Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೈಕ್ ಅಫಘಾತದಲ್ಲಿ ನಿಧನರಾದ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು ಪರಿಚಯ
ಕರಾವಳಿಯ ಗಂಡುಕಲೆ ಯಕ್ಷಗಾನ ಮತ್ತೊಂದು ಅನರ್ಘ್ಯ ರತ್ನವನ್ನು ಕಳೆದುಕೊಂಡಿದೆ. ಕಳೆದ 28 ವರ್ಷಗಳಲ್ಲಿ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು(47) ಯಕ್ಷಗಾನ ಪ್ರದರ್ಶನ ಮುಗಿಸಿ ಮನೆಗೆ ಹಿಂದುರುಗುತ್ತಿದ್ದ ವೇಳೆ ಬೈಕ್ ಅಫಘಾತದಲ್ಲಿ ಸಾವನ್ನಪ್ಪಿದ್ದಾರೆ.
ಗುರುವಾರ ಮುಂಜಾನೆ ಮೂಡಬಿದಿರೆಯ ಗಂಟಾಲ್ ಕಟ್ಟೆ ಎಂಬಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ಯಕ್ಷಗಾನ ಪ್ರದರ್ಶನ ಮುಗಿಸಿ ಬೆಳಗಿನ ಜಾವ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.
ಕಳೆದ 28 ವರ್ಷದಲ್ಲಿ ಯಕ್ಷಗಾನ ರಂಗದಲ್ಲಿ, ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ವಾಮನ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನವರಾಗಿದ್ದಾರೆ. ಕೊವಿಡ್ ಕಾರಣದಿಂದ ಯಕ್ಷಗಾನ ಕಾಲಮಿತಿ ಯಲ್ಲಿ ನಡೆಯುತ್ತಿರುವ ಕಾರಣ, ಯಕ್ಷಗಾನ ಮುಗಿಸಿ ತಡರಾತ್ರಿ ಮತ್ತೆ ಮನೆಗೆ ಬರುವ ವೇಳೆ ಮುಂಜಾನೆ ಬೈಕ್ ಒಮಿನಿ ಕಾರ್ ಗೆ ಡಿಕ್ಕಿಯಾಗಿ ವಾಮನ ಕುಮಾರ್ ಮೃತರಾಗಿದ್ದಾರೆ.
ವಾಮನ್ ಕುಮಾರ್ ವೇಣೂರು ಅವರದ್ದು ಕಳೆದ 28 ವರ್ಷದ ಯಕ್ಷಗಾನ ತಿರುಗಾಟವಾಗಿದ್ದು, ಈ ಅವಧಿಯಲ್ಲಿ ನಾಲ್ಕು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಾಲಾ ಜೀವನದಲ್ಲೇ ಯಕ್ಷಗಾನದ ಬಗ್ಗೆ ವಿಶೇಷ ಹೊಂದಿದ್ದ ವಾಮನ ಕುಮಾರ್ ಯಕ್ಷಗಾನ ಮೇಳಕ್ಕೆ ಸೇರಲು ಆಸೆ ಉಂಟಾಗಿ ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳ ದ ಲಲಿತಾಕಲಾ ಯಕ್ಷ ನಾಟ್ಯ ತರಬೇತಿ ಕೇಂದ್ರದಲ್ಲಿ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದಾರೆ.

ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ
ಆ ಬಳಿಕ ಧರ್ಮಸ್ಥಳ ಮೇಳದಲ್ಲೇ ಸುಮಾರು ಎರಡು ವರ್ಷಗಳ ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಪ್ರಸಂಗ ಆರಂಭಕ್ಕೂ ಮುನ್ನ ಬರುವ ಬಾಲಗೋಪಾಲ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಂಗಕರ್ತ ಮನೋಹರ್ ಕುಮಾರ್ ಅವರಿಂದ ಪ್ರಭಾವಿತರಾಗಿ ಧರ್ಮಸ್ಥಳದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಯಕ್ಷಗಾನದ ಹೆಜ್ಜೆ ಕಲಿತಿದ್ದರು. ಆರಂಭದಲ್ಲಿ ಧರ್ಮಸ್ಥಳ ಮೇಳ, ನಂತರ ನಾಲ್ಕು ವರ್ಷಗಳ ಕಾಲ ಕದ್ರಿ ಮೇಳ, 15 ವರ್ಷಗಳ ಕಾಲ ಮಂಗಳಾದೇವಿ ಮೇಳ, ಕಳೆದ 9 ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವೇಷಧಾರಿಯಾಗಿ ಮತ್ತು ಮೇಳದ ಮ್ಯಾನೇಜರ್ ಆಗಿ ವಾಮನ ಕುಮಾರ್ ಅವರು ಸೇವೆ ಸಲ್ಲಿಸುತ್ತಿದ್ದರು.

ಸ್ತ್ರೀ ವೇಷದಲ್ಲಿ ಪ್ರಸಿದ್ಧಿ
ಹಿರಿಯಡ್ಕ ಮೇಳ ಕಳೆದ 8 ವರ್ಷಗಳಿಂದ ತೆಂಕುತಿಟ್ಟಿನ ಪೂರ್ಣಾವಧಿ ಮೇಳವಾಗಿದ್ದು, ಈ ಮೇಳದ ಹಿರಿಯ ಕಲಾವಿದರಾಗಿ ಮತ್ತು ಮ್ಯಾನೇಜರ್ ಆಗಿ ವಾಮನ ಕುಮಾರ್ ಸೇವೆ ಸಲ್ಲಿಸಿದ್ದಾರೆ. ಮೊದಲು ಪೂರ್ವ ರಂಗದ ಬಾಲ ಗೋಪಾಲನಾಗಿ ಯಕ್ಷಗಾನ ವೇಷ ಆರಂಭಿಸಿದ ವಾಮನ ಕುಮಾರ್ ಬಳಿಕ 15 ವರ್ಷಗಳ ಕಾಲ ಸ್ತ್ರೀ ವೇಷದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ತಿರುಲೆದ ತೀರ್ಥ ಯಕ್ಷಗಾನ ಪ್ರಸಂಗದ ತೇಜಾಕ್ಷಿ ಪಾತ್ರ, ವಜ್ರಕುಟುಂಬ, ಮಲ್ಲಿಗೆ ಸಂಪಿಗೆ, ಚೆನ್ನಿ ಚೆನ್ನಮ್ಮ ಪ್ರಸಂಗ ವಾಮನ ಕುಮಾರ್‌ರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೌರಾಣಿಕ ಪ್ರಸಂಗಗಳಲ್ಲೂ ಮಿಂಚಿದ ವಾಮನ ಕುಮಾರ್ ಶಶಿಪ್ರಭೆ, ಪ್ರಮೀಳೆ ವೇಷ ಪ್ರಖ್ಯಾತಿ ತಂದುಕೊಟ್ಟಿತು.

ವಾಮನ ಕುಮಾರ ವೇಣೂರರ ಯಕ್ಷಗಾನ ಪಯಣ
ತನ್ನ ಯಕ್ಷಗಾನ ಜೀವನದ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣ ವೊಂದರಲ್ಲಿ ವಾಮನ ಕುಮಾರ್ ಸುದೀರ್ಘ ವಾಗಿ ಹೇಳಿಕೊಂಡಿದ್ದರು. ''ನಾನು 5ನೇ ತರಗತಿಯಲ್ಲಿ ಇರೋವಾಗ ಸುರತ್ಕಲ್, ಕರ್ನಾಟಕ, ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ನೋಡಿ ಆಸಕ್ತಿ ಹೆಚ್ಚಿಸಿಕೊಂಡಿದ್ದೆ. 8ನೇ ತರಗತಿಯಲ್ಲಿ ಆಸಕ್ತಿ ಹೆಚ್ಚಾಗಿ ಧರ್ಮಸ್ಥಳ ಮೇಳಕ್ಕೆ ಸೇರಿ ಆರು ತಿಂಗಳು ಅಭ್ಯಾಸ ಮಾಡಿದೆ. ಬಳಿಕ ಧರ್ಮಸ್ಥಳ ಮೇಳದಲ್ಲೇ ಯಕ್ಷಗಾನ ಜೀವನ ಆರಂಭಿಸಿ ಬಳಿಕ ಕದ್ರಿ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿ ಸದ್ಯ ಹಿರಿಯಡ್ಕ ಮೇಳದಲ್ಲಿ ಇರೋದಾಗಿ ವಾಮನ ಕುಮಾರ್ ಹೇಳಿದ್ದರು. ಹಿರಿಯ ಯಕ್ಷಗಾನ ಕಲಾವಿದ ದಿ.ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮಾರ್ಗದರ್ಶನ ದಲ್ಲಿ ಕೃಷ್ಣ, ವಿಷ್ಣು, ಸುರ್ದಶನ, ಚಂಡ ಮುಂಡ ಪೌರಾಣಿಕ ವೇಷವನ್ನೂ ನಿಭಾಯಿಸಿ ವಾಮನ ಕುಮಾರ್ ಸೈ ಎನಿಸಿಕೊಂಡಿದ್ದರು..

ಕಲಾವಿದರ ಜೀವಕ್ಕೆ ಅಪಾಯ
ತಡರಾತ್ರಿ ಯವರೆಗೆ ಪ್ರದರ್ಶನ ನೀಡಿ, ಆಯಾಸ ಮತ್ತು ನಿದ್ದೆಯ ಮಂಪರಿನಲ್ಲಿ ಮತ್ತೆ ರಾತ್ರಿ ಮನೆಗೆ ಬೈಕ್ ನಲ್ಲಿ ತೆರಳೋದರಿಂದ ಕಲಾವಿದರ ಜೀವಕ್ಕೂ ಅಪಾಯವಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ರಸ್ತೆ ಅಫಘಾತ ವಾಗಿ ಕಲಾವಿದರು ಜೀವ ತೆತ್ತಿದ್ದಾರೆ. ಬೆಳಗ್ಗಿನವರೆಗೆ ಯಕ್ಷಗಾನ ನಡೆಯುವ ಸ್ಥಳದಲ್ಲೇ ವಿಶ್ರಾಂತಿ ಪಡೆದು ಬೆಳಗ್ಗೆ ಮನೆಗೆ ಹಿಂದುರುಗಬೇಕೆಂದು ಯಕ್ಷಗಾನ ಸಂಘಟಕರು ಮನವಿ ಮಾಡಿದರೂ, ಮನೆಗೆ ತಲುಪಿ ವಿಶ್ರಾಂತಿ ಪಡೆಯುವ ಧಾವಂತದಿಂದ ದೂರದೂರುಗಳಿಂದ ತಡರಾತ್ರಿ ಬೈಕ್ ಏರಿ ತಮ್ಮ ಊರಿಗೆ ಹೋಗುವ ಕಲಾವಿದರು ಅಫಘಾತ ದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರೋದು ದುರಂತವಾಗಿದೆ.