»   » ಪೃಥ್ವಿ ಚಿತ್ರದ ಅಸಲಿ ನಿರ್ಮಾಪಕ ಯಾರು ಸಾರ್?

ಪೃಥ್ವಿ ಚಿತ್ರದ ಅಸಲಿ ನಿರ್ಮಾಪಕ ಯಾರು ಸಾರ್?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಳ್ಳಾರಿ ಗಣಿಧಣಿಗಳ ಚಿತ್ರ 'ಪೃಥ್ವಿ'. ಈ ಚಿತ್ರದ ನಿರ್ಮಾಪಕರು ಸೂರಪ್ಪ ಬಾಬು ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ಈ ಚಿತ್ರವನ್ನು ಬೇನಾಮಿ ಹೆಸರಿನಲ್ಲಿ ಮತ್ತೊಬ್ಬ ಗಣಿ ಮಾಲೀಕ ಅನಿಲ್ ಲಾಡ್ ನಿರ್ಮಿಸಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ.

2008ರಲ್ಲಿ ಅನಿಲ್ ಲಾಡ್ ವಿಧಾನ ಸಭೆಗೆ ಬಳ್ಳಾರಿಯಿಂದ ಸ್ಪರ್ಧಿಸಿ ಸೋತಿದ್ದರು. ಅನಿಲ್ ಲಾಡ್ ವಿರುದ್ಧ ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಗೆದ್ದಿದ್ದರು. ಚುನಾವಣೆಗಾಗಿ ಅನಿಲ್ ಲಾಡ್ ಕೋಟ್ಯಾಂತರ ರುಪಾಯಿ ಸುರಿದರು ಪ್ರಯೋಜನವಾಗಲಿಲ್ಲ ಎಂಬುದು ಫ್ಲ್ಯಾಶ್ ಬ್ಲಾಕ್.

ಸದ್ಯಕ್ಕೆ ಕಾಂಗ್ರೆಸ್ ಸಂಸದರಾಗಿರುವ ಅನಿಲ್ ಲಾಡ್ ಅಂದಿನಿಂದಲೂ ರೆಡ್ಡಿ ಬ್ರದರ್ಸ್ ಮೇಲೆ ಕತ್ತಿಮಸೆಯುತ್ತಲೆ ಇದ್ದರು. ಈಗ ಪೃಥ್ವಿ ಚಿತ್ರಕ್ಕೆ ಫೈನಾನ್ಸ್ ಮಾಡುವ ಮೂಲಕ ರೆಡ್ಡಿಗಳ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಮಾತುಗಳಲ್ಲಿನ ಸತ್ಯ ಎಷ್ಟು ಎಂಬುದು ಇನ್ನೂ ನಿಗೂಢವಾಗಿದೆ.

ಬಳ್ಳಾರಿ ರೆಡ್ಡಿಗಳನ್ನು ಜನರ ದೃಷ್ಟಿಯಲ್ಲಿ ವಿಲನ್ ಮಾಡುವುದು ಲಾಡ್ ತಂತ್ರಗಾರಿಕೆ. ಹಾಗಾಗಿ ಈ ಚಿತ್ರಕ್ಕೆ ಪರೋಕ್ಷವಾಗಿ ಹಣ ಹೂಡಿದ್ದಾರೆ ಎಂಬುದು ಗುಮಾನಿ. ಇದು ನಿಜವೇ ಆಗಿದ್ದರೆ ಕನ್ನಡ ಚಿತ್ರರಂಗ ಗಣಿ ದುಡ್ಡನ್ನು ನೋಡಿದಂತಾಗುತ್ತದೆ. ಈಗಾಗಲೆ ರಿಯಲ್ ಎಸ್ಟೇಟ್ ದುಡ್ಡಿನಿಂದ ಗಬ್ಬೆದ್ದು ಹೋಗಿರುವ ಕನ್ನಡ ಚಿತ್ರರಂಗ ಇನ್ನು ಮುಂದೆ ಗಣಿ ದುಡ್ಡಿನಿಂದ ಮತ್ತಷ್ಟು ಅಧಃಪತನಕ್ಕೆ ಇಳಿಯುವ ಸಾಧ್ಯತೆಯಿದೆ.

24/7 ರಾಜಕಾರಣಿ ಎಂದೇ ಖ್ಯಾತರಾದ ಎಚ್ ಡಿ ದೇವೇಗೌಡ ಇತ್ತೀಚೆಗೆ ಪೃಥ್ವಿ ಚಿತ್ರವನ್ನು ನೋಡಿ ಬಳ್ಳಾರಿ ಗಣಿಧಣಿಗಳ ವಿರುದ್ಧ ಹರಿಹಾಯ್ದಿದ್ದರು. ಅನಿಲ್ ಲಾಡ್ ಸಂಸದರಾಗಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಪರೋಕ್ಷ ಕಾರಣ ಎಂಬುದು ಗೊತ್ತೆಯಿದೆ. ಒಟ್ಟಿನಲ್ಲಿ ಪೃಥ್ವಿ ಚಿತ್ರಕ್ಕೆ ಗಣಿ ಹಣ ಹರಿದಾಡಿರುವ ಬಗ್ಗೆ ಬಲವಾದ ಪುರಾವೆಗಳು ಸಿಗುತ್ತಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada