For Quick Alerts
  ALLOW NOTIFICATIONS  
  For Daily Alerts

  ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣ

  |

  ನಟ ಸಂಚಾರಿ ವಿಜಯ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ನಟನೆಯ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕನ್ನಡದ ನಟ ವಿಜಯ್. ಇಂದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಂಚಾರಿ ವಿಜಯ್‌ ಈ ಹಂತಕ್ಕೆ ಬೆಳೆದು ಬಂದ ಹಾದಿ ಅತ್ಯಂತ ಕಠಿಣವಾಗಿತ್ತು. ಸಾಮಾನ್ಯ ಹಳ್ಳಿ ಹುಡುಗನೊಬ್ಬ ಹಲವು ಕಷ್ಟಗಳನ್ನು ಕಂಡು ಎತ್ತರಕ್ಕೆ ಏರಿದ ಆ ಪಯಣ ಹಲವರಿಗೆ ಸ್ಪೂರ್ತಿ ತುಂಬಬಲ್ಲದು.

  ನಗುಮೊಗದ ಸಂಚಾರಿ ವಿಜಯ್ ಜೀವನಚರಿತ್ರೆ | Filmibeat Kannada

  ಸಂಚಾರಿ ವಿಜಯ್‌ ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ಸುಂದರವಾದ ಬಾಲ್ಯ ಕಳೆದ ವಿಜಯ್ ಯೌವ್ವನಕ್ಕೆ ಕಾಲಿಡುವ ಮುಂಚೆಯೇ ಸರಣಿ ಸವಾಲುಗಳು ಅವರಿಗೆ ಎದುರಾದವು. ನರ್ಸ್ ಆಗಿದ್ದ ಅಮ್ಮ ಗೌರಮ್ಮ ಅನಾರೋಗ್ಯದಿಂದ ಆಸ್ಪತ್ರೆ ಹಿಡಿದರು. ಹಣದ ಕೊರತೆಯಿಂದ ಅವರನ್ನು ಬದುಕಿಸಿಕೊಳ್ಳಲಾಗಲಿಲ್ಲ. ನಂತರ ಕೆಲವೇ ತಿಂಗಳಲ್ಲಿ ತಂದೆಯೂ ನಿಧನ ಹೊಂದಿದರು. ಅಣ್ಣ ಮತ್ತು ಸಂಚಾರಿ ವಿಜಯ್ ಇಬ್ಬರೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಯಿತು.

  ಸಂದರ್ಶನವೊಂದರಲ್ಲಿ ಸಂಚಾರಿ ವಿಜಯ್ ಅವರೇ ಹೇಳಿಕೊಂಡಿರುವಂತೆ, 'ಸಹಾಯಕ್ಕಾಗಿ ಅಣ್ಣನ ಜೊತೆಗೆ ಯಾವುದೋ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಹೋದಾಗ ಇವರನ್ನು ನೋಡಿದ್ದೆ, 'ಇಂಥ *ಳೆ ಮಕ್ಳಿಗೆ ಯಾಕ್ರಿ ಸಹಾಯ ಮಾಡ್ಬೇಕು ಎಂದು ಹೀನಾ-ಮಾನ ಬೈದು ಅಪಮಾನಿಸಿದ್ದರಂತೆ. ತೀವ್ರ ನಿಂದನೆ, ಅವಮಾನ, ಹಸಿವು, ಹಂಬಲ ಎಲ್ಲವನ್ನೂ ಬಹಳ ಸಣ್ಣ ವಯಸ್ಸಿಗೆ ಅನುಭವಿಸಿದ್ದರು ಸಂಚಾರಿ ವಿಜಯ್. ಜಾತಿಯ ಕಾರಣಕ್ಕೆ ನಿಂದನೆ ಅನುಭವಿಸಿದ್ದ ಸಂಚಾರಿ ವಿಜಯ್, ಮುಂದೆ ಸೆಲೆಬ್ರಿಟಿ ಆದಾಗ ಜಾತಿ ಹೆಸರಲ್ಲಿ ಸನ್ಮಾನ ಮಾಡಲು ಬಂದವರನ್ನು ವಾಪಸ್ ಕಳಿಸಿದ್ದರು. ವಿಜಯ್ ಕಂಡ ಕಷ್ಟಗಳು ಅವರನ್ನು ಇನ್ನಷ್ಟು ಉತ್ತಮ ಮನುಷ್ಯನನ್ನಾಗಿ ರೂಪಿಸಿದವು.

  ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್

  ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್

  ಸಂಚಾರಿ ವಿಜಯ್ ಹಾಗೂ ಅಣ್ಣನಿಗೆ ಇದ್ದ ಆರ್ಥಿಕ ಪರಿಸ್ಥಿತಿಯಲ್ಲಿ ಕೇವಲ ಒಬ್ಬರಷ್ಟೆ ವಿದ್ಯಾಭ್ಯಾಸ ಮಾಡಬಹುದಾಗಿತ್ತು. ಚೆನ್ನಾಗಿ ಓದುತ್ತಿದ್ದ ಅಣ್ಣನನ್ನು ಓದಲು ಬಿಟ್ಟು ಸಂಚಾರಿ ವಿಜಯ್ ಬೆಂಗಳೂರಿನ ರಾಜಾಜಿನಗರದ ' ಮಲ್ನಾಡ್ ಕೆಫೆ' ಎಂಬಲ್ಲಿ ಲೋಟ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ಪ್ರತಿ ತಿಂಗಳು ಅಣ್ಣನಿಗೆ ಹಣ ಕಳಿಸುತ್ತಿದ್ದರು. ಅವೆಲ್ಲ ಬಹಳ ಕಷ್ಟದ ದಿನಗಳು ಸಂಚಾರಿ ವಿಜಯ್‌ಗೆ.

  ರಿಯಾಲಿಟಿ ಶೋನಲ್ಲಿ ಸ್ಪರ್ಧಾಳುವಾಗಿದ್ದರು ವಿಜಯ್

  ರಿಯಾಲಿಟಿ ಶೋನಲ್ಲಿ ಸ್ಪರ್ಧಾಳುವಾಗಿದ್ದರು ವಿಜಯ್

  ಅಣ್ಣನ ಓದು ಒಂದು ಹಂತಕ್ಕೆ ಬಂದ ಕೂಡಲೇ ಸಂಚಾರಿ ವಿಜಯ್‌ ಓದಲು ಆರಂಭಿಸಿದರು. ಅಣ್ಣ ಕೆಲಸಕ್ಕೆ ಹೋಗಿ ವಿಜಯ್‌ ಅನ್ನು ಸಾಕಲು ಆರಂಭಿಸಿದರು. ಚೆನ್ನಾಗಿಯೇ ಓದುತ್ತಿದ್ದ ಸಂಚಾರಿ ವಿಜಯ್ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರ್‌ ಸೀಟು ಸಹ ಪಡೆದರು. ಎಂಜಿನಿಯರಿಂಗ್ ಓದಿನ ಸಮಯದಲ್ಲಿಯೇ ರಂಗಭೂಮಿ ಸೆಳೆಯಿತು. ನಾಟಕಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಚನ್ನಾಗಿ ಹಾಡುತ್ತಿದ್ದ ವಿಜಯ್ ಖಾಸಗಿ ಚಾನೆಲ್‌ನ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದರು. ಆದರೆ ಅಲ್ಲಿ ಎಂಟನೇ ಎಪಿಸೋಡ್‌ಗೆ ಎಲಿಮಿನೇಟ್ ಆಗಿ ಪೂರ್ಣವಾಗಿ ನಾಟಕದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ಎರಡು ನಾಟಕ ನಿರ್ದೇಶನ ಸಹ ಮಾಡಿದ್ದಾರೆ ಸಂಚಾರಿ ವಿಜಯ್.

  ಪಾತ್ರಕ್ಕಾಗಿ ಸಾಕಷ್ಟು ಅಲೆದಾಡಿದ ಸಂಚಾರಿ ವಿಜಯ್

  ಪಾತ್ರಕ್ಕಾಗಿ ಸಾಕಷ್ಟು ಅಲೆದಾಡಿದ ಸಂಚಾರಿ ವಿಜಯ್

  ನಾಟಕದಿಂದ ಸಾಕಷ್ಟು ಕಲಿತ ಸಂಚಾರಿ ವಿಜಯ್ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಅಲೆದಾಡಲು ಆರಂಭಿಸಿದರು. ಆದರೆ ಅವಕಾಶ ಸಿಗುವುದು ಬಹಳ ಕಷ್ಟಕರವಾಗಿ ಪರಿಣಮಿಸಿತು. ಹಲವಾರು ಆಡಿಷನ್‌ಗಳನ್ನು ನೀಡಿದರು ಸಂಚಾರಿ ವಿಜಯ್. ಹಣವಿಲ್ಲದೆ ಸೈಕಲ್‌ನಲ್ಲಿಯೇ ಕಚೇರಿಗಳಿಗೆ, ರಂಗಮಂದಿರಗಳಿಗೆ ಅಲೆಯುತ್ತಿದ್ದರು. 2013ರಲ್ಲಿ ತೆರೆಗೆ ಬಂದ 'ಲೂಸಿಯಾ' ಸಿನಿಮಾದ ಪಾತ್ರವೊಂದಕ್ಕೆ ಆಡಿಷನ್ ನೀಡಲು ಹೋಗಿದ್ದ ಘಟನೆಯನ್ನು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿರುವ ವಿಜಯ್, 'ಕಾಸ್ಟಿಂಗ್ ಡೈರೆಕ್ಟರ್ ನಿನಗೆ ಏನು ತೋಚುತ್ತದೆ ಅದು ಮಾಡು ಎಂದರು. ನಾಟಕ, ಸಿನಿಮಾ, ಧಾರಾವಾಹಿ ಎಲ್ಲವನ್ನೂ ಸೇರಿಸಿ ನಟಿಸಲು ಆರಂಭಿಸಿದೆ. ನಟಿಸುತ್ತಲೇ ಇದ್ದೆ ಕಾಸ್ಟಿಂಗ್ ಡೈರೆಕ್ಟರ್‌ ಸುಮ್ಮನೇ ನೋಡುತ್ತಲೇ ಇದ್ದರು. ಕೊನೆಗೆ ನನಗೆ ಅಳುವೇ ಬಂದುಬಿಟ್ಟಿತು. 'ನಾನು ಇನ್ನೇನು ಮಾಡಲು ಸಾಧ್ಯ? ಇನ್ನೇನು ಮಾಡಬೇಕು ಇವರನ್ನು ಸೆಳೆಯಲು, ಪಾತ್ರ ಗಿಟ್ಟಿಸಿಕೊಳ್ಳಲು' ಎನಿಸಿಬಿಟ್ಟಿತು. ಆದರೆ ಆ ಕಾಸ್ಟಿಂಗ್ ಡೈರೆಕ್ಟರ್ ಹೇಳಿದರು, 'ನಿಮ್ಮಲ್ಲಿ ಅದ್ಭುತ ಪ್ರತಿಭೆಯಿದೆ. ನಿಮಗೆ ಅವಕಾಶ ಕೊಡಿಸುತ್ತೇನೆ ಎಂದು. ಅಂತೆಯೇ ಒಂದು ವಾರದ ಬಳಿಕ ಕರೆ ಮಾಡಿ ನಿಮಗೆ ಪಾತ್ರ ಸಿಕ್ಕಿದೆ ಎಂದರು. ಆದರೆ ಮತ್ತೆ ಮುಂದಿನ ವಾರ ಕರೆ ಮಾಡಿ ನಿಮಗೆ ನೀಡಲಾಗಿದ್ದ ಪಾತ್ರವನ್ನೇ ಸಿನಿಮಾದಿಂದ ಕತ್ತರಿಸಿಬಿಟ್ಟಿದ್ದಾರೆ ಎಂದು ಹೇಳಿದರಂತೆ. 'ಆ ಸಮಯದಲ್ಲಿ ನನ್ನ ಹೃದಯ ಒಡೆದುಹೋದಂತೆ ಭಾಸವಾಗಿತ್ತು' ಎಂದಿದ್ದರು ವಿಜಯ್.

  'ಹರಿವು' ಸಿನಿಮಾದಲ್ಲಿ ಅವಕಾಶ

  'ಹರಿವು' ಸಿನಿಮಾದಲ್ಲಿ ಅವಕಾಶ

  ನಂತರ ಮಂಸೋರೆ ನಿರ್ದೇಶನದ ಮೊದಲ ಸಿನಿಮಾ 'ಹರಿವು'ನಲ್ಲಿ ಮುಖ್ಯ ಪಾತ್ರ ದೊರೆತಿತು ವಿಜಯ್‌ಗೆ. ಆದರೆ ಕೆಲವೇ ದಿನಗಳ ಚಿತ್ರೀಕರಣದ ನಂತರ ಸಿನಿಮಾ ನಿಂತುಹೋಯಿತು. ನಂತರ ಮತ್ತೊಬ್ಬ ನಿರ್ಮಾಪಕರು ಸಿನಿಮಾವನ್ನು ಮುಂದುವರೆಸಿದರು ಆದರೆ ಕೆಲವೇ ದಿನದಲ್ಲಿ ಅವರಿಗೆ ಹಣದ ಸಮಸ್ಯೆ ಎದುರಾಗಿ ಸಿನಿಮಾ ನಿಲ್ಲಿಸಲು ಹೇಳಿದರು. ಕೊನೆಗೆ ಸಂಚಾರಿ ವಿಜಯ್ ಹಾಗೂ ಮಂಸೋರೆ ಸೇರಿ ಹಲವರಿಂದ ಸಾಲ ಪಡೆದು ಸಿನಿಮಾ ಪೂರ್ಣಗೊಳಿಸಿದರು. ಸಾಲ ಪಡೆಯುವಾಗ, 'ಈ ಸಿನಿಮಾ ಮುಗಿದ ಬಳಿಕ ನಾನು ಮತ್ತು ಮಂಸೋರೆ ಬೇರೆಡೆ ಕೆಲಸಕ್ಕೆ ಸೇರಿ ನಿಮ್ಮ ಸಾಲ ತೀರಿಸುತ್ತೇವೆ' ಎಂದು ಬಾಂಡ್ ಬರೆದುಕೊಟ್ಟಿದ್ದರಂತೆ. 'ಹರಿವು' ಸಿನಿಮಾ ಎದುರಿಸಿದ ಕಷ್ಟಗಳದ್ದೇ ಪ್ರತ್ಯೇಕ ಕತೆಯೇ ಆಗುತ್ತದೆ.

  ಒಗ್ಗರಣೆ ಸಿನಿಮಾದಲ್ಲಿ ತ್ರಿಲಿಂಗಿ ಪಾತ್ರ

  ಒಗ್ಗರಣೆ ಸಿನಿಮಾದಲ್ಲಿ ತ್ರಿಲಿಂಗಿ ಪಾತ್ರ

  'ಹರಿವು' ನಂತರ ಸಿನಿಮಾ ಆಸೆಯನ್ನು ಬಹುತೇಕ ಕೈಬಿಟ್ಟಿದ್ದರು ವಿಜಯ್, ಅಷ್ಟರಲ್ಲಿ 'ಹರಿವು' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಬಂತು. ಅದು ಮತ್ತೆ ವಿಜಯ್‌ ಅವರಲ್ಲಿ ಆಸೆ ಮೂಡಿಸಿತು. 'ಹರಿವು'ಗೆ ಪ್ರಶಸ್ತಿ ಸಿಕ್ಕರೂ ವಿಜಯ್‌ಗೆ ಹೆಚ್ಚಿನ ಅವಕಾಶಗಳೇನು ಸಿಗಲಿಲ್ಲ. ಅದೇ ಸಮಯದಲ್ಲಿ ಪ್ರಕಾಶ್ ರೈ ನಿರ್ದೇಶನದ 'ಒಗ್ಗರಣೆ' ಸಿನಿಮಾದಲ್ಲಿ ವಿಜಯ್ ಹೆಣ್ಣಿನ ಪಾತ್ರದಲ್ಲಿ ನಟಿಸಿದ್ದರು. ಅದೊಂದು ಸಣ್ಣ ಪಾತ್ರ. ಆ ಪಾತ್ರವನ್ನು ನೋಡಿದ ನಿರ್ದೇಶಕ ಲಿಂಗದೇವರು ತಮ್ಮ 'ನಾನು ಅವನಲ್ಲ ಅವಳು' ಸಿನಿಮಾದಲ್ಲಿ ಅವಕಾಶ ನೀಡಿದರು.

  ಅಮೀರ್ ಖಾನ್‌ ಅನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದ ವಿಜಯ್

  ಅಮೀರ್ ಖಾನ್‌ ಅನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದ ವಿಜಯ್

  ಆ ಸಿನಿಮಾಕ್ಕಾಗಿ ಸಂಚಾರಿ ವಿಜಯ್ ತಮ್ಮ ಪ್ರತಿಭೆಯನ್ನೆಲ್ಲ ಧಾರೆ ಎರೆದರು. ಇದೇ ನನ್ನ ಕೊನೆಯ ಅವಕಾಶ ಎಂಬಂತೆ ಆ ಸಿನಿಮಾದಲ್ಲಿ ನಟಿಸಿದರು. ಅದಕ್ಕೆ ತಕ್ಕ ಪ್ರತಿಫಲವೂ ದೊರಕಿತು. ಅಮೀರ್ ಖಾನ್, ಮಮ್ಮುಟಿ, ಶಾಹಿದ್ ಕಪೂರ್ ಅವರುಗಳನ್ನು ಮೀರಿಸಿ ರಾಷ್ಟ್ರಪ್ರಶಸ್ತಿ ತಮ್ಮದಾಗಿಸಿಕೊಂಡರು ವಿಜಯ್. ಆದರೆ ಆ ನಂತರ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ. ರಾಷ್ಟ್ರಪ್ರಶಸ್ತಿಗೆ ಮುನ್ನ ಸಣ್ಣ-ಪುಟ್ಟ ಪಾತ್ರಗಳಿಗಾದರೂ ಕರೆಯುತ್ತಿದ್ದವರು, ರಾಷ್ಟ್ರಪ್ರಶಸ್ತಿ ದೊರೆತ ಬಳಿಕ ಸಣ್ಣ ಪಾತ್ರಗಳಿಗೆ ಕರೆಯುವುದು ಸಹ ಬಿಟ್ಟುಬಿಟ್ಟರು. ರಾಷ್ಟ್ರಪ್ರಶಸ್ತಿ ಬಂದ ಬಳಿಕ ಏಳು ತಿಂಗಳ ಕಾಲ ಕೆಲಸವಿಲ್ಲದೆ ಕೂತಿದ್ದರು ಸಂಚಾರಿ ವಿಜಯ್. ಆದರೆ ಕೊನೆಗೆ ಶಿವರಾಜ್‌ ಕುಮಾರ್ ನಟನೆಯ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಸಣ್ಣ ಪಾತ್ರವೊಂದು ದೊರೆತಿತು.

  ಕೃಷ್ಣ-ತುಳಸಿ ಸಿನಿಮಾದಲ್ಲಿ ಉತ್ತಮ ಅಭಿನಯ

  ಕೃಷ್ಣ-ತುಳಸಿ ಸಿನಿಮಾದಲ್ಲಿ ಉತ್ತಮ ಅಭಿನಯ

  ಆ ನಂತರ 'ಸಿಪಾಯಿ' ಸಿನಿಮಾದಲ್ಲಿ ಸಣ್ಣ ಪಾತ್ರ, 'ರಿಕ್ತ' ಸಿನಿಮಾದಲ್ಲಿ ಪ್ರಮುಖ ಪಾತ್ರ. 'ಅಲ್ಲಮ' ಸಿನಿಮಾದಲ್ಲಿ ಬಸವಣ್ಣನ ಪಾತ್ರ. ಹೀಗೆ ಕೆಲಸದ ಕೊರತೆ ಇರದೆ ಸತತವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು ವಿಜಯ್. ಆದರೆ ಸಂಚಾರಿ ವಿಜಯ್‌ಗೆ ಮತ್ತೆ ತಮ್ಮ ಅಭಿನಯವನ್ನು ಪ್ರತಿಭೆಯನ್ನು ಮತ್ತೊಮ್ಮೆ ಪ್ರೇಕ್ಷಕರ ಎದುರಿಗಿಡಲು ಅವಕಾಶ ದೊರೆತದ್ದು 'ಕೃಷ್ಣ-ತುಳಸಿ' ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ಅಂಧ ವ್ಯಕ್ತಿಯಾಗಿ ವಿಜಯ್ ಅದ್ಭುತವಾದ ಅಭಿನಯ ನೀಡಿದರು. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಯೂ ಕೇಳಿ ಬಂತು. ನಂತರ '6ನೇ ಮೈಲಿ' ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡರು. ಮತ್ತೊಮ್ಮೆ ಮಂಸೋರೆ ನಿರ್ದೇಶನದ 'ನಾತಿಚರಾಮಿ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು ವಿಜಯ್. ಆ ಸಿನಿಮಾಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

  ಮೂರು ಸಿನಿಮಾಗಳಲ್ಲಿ ನಟಿಸುತ್ತಿರುವ ವಿಜಯ್

  ಮೂರು ಸಿನಿಮಾಗಳಲ್ಲಿ ನಟಿಸುತ್ತಿರುವ ವಿಜಯ್

  ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್‌ಮನ್', ಮಂಸೋರೆ ನಿರ್ದೇಶನದ ಹಿಟ್ ಸಿನಿಮಾ 'ಆಕ್ಟ್ 1978' ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್, 'ಆಟಕ್ಕುಂಟು ಲೆಕ್ಕಕ್ಕಿಲ್ಲ', 'ಮೇಲೊಬ್ಬ ಮಾಯಾವಿ' ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಜೊತೆಗೆ ಲೂಸ್ ಮಾದ ಖ್ಯಾತಿಯ ಯೋಗೀಶ್‌ ಜೊತೆಗೆ 'ಲಂಕೆ' ಸಿನಿಮಾ ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಲಿದ್ದರು ಅಷ್ಟರಲ್ಲೇ ವಿಧಿ ಅವರನ್ನು ಇಂಥ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ.

  English summary
  Who is Sanchari Vijay? Check out Sanchari Vijay Biography Age, Wife, Family, Career, Movies, Awards and achievements.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X