twitter
    For Quick Alerts
    ALLOW NOTIFICATIONS  
    For Daily Alerts

    ಅನಂತ್‌ನಾಗ್‌ಗೆ ಪದ್ಮ ಪ್ರಶಸ್ತಿ ನೀಡಲು ವಿಳಂಬವೇಕೆ? ಯಾರು ಹೊಣೆ?

    |

    ನಟ ಅನಂತ್‌ನಾಗ್‌ಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಆದರೆ ಹೀಗೊಂದು ಬೇಡಿಕೆ ಮುಂದಿಟ್ಟು ಪ್ರಶಸ್ತಿ ಪಡೆಯುವ ಸ್ಥಿತಿ ನಿರ್ಮಾಣವಾಗಲೇ ಬಾರದಿತ್ತು. ಪದ್ಮ ಪ್ರಶಸ್ತಿಗೆ ಅನಂತ್‌ನಾಗ್ ಅರ್ಹರು, ಕೆಲವು ವರ್ಷಗಳ ಮುಂಚೆಯೇ ಅನಂತ್‌ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕಿತ್ತು. ಆದರೆ ಕನ್ನಡಿಗರ ದುರಾದೃಷ್ಟ ಈವರೆಗೆ ಅನಂತ್‌ನಾಗ್‌ಗೆ ಪದ್ಮ ಪ್ರಶಸ್ತಿ ನೀಡಲಾಗಿಲ್ಲ.

    ಪದ್ಮ ಪ್ರಶಸ್ತಿಗೆ ಅನಂತ್‌ನಾಗ್ ಅರ್ಹರು ಎಂಬುದರಲ್ಲಿ ಲವಲೇಶದಷ್ಟೂ ಅನುಮಾನವಿಲ್ಲ. ಅನಂತ್‌ನಾಗ್ ಅವರ ಸಾಧನೆಯೇ ಅವರ ಬಗ್ಗೆ ಮಾತನಾಡುತ್ತದೆ. 1973ರಲ್ಲಿ ಮೊದಲ ಸಿನಿಮಾ ಮಾಡುವ ಮುಂಚೆಯೇ ಅವರು ಕಲೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಐದು ವರ್ಷ ಭಾರತದ ಅತ್ಯುತ್ತಮ ನಾಟಕಕಾರರ ಬಳಿ ನಾಟಕ ಪ್ರದರ್ಶನಗಳನ್ನು ಮಾಡಿದ ಬಳಿಕ 1973ರಲ್ಲಿ ಮೊದಲ ಕನ್ನಡ ಸಿನಿಮಾ ಮಾಡಿದರು ಅನಂತ್‌ನಾಗ್.

    48 ವರ್ಷಗಳಿಂದಲೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಅನಂತ್‌ನಾಗ್ ಕೇವಲ ಕನ್ನಡ ಸಿನಿಮಾಗಳಿಗಷ್ಟೆ ತಮ್ಮ ಸೀಮಿತಗೊಳಿಸಿಕೊಂಡಿಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ, ಇಂಗ್ಲೀಷ್ ಭಾಷೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರ ಅಭಿನಯ ಪ್ರತಿಭೆಗೆ ಸವಾಲಾಗುವ ಪಾತ್ರಗಳು ದೊರೆತಲ್ಲೆಲ್ಲ ಅನಂತ್‌ನಾಗ್ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಇಂಥಹಾ ಮೇರು ನಟನಿಗಲ್ಲದೆ ಇನ್ನಾರಿಗೆ ಪ್ರಶಸ್ತಿ ನೀಡಬೇಕೊ ಕೇಂದ್ರ ಸರ್ಕಾರವೇ ಬಲ್ಲದು.

    ಪದ್ಮ ಪ್ರಶಸ್ತಿ ಪಡೆದವರ ಈ ಪಟ್ಟಿಯನ್ನೊಮ್ಮೆ ಗಮನಿಸಿ

    ಪದ್ಮ ಪ್ರಶಸ್ತಿ ಪಡೆದವರ ಈ ಪಟ್ಟಿಯನ್ನೊಮ್ಮೆ ಗಮನಿಸಿ

    ಇತ್ತೀಚಿನ ಕೆಲವು ವರ್ಷಗಳಲ್ಲಿ ಪದ್ಮ ಪ್ರಶಸ್ತಿ ಪಡೆದವರ ಪಟ್ಟಿಯನ್ನೊಮ್ಮೆ ಗಮನಿಸಿ, ನಂತರ ಆ ಹೆಸರುಗಳನ್ನು ಅನಂತ್‌ನಾಗ್ ಮಾಡಿರುವ ಸಾಧನೆ ಜೊತೆ ಹೋಲಿಸಿ ನೋಡಿ. ವಿಷಯ ನಿಮಗೇ ಮನದಟ್ಟಾಗುತ್ತದೆ. ಹಿಂದಿ ಧಾರಾವಾಹಿಗಳ ರಾಣಿ ಎಂದೇ ಖ್ಯಾತರಾಗಿರುವ ನಿರ್ಮಾಪಕಿ ಏಕ್ತಾ ಕಪೂರ್, ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಮಿ (ಇವರ ಆಯ್ಕೆಗೆ ಕಾರಣವೇನು ಎಂಬುದು ಈವರೆಗೆ ಗೊತ್ತಾಗಿಲ್ಲ!) ಸೈಫ್ ಅಲಿ ಖಾನ್, ಟಬು, ಕಾಜೊಲ್, ಪ್ರಭುದೇವ ಪಟ್ಟಿ ಹೀಗೆ ಸಾಗುತ್ತದೆ. ಅನಂತ್‌ನಾಗ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದಾಗ ಇದರಲ್ಲಿ ಹಲವರು ಜನಿಸಿರಲಿಕ್ಕೂ ಇಲ್ಲ.

    ಸದಾ ಬಾಲಿವುಡ್ಡಿಗರ ಪರ ಕೇಂದ್ರ ಸರ್ಕಾರ

    ಸದಾ ಬಾಲಿವುಡ್ಡಿಗರ ಪರ ಕೇಂದ್ರ ಸರ್ಕಾರ

    ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ಬಹು ಹತ್ತಿರ. ಹಾಗಾಗಿ ಕೇಂದ್ರದಿಂದ ನೀಡಲಾಗುವ ಬಹುತೇಕ ಪ್ರಶಸ್ತಿಗಳು ಬಾಲಿವುಡ್‌ ನಟ-ನಟಿಯರ ಪಾಲಾಗುತ್ತದೆ. ಡಾ.ರಾಜ್‌ಕುಮಾರ್ ಅಂಥಹಾ ಮೇರು ನಟನಿಗೆ ರಾಷ್ಟ್ರಪ್ರಶಸ್ತಿ ನೀಡದೇ ಇರುವುದನ್ನೇ ಇದಕ್ಕೆ ಸಾಕ್ಷಿಯಾಗಿ ಪರಿಗಣಿಸಬಹುದು. ಹತ್ತು-ಹದಿನೈದು ಸಿನಿಮಾ ಮಾಡಿದವರಿಗೂ, ಸದಾ ವಿವಾದಗಳಲ್ಲಿ ಮುಳುಗಿರುವವರಿಗೂ, ಕೇವಲ ಹಣಕ್ಕಾಗಿ ಸಿನಿಮಾ ನಿರ್ಮಾಣ ಮಾಡುವವರಿಗೂ ಪದ್ಮ ಪ್ರಶಸ್ತಿಗಳು ದೊರೆತಿವೆ.

    ಜವಾಬ್ದಾರಿ ಮರೆತ ರಾಜ್ಯ ಸರ್ಕಾರ

    ಜವಾಬ್ದಾರಿ ಮರೆತ ರಾಜ್ಯ ಸರ್ಕಾರ

    ಎಲ್ಲ ಹೊಣೆಯನ್ನು ಕೇಂದ್ರದ ಮೇಲೆಯೇ ಹೇರುವಂತೆಯೂ ಇಲ್ಲ. ಅನಂತ್‌ನಾಗ್ ಅಂಥಹಾ ಮೇರು ಪ್ರತಿಭೆಗೆ ಅರ್ಹ ಪ್ರಶಸ್ತಿ ದೊರಕದೇ ಇರುವುದಕ್ಕೆ ರಾಜ್ಯ ಸರ್ಕಾರವೂ ಸಮಾನ ಕಾರಣ. ರಾಜ್ಯಗಳು ಕಳಿಸುವ ಪಟ್ಟಿಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಿಸುತ್ತದೆ. ಅನಂತ್‌ನಾಗ್ ಅವರ ಹೆಸರನ್ನು ಕಳಿಸಲು ರಾಜ್ಯ ಸರ್ಕಾರವೇ ಮರೆತಿದೆ ಅಥವಾ ಅನಂತ್‌ನಾಗ್‌ರ ಪ್ರಾಮುಖ್ಯತೆಯನ್ನು ಕೇಂದ್ರಕ್ಕೆ ಮನದಟ್ಟು ಮಾಡುವಲ್ಲಿ ರಾಜ್ಯ ಎಡವಿದೆ ಇದೇ ಕಾರಣದಿಂದಲೇ ಅನಂತ್‌ನಾಗ್‌ಗೆ ಪದ್ಮ ಪ್ರಶಸ್ತಿ ಲಭ್ಯವಾಗಿಲ್ಲ.

    ರಾಜಮೌಳಿ ಹೆಸರು ಕಳಿಸಿದ್ದ ಕರ್ನಾಟಕ ಸರ್ಕಾರ!

    ರಾಜಮೌಳಿ ಹೆಸರು ಕಳಿಸಿದ್ದ ಕರ್ನಾಟಕ ಸರ್ಕಾರ!

    2017 ರಲ್ಲಿ ತೆಲುಗು ಸಿನಿಮಾ ನಿರ್ದೇಶಕ ರಾಜಮೌಳಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶೇಷವೆಂದರೆ ಆ ವರ್ಷ ಅವರ ಹೆಸರನ್ನು ಪರಿಗಣನೆಗೆ ಕಳುಹಿಸಿದ್ದು ಕರ್ನಾಟಕ ರಾಜ್ಯ ಸರ್ಕಾರ. ತೆಲುಗು ರಾಜ್ಯಗಳು ರಾಜಮೌಳಿ ಹೆಸರನ್ನು ಕಳಿಸಿಕೊಟ್ಟಿರಲಿಲ್ಲ. ಆದರೆ ಕರ್ನಾಟಕ ಸರ್ಕಾರ ಕಳಿಸಿತ್ತು. 11 ಸಿನಿಮಾಗಳನ್ನಷ್ಟೆ ನಿರ್ದೇಶಿಸಿರುವ ತೆಲುಗು ನಿರ್ದೇಶಕನ ಹೆಸರನ್ನು ನೆನಪಿಸಿಕೊಂಡ ರಾಜ್ಯ ಸರ್ಕಾರಕ್ಕೆ, ಸುಮಾರು ಐದು ದಶಕದಿಂದ ಸಿನಿಮಾ ರಂಗಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಅನಂತ್‌ನಾಗ್ ಹೆಸರು ನೆನಪು ಬರಲಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗುತ್ತದೆ.

    ಐದು ರಾಜ್ಯ ಪ್ರಶಸ್ತಿ, ಆರು ಫಿಲಂ ಫೇರ್‌ ದೊರೆತಿವೆ ಅನಂತ್‌ನಾಗ್‌ಗೆ

    ಐದು ರಾಜ್ಯ ಪ್ರಶಸ್ತಿ, ಆರು ಫಿಲಂ ಫೇರ್‌ ದೊರೆತಿವೆ ಅನಂತ್‌ನಾಗ್‌ಗೆ

    ಅನಂತ್‌ನಾಗ್ ಅವರಿಗೆ ಐದು ರಾಜ್ಯ ಪ್ರಶಸ್ತಿ, ಆರು ಫಿಲಂ ಫೇರ್‌ ಪ್ರಶಸ್ತಿಗಳು ದೊರೆತಿವೆ. ಅವರ ನಟನೆಯ ಕೆಲವು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಸಹ ದೊರೆತಿದೆ. ಇದು ಮಾತ್ರವೇ ಅಲ್ಲದೆ, ರಾಜಕೀಯ ಕ್ಷೇತ್ರದ ಮೂಲಕ ಜನ ಸೇವೆಯನ್ನೂ ಮಾಡಿದ್ದಾರೆ ಅನಂತ್‌ನಾಗ್. ಜೆ.ಎಚ್.ಪಟೇಲರ ಅವಧಿಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರಿಷತ್ ಸದಸ್ಯ, ಶಾಸಕ ಸಹ ಆಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ವಿವಾದಗಳಿಂದ ಸದಾ ದೂರ. ಯಾವ ವಿವಾದಗಳಿಗೂ ತಲೆ ಹಾಕದೆ, ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಸಿನಿಮಾ ಸೇವೆ ಮುಂದುವರೆಸಿದ್ದಾರೆ ಅನಂತ್‌.

    ವಶೀಲಿಬಾಜಿ ಅನಂತ್‌ನಾಗ್ ಕ್ರಮವಲ್ಲ

    ವಶೀಲಿಬಾಜಿ ಅನಂತ್‌ನಾಗ್ ಕ್ರಮವಲ್ಲ

    ನಾಗತಿಹಳ್ಳಿ ಚಂದ್ರಶೇಖರ್ ಹೇಳಿರುವಂತೆ, ವಶೀಲಿಬಾಜಿ ಮಾಡದೆ ಪ್ರಶಸ್ತಿಗಳು ದೊರಕುವುದು ಕಷ್ಟವಾಗಿರುವ ಕಾಲವಿದು. ಬಹುತೇಕರಿಗೆ ಗೊತ್ತಿರುವಂತೆ ಅನಂತ್‌ನಾಗ್ ಆ ವಿಭಾಗಕ್ಕೆ ಸೇರಿದವರಲ್ಲ. ವಶೀಲಿಬಾಜಿ ಅನಂತ್‌ನಾಗ್ ಅವರ ಕ್ರಮವಲ್ಲ. ತಾವಾಯಿತು, ತಮ್ಮ ಕೆಲಸವಾಯಿತೆಂದು ಸುಮ್ಮನಿರುವವರು. ಯಾವುದಕ್ಕೂ ಬೇಡಿಕೆ ಇಟ್ಟವರಲ್ಲ. ಅನಂತ್‌ನಾಗ್ ಸುಮ್ಮನಿದ್ದಾರೆಂದು ಸರ್ಕಾರವೂ ಸುಮ್ಮನಿರುವುದು ಕ್ರಮವಲ್ಲ. ನಮ್ಮ ರಾಜ್ಯದ ಅರ್ಹ ವ್ಯಕ್ತಿಯೊಬ್ಬರಿಗೆ ಸಿಗಬೇಕಾದ ಗೌರವವನ್ನು ಕೊಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರಗಳು ಎಡವಿವೆ.

    ಅನಂತ್‌ನಾಗ್ ಹೆಸರನ್ನು ನಾಮಿನೇಟ್ ಮಾಡೋಣ

    ಅನಂತ್‌ನಾಗ್ ಹೆಸರನ್ನು ನಾಮಿನೇಟ್ ಮಾಡೋಣ

    ಆದರೆ ಇದೀಗ ಅನಂತ್‌ನಾಗ್‌ ಅವರಿಗೆ ಪದ್ಮ ಪ್ರಶಸ್ತಿಯನ್ನು ಕೊಡಿಸುವ ಅವಕಾಶ ಜನರ ಕೈಗೆ ಬಂದಿದೆ. 'ಪೀಪಲ್ಸ್ ಪದ್ಮ' ಕಾರ್ಯಕ್ರಮದಡಿ ಪದ್ಮ ಪ್ರಶಸ್ತಿಗೆ ಆಯ್ಕೆ ಆಗುವ ಅರ್ಹತೆ ಉಳ್ಳ ವ್ಯಕ್ತಿಯನ್ನು ದೇಶದ ಜನರೇ ಕೇಂದ್ರ ಸರ್ಕಾರಕ್ಕೆ ಸೂಚಿಸಬಹುದಾಗಿದೆ. ಮನೊರಂಜನೇ ಮಾತ್ರವೇ ಅಲ್ಲದೆ, ಶಿಕ್ಷಣ, ಸಮಾಜ ಸೇವೆ, ಸಂಗೀತ, ಕಲೆ, ಉದ್ಯಮ ಹೀಗೆ ಹಲವು ವಿಭಾಗಗಳಲ್ಲಿ ಅರ್ಹ ವ್ಯಕ್ತಿಗಳನ್ನು ಪ್ರಶಸ್ತಿಗೆ ಸರ್ಕಾರಕ್ಕೆ ಸೂಚಿಸಬಹುದಾಗಿದೆ. ಅನಂತ್‌ನಾಗ್ ಅವರು ಮನೊರಂಜನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸುವಂತೆ ರಾಜ್ಯದ ಜನರು padmaawards.gov.in. ವೆಬ್‌ಸೈಟ್‌ಗೆ ಭೇಟಿ ನೀಡಿ ನಾಮಿನೇಟ್ ಮಾಡಿದರೆ ಅನಂತ್‌ನಾಗ್‌ ಅವರಿಗೆ ಪದ್ಮ ಪ್ರಶಸ್ತಿ ದೊರೆತೇ ತೀರುತ್ತದೆ. ಇದಕ್ಕೆ ಅವರು ಅರ್ಹರೂ ಸಹ.

    English summary
    Why actor Ananth Nag not considered for central government's Padma awards. Who is responsible for this mistake.
    Thursday, July 15, 2021, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X