Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗ್ಲಾಮರ್ ಗೊಂಬೆ ಮುಮೈತ್ ಖಾನ್ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?
'ಇಪ್ಪಟಿಕಿಂಕಾ ನಾ ವಯಸ್ಸು ನಿಂಡಾ ಪದಹಾರೆ' (ನನ್ನ ವಯಸ್ಸು ಈಗಿನ್ನೂ ಹದಿನಾರು) ಎಂದು ಹಾಡಿ ಕುಣಿದಿದ್ದ ಮುಮೈತ್ ಖಾನ್ ಜೀವನಕ್ಕೂ ಈ ಹಾಡಿನ ಸಾಲಿಗೂ ಸಂಬಂಧವಿದೆ. ಮುಮೈತ್ ಖಾನ್ ಮೊದಲ ಬಾರಿಗೆ 'ಐಟಂ ಹಾಡಿಗೆ' ಕುಣಿದಾಗ ಅವರಿಗಿನ್ನೂ ಆಗಷ್ಟೆ ಹದಿನಾರು ತುಂಬಿ ಹದಿನೇಳಕ್ಕೆ ಬಿದ್ದಿತ್ತು. ಹದಿನೆಂಟು ತುಂಬವ ಮೊದಲೇ ಮಾದಕ ಉಡುಗೆ ತೊಟ್ಟು ಹುಡುಗರ ಗುಂಪಿನ ನಡುವೆ ಮಾದಕವಾಗಿ ನರ್ತಿಸಿದ್ದರು ಮುಮೈತ್ ಖಾನ್. ಇದಕ್ಕೆ ಕಾರಣ ಮುಮೈತ್ ಖಾನ್ ಕುಟುಂಬದವರ ಆರ್ಥಿಕ ಸ್ಥಿತಿ.
ಮುಮೈತ್ ಖಾನ್ ಹುಟ್ಟಿದ್ದು ಮುಂಬೈನಲ್ಲಿ. ಮುಮೈತ್ ಖಾನ್‌ರ ತಂದೆ ಪಾಕಿಸ್ತಾನದ ಮೂಲದವರು ತಾಯಿ ಚೆನ್ನೈನವರು. ಮುಮೈತ್ ಖಾನ್ ಸಂಬಂಧಿಗಳು ಈಗಲೂ ಪಾಕಿಸ್ತಾನದಲ್ಲಿದ್ದಾರೆ. ಮುಮೈತ್ ಖಾನ್‌ಗೆ ಇಬ್ಬರು ಅಕ್ಕಂದಿರಿದ್ದಾರೆ. ಬಡ ಮಧ್ಯಮ ವರ್ಗ ಕುಟುಂಬ ಸ್ತರದ ಮುಮೈತ್ ಖಾನ್ ಹಾಗೂ ಅವರ ಸಹೋದರಿಯರು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಣ ಕಲಿತವರು.
ಎಳವೆಯಲ್ಲಿಯೇ ನೃತ್ಯದ ಬಗ್ಗೆ ಅಪಾರ ಪ್ರೀತಿ ಮುಮೈತ್‌ಖಾನ್‌ಗೆ. ಮಗಳ ನೃತ್ಯ ಪ್ರೀತಿ ಕಂಡು ಅಪ್ಪ ಅಬ್ದುಲ್ ರಶೀದ್ ಖಾನ್ ಒಂದು ಸೆಕೆಂಡ್ ಹ್ಯಾಂಡ್ ರೇಡಿಯೋ ತಂದುಕೊಟ್ಟರಂತೆ. ರೆಡಿಯೋದಲ್ಲಿ ಬರುವ ಹಾಡುಗಳಿಗೆ ಡಾನ್ಸ್ ಮಾಡುತ್ತಲೇ ಸಮಯ ಕಳೆಯುತ್ತಿದ್ದ ಮುಮೈತ್ ಖಾನ್ ಎಂಟನೇ ತರಗತಿ ಫೇಲ್ ಆಗಿ ಮನೆಯಲ್ಲಿ ಕೂತರು. ಅದೇ ಸಮಯಕ್ಕೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸಹ ತೀರ ಹದಗೆಟ್ಟಿತ್ತು. ಆ ನಂತರ ಶಾಲೆಗೆ ಹೋಗುವ ಪ್ರಯತ್ನವನ್ನೂ ಮಾಡಲಿಲ್ಲ ಮುಮೈತ್ ಖಾನ್.

ಮುಮೈತ್ ಖಾನ್‌ಗೆ ಆಗ ಅವಕಾಶ ಕೊಟ್ಟಿದ್ದು ಈಗಿನ ನಂಬರ್ 1 ನೃತ್ಯ ನಿರ್ದೇಶಕ
ಹೀಗೆ ನಡೆಯುತ್ತಿರುವಾಗ ಮುಮೈತ್ ಖಾನ್ ಅಕ್ಕನ ಶಾಲೆಯಲ್ಲಿ ನೃತ್ಯ ಕಾರ್ಯಕ್ರಮ ಕೊಡಬೇಕಾಗಿ ಬಂತು. ನೃತ್ಯ ಮಾಡಲು ಸಹಾಯ ಮಾಡುವಂತೆ ಮುಮೈತ್ ಖಾನ್‌ರನ್ನು ಕೇಳಿದ್ದಾರೆ ಅಕ್ಕ. ನೃತ್ಯವೆಂದರೆ ಪಂಚ ಪ್ರಾಣವಾಗಿದ್ದ ಮುಮೈತ್ ಖಾನ್ ನೃತ್ಯ ನಿರ್ದೇಶನ ಮಾಡಿ ತಾನೂ ಸಹ ಅಕ್ಕನ ಜೊತೆ ವೇದಿಕೆ ಏರಿ ಡಾನ್ಸ್ ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ಬಂದಿದ್ದ ಡಾನ್ಸ್ ಮಾಸ್ಟರ್ ಒಬ್ಬ ಈ ಸಹೋದರಿಯರ ನೃತ್ಯ ನೋಡಿ ಇಷ್ಟಪಟ್ಟು ಆಗತಾನೆ ಪ್ರಾರಂಭಿಸಿದ್ದ ತನ್ನ ಡಾನ್ಸ್ ತಂಡದಲ್ಲಿ ನರ್ತಿಸುವಂತೆ ಆಹ್ವಾನ ನೀಡಿ, ಹಣ ಸಹ ನೀಡುವುದಾಗಿ ಹೇಳಿದ್ದಾನೆ. ಮನೆಯ ಆರ್ಥಿಕ ಸ್ಥಿತಿ ಅರಿವಿದ್ದ ಈ ಸಹೋದರಿಯರು ಪೋಷಕರ ಅನುಮತಿ ಪಡೆದು ಡಾನ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗೆ ಮುಮೈತ್ ಖಾನ್ ಅನ್ನು ತನ್ನ ಡಾನ್ಸ್ ತಂಡದಲ್ಲಿ ಸೇರಿಸಿಕೊಂಡಿದ್ದ ಬೇರಾರೂ ಅಲ್ಲ ಈಗಿನ ನಂಬರ್ ನೃತ್ಯ ಸಂಯೋಜಕ ರೆಮೊ ಡಿಸೋಜಾ!

ಮೊದಲ ಸಂಪಾದನೆ 750 ರು.
ಆಗಿನ ಕಾಲಕ್ಕೆ ಮುಮೈತ್ ಖಾನ್‌ಗೆ ತಿಂಗಳಿಗೆ ಸಾವಿರದ ಐದುನೂರು ರೂಪಾಯಿ ಸಂಬಳ ಆಕೆಯ ಅಕ್ಕನಿಗೂ ಅಷ್ಟೆ. ರೆಮೊ ಡಿಸೋಜಾ ನೃತ್ಯ ತಂಡದಲ್ಲಿ ಡಾನ್ಸ್ ಮಾಡುತ್ತಿದ್ದ ಮುಮೈತ್ ಖಾನ್ ನಂತರ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಸಹನರ್ತಕಿಯಾಗಿ ಕುಣಿದಿದ್ದು 2002 ರಲ್ಲಿ ಬಿಡುಗಡೆ ಆದ ಹಿಂದಿ ಸಿನಿಮಾ 'ಯೇ ಕ್ಯಾ ಹೋ ರಹಾ ಹೈ' ಮೂಲಕ. ಆಗಿನ್ನೂ ಮುಮೈತ್ ಖಾನ್‌ಗೆ ಹದಿನಾರು ವರ್ಷ ವಯಸ್ಸು. ಮೊದಲ ಸಿನಿಮಾದಲ್ಲಿ ಡಾನ್ಸ್ ಮಾಡಿದ್ದಕ್ಕೆ ಮುಮೈತ್ ಖಾನ್‌ಗೆ 750 ರು. ಸಿಕ್ಕಿದ್ದನ್ನು ಹಲವು ಸಂದರ್ಶನಗಳಲ್ಲಿ ನೆನಪು ಮಾಡಿಕೊಂಡಿದ್ದಾರೆ ಮುಮೈತ್ ಖಾನ್.

ಖ್ಯಾತ ನಿರ್ದೇಶನಕನ ಮೊದಲ ಸಿನಿಮಾಕ್ಕೆ ಆಯ್ಕೆ
ಮನತುಂಬಿ ನರ್ತಿಸುತ್ತಿದ್ದ ಮುಮೈತ್ ಖಾನ್‌ಗೆ ಹಿಂದಿನ ಸಾಲಿನ ನರ್ತಕಿ ಸ್ಥಾನದಿಂದ ಮುಂದಿನ ಸಾಲಿನ ಸಹ ನರ್ತಕಿಯಾಗಿ ಪದೋನ್ನತಿ ಪಡೆಯಲು ಹೆಚ್ಚು ಕಾಲ ಹಿಡಿಯಲಿಲ್ಲ. ಆದರೆ ಮುಮೈತ್ ಖಾನ್‌ಗೆ ನಿಜವಾದ ಅದೃಷ್ಟ ಖುಲಾಯಿಸಿದ್ದು 2003 ರಲ್ಲಿ. ರಾಜ್‌ಕುಮಾರ್ ಹಿರಾನಿ ಮೊದಲ ಬಾರಿಗೆ ನಿರ್ದೇಶನದ ಟೋಪಿ ತೊಟ್ಟು ಸಂಜಯ್ ದತ್‌ಗಾಗಿ 'ಮುನ್ನಾಭಾಯಿ ಎಂಬಿಬಿಎಸ್' ಸಿನಿಮಾ ಮಾಡಲು ತಯಾರಾಗಿದ್ದರು. ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ಹೊಸ ಮುಖವೊಂದು ಬೇಕಾಗಿತ್ತು. ಆಗ ಹಿರಾನಿ ಅವರ ತಂಡದಲ್ಲಿದ್ದ ಉಮಾ ಎಂಬುವರು ಮುಮೈತ್ ಖಾನ್ ಫೊಟೊ, ವಿಡಿಯೋಗಳನ್ನು ಹಿರಾನಿಗೆ ತೋರಿಸಿದರು.

2003 ರಲ್ಲಿ ಸಿಕ್ಕಿತು ಮೊದಲ ಹಿಟ್
ಆಗ ಹಿರಾನಿ ಬಗ್ಗೆ ಗೊತ್ತಿರದ ಮುಮೈತ್ ಖಾನ್ ಮೊದಲಿಗೆ ಆಡಿಷನ್ ಕೊಡಲು ನಿರಾಕರಿಸಿದ್ದರಂತೆ, ಆದರೆ ಆ ನಂತರ ಉಮಾ ಒತ್ತಾಯದ ಮೇರೆಗೆ ಆಡಿಷನ್ ನೀಡಿದಾಗ ಹಿರಾನಿ, ಮುಮೈತ್ ಅನ್ನು ಆಯ್ಕೆ ಮಾಡಿದರು. ಆದರೆ ಆಗ ಮುಮೈತ್ ಖಾನ್‌ಗೆ ಇನ್ನೂ ಹದಿನೆಂಟಾಗಿರಲಿಲ್ಲ. ಹಾಗಾಗಿ ಕೆಲವು ಒಪ್ಪಂದಗಳ ಮೇಲೆ ಮುಮೈತ್ ಖಾನ್ ಪೋಷಕರ ಸಹಿ ಪಡೆದು ಐಟಂ ಹಾಡಿನಲ್ಲಿ ನಟಿಸಿದರು. 'ದೇಖಲೇ ಆಂಖೋಮೆ ಆಂಖೆ ಡಾಲ್ ಸೀಖಲೇ' ಎಂಬ ಆ ಹಾಡು ಸಖತ್ ಹಿಟ್ ಆಯ್ತು. ಆ ನಂತರ ಹಲವು ಅವಕಾಶಗಳು ಮುಮೈತ್ ಖಾನ್ ಅನ್ನು ಅರಸಿ ಬಂದವು.

ಒಂದೇ ವರ್ಷಕ್ಕೆ ಹಲವಾರು ಅವಕಾಶಗಳು ಅರಸಿ ಬಂದವು
ಮುನ್ನಾಭಾಯಿ ಸಿನಿಮಾ ಬಿಡುಗಡೆ ಆದ ನಂತರ 2004 ರಲ್ಲಿ ಜೂಲಿ, ಅಸಂಭವ್, ಹಲ್‌ಚಲ್ ಹಿಂದಿ ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು ಮುಮ್ಮೈತ್ ಖಾನ್. ಅದೇ ವರ್ಷ ತೆಲುಗಿನಲ್ಲಿ ದಿವಂಗತ ಹರಿಕೃಷ್ಣ ನಟಿಸಿದ್ದ 'ಸ್ವಾಮಿ' ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ನರ್ತಿಸಿದರು. ಅದರ ಜೊತೆಗೆ ಪುರಿ ಜಗನ್ನಾಥ್ ನಿರ್ದೇಶನದ '143' ಸಿನಿಮಾದ ಹಾಡಿಗೂ ಹೆಜ್ಜೆ ಹಾಕಿದರು. ಅದೇ 2004 ರಲ್ಲಿ ತಮಿಳಿನ 'ಜೈ' ಸಿನಿಮಾದಲ್ಲಿಯೂ ಮಾದಕ ಹಾಡಿಗೆ ಸೊಂಟ ಬಳುಕಿಸಿದರು. ಒಂದೇ ವರ್ಷದಲ್ಲಿ ಮುಮೈತ್ ಖಾನ್ ಭಾರಿ ಬ್ಯುಸಿ ಐಟಂ ಸಾಂಗ್ ಡ್ಯಾನ್ಸರ್ ಆಗಿಬಿಟ್ಟರು.

'ಪೋಕಿರಿ' ಸಿನಿಮಾದ ಬಳಿಕ ಹಿಂತಿರುಗಿ ನೋಡಿದ್ದಿಲ್ಲ ಮುಮೈತ್ ಖಾನ್
2005 ರಲ್ಲಿ ಹಲವು ಹಿಂದಿ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ ಮುಮೈತ್ ಖಾನ್ ಆ ವರ್ಷ ತೆಲುಗಿನ 'ಛತ್ರಪತಿ' ಹಾಗೂ ತಮಿಳಿನ ಒಂದು ಸಿನಿಮಾದಲ್ಲಿ ಮಾತ್ರವೇ ನರ್ತಿಸಿದ್ದರು. ಆದರೆ ನಿಜವಾಗಿಯೂ ಮುಮೈತ್ ಖಾನ್ ಅನ್ನು ತೆಲುಗು ಚಿತ್ರರಂಗ ಒಪ್ಪಿಕೊಂಡು-ಅಪ್ಪಿಕೊಂಡಿದ್ದು 2006 ರಲ್ಲಿ ಬಿಡುಗಡೆ ಆದ 'ಪೋಕಿರಿ' ಸಿನಿಮಾದ ನಂತರ. 'ಪೋಕಿರಿ' ಸಿನಿಮಾದಲ್ಲಿ 'ಇಪ್ಪಟಿಕಿಂಕಾ ನಾ ವಯಸ್ಸು ನಿಂಡಾ ಪದಹಾರೆ' ಹಾಡಿಗೆ ಮುಮೈತ್ ಖಾನ್ ನರ್ತಿಸಿದ ರೀತಿ, ಜೊತೆಗೆ ಮಹೇಶ್ ಬಾಬು ಅಂದ ಎಲ್ಲವೂ ಸೇರಿ ಹಾಡು ಸೂಪರ್ ಡೂಪರ್ ಹಿಟ್ ಆಯಿತು. ಆ ಸಮಯದಲ್ಲಿ ಎಲ್ಲಿ ಹೋದರು 'ಇಪ್ಪಟಿಕಿಂಕಾ ನಾ ವಯಸ್ಸು' ಹಾಡೇ ಕೇಳುತ್ತಿತ್ತು. ಅದಾದ ಬಳಿಕ ತೆಲುಗು ಸಿನಿಮಾಗಳಲ್ಲಿ ಮುಮೈತ್ ಖಾನ್ ಪರ್ಮನೆಂಟ್ ಐಟಂ ಸಾಂಗ್ ಡ್ಯಾನ್ಸರ್ ಆಗಿಬಿಟ್ಟರು.

ಒಂದೇ ವರ್ಷದಲ್ಲಿ ಹದಿನೆಂಟು ಸಿನಿಮಾ!
ಮುಮೈತ್ ಖಾನ್ ಬೇಡಿಕೆ ಅದೆಷ್ಟು ಹೆಚ್ಚಾಯಿತೆಂದರೆ 2007 ಒಂದೇ ವರ್ಷದಲ್ಲಿ ಅವರು ಹದಿನೆಂಟು ಸಿನಿಮಾಗಳಲ್ಲಿ ಐಟಂ ಹಾಡಿಗೆ ನರ್ತಿಸಿದ್ದರು. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು ಸಹ! ಕತೆಗೆ ಅವಶ್ಯಕತೆ ಇಲ್ಲದಿದ್ದರೂ ಮುಮೈತ್ ಖಾನ್‌ಗಾಗಿ ಸಿನಿಮಾದಲ್ಲಿ ಐಟಂ ಹಾಡು ಇಡಬೇಕೆಂದು ನಿರ್ಮಾಪಕರು ಒತ್ತಾಯ ಮಾಡುತ್ತಿದ್ದರು ಆ ಮಟ್ಟಿಗೆ ಮುಮೈತ್ ಖಾನ್‌ಗೆ ಬೇಡಿಕೆ ಹೆಚ್ಚಿತ್ತು. ಮುಮೈತ್ ಖಾನ್ ಅನ್ನು ಮುಖ್ಯ ಪಾತ್ರಧಾರಿಯಾಗಿಸಿ 'ಮೈಸಮ್ಮ ಐಪಿಎಸ್', ಪುನ್ನಮಿ ನಾಗು, ಮಂಗತಾಯಾರು ಟಿಫನ್ ಸೆಂಟರ್ ಸಿನಿಮಾಗಳನ್ನು ತೆಗೆದು ಹಣ ಮಾಡಿಕೊಂಡರು ನಿರ್ಮಾಪಕರು. 'ಆಪರೇಷನ್ ಧುರ್ಯೋದನ, ಎವಡೈತೆ ನಾಕೇಂಟಿ' ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಹ ನಟಿಸಿದ್ದರು ಮುಮೈತ್ ಖಾನ್.

2010 ರ ನಂತರ ಬೇಡಿಕೆ ಕಡಿಮೆ ಆಯಿತು
2010 ರ ಬಳಿಕ ಮುಮೈತ್ ಖಾನ್‌ಗೆ ಬೇಡಿಕೆ ಕಡಿಮೆ ಆಯಿತು. ಆ ವೇಳೆಗಾಗಲೆ ಸಿನಿಮಾ ನಾಯಕಿಯರೇ ಗ್ಲಾಮರಸ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದರು. ಹಾಗಾಗಿ ಐಟಂ ಡಾನ್ಸರ್‌ಗಳಿಗೆ ಬೇಡಿಕೆ ಸಹಜವಾಗಿಯೇ ಕಡಿಮೆ ಆಯಿತು. 2012-13 ರ ವರೆಗೆ ಮುಮೈತ್ ಖಾನ್ ಅಲ್ಲೊಂದು-ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಆ ಸಮಯಕ್ಕೆ ಸರಿಯಾಗಿ ಅವರಿಗೆ ಅಪಘಾತವೊಂದು ಆಯಿತು.

ಕೋಮಾಕ್ಕೆ ಹೋಗಿದ್ದ ಮುಮೈತ್ ಖಾನ್
ಮುಮೈತ್ ಖಾನ್ ಅವರೇ ಹೇಳಿಕೊಂಡಿರುವಂತೆ ಬೆಡ್‌ರೂಮ್‌ನಲ್ಲಿ ಜಾರಿಬಿದ್ದು ತಲೆಗೆ ತೀವ್ರ ಪೆಟ್ಟುಮಾಡಿಕೊಂಡು ಸುಮಾರು 15 ದಿನಗಳ ಕಾಲ ಕೋಮಾದಲ್ಲಿದ್ದರು. ಆ ಪೆಟ್ಟಿನಿಂದಾಗಿ ಮುಮೈತ್ ಖಾನ್ ಮೆದುಳಿಗೆ ಪೆಟ್ಟಾಗಿ ಎರಡು ವರ್ಷಗಳ ಕಾಲ ಸತತ ಚಿಕಿತ್ಸೆ ತೆಗೆದುಕೊಳ್ಳಬೇಕಾಯಿತು. ಈ ಹಂತದಲ್ಲಿ ಮುಮೈತ್ ಖಾನ್ ದಢೂತಿಯಾದರು. ಕೈಲಿದ್ದ ಕೆಲವು ಸಿನಿಮಾಗಳು ಹೊರಟುಹೋದವು. ಮುಮೈತ್ ಖಾನ್ ಹುಷಾರಾಗಿ ಮರಳಿ ಬಂದಮೇಲೂ ಸಿನಿಮಾ ಅವಕಾಶಗಳು ಸಿಗಲಿಲ್ಲ. ಆದರೆ ಆ ಬಳಿಕ ಕೆಲವು ಟಿವಿ ಶೋಗಳಲ್ಲಿ ಮುಮೈತ್ ಖಾನ್ ಪಾಲ್ಗೊಂಡರು. ಆದರೆ ಮುಮೈತ್ ಖಾನ್‌ಗೆ ನಿಜವಾದ ಆಘಾತ ಎದುರಾಗಿದ್ದು 2017 ರಲ್ಲಿ.

ಮಾದಕ ವಸ್ತು ಪ್ರಕರಣಕ್ಕೆ ಬಂಧಿತರಾದ ಮುಮೈತ್ ಖಾನ್
2017 ರಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಹಲವು ಖ್ಯಾತನಾಮರು ಮಾದಕ ವಸ್ತು ಕೇಸ್‌ನಲ್ಲಿ ಬಂಧಿತರಾದರು. ನಟಿ ಮುಮೈತ್ ಖಾನ್ ಅನ್ನು ಸಹ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಆದರೆ ವಿಚಾರಣೆ ನಡೆದ ನಂತರ ಮುಮೈತ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಯಿತು. ಆದರೆ ಆ ವೇಳೆಗೆ ಮುಮೈತ್ ಖಾನ್‌ಗೆ ಆಗಬೇಕಿದ್ದ ಹಾನಿ ಆಗಿಬಿಟ್ಟಿತ್ತು. ಆ ಘಟನೆ ನಂತರ ಮುಮೈತ್ ಖಾನ್ ಅನ್ನು ಸಂಪೂರ್ಣವಾಗಿ ತೆಲುಗು ಚಿತ್ರರಂಗ ದೂರವಿಟ್ಟಿತು. ಆಕೆಗೆ ಎಲ್ಲೂ ಅವಕಾಶ ಸಿಗದಂತಾಯಿತು.

ಮತ್ತೊಂದು ಇನ್ನಿಂಗ್ಸ್‌ಗೆ ತಯಾರಾಗಿದ್ದಾರೆ ಮುಮೈತ್ ಖಾನ್
ಮುಮೈತ್ ಖಾನ್ ತೆಲುಗಿನಲ್ಲಿ 41, ಹಿಂದಿಯಲ್ಲಿ 23, ತಮಿಳಿನಲ್ಲಿ 17 ಕನ್ನಡದಲ್ಲಿ 6, ಒಡಿಯಾ ಹಾಗೂ ಬೆಂಗಾಳಿಯಲ್ಲಿ ತಲಾ ಒಂದೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಥವಾ ವಿಶೇಷ ಹಾಡಿನಲ್ಲಿ ನರ್ತಿಸಿದ್ದಾರೆ. ಇದೀಗ ತನ್ನ ನಟನಾ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಮೈತ್ ಖಾನ್ ತಯಾರಾಗಿದ್ದು ತೆಲುಗಿನ 'ಹೆಜಾ' ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಟಿಗೆ ಯಶಸ್ಸು ಸಿಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.