»   » ಚಿತ್ರ ನಟಿ ರಂಜಿತಾ ಜೊತೆ ನಿತ್ಯಾನಂದ ಮದುವೆ

ಚಿತ್ರ ನಟಿ ರಂಜಿತಾ ಜೊತೆ ನಿತ್ಯಾನಂದ ಮದುವೆ

Posted By: *ಉದಯರವಿ
Subscribe to Filmibeat Kannada

ಚಿತ್ರನಟಿ ರಂಜಿತಾರನ್ನು ಮದುವೆಯಾಗುತ್ತಿರುವುದಾಗಿ ಸ್ವಾಮಿ ನಿತ್ಯಾನಂದ ತಮ್ಮ ಅಂತರ್ಜಾಲ ತಾಣದಲ್ಲಿ ಬಹಿರಂಗಪಡಿಸಿದ್ದಾನೆ. ಈ ಮೂಲಕ ಸ್ವಾಮಿ ನಿತ್ಯಾನಂದನ ರಾಸಲೀಲೆ ಪ್ರಕರಣ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ. ಆದರೆ ಕೆಲವು ಮೂಲಗಳ ಪ್ರಕಾರ ಸ್ವಾಮಿ ನಿತ್ಯಾನಂದ ಈಗಾಗಲೆ ರಂಜಿತಾರನ್ನು ಮದುವೆಯಾಗಿದ್ದಾನೆ ಎಂಬ ಸುದ್ದಿಯೂ ಇದೆ.

ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆ ಸ್ವಾಮಿ ನಿತ್ಯಾನಂದ ತಲೆಮರೆಸಿಕೊಂಡಿದ್ದ. ಬಳಿಕ ಅಂತರ್ಜಾಲದಲ್ಲಿ ಪ್ರತ್ಯಕ್ಷನಾದ ನಿತ್ಯಾನಂದ ಆಶ್ರಮದ ಆಸ್ತಿ ಕಬಳಿಸಲು ನಡೆಸಿದ ಹುನ್ನಾರ ಇದು ಎಂದು ದೂರಿದ. ಬರುಬರುತ್ತಾ ವಿಡಿಯೋದಲ್ಲಿ ತಮ್ಮ ಜೊತೆ ಇದ್ದದ್ದು ನಟಿ ರಂಜಿತಾ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಚಿತ್ರನಟಿ ರಂಜಿತಾ ಸಹ ಕಾಣೆಯಾಗಿದ್ದರು. ಕಡೆಗೂ ನಿತ್ಯಾನಂದ ಮಾಧ್ಯಮಗಳ ಮುಂದೆ ಹಾಜರಾಗಲೇ ಇಲ್ಲ. ಅಜ್ಞಾತ ಸ್ಥಳಗಳಿಂದ ಸಂದರ್ಶನಗಳನ್ನು ನೀಡಲು ಮುಂದಾದ.

ಸ್ವಾಮಿ ನಿತ್ಯಾನಂದ ವಿರುದ್ಧ ಬಿಡದಿ ಮತ್ತು ಚೆನ್ನೈ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾದವು. ದಾಖಲಾಗಿರುವ ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ನಿತ್ಯಾನಂದ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ. ನನ್ನ ವಿರುದ್ಧ ಯಾರೂ ದೂರು ಕೊಟ್ಟಿಲ್ಲ. ಪೊಲೀಸರು ಸುಳ್ಳು ಕೇಸ್ ಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ನಿತ್ಯಾನಂದ ರಿಟ್ ಅರ್ಜಿಯಲ್ಲಿ ತಿಳಿಸಿದ್ದ. ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿಯನ್ನು ರದ್ದು ಮಾಡುವ ಮೂಲಕ ನಿತ್ಯಾನಂದನ ಮುಖಕ್ಕೆ ಮಂಗಳಾರತಿ ಮಾಡಿತ್ತು.

ಈ ಎಲ್ಲಾ ಬೆಳವಣಿಗೆಗಳ ನಂತರ ಸ್ವಾಮಿ ನಿತ್ಯಾನಂದ ಇದೀಗ ಹೊಸ ನಿರ್ಣಯಕ್ಕೆ ಬಂದಿದ್ದು ರಂಜಿತಾರನ್ನು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾನೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ರಂಜಿತಾರನ್ನು ಮದುವೆಯಾಗುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಸ್ವಾಮಿ ನಿತ್ಯಾನಂದ ಮುಂದಾಗಿದ್ದಾನೆ ಎಂಬ ಮಾತುಗಳು ಕೇಳಿಬಂದಿವೆ.

ಸದ್ಯಕ್ಕೆ ಆಧ್ಯಾತ್ಮಿಕದ ಕಡೆಗೆ ಹೆಚ್ಚಿನ ಒಲವು ತೋರಲು ನಿರ್ಧರಿಸಿದ್ದು ಹಿರಿಯ ಆಚಾರ್ಯರ ಸಮ್ಮತಿಯಂತೆ ತಮ್ಮ ವಿಶ್ವ ಪ್ರಸಿದ್ಧ ಧ್ಯಾನಪೀಠದ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ನಿತ್ಯಾನಂದ ಘೋಷಿಸಿದ್ದ. ಇದೀಗ ಸಂನ್ಯಾಸತ್ವದಿಂದ ಗೃಹಸ್ಥಾಶ್ರಮಕ್ಕೆ ನಿತ್ಯಾನಂದ ಪದಾರ್ಪಣೆ ಮಾಡುತ್ತಿದ್ದಾನೆ. ಜನರನ್ನು ನಿತ್ಯಾನಂದ ಮತ್ತೊಮ್ಮೆ ಫೂಲ್ ಮಾಡುವ ಹೊಸ ತಂತ್ರವಿರಬಹುದೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada