»   » ಪತ್ರಕರ್ತ ಶ್ಯಾಂ ಮೇಲೆ ಹೂ ನಿರ್ಮಾಪಕ ಕಿಡಿ

ಪತ್ರಕರ್ತ ಶ್ಯಾಂ ಮೇಲೆ ಹೂ ನಿರ್ಮಾಪಕ ಕಿಡಿ

Posted By:
Subscribe to Filmibeat Kannada

ಹೂ ಚಿತ್ರದ ಕುರಿತು ಬರೆದ ವಿಮರ್ಶೆಗೆ ಚಿತ್ರ ನಿರ್ಮಾಪಕ ದಿನೇಶ್‌ಗಾಂಧಿ ಅವರು ಸಿನಿ ಪತ್ರಕರ್ತರೊಬ್ಬರಿಗೆ ಫೋನ್‌ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬೆಂಗಳೂರು ಮಿರರ್ ಪತ್ರಿಕೆಯ ಸಿನಿಮಾ ಪತ್ರಕರ್ತ ಶ್ಯಾಮ್ ಅವರು ಬರೆದ ಹೂ ಚಿತ್ರದ ವಿಮರ್ಶೆ ದಿನೇಶ್ ಗಾಂಧಿ ನಿದ್ದೆಕೆಡಿಸಿದೆ.

ರವಿಚಂದ್ರನ್ ಅವರ ರಿಮೇಕ್ ಚಿತ್ರ ಹೂ ಬಗ್ಗೆ ವಸ್ತುನಿಷ್ಠ ವಿಮರ್ಶೆ ಬರೆದಿದ್ದ ಶ್ಯಾಂ, ಚಿತ್ರದ ಸಕರಾತ್ಮಕ ನಕಾರಾತ್ಮಕ ಅಂಶಗಳನ್ನು ಸರಳವಾಗಿ ವಿಶ್ಲೇಷಿಸಿದ್ದರು. ರವಿಚಂದ್ರನ್ ಹಾಗೂ ನಮಿತಾರನ್ನು ಪ್ರೇಮ ಸನ್ನಿವೇಶಗಳಲ್ಲಿ ತೆರೆಯ ಮೇಲೆ ಒಟ್ಟಿಗೆ ನೋಡುತ್ತಿದ್ದರೆ, ಎರಡು ಮದಗಜಗಳ ರೋಮಾನ್ಸ್ ನಂತಿದೆ ಎಂದು ಕಾಲೆಳೆದಿದ್ದರು.

ಮಿರರ್ ಪತ್ರಿಕೆಯಲ್ಲಿ ಚಿತ್ರದ ಕುರಿತು ಬರೆದಿರುವ ವಿಮರ್ಶೆ ನಕಾರಾತ್ಮಕವಾಗಿದೆ. ಚೆನ್ನಾಗಿಲ್ಲ ಎಂದು ಕೋಪಗೊಂಡ ಚಿತ್ರದ ನಿರ್ಮಾಪಕ ದಿನೇಶ್‌ಗಾಂಧಿ ಅವರು ಶ್ಯಾಂಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಪತ್ರಕರ್ತ ಶ್ಯಾಂ ಅವರು ದಿನೇಶ್ ಗಾಂಧಿ ಮಾಡಿದ್ದ ಫೋನ್ ಕರೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಅದರ ಆಧಾರದ ಮೇಲೆ ಸೆಂಟ್ರಲ್ ಪೊಲೀಸ್ ಠಾಣೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ. ಶ್ಯಾಂಗೆ ಬೆಂಬಲ ವ್ಯಕ್ತಪಡಿಸಿರುವ ಸಿನಿ ಪತ್ರಕರ್ತರು, ನಿರ್ಮಾಪಕ ಗಾಂಧಿಗೆ ಛೀಮಾರಿ ಹಾಕಿದ್ದಾರೆ.

ಹೂ ಚಿತ್ರ ತೆಲುಗಿನ ವಸಂತಂ ಚಿತ್ರದ ಅವತರಣಿಕೆಯಾದರೂ, ಅದನ್ನು ಸ್ವಲ್ಪ ಮಟ್ಟಿಗೆ ಬದಲಿಸಿ ರವಿಚಂದ್ರನ್ ಚಿತ್ರೀಕರಿಸಿದ್ದರು. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ. ನಮಿತಾ, ಮೀರಾ ಜಾಸ್ಮಿನ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬರೋಬ್ಬರಿ ಎರಡೂವರೆ ವರ್ಷಗಳ ನಂತರ ರವಿಚಂದ್ರನ್ ಅವರ ಅಭಿನಯದ ಹೂ ಚಿತ್ರ ಜೂನ್ 4 ರಂದು ರಾಜ್ಯದ ಎಲ್ಲೆಡೆ ತೆರೆಕಂಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada