»   » ರಾಜ್ಯದಲ್ಲಿ ಮಣಿರತ್ನಂ 'ರಾವಣ'ನಿಗೆ ಲಕ್ಷ್ಮಣರೇಖೆ

ರಾಜ್ಯದಲ್ಲಿ ಮಣಿರತ್ನಂ 'ರಾವಣ'ನಿಗೆ ಲಕ್ಷ್ಮಣರೇಖೆ

Posted By:
Subscribe to Filmibeat Kannada

ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರ 'ರಾವಣ್'ನಿಗೆ ರಾಜ್ಯದಲ್ಲಿ ಉಭಯಸಂಕಟ ಎದುರಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳನ್ನ್ನು ಉಲ್ಲಂಘಿಸಿದ ಕಾರಣ 'ರಾವಣ್' ಸಂಕಟ ಅನುಭವಿಸುವಂತಾಗಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವಿದು.

ಇತ್ತೀಚೆಗಷ್ಟೆ ಕೆಎಫ್ ಸಿಸಿ ನಿಯಮಗಳಿಗೆ ಎಳ್ಳುನೀರು ಬಿಟ್ಟು ರಾಜ್ಯದಲ್ಲಿ ಬಿಡುಗಡೆಯಾಗಿದ್ದ 'ಕೈಟ್ಸ್' ಚಿತ್ರಕ್ಕೂ ಇದೇ ಗತಿಯಾಗಿತ್ತು. ಈಗ 'ರಾವಣ' ಸರದಿ. ನಿಗದಿತ ಚಿತ್ರಮಂದಿರಗಳಿಗಿಂತ ಹೆಚ್ಚಾಗಿ 'ರಾವಣ್' ಬಿಡುಗಡೆಯಾಗುತ್ತಿರುವ ಕಾರಣ ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಚಿತ್ರಕ್ಕೆ ನಿರ್ಬಂಧ ಹೇರಿದ್ದಾರೆ.

ರಾಜ್ಯದಲ್ಲಿ ಪರಭಾಷಾ ಚಿತ್ರಗಳು ನಿಗಧಿತ ಸಂಖ್ಯೆಗಿಂತ ಹೆಚ್ಚಾಗಿ ಬಿಡುಗಡೆಯಾಗುವಂತಿಲ್ಲ. ಆದರೆ 'ರಾವಣ್' ಚಿತ್ರ ಕೆಎಫ್ ಸಿಸಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚಿನ ಪ್ರಿಂಟ್ ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಹಾಗಾಗಿ ರಾವಣ್ ಚಿತ್ರಕ್ಕೆ ಬಿಡುಗಡೆಯಾಗದಂತೆ ನಿರ್ಬಂಧಿಸಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.

ರಾವಣ್ ಚಿತ್ರವನ್ನು ಒಂದೇ ಚಿತ್ರ ಎಂದು ಪರಿಗಣಿಸದೆ ಎರಡು ಚಿತ್ರಗಳೆಂದು ಪರಿಗಣಿಸಲು ಆಗ್ರಹ
ರಾವಣ್ ಚಿತ್ರ 24 ಕೇಂದ್ರಗಳಲ್ಲಿ ಜೂನ್ 18ರಂದು ತೆರೆಕಾಣಲಿದೆ. ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ 'ರಾವಣ್' ರಾಜ್ಯಕ್ಕೆ ದಾಂಗುಡಿಯಿಡುತ್ತಿದ್ದಾನೆ. ಎರಡು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ 'ರಾವಣ್' ಚಿತ್ರವನ್ನು ಎರಡು ಭಿನ್ನ ಚಿತ್ರಗಳು ಎಂದು ಪರಿಗಣಿಸಿ ಬಿಗ್ ಸಿನಿಮಾಸ್ ಬಿಡುಗಡೆ ಮಾಡುತ್ತಿದೆ.

ಹಿಂದಿ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರಿದ್ದಾರೆ. ಎರಡು ಚಿತ್ರಗಳನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಿದ್ದೇವೆ. ರಾವಣ್ ಚಿತ್ರವನ್ನು ಒಂದೇ ಚಿತ್ರ ಎಂದು ಪರಿಗಣಿಸದೆ ಎರಡು ಚಿತ್ರಗಳೆಂದು ಗಣನೆಗೆ ತೆಗೆದುಕೊಳ್ಳಿ ಎಂಬುದು ಬಿಗ್ ಸಿನಿಮಾಸ್ ವಾದ. ಆದರೆ ಇದನ್ನು ಸುತಾರಾಂ ಒಪ್ಪುವ ಸ್ಥಿತಿಯಲ್ಲಿಲ್ಲ ಕೆಎಫ್ ಸಿಸಿ.

ಹಿಂದಿ ರಾವಣನೇ ಬೇರೆ ತಮಿಳು ರಾವಣನೇ ಬೇರೆ ಎಂದು ಪರಿಗಣಿಸಿರುವ ಬಿಗ್ ಸಿನಿಮಾಸ್ ರಾಜ್ಯದಲ್ಲಿ ಒಟ್ಟು 48 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. "ರಾವಣ್ ಒಂದು ಬಿಗ್ ಬಜೆಟ್ ಚಿತ್ರ.ಫಿಲಂ ಚೇಂಬರ್ ರಾವಣನಿಗೆ ಸ್ವಲ್ಪ ಕನಿಕರ ತೋರಬೇಕು. ತಮ್ಮ ನೀತಿ ನಿಯಮಗಳನ್ನು ಕೊಂಚ ಸಡಿಲಿಸಿಕೊಂಡು ಚಿತ್ರ ಬಿಡುಗಡೆ ಅವಕಾಶ ಮಾಡಿಕೊಡಿ " ಎಂದು ಕೆಎಫ್ ಸಿಸಿಗೆ ಈಗಾಗಲೆ ಬಿಗ್ ಸಿನಿಮಾಸ್ ಪತ್ರವನ್ನು ಬರೆದಿದೆ.

ಬಿಲ್ ಕುಲ್ ಅಂದ್ರೂ 24ಕ್ಕಿಂತಲೂ ಹೆಚ್ಚಿನ ಕೇಂದ್ರಗಳಲ್ಲಿ ರಾವಣ್ ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ. ಕನ್ನಡ ಚಿತ್ರೋದ್ಯಮದ ಒಳಿತಿಗಾಗಿ ಈ ನಿರ್ಧಾರಕ್ಕೆ ಕಟ್ಟುಬಿದ್ದಿದ್ದೇವೆ ಎನ್ನುತ್ತಾರೆ ಬಸಂತಕುಮಾರ್ ಪಾಟೀಲ್. ಒಟ್ಟಿನಲ್ಲಿ 'ರಾವಣ್'ನಿಗೆ ರಾಜ್ಯದಲ್ಲಿ ಬಸಂತಕುಮಾರ್ ಲಕ್ಷ್ಮಣರೇಖೆ ಎಳೆದಿದ್ದಾರೆ. ಲಕ್ಷ್ಮಣರೇಖೆ ಉಲ್ಲಂಘಿಸಿ ನೋಡೋಣ? ಎಂಬ ಸವಾಲನ್ನು ಹಾಕಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada