Just In
Don't Miss!
- News
ಬಜೆಟ್; ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಕೊಡುಗೆಗಳು
- Sports
ಕರ್ನಾಟಕ ಬಜೆಟ್: ಮಂಡ್ಯ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋ.ರೂ. ಘೋಷಣೆ
- Finance
ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
- Automobiles
ಪ್ರತಿ ಚಾರ್ಜ್ಗೆ 240 ಕಿ.ಮೀ ಮೈಲೇಜ್ ನೀಡುವ ಓಲಾ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
- Lifestyle
ಸೂಪರ್ ಫುಡ್ ಆಗಿರುವ ಟೆಫ್ ಬಗ್ಗೆ ನಿಮಗೆಷ್ಟು ಗೊತ್ತು?
- Education
Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಚಿತ್ರರಂಗ: ನೀವೇನಂತೀರಿ?
ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ, ಸಹ ನಟ-ನಟಿಯರು, ಸಂಗೀತ, ಕ್ಯಾಮೆರಾ, ಇವರೆಲ್ಲರೂ ಒಟ್ಟು ಸೇರಿ ಸಿನಿಮಾ ಆಗುತ್ತದೆ. ಆದರೆ ಈ ಎಲ್ಲರಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆಯೇ? ಖಂಡಿತ ಇಲ್ಲ.
ಸಿನಿಮಾ ಹುಟ್ಟಿದಾಗಿನಿಂದಲೂ ನಟಿಯರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾರಂಗದ ಏಳಿಗೆಯಲ್ಲಿ ಪುರುಷರಷ್ಟೆ ನಟಿಯರದ್ದೂ ಯೋಗದಾನವಿದೆ. ಆದರೆ ನಟಿಯರನ್ನು ಮೂರನೇ ದರ್ಜೆ ವ್ಯಕ್ತಿಗಳಂತೆ ಸಿನಿಮಾ ರಂಗದಲ್ಲಿ ಟ್ರೀಟ್ ಮಾಡಲಾಗುತ್ತಿದೆ. ಭಾರತದ ಎಲ್ಲ ಸಿನಿಮಾ ರಂಗದಲ್ಲಿಯೂ ಇದೇ ಸಮಸ್ಯೆ. ಕೆಲವರಷ್ಟೆ ಇದರ ಮಾತನಾಡುತ್ತಾರೆ. ಮಾತನಾಡಿದವರು ಅವಕಾಶ ಕಳೆದುಕೊಳ್ಳುತ್ತಾರೆ.
ನಟಿಯರಿಗೆ ಸೂಕ್ತ ಪ್ರಾಶಸ್ತ್ಯ ನೀಡಲಾಗುತ್ತಿಲ್ಲ ಎಂಬುದಕ್ಕೆ ಕಣ್ಣೆದಿರಿನ ಉದಾಹರಣೆ, ಸಿನಿಮಾದ ಪೋಸ್ಟರ್‌ಗಳು. ಇತ್ತೀಚಿನ ಯಾವುದೇ ಕನ್ನಡದ ಜನಪ್ರಿಯ ಸ್ಟಾರ್ ನಟನ ಸಿನಿಮಾದ ಪೋಸ್ಟರ್ ತೆಗೆದು ನೋಡಿರಿ ಅಲ್ಲಿ ಅಪ್ಪಿ-ತಪ್ಪಿಯೂ ನಾಯಕಿಯ ಚಿತ್ರ ಕಾಣುವುದಿಲ್ಲ. ಕನ್ನಡ ಮಾತ್ರವಲ್ಲ ಭಾರತದ ಬಹುತೇಕ ಎಲ್ಲ ಭಾಷೆಗಳ ಸಿನಿಮಾಗಳದ್ದೂ ಇದೇ ಕತೆಯೇ.
ದರ್ಶನ್, ಯಶ್, ಪುನೀತ್ ರಾಜ್‌ಕುಮಾರ್, ಸುದೀಪ್ ಇನ್ನೂ ಕೆಲವು ನಟರ ಸಿನಿಮಾ ಬಿಡುಗಡೆಗೆ ಮುನ್ನಾ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅವುಗಳಲ್ಲಿ ಅಪ್ಪ-ತಪ್ಪಿಯೂ ನಾಯಕಿಯರ ಚಿತ್ರ ಕಾಣುವುದಿಲ್ಲ. ಕಾಣುವುದು ನಾಯಕ ನಟನ ವೈಭವೀಕರಣವಷ್ಟೆ. ಸಿನಿಮಾದ ಪ್ರಮುಖ ಭಾಗವಾಗಿರುವ ನಟಿಯರಿಗೇಕೆ ಸಿನಿಮಾದ ಪ್ರಮುಖ 'ಪ್ರೊಮೋಷನ್ ಟೂಲ್' ಆದ ಪೋಸ್ಟರ್‌ನಲ್ಲಿ ಜಾಗವಿಲ್ಲ?

ಬಾಹುಬಲಿ ಪೋಸ್ಟರ್‌ನಲ್ಲಿ ಅನುಷ್ಕಾ ಶೆಟ್ಟಿ ಚಿತ್ರ ಇರಲಿಲ್ಲ
ನಾಯಕನಷ್ಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ ಸಹ ಪೋಸ್ಟರ್‌ನಲ್ಲಿ ನಟಿ ಕಾಣುವುದಿಲ್ಲ. 'ಬಾಹುಬಲಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿಯದ್ದು ದೇವಸೇನಾಳಂಥಹಾ ಪವರ್‌ಫುಲ್ ಪಾತ್ರ. ಆದರೆ ಸಿನಿಮಾ ಬಿಡುಗಡೆಗೆ ಮುನ್ನಾ ಅಧಿಕೃತವಾಗಿ ಹೊರಬಂದ ಯಾವ ಪೋಸ್ಟರ್‌ನಲ್ಲೂ ಅನುಷ್ಕಾ ಶೆಟ್ಟಿ ಚಿತ್ರವಿರಲಿಲ್ಲ. ಪ್ರಭಾಸ್-ರಾಣಾಗಿಂತಲೂ ಕಡಿಮೆಯಿಲ್ಲದಂತೆ ನಟಿಸಿದ್ದರು ಅನುಷ್ಕಾ ಶೆಟ್ಟಿ. ಕನ್ನಡದಲ್ಲಿಯೂ ಇಂಥಹಾ ಉದಾಹರಣೆಗಳು ಹಲವು.

ನಾಯಕ ನಟರ ಅಭದ್ರತೆ ಕಾರಣವಲ್ಲದೆ ಮತ್ತೇನು?
'ಜನಪ್ರಿಯ' ಸಿನಿಮಾಗಳಲ್ಲಿ ನಟಿಯರ ಪಾತ್ರ ಎಂಥಹದ್ದಿರುತ್ತದೆ ಎಂಬುದು ಪ್ರೇಕ್ಷಕರಿಗೆ ಗೊತ್ತಿಲ್ಲದೇ ಇರುವುದೇನಲ್ಲ. ಹಾಡು, ಮುತ್ತು, ನಾಯಕ ನಟನ ಸಾಧನೆಗೆ ಚಪ್ಪಾಳೆ ತಟ್ಟುವ ದೃಶ್ಯಗಳಷ್ಟೆ ನಟಿಯರ ಪಾಲಿಗೆ. ನಮ್ಮ ನಿರ್ದೇಶಕ, ನಟರಿಗೆ, ನಟಿಯರು ಬೇಕು. ಅದರಲ್ಲಿಯೂ ತೆಳ್ಳಗೆ-ಬೆಳ್ಳಗೆ, ನಾಯಕನ ವಯಸ್ಸಿನ ಅರ್ಧ ವಯಸ್ಸಿನ ನಟಿಯರೇ ಆಗಬೇಕು. ಆದರೆ ನಾಯಕ ನಟಿಯರ ಮುಖ ಮಾತ್ರ ಪೋಸ್ಟರ್‌ನಲ್ಲಿ ಕಂಡು ಅಪ್ಪಿ-ತಪ್ಪಿಯೂ ಜನಪ್ರಿಯಗೊಳ್ಳಬಾರದು. ಇದಕ್ಕೆ ನಾಯಕ ನಟರ 'ಅಭದ್ರತೆ' ಕಾರಣವಲ್ಲದೆ ಮತ್ತೇನೂ ಅಲ್ಲ.

ದನಿ ಎತ್ತಿದ್ದ ನಟಿ ಮಾಳವಿಕ ಮೋಹನನ್
ಕೆಲವು ತಿಂಗಳುಗಳ ಹಿಂದೆ ತಮಿಳಿನ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಕಾರ್ಟೂನ್ ಒಂದನ್ನು ಚಿತ್ರತಂಡ ಹೊರತಂದಿತ್ತು. 'ಮಾಸ್ಟರ್' ಸಿನಿಮಾದ ನಟರೆಲ್ಲಾ ಲಾಕ್‌ಡೌನ್ ಸಮಯದಲ್ಲಿ ಒಂದೇ ಮನೆಯಲ್ಲಿ ವಿವಿಧ ಕೆಲಸಗಳಲ್ಲಿ ನಿರತವಾಗಿರುವಂತೆ ತೋರುವ ಕಾರ್ಟೂನ್ ಅದು. ಆ ಕಾರ್ಟೂನ್‌ನಲ್ಲಿ ನಾಯಕಿ ಅಡುಗೆ ಮಾಡುತ್ತಿರುವಂತೆ ಚಿತ್ರಿಸಲಾಗಿತ್ತು. ಇದನ್ನು ಸಿನಿಮಾದ ನಾಯಕಿ ಮಾಳವಿಕಾ ಮೋಹನನ್ ಖಂಡಿಸಿದರು. 'ಇಲ್ಲೂ ಮಹಿಳೆಗೆ ಅಡುಗೆ ಮಾಡುವ ಕೆಲಸವನ್ನೇ ಕೊಟ್ಟಿರಾ?' ಎಂದು ವ್ಯಂಗ್ಯವಾಡಿದ್ದರು. ಕೂಡಲೇ ವಿಜಯ್ ಅಭಿಮಾನಿಗಳು ನಟಿಯ ಮೇಲೆ ಮುಗಿಬಿದ್ದರು. ಕೊನೆಗೆ ಒತ್ತಾಯಕ್ಕೆ ಮಣಿದು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದರು ನಟಿ ಮಾಳವಿಕಾ ಮೋಹನನ್. ಕಾರ್ಟೂನ್ ಡಿಲೀಟ್ ಆಗಲಿಲ್ಲ.

ಸಾಯಿ ಪಲ್ಲವಿ ಚಿತ್ರ ಬಿಟ್ಟಿದ್ದ 'ಮಾರಿ 2' ತಂಡ
ಇಂಥಹುದ್ದೆ ಇನ್ನೊಂದು ಉದಾಹರಣೆ. ತಮಿಳಿನ 'ಮಾರಿ 2' ಸಿನಿಮಾದ 'ರೌಡಿ ಬೇಬಿ' ಹಾಡು ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆಗೆ ಒಳಪಟ್ಟು ದಾಖಲೆ ಬರೆಯಿತು. ಆ ಹಾಡಿನಲ್ಲಿ ಸಾಯಿ ಪಲ್ಲವಿ, ಧನುಷ್ ನಟಿಸಿದ್ದರು. ಹಾಡು ದಾಖಲೆ ಬರೆದಿದ್ದಕ್ಕೆ 'ಮಾರಿ 2' ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಪೋಸ್ಟರ್ ನಲ್ಲಿ ಸಾಯಿಪಲ್ಲವಿ ಚಿತ್ರ, ಹೆಸರು ಇರಲಿಲ್ಲ. ಚಿತ್ರತಂಡಕ್ಕೆ ನಾಯಕಿ ಮುಖ್ಯ ಎನಿಸಲಿಲ್ಲ. ನಟಿಯೂ ಇದನ್ನು ಪ್ರಶ್ನೆ ಮಾಡಲಿಲ್ಲ. ಆದರೆ ಹಾಡಿನ ವಿಡಿಯೋ ನೋಡಿದರೆ ಗೊತ್ತಾಗುತ್ತದೆ, ಹಾಡಿನಲ್ಲಿ ಚೆನ್ನಾಗಿ ನರ್ತಿಸಿರುವುದು, ನಟಿಸಿರುವುದು ಧನುಷ್ ಅಲ್ಲ ಸಾಯಿ ಪಲ್ಲವಿ ಎಂದು.

ಪುರುಷರು ಬದಲಾದರಷ್ಟೆ ಮಹಿಳೆಯರಿಗೆ ಸಮಾನತೆ
ತೆರೆಯ ಮೇಲೆ ಮಹಿಳೆಯರ ಬಗ್ಗೆ, ಮಹಿಳಾ ಸಮಾನತೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನಾಯಕರು ಸಿನಿಮಾದ ಪೋಸ್ಟರ್‌ನಲ್ಲಿ ತಮ್ಮ ಚಿತ್ರದ ಪಕ್ಕ ನಾಯಕಿಯ ಚಿತ್ರ ಹಾಕಿಸಲು ಬಿಡದೇ ಇರುವುದು ಅವರ ಟೊಳ್ಳು ವ್ಯಕ್ತಿತ್ವಕ್ಕೆ ಸಾಕ್ಷಿ. ನಾಯಕನಟರಿಗೆ 'ಸರಿಬಾರದ' ನಟಿಯರನ್ನು ಸಿನಿಮಾದಿಂದ ತೆಗೆದು ಹಾಕುವುದು, ನಟಿಯರ ದೃಶ್ಯಕ್ಕೆ ಕತ್ತರಿ ಹಾಕುವುದು, ಸಂಭಾವನೆಯಲ್ಲಿ ಬಹುದೊಡ್ಡ ಅಂತರ, ಸ್ಕ್ರೀನ್ ಟೈಮ್ ನೀಡದೇ ಇರುವುದು ಇಂಥಹಾ ಹಲವಾರು ಸಮಸ್ಯೆಗಳನ್ನು ನಾಯಕಿಯರು ಎದುರಿಸುತ್ತಲೇ ಇದ್ದಾರೆ. ಆದರೆ ಅವರು ಸಮಸ್ಯೆಯ ವಿರುದ್ಧ ಮಾತನಾಡಲೂ ಆಗದ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ, ಮಾತನಾಡಿದರೆ ಅವಕಾಶಗಳಿಗೆ ಪೆಟ್ಟು ಬೀಳುತ್ತದೆ. ಪುರುಷ ಪ್ರಧಾನ ಸಿನಿಮಾ ಉದ್ಯಮದ ಪುರುಷರು ಬದಲಾದರಷ್ಟೆ ನಟಿಯರ ಪರಿಸ್ಥಿತಿ ಸುಧಾರಿಸಲು ಸಾಧ್ಯ.