»   » 'ನಾನು ನನ್ನ ಕನಸು' ಚಿತ್ರದಿಂದ ರಮ್ಯಾ ಔಟ್!

'ನಾನು ನನ್ನ ಕನಸು' ಚಿತ್ರದಿಂದ ರಮ್ಯಾ ಔಟ್!

Posted By: *ಚಿದಾನಂದ ಪಟೇಲ್
Subscribe to Filmibeat Kannada

ನಟಿ ರಮ್ಯಾ 'ಸಖತ್ ಕಿರಿಕ್ ನಟಿ' ಎಂಬುದು ಮತ್ತೊಮ್ಮ್ಮೆ ಸಾಬೀತಾಗಿದೆ. ಪ್ರಕಾಶ್ ರೈ ಅವರ ನಿರ್ದೇಶನದಲ್ಲಿ ಬರುತ್ತಿರುವ 'ನಾನು ನನ್ನ ಕನಸು' ಚಿತ್ರದಿಂದ ನಟಿ ರಮ್ಯಾ ಹೊರಬಿದ್ದಿದ್ದಾರೆ. ಸಂಭಾವನೆ ವಿಚಾರವಾಗಿ ನಿರ್ಮಾಪಕರ ಜತೆ ಮಾತುಕತೆ ಕುದುರದೆ ರಮ್ಯಾ ಚಿತ್ರದಿಂದ ಹೊರಬಂದಿದ್ದಾರೆ. ರಮ್ಯಾ ಸ್ಥಾನಕ್ಕೆ 'ಚೆಲುವಿನ ಚಿತ್ತಾರ' ಖ್ಯಾತಿಯ ಅಮೂಲ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಭಾವನೆ ವಿಚಾರವಾಗಿ ತಾವು ಈ ಚಿತ್ರದಿಂದ ಹೊರಬಂದಿದ್ದಾಗಿ ನಟಿ ರಮ್ಯಾ ದೂರವಾಣಿ ಮೂಲಕ ತಿಳಿಸಿದರು. ರಮ್ಯಾ ಅವರ ಸಂಭಾವನೆ ರು.32 ಲಕ್ಷಗಳು. ಇಷ್ಟು ಹಣಕ್ಕೆ ಆಕೆ ಬೇಡಿಕೆ ಸಲ್ಲಿಸಿದ್ದರು.ಆದರೆ ನಿರ್ಮಾಪಕರು ಅಷ್ಟು ಸಂಭಾವನೆ ಕೊಡಲು ಮುಂದಾಗಿರಲಿಲ್ಲ. ರು.16 ಲಕ್ಷಕ್ಕೆ ನಿಗದಿ ಮಾಡಿದ್ದರು. ಚೌಕಾಸಿ ವ್ಯಾಪಾರ ಗಿಟ್ಟದೆ ನಿರ್ಮಾಪಕರು ರಮ್ಯಾ ಅವರನ್ನು ತಂಡದಿಂದ ಹೊರಗಟ್ಟಿದರು.

ರಮ್ಯಾ ರಂಪಾಟಗಳು ಇದೇ ಮೊದಲಲ್ಲ. ಈ ಹಿಂದೆ ಸುದೀಪ್ ನಟಿಸಿ, ನಿರ್ದೇಶಿಸುತ್ತಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಕ್ಕೂ ಇದೇ ಗತಿಯಾಗಿತ್ತು. ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ 'ಜೊತೆಗಾರ' ಚಿತ್ರದ ಕತೆಯೂ ಅಷ್ಟೆ. ಇದೀಗ ಹೊಸದಾಗಿ ಈ ಪಟ್ಟಿಗೆ 'ನಾನು ನನ್ನ ಕನಸು' ಚಿತ್ರ ಸೇರ್ಪಡೆಯಾಗಿದೆ.

ಪ್ರಕಾಶ್ ರೈ ಅವರಂತಹ ಪ್ರಬುದ್ಧ ಕಲಾವಿದನೊಂದಿಗೆ ನಟಿಸುವ ಅವಕಾಶ ರಮ್ಯಾಗೆ ಒಲಿದು ಬಂದಿತ್ತು. ಸಂಭಾವನೆ ವಿಚಾರವಾಗಿ ಈ ಅವಕಾಶವನ್ನು ರಮ್ಯಾ ಕಳೆದುಕೊಂಡಿರುವುದು ದುರದೃಷ್ಟ. ಸಮಯಕ್ಕೆ ಸರಿಯಾಗಿ ರಮ್ಯಾ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಆಕೆಯನ್ನು ಚಿತ್ರದಿಂದ ಕೈಬಿಡಲಾಗಿದೆ ಎಂಬ ಮಾತುಗಳು 'ನಾನು ನನ್ನ ಕನಸು' ನಿರ್ಮಾಪಕರ ವಲಯದಿಂದ ಕೇಳಿಬಂದಿದೆ. ಅದು ಏನೇ ಇರಲಿ ಸಿಕ್ಕ ಒಂದು ಅಪೂರ್ವ ಅವಕಾಶವನ್ನು ರಮ್ಯಾ ಕಳೆದುಕೊಂಡಿದ್ದಾರೆ. ಮೊನ್ನೆ ಹುಟ್ಟಹಬ್ಬದಿನ ರಮ್ಯ ಮಡಿಕೇರಿಗೆ ಹೋಗಬೇಕಾಗಿತ್ತು. ಆದರೆ, ಬೆಳಗಾದರೂ ಮಡಿಕೇರಿ ತಲುಪಿರಲಿಲ್ಲ. ಆಗಲೇ ಕಿರಿಕ್ಕುಗಳ ಮುನ್ಸೂಚನೆ ಸಿಕ್ಕಿತ್ತು.

ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ರಮ್ಯಾ, ನೇತ್ರದಾನ ಮಾಡುವ ಮೂಲಕ ಸುದ್ದಿಯಾಗಿದ್ದರು. ಇಷ್ಟು ಬೇಗನೆ ಮತ್ತೆ ಸುದ್ದಿ ಮಾಡುತ್ತಾರೆ ಎಂದು ಕನ್ನಡ ಚಿತ್ರೋದ್ಯಮ ಊಹಿಸಿರಲಿಲ್ಲ. ಕಬ್ಬನ್ ಉದ್ಯಾನದಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಆವರಣದಲ್ಲಿ ಇತ್ತೀಚೆಗಷ್ಟೇ ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ 'ನಾನು ನನ್ನ ಕನಸು' ಚಿತ್ರೀಕರಣ ಚಾಲನೆ ಪಡೆದುಕೊಂಡಿತ್ತು.

ಈಗಾಗಲೇ ನಾನು ನನ್ನ ಕನಸು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೋಮವಾರಪೇಟೆಯ ಶನಿವಾರಸಂತೆಯಲ್ಲಿ ಚಿತ್ರೀಕರಣ ಮುಗಿಸಲಾಗಿದ್ದು ಚಿತ್ರತಂಡ ಬಾಬಾಬುಡನ್ ಗಿರಿಯತ್ತ ಪಾದ ಬೆಳೆಸಿದೆ. ಬರುವ ಶನಿವಾರ ಬಾಬಾಬುಡನ್ ಗಿರಿಯಲ್ಲಿ ಚಿತ್ರೀಕರಣ ಸಾಗಲಿದೆ. ಒಟ್ಟಿನಲ್ಲಿ ರಮ್ಯಾ ಪಾಲಿನ ಅದೃಷ್ಟ ಅಮೂಲ್ಯ ಪಾಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada