twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿನಗರಕ್ಕೆ ನಿರ್ದೇಶಕರು ಬೇಕಾಗಿದ್ದಾರೆ !

    By Staff
    |

    Puttanna Kanagal
    ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಮುಂಗಾರು ಮಳೆ, ದುನಿಯಾ ಚಿತ್ರಗಳಂತಹ ಚಿತ್ರಗಳೇಕೆ ಬರುತ್ತಿಲ್ಲ ? ಯೋಗರಾಜ್ ಭಟ್, ಸೂರಿ ಅವರಲ್ಲಿ ಮತ್ತೊಂದು ಮುಂಗಾರು ಮಳೆ, ಇನ್ನೊಂದು ದುನಿಯಾದಂತಹ ಯಶಸ್ವಿ ಚಿತ್ರ ನಿರ್ದೇಶನ ಮಾಡುವುದು ಸಾಧ್ಯವಾಗುವುದಿಲ್ಲವೇ ? ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಬರುತ್ತಿಲ್ಲ. ಉತ್ತಮ ಕಥೆಗಾರರಿಲ್ಲ. ನಿರ್ದೇಶನ ಕೆಟ್ಟದಾಗಿ ಇರುತ್ತೆ. ಹೊಸತನ ಅನ್ನುವುದು ಕನ್ನಡ ಚಿತ್ರರಂಗದಿಂದ ಮಾಯಾವಾಗಿ ದಶಕಗಳೆ ಕಳೆದಿವೆ.

    *ಮೃತ್ಯುಂಜಯ ಕಲ್ಮಠ

    ಹೊಸಬರಿಗೆ ವೃತ್ತಿಪರತೆ ಕೊರತೆ. ಹಳೆಬರ ಕೈಯಲ್ಲಿ ಕೆಲಸವಿಲ್ಲ. ಒಂದು ಕಾಲದ ಘಟಾನುಘಟಿ ನಿರ್ದೇಶಕ ಎನಿಸಿದವರು ಏಕೆ ಹೊಸ ಕಥೆ, ಹೊಸತನದ ಮೂಲಕ ಮತ್ತೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿಲ್ಲ. ನಮ್ಮದೆಂತಹ ಕರ್ಮ ಇಂತಹ ಚಿತ್ರ ನೋಡಿ ನಾವು ಕಾಸು ಕಳೆದುಕೊಳ್ಳಬೇಕಾ. ಹೀಗೆ ಮುಖಾಮೋತಿ ನೋಡಿದೆ ಸ್ನೇಹಿತನೊಬ್ಬ ರಾಜ್ ದಿ ಶೋ ಮ್ಯಾನ್ ಚಿತ್ರ ವಿಕ್ಷೀಸಿ ಬಂದ ನಂತರ ಕಿರುಚಾಡುತ್ತಿದ್ದ. ಅತನಿಗೆ ಪುನೀತ್ ರಾಜ್ ಕುಮಾರ್ ಅಂದರೆ ಇಷ್ಟ. ರಾಜ್ ಚಿತ್ರಕ್ಕೆ 500 ರುಪಾಯಿ ಕೊಟ್ಟು ನೋಡಲಿಕ್ಕೆ ಹೋಗಿದ್ದ. ಪಾಪ ಆತನ ಸಂಕಟ ನನಗೆ ಅರ್ಥ ಆಗಿತ್ತು. ಸುಮ್ಮನೆ ರೊಕ್ಕ ಹಾಳುಮಾಡಿಕೊಂಡರೆ ಯಾರಿಗೆ ತಾನೇ ಹೊಟ್ಟೆ ಉರಿಯಲ್ಲ ಹೇಳ್ರಿ.

    ಈ ಮಾತು ನನ್ನ ಸ್ನೇಹಿತನದಷ್ಟೆ ಅಲ್ಲ. ಕನ್ನಡ ಚಿತ್ರಗಳನ್ನು ಪ್ರೀತಿಸುವ ಸಾಕಷ್ಟು ಜನರ ಪ್ರಶ್ನೆಯಾಗಿದೆ. ಆದರೆ, ನಮ್ಮ ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರರು ಕೇಳಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಹಾಕಿರುವ ಒಂದೆರಡು ಕೋಟಿ ಮಿಕ್ಕಿ ಹಣ ಸರಾಗವಾಗಿ ಬರುತ್ತಿರುವಾಗ ಚಿತ್ರದ ಗೆಲುವು, ಸೋಲು ಯಾರಿಗೆ ಬೇಕು. ಎರಡು ಮೂರು ತಿಂಗಳು ಸಾಲಸೂಲ ಮಾಡಿ 1 ಕೋಟಿ ರುಪಾಯಿ ಹೊಂದಿಸಿಕೊಂಡು ಚಿತ್ರ ನಿರ್ಮಿಸುವುದು. ಟಿವಿಗಳಿಗೆ, ಕ್ಯಾಸೆಟ್ ಕಂಪನಿಗಳಿಗೆ ಚಿತ್ರದ ಹಕ್ಕು ಮಾರಿದರೆ ಹಾಕಿದ ಅರ್ಥ ಹಣ ಬರುತ್ತೆ. ಒಂದು ವಾರ ಚಿತ್ರಮಂದಿರದಲ್ಲಿ ಚಿತ್ರವಿದ್ದರೆ ಭರ್ಜರಿ ವ್ಯಾಪಾರವಾದಂತೆ. 1 ಕೋಟಿಗೆ 1.50 ಕೋಟಿ ರುಪಾಯಿ ಬಂದರೂ ಲಾಭವೇ. ಹಾಗಂತ ಚಿತ್ರ ನಿರ್ಮಾಣ ಮಾಡಿ ಮನೆಮಠ ಕಳೆದುಕೊಂಡವರ ಅನೇಕ ಉದಾಹರಣೆಗಳು ಕೂಡಾ ಗಾಂಧಿನಗರದಲ್ಲಿವೆ. ಎಲ್ಲದಕ್ಕೂ ಒಂದು ಜಾಣತನ ಬೇಕು ಬಿಡಿ. ಇನ್ನು ಕೆಲ ಪ್ರತಿಭಾವಂತ ನಿರ್ದೇಶಕರುಗಳು ಸದಭಿರುಚಿ ಚಿತ್ರಗಳನ್ನು ಬಿಟ್ಟು ಕಮರ್ಷಿಯಲ್ ಚಿತ್ರಗಳ ಕಡೆ ತಲೆ ಹಾಕದೇ ತಪ್ಪು ಮಾಡಿದರೇ, ಎಲ್ಲಾ ರೀತಿ ಚಿತ್ರಗಳ ನಿರ್ಮಿಸೋ ಅರ್ಹತೆ ಇರೋ ಇವರುಗಳು ತಮ್ಮ ಆದರ್ಶಕ್ಕೋ, ಸ್ಟಾರ್ ನಟರಿಗೆ ಸಲಾಂ ಹೊಡೆಯದೆ, ಅಥವಾ ಅವಕಾಶ ದೊರೆಯದೆ ಬಹುಜನರ ಗುಂಪಿಗೆ ಸೇರದ ಚಿತ್ರ ನೀಡೊ ಬದಲು ಸೀಮಿತ ವೃತ್ತದಲ್ಲಿ ಇರುವುದು ಯಾಕೆ? ಎಂಬ ಪ್ರಶ್ನೆ ಹುಟ್ಟುತ್ತದೆ.

    ನಿಮಗೆ ಗೊತ್ತಿರಬಹುದು ಈ ವರ್ಷದಲ್ಲಿ ಅಂಬಾರಿ ಮತ್ತು ಸವಾರಿ ಬಿಟ್ಟರೆ ಯಾವ ಚಿತ್ರಗಳು ಗೆದ್ದಿವೆ ಲೆಕ್ಕ ಹಾಕಿ. ಗಾಂಧಿನಗರದ ದಿಕ್ಕನ್ನೆ ಬದಲಿಸಲಿದೆ ಎಂಬ ಅಬ್ಬರ ಪ್ರಚಾರ ಪಡೆದುಕೊಂಡಿದ್ದ ರಾಜ್ ದಿ ಶೋ ಮ್ಯಾನ್ ಚಿತ್ರ ಬಿಲೋ ನಾರ್ಮಲ್. ಏನೇ ಓಡಿಸಿದರೂ ಅಬ್ಬಬ್ಬಾ ಅಂದರೆ 50 ದಿನ ಮಾತ್ರ ? ಮಳೆ ಬರಲಿ, ಮಂಜೂ ಇರಲಿ ಸ್ವಲ್ಪ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿತ್ತಾದರೂ ನಾನಾಕಾರಣಗಳಿಂದ ಅದು ಕೂಡಾ ಮೂಲೆ ಹಿಡಿಯಿತು. ಈ ನಡುವೆ ದುನಿಯಾ ಖ್ಯಾತಿಯ ಸೂರಿ ಅವರ ತಾಕತ್ತಿನ ಆಟ ನಡೆಯಲಿಲ್ಲ. ಪರಭಾಷಾ ಚಿತ್ರಗಳು ಕನ್ನಡ ಚಿತ್ರರಂಗದ ಮೇಲೆ ಬೀರಿರುವ ಪ್ರಭಾವವೇ ಇದಕ್ಕೆ ಕಾರಣ ಅನ್ನುತ್ತಿದೆ ಗಾಂಧಿನಗರ ?

    ನಮ್ಮವರು ಯಾವ ಚಿತ್ರವನ್ನು ಸ್ವಮೇಕ್ ಮಾಡಿದ್ದಾರೆ ಹೇಳಿ, ಎಲ್ಲವೂ ರಿಮೇಕ್ ಚಿತ್ರಗಳು. ತಮಿಳು, ತೆಲುಗು, ಇನ್ನ್ಯಾವುದೂ ಚಿತ್ರಗಳನ್ನು ತಂದು ಕೆಟ್ಟದಾಗಿ ಕನ್ನಡ ಚಿತ್ರ ಮಾಡುವುದು. ಎಸ್ ನಾರಾಯಣ್ , ರವಿಚಂದ್ರನ್ ಅವರಿಂದ ಹಿಡಿದು ನಿನ್ನೆ ಮೊನ್ನೆ ಬಂದ ಎಲ್ಲ ನಿರ್ದೇಶಕರೂ ರಿಮೇಕ್ ಚಿತ್ರ ಸುತ್ತುವ ಜಾಣರೇ ? ಯಾರಲ್ಲಿಯೋ ಹೊಸತನವಿಲ್ಲ. ಪ್ರೇಮ ಕಥೆ ಬಿಟ್ಟು ವಿಭಿನ್ನ ಚಿತ್ರ ನಿರ್ಮಾಣ ಮಾಡುವ ಸಾಮರ್ಥ್ಯ ಎಲ್ಲಿಯೋ ಇಲ್ಲ. ಹೀಗಿದ್ದಾಗ ಕಾಸು ಕೊಟ್ಟು ಕನ್ನಡ ಸಿನಿಮಾ ನೋಡು ಅಂದರೆ, ಹೇಗೆ ಸ್ವಾಮಿ ? ಮಗಧೀರ, ಮಲ್ಲನ್ನ, ಕಂದಸ್ವಾಮಿ ಚಿತ್ರಗಳನ್ನೆ ನೋಡಿ, ಅಲ್ಲೊಂದು ವಿಭಿನ್ನತೆ ಇದೆ. ಹೊಸ ಅವಿಷ್ಕಾರವಿದೆ. ಈ ಕಾರಣಕ್ಕೆ ಜನ ಅತ್ತ ಹೋಗುತ್ತಾರೆ. ರಿಮೇಕ್ ಬಿಟ್ಟು ಸ್ವಮೇಕ್ ಮಾಡುವತ್ತ ಏಕೆ ಗಮನ ಹರಿಸಬಾರದು ? ಹಾಗೆ ನೋಡಿದರೆ ಪ್ರೇಮ್ ಎಷ್ಟೊ ವಾಸಿ ಅನಿಸುತ್ತೆ. ಆವರ ಚಿತ್ರಗಳಲ್ಲಿ ತಕ್ಕಮಟ್ಟಿಗಾದರೂ ಹೊಸತನ ಕಾಣಬಹುದು. ರಾಜ್ ಚಿತ್ರದಲ್ಲಿ ಕೂಡಾ ಹೊಸತನವಿದೆ ಅನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಥೆ ಅಲ್ಲದಿದ್ದರೂ ಕ್ರೇಜ್ ಹುಟ್ಟಿಸೋ ಜಾಣತನ ಇದೆ. ಆದರೆ ಕ್ರೇಜ್ ಏನಿದ್ದರೂ ಕ್ಷಣಿಕ ನೆನಪಿರಲಿ.

    ಡಬ್ಬಿಂಗ್ ಪದ್ಧತಿ ಬೆಸ್ಟ್

    ರಿಮೇಕ್ ಚಿತ್ರಗಳ ಕನ್ನಡಿಗರನ್ನು ಪಾರು ಮಾಡಲು ಡಬ್ಬಿಂಗ್ ಪದ್ಧತಿ ಬೆಸ್ಟ್ ಅನಿಸುತ್ತೆ. ತೆಲುಗು, ತಮಿಳು ಚಿತ್ರಗಳಲ್ಲಿ ಎಲ್ಲ ಭಾಷೆಗಳ ಚಿತ್ರಗಳು ಡಬ್ಬ ಆಗುತ್ತವೆ. ಹಾಗಂತ ಅಲ್ಲಿನ ಚಿತ್ರೋದ್ಯಮ ದಿನದಿಂದ ದಿನಕ್ಕೆ ಬೆಳೆಯತೊಡಗಿದೆ. ಹೊಸ ಹೊಸ ಕಥೆಗಳು, ನಿರ್ದೇಶಕರು ಹುಟ್ಟಿಕೊಳ್ಳುತ್ತಿದ್ದಾರೆ. ಅದನ್ನು ನಮ್ಮಲ್ಲಿಯೂ ತರಬೇಕು. ಆಗ ರಿಮೇಕ್ ಮಾತಿರುವುದಿಲ್ಲ. ಆಗ ಹೊಸ ಯೋಜನೆಗಳು, ಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಪರಭಾಷೆ ಚಿತ್ರಗಳನ್ನು ರಾಜ್ಯದಲ್ಲಿ ಮೊದಲ ವಾರವೇ ಬಿಡುಗಡೆ ಮಾಡಬಾರದು ಎಂಬ ಬೊಬ್ಬೆಹಾಕುತ್ತಿರುವಾಗ ಇನ್ನು ಪರಭಾಷೆ ಚಿತ್ರಗಳ ಡಬ್ಬಿಂಗ್ ಆರಂಭಿಸಿದರೆ ಏನಾಗುತ್ತೆ ಅಂತ ವಿವರಿಸಬೇಕಿಲ್ಲ. ನಿರ್ಮಾಪಕರು, ನಿರ್ದೇಶಕರು ಇಂತಹ ಸಂಗತಿಗಳ ಬಗ್ಗೆ ಒಂದು ಸಾರಿ ಚಿಂತನೆ ನಡೆಸಿದರೆ ಒಳಿತು.

    ಪುಟ್ಟಣ ಕಣಗಾಲ್ ಯುಗದ ನಂತರ ಅದೇ ತರಹದ ಭರವಸೆ ಹುಟ್ಟಿಸಿದವರು ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ ಮನಸ್ಸು ಮಾಡಿದ್ದರೆ ದಕ್ಷಿಣ ಭಾರತದಲ್ಲಿ ಉತ್ತಮ ನಿರ್ದೇಶಕನಾಗಬಹುದಿತ್ತು. ನಟನಾಗು ಎಂಬ ಹುಳವನ್ನು ಅವರ ತಲೆಯೊಳಗೆ ಯಾರು ಬಿಟ್ಟರೂ ಗೊತ್ತಿಲ್ಲ. ಅದ್ಭುತ ನಿರ್ದೇಶಕ ಎನಿಸಿಕೊಳ್ಳುವ ಎಲ್ಲ ಅರ್ಹತೆ ಇದ್ದ ಉಪೇಂದ್ರ ರಿಮೇಕ್ ಹಿರೋ ಆಗಿ ಸಾಲು ಸಾಲು ಕೆಟ್ಟ ಚಿತ್ರಗಳನ್ನು ನೀಡುತ್ತಿರುವುದು ಶೋಚನೀಯ ಸಂಗತಿ. ಅವರ ನಂತರ ಹೇಳಿಕೊಳ್ಳುವಂತ ನಿರ್ದೇಶನಕನಿಗೆ ಗಾಂಧಿನಗರ ಕಾಯುತ್ತಿದೆ.

    ಕಳೆದ ಒಂದು ವರ್ಷದ ಹಿಂದೆ ಕಲಾ ಸಾಮ್ರಾಟ ಎಸ್ ನಾರಾಯಣ್, ನವರಸನಾಯಕ ಜಗ್ಗೇಶ್ ನಟನೆಯ ನಾಗೇಂದ್ರ ಮಾಗಡಿ ಎಂಬ ನಿರ್ದೇಶಕರ ಚಿಕ್ಕಪೇಟೆ ಸಾಚಾಗಳು ಎಂಬ ಭಯಾನಕ ಚಿತ್ರ ನೋಡಿದ ನಂತರ ಇನ್ನೆಂದೂ ಕನ್ನಡ ಚಿತ್ರಗಳನ್ನು ನೋಡಬಾರದು ಎಂದು ತೀರ್ಮಾನಿಸಿದ್ದೆ. ಮಾಧ್ಯಮ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಗುರುಪ್ರಸಾದ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರವನ್ನು ನೋಡಿದೆ. ಕೊಟ್ಟ ರೊಕ್ಕಕ್ಕೇನು ಸಂಚಕಾರ ಬರಲಿಲ್ಲ. ಗುರುಪ್ರಸಾದ ಅವರು ತಮ್ಮ ಚಿಂತನಾ ಲಹರಿಯನ್ನು ವಿಸ್ತರಿಸಿಕೊಂಡರೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅಸ್ತಿ ಆಗುವ ಎಲ್ಲ ಲಕ್ಷಣಗಳು ಇವೆ. ಸಮಸ್ಯೆ ನಿರಂತರವಾದರೂ ಪರಿಹಾರ ಪ್ರೇಕ್ಷಕರ ಕೈಲಿದೆ. ರಿಮೇಕ್ ಚಿತ್ರಗಳನ್ನು ಮಕಾಡೆ ಮಲಗಿಸುವ ತಾಕತ್ತು ಇರುವುದು ಕನ್ನಡದ ಕಲಾಭಿಮಾನಿಗಳಿಗೆ ಮಾತ್ರ.

    Sunday, September 6, 2009, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X