»   » 'ಮೈಲಾರಿ' ವಿರುದ್ಧ ಅಶ್ವಿನಿ ರಾಮ್ ಪ್ರಸಾದ್ ದೂರು

'ಮೈಲಾರಿ' ವಿರುದ್ಧ ಅಶ್ವಿನಿ ರಾಮ್ ಪ್ರಸಾದ್ ದೂರು

Posted By:
Subscribe to Filmibeat Kannada

'ಮೈಲಾರಿ' ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ವಿವಾದ ಎದುರಾಗಿದೆ. ಈ ಶೀರ್ಷಿಕೆ ನನ್ನದು ಎನ್ನುತ್ತಿದ್ದಾರೆ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್. ಆದರೆ ಇದೇ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ ಕನಕಪುರ ಶ್ರೀನಿವಾಸ್.ವಿವಾದ ನಡುವೆಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಿರುವ 'ಮೈಲಾರಿ' ಚಿತ್ರ ಗುರುವಾರ ದೊಡ್ಡಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಲಿದೆ.

'ಮೈಲಾರಿ' ಶೀರ್ಷಿಕೆಯನ್ನು ಈಗಾಗಲೆ ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಈ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ. ಈ ಹೆಸರಿನಲ್ಲಿ ನಾನೇ ಚಿತ್ರ ಮಾಡುತ್ತೇನೆ ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಿಳಿಸಿದ್ದಾರೆ.ತಮ್ಮ ಶೀರ್ಷಿಕೆಯಲ್ಲಿ ಮತ್ತೊಬ್ಬರು ಚಿತ್ರ ತೆಗೆಯುತ್ತಿರುವ ಬಗ್ಗೆ ಅಶ್ವಿನಿ ರಾಮ್ ಪ್ರಸಾದ್ ಈಗಾಗಲೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟ್ಟಿದ್ದಾರೆ.

ಮೈಲಾರಿ ಚಿತ್ರವನ್ನು ನಿರ್ಮಿಸಲು ಎರಡು ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಮತ್ತು ಅರುಂಧತಿ ನಾಗ್ ಅವರ ಕಾಲ್ ಶೀಟ್ ಪಡೆಯಲಾಗಿತ್ತು. ಮಳವಳ್ಳಿ ಸಾಯಿಕೃಷ್ಣ ಅವರಿಂದ ಸಂಭಾಷಣೆಯನ್ನು ಬರೆಸಲಾಗಿತ್ತು. 'ಜೊತೆಗಾರ' ಚಿತ್ರದ ಬಳಿಕ ಈ ಚಿತ್ರವನ್ನು ಆರಂಭಿಸಲು ನಿರ್ಧರಿಸಿದ್ದೆವು. ಅಷ್ಟರಲ್ಲಾಗಲೆ 'ಮೈಲಾರಿ' ಶೀರ್ಷಿಕೆಯಲ್ಲಿ ಬೇರೊಬ್ಬರು ಚಿತ್ರ ತೆಗೆಯಲು ಮುಂದಾಗಿದ್ದಾರೆ ಎಂದು ಅಶ್ವಿನಿ ರಾಮ್ ಪ್ರಸಾದ್ ದೂರಿದ್ದಾರೆ.

ಈ ಹಿಂದೆ ಚಿತ್ರದ ಶೀರ್ಷಿಕೆಯನ್ನು ತಮಗೆ ಕೊಡುವಂತೆ ಆ ಚಿತ್ರದ ನಿರ್ಮಾಪಕರು ಕೇಳಿದ್ದರು. ಶಿವರಾಜ್ ಕುಮಾರ್ ಅವರೂ ಶೀರ್ಷಿಕೆಯನ್ನು ಕೊಡುವಂತೆ ಹೇಳಿದ್ದರು. ಆ ಚಿತ್ರವನ್ನು ನಾನೇ ಮಾಡುತ್ತೇನೆ ಎಂದು ಹೇಳಿದ್ದೆ. ಈಗಲೂ ಇದೇ ಮಾತು ಹೇಳುತ್ತಿದ್ದೇನೆ. 'ಜೊತೆಗಾರ' ಬಿಡುಗಡೆ ಬಳಿಕ ಶಿವಣ್ಣ ಜೊತೆ 'ಮೈಲಾರಿ' ಮಾಡುತ್ತೇನೆ ಎನ್ನುತ್ತಾರೆ ಅಶ್ವಿನಿ ರಾಮ್ ಪ್ರಸಾದ್.

ಆದರೆ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಕನಕಪುರ ಶ್ರೀನಿವಾಸ್ ''ಮೈಲಾರಿ...ಸ್ಯಾಂಡಲ್ ವುಡ್ ಕಿಂಗ್'' ಹೆಸರಿನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವುದು ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು. ಗುರುಕಿರಣ್ ಅವರ ಸಂಗೀತ ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಥ್ರಿಲ್ಲರ್ ಮಂಜು ಅವರ ಸಾಹಸ ಚಿತ್ರಕ್ಕಿದೆ.

ಈ ಚಿತ್ರದ ಮೂಲಕ ಶಿವರಾಜ್ ಕುಮಾರ್ ಗೆ ಮೋಹಕ ತಾರೆ ಸದಾ ಜೊತೆಯಾಗುತ್ತಿದ್ದಾರೆ. ತಾರಾಗಣದಲ್ಲಿ ರವಿ ಕಾಳೆ, ರಂಗಾಯಣ ರಘು, ಗುರುಪ್ರಸಾದ್, ಜಾನ್ ಕೋಹಿನ್, ಸುರೇಶ್ ಮಂಗಳೂರು, ಯಶಸ್, ನಾಗರಾಜ್, ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ. ಏತನ್ಮಧ್ಯೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಶೀಘ್ರವೆ ಸಭೆ ಕರೆದು 'ಮೈಲಾರಿ' ಶೀರ್ಷಿಕೆ ವಿವಾದವನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada