»   »  ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!

ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!

Posted By:
Subscribe to Filmibeat Kannada

ಮೊನ್ನೆ ಮೊನ್ನೆ ಸುವರ್ಣ ಚಾನೆಲ್ಲಿನಲ್ಲಿ "ಶ್ವೇತನಾಗ" ಅನ್ನೋ ಸಿನಿಮಾ ಬಂತು, ಅದು ಮೊದಲು ತೆಲುಗಲ್ಲಿ ತೆಗೆದು ಆಮೇಲೆ ಕನ್ನಡಕ್ಕೆ ಡಬ್ ಮಾಡಲಾದ ಚಿತ್ರ ಅಂತಾ ಅದನ್ನು ಪ್ರಸಾರ ಮಾಡ್ದೋರೂ, ನಿರ್ಮಾಪಕರೂ ಎಲ್ಲಾರ ಮೇಲೂ ಕನ್ನಡ ಚಿತ್ರರಂಗದ ದಿಗ್ಗಜರುಗಳು, ಮೈಮೇಲೆ ಮುರ್ಕೊಂಡು ಬಿದ್ದ ಸುದ್ದಿ  ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಇವರುಗಳು ಅರ್ಥಮಾಡ್ಕೊಬೇಕಿರೋದ್ ಏನಪ್ಪಾ ಅಂದ್ರೆ ಇವರ ಈ ನಿಲುವು ಕಾನೂನು ಬಾಹಿರವಾಗಿರೋದ್ ಮಾತ್ರಾ ಅಲ್ದೆ ಇಡೀ ನಾಡಿಗೆ ಮಾರಕವಾಗಿದೆ ಅನ್ನೋದಾಗಿದೆ.

ಡಬ್ಬಿಂಗ್ ಇತಿಹಾಸ
ಹಿಂದೆ ಕನ್ನಡ ಚಿತ್ರರಂಗ ತನ್ನೆಲ್ಲಾ ಕೆಲ್ಸಗಳಿಗಾಗಿ ಚನ್ನೈ ಮೇಲೆ ಅವಲಂಬಿತವಾಗಿದ್ದಾಗ, ಕನ್ನಡ ಸಿನಿಮಾ ತೆಗೆಯೋ ನಿರ್ಮಾಪಕರು ಶ್ರಮ ಪಡೋ ಬದಲು ಡಬ್ಬಿಂಗ್ ತಂತ್ರಜ್ಞಾನಾನ ಬಳಸಿ ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡದಲ್ಲಿ ತರಕ್ ಮುಂದಾದ್ರು. ಇದು ಹೀಗೇ ನಡುದ್ರೆ ಮುಂದೆ ಕನ್ನಡ ಚಿತ್ರಗಳು ಅಂದ್ರೆ ಹಿಂದಿ, ತಮಿಳು, ತೆಲುಗು ಚಿತ್ರಗಳ ಡಬ್ಬಾ (ಡಬ್ಬ್ ಆಗಿರೋದು) ಅಂತಾ ಆಗಿಬಿಡುತ್ತೆ ಅನ್ನೋ ಬೆದರಿಕೆ ಹುಟ್ಕೊಳ್ತು. ಆಗ ಡಬ್ಬಿಂಗ್ ವಿರೋಧಿ ಚಳವಳಿ ನಡೀತು. ಅವತ್ತು ಶುರುವಾದ ಈ ನಿಷೇಧ ಇಲ್ಲೀತನಕ ಬಂದಿದೆ.

ಇವತ್ತೇನಾಗಿದೆ?
ಇವತ್ತು ಕನ್ನಡ ಚಿತ್ರರಂಗ ಸ್ಟುಡಿಯೋ, ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಧ್ವನಿಮುದ್ರಣ ಕೇಂದ್ರ, ತಂತ್ರಜ್ಞಾನ, ಹಂಚಿಕೆ, ಚಿತ್ರಮಂದಿರ... ಹೀಗೆ ಎಲ್ಲಾ ವಿಭಾಗದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗ್ ಹೋಗುತ್ತೆ ಅನ್ನೋ ಪರಿಸ್ಥಿತಿ ನಿಜವಾಗ್ಲೂ ಇಲ್ಲ. ಸ್ಪರ್ಧೆ ಎದ್ರುಸಕ್ ಆಗ್ದಿರೋ, ತಾವು ರಿಮೇಕ್ ಮಾಡೊ ಅವಕಾಶ ಕಳ್ಕೊಳೋ ಭಯದಿಂದ ಕೆಲ ಪಟ್ಟಭದ್ರರು ಇಂಥಾ ವಿರೋಧಕ್ ಮುಂದಾಗಿದಾರೆ ಅನ್ಸುತ್ತೆ ಗುರು! ಅಲ್ಲಾ ಇವರು ಕನ್ನಡದೋರುನ್ನ ಏನಂದ್ಕೊಂಡಿದ್ದಾರೆ? ಡಬ್ ಆಗಿರೋ ಸಿನಿಮಾ ಬಂದ್ರೆ ಮೂಲ ಕನ್ನಡ ಚಿತ್ರಗಳನ್ನು ನೋಡೋರಿರೋದಿಲ್ಲಾ ಅಂತಾನಾ? ಪಕ್ಕದ ತಮಿಳುನಾಡು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗ್ ಇಲ್ವಾ? ಅಲ್ಲಿ ಟಿವಿ ಧಾರಾವಾಹಿಗಳಿರಲಿ, ನ್ಯೂಸನ್ನೂ ಬಿಡದೆ ಡಬ್ ಮಾಡ್ತಾರೆ. ಭಾರತ ಬೇಡಾ ಅಂದ್ರೆ ಜಪಾನಿಗೆ ಹೋಗಿ ನೋಡಿ, ಅಲ್ಲಿ ಪಾಪ್ ಹಾಡುಗಳು, ಬಾಂಡ್ ಸಿನಿಮಾಗಳನ್ನೂ ಬಿಡದೇ ಡಬ್ ಮಾಡ್ತಾರೆ. ಆ ಚಿತ್ರರಂಗಗಳೆಲ್ಲಾ ಏನ್ ಸತ್ತು ಹೋಗಿವೆಯಾ?

ಈಗ ಡಬ್ಬಿಂಗ್ ಬೇಡಾ ಅನ್ನೋ ಈ ಕೂಗಿಗೆ ಹೊಸದಾಗಿ ಇನ್ಮೇಲೆ ಟಿವಿ, ರೇಡಿಯೋ ಜಾಹೀರಾತುಗಳನ್ನು ಡಬ್ ಮಾಡಬಾರದು ಅನ್ನೋ ಅತಿರೇಕವೂ ಸೇರ್ಕೊಂಡಿದೆ. ಹಿಂದೇನೋ ಈ ಡಬ್ಬಿಂಗ್ ನಿಂತಾಗ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ಬಂದವು. ಆದ್ರೆ ನಿಧಾನವಾಗಿ ಕನ್ನಡದೋರು ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಕ್ ಶುರು ಹಚ್ಕೊಂಡ್ರು. ಇದರ ಪರಿಣಾಮ ಇವತ್ತಿನ ದಿವಸ ಕನ್ನಡ ಚಿತ್ರಗಳಿಗೆ ಬೆಂಗಳೂರಿನ ಅರ್ಧಕ್ಕರ್ಧ ಚಿತ್ರ ಮಂದಿರಗಳು ಟಾಟಾ ಹೇಳಿವೆ. ಇದರ ಪರಿಣಾಮವಾಗಿ, ವಲಸಿಗನಿಗೆ ಮಾತ್ರಾ ತನ್ನ ಭಾಷೆ ಚಿತ್ರಾನಾ ತನ್ನ ಭಾಷೇಲೇ ನೋಡೋ ಸೌಭಾಗ್ಯ ಸಿಕ್ಕಿದೆ. ಕನ್ನಡದವ್ರು ಮಾತ್ರಾ ಚಿತ್ರರಂಗದ ಈ ಹಟದಿಂದ ಅರ್ಧಂಬರ್ಧ ಅರ್ಥ ಮಾಡ್ಕೊಂಡಾದ್ರೂ ತಮಿಳು, ತೆಲುಗು, ಹಿಂದಿ ಸಿನಿಮಾಗಳ್ನ ನೋಡ್ತಾ ನೋಡ್ತಾ, ತಾವು ಆ ಭಾಷೆ ಕಲ್ತು, ಆಯಾ ಭಾಷಿಕ ಪ್ರದೇಶದಿಂದ ಇಲ್ಲಿಗೆ ಬಂದಿರೋ ವಲಸಿಗನಿಗೆ ಕನ್ನಡದ ಅಗತ್ಯ ಇಲ್ಲದಂಗೆ ಮಾಡ್ತಿದಾರೆ.

ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!
ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ದಿದ್ರೆ ನೋಡಕ್ ಆಗಲ್ಲಾ ಅನ್ನೋ ಸ್ಥಿತಿ ಹುಟ್ಟೋದು ಖಂಡಿತಾ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಇವತ್ತು ಡಬ್ಬಿಂಗಿಗೆ ಒಪ್ಪೋದ್ರಿಂದ ಕನ್ನಡ ಚಿತ್ರರಂಗ ಬೆಳ್ಯುತ್ತೆ ಅಂತಾ ಇದನ್ನು ವಿರೋಧ್ಸೋರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಮಾತಿಗ್ ಮೊದಲು ಡಾ. ರಾಜ್ ಹೆಸರು ತೊಗೊಂಡು ಡಬ್ ಮಾಡೋರನ್ನು ಕೊಲೆ ಮಾಡಿದೋರ್ನ ನಡುಸ್ಕೊಳ್ಳೋ ಹಂಗೆ ನಡುಸ್ಕೊಳ್ಳೋ ಬದ್ಲು ಒಂದು ಸರಿಯಾದ ಚರ್ಚೆ ನಡ್ಸಿ ಇಡೀ ಚಿತ್ರರಂಗ ಡಬ್ಬಿಂಗ್ ಒಪ್ಕೊಳ್ಳೋದು ನಾಡಿಗೂ ಕ್ಷೇಮ ಮತ್ತು ಹೀಗೆ ವಿರೋಧುಸ್ತಾ ಇರೋರ ಮುಖವೂ ಉಳ್ಯುತ್ತೆ. ಇಲ್ಲಾ ಅಂದ್ರೆ ಯಾರಾದ್ರೂ ಕೋರ್ಟಿನ ಮೆಟ್ಟಿಲು ಹತ್ತಿದರೆ ಮಂಗಳಾರತಿ ಗ್ಯಾರಂಟಿ! ಏನಂತೀ ಗುರು?

(ಸ್ನೇಹಸೇತು: ಏನ್ ಗುರು)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X