತಿಲ್ಲದ ಮತ್ತೊಂದು ವಿಚಾರ ಏನಂದ್ರೆ, ಮಾರ್ಷಲ್ ಆರ್ಟ್ಸ್, ಕಲರಿ ಪಯಟು, ಕರಾಟೆ, ಟೈಕ್ವಾಂಡೋ ದಲ್ಲಿ ಮಾಧವಿ ಎಕ್ಸ್ ಪರ್ಟ್. ಹಾಗೇ, ನ್ಯೂಜರ್ಸಿಯಲ್ಲಿ ಮಾಧವಿ ಫ್ಲೈಯಿಂಗ್ ತರಬೇತಿ ಕೂಡ ಪಡೆದಿದ್ದಾರೆ.

  ಚೌರಿಟಬಲ್ ಫೌಂಡೇಶನ್ ಸ್ಥಾಪನೆ

  ಚೌರಿಟಬಲ್ ಫೌಂಡೇಶನ್ ಸ್ಥಾಪನೆ

  'ಮಾಧವಿ ಚಾರಿಟಬಲ್ ಫೌಂಡೇಶನ್' ಎಂಬ ಸಂಸ್ಥೆಯನ್ನ ನಟಿ ಮಾಧವಿ ಸ್ಥಾಪಿಸಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯಾರಿಗೇ ಸಹಾಯ ಬೇಕಿದ್ದರೂ ಅದನ್ನ ಮಾಡಲು ಈ ಸಂಸ್ಥೆ ಸದಾ ಸಿದ್ಧವಿರುತ್ತದೆ. ಮಕ್ಕಳ ಆರೋಗ್ಯ, ಯುವಕರ ವಿದ್ಯಾಭ್ಯಾಸ, ವಯಸ್ಸಾದವರ ಆರೋಗ್ಯದ ಬಗ್ಗೆ ಈ ಚಾರಿಟಬಲ್ ಫೌಂಡೇಶನ್ ಹೆಚ್ಚು ಕಾಳಜಿ ವಹಿಸುತ್ತಿದೆ.

  English summary
  Kannada Actress Madhavi and Ralph Sharma are happily married couple. Here is the detailed report on Madhavi's Marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X