»   »  ಶೋಭಾರಾಣಿಯೊಂದಿಗೆ ಪ್ರಕಾಶ್ ರೈ ಮದುವೆ?

ಶೋಭಾರಾಣಿಯೊಂದಿಗೆ ಪ್ರಕಾಶ್ ರೈ ಮದುವೆ?

Posted By:
Subscribe to Filmibeat Kannada

ವಿವಾಹ ವಿಚ್ಛೇದನಕ್ಕೂ ಮುನ್ನವೇ ನಟ ಪ್ರಕಾಶ್ ರೈ ಮತ್ತೊಂದು ಮದುವೆ ಮಾಡಿಕೊಂಡರೆ? ಹೌದು ಎನ್ನುತ್ತವೆ ಕೆಲವೊಂದು ಮೂಲಗಳು! ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ!

ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಗೆ ಪಿಆರ್ ಪಿಯ ಬಹುತೇಕ ಮುಖಂಡರು ಹಾಜರಿದ್ದರು ಎಂದು ಬಿಂಬಿಸಲಾಗಿದೆ. ಆದರೆ ಇದೆಲ್ಲಾ ಅಪ್ಪಟ ಸುಳ್ಳು, ಕಟ್ಟುಕತೆ ಎಂದು ಪ್ರಕಾಶ್ ರೈ ಮತ್ತು ಶೋಭಾರಾಣಿ ಇಬ್ಬರು ಪ್ರತಿಕ್ರಿಯಿಸಿದ್ದಾರೆ. ಇವು ನಕಲಿ ಫೋಟೋಗಳು ಎಂದು ಶೋಭಾರಾಣಿ ಹೇಳಿದ್ದಾರೆ.

ಈ ಬಗ್ಗೆ ಶೋಭಾರಾಣಿ ಮಾತನಾಡುತ್ತಾ, ಇದೆಲ್ಲಾ ರಾಜಕೀಯ ಕುತಂತ್ರ.ರಾಜಕೀಯ ಉದ್ದೇಶದಿಂದ ಯಾರೋ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರೈ ಸಹ ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಈ ರೀತಿಯ ಯಾವುದೇ ವಿವಾದಗಳಿಂದ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಕಾಶ್ ರೈ ತಮ್ಮ ಪತ್ನಿ ಲಲಿತಕುಮಾರಿ ಅವರೊಂದಿಗೆ ವಿವಾಹ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ತಾರಾ ಜೋಡಿ ಎನಿಸಿಕೊಂಡಿದ್ದ ಈ ದಂಪತಿಗಳಿಗೆ ಮೂರು ಮಕ್ಕಳು (ಗಂಡು ಮಗು ಮೃತಪಟ್ಟಿದೆ) ಇದ್ದಾರೆ. ವಿವಾಹ ವಿಚ್ಛೇದನ ತೀರ್ಪು ಇನ್ನೂ ಹೊರಬಿದ್ದಿಲ್ಲ.

ಹಾಗೆಯೇ ಪಿಆರ್ ಪಿ ಅಧ್ಯಕ್ಷೆ ಶೋಭಾರಾಣಿ ಸಹ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಶೋಭಾ ಎಂಬುವವರನ್ನು ಪ್ರಕಾಶ್ ರೈ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಕೆಯ ಹೆಸರು ಶೋಭಾರಾಣಿ ಎಂದಿರುವ ಕಾರಣ ತಮ್ಮಿಬ್ಬರಿಗೂ ಸಂಬಂಧ ಕಲ್ಪಿಸಿದ್ದಾರೆ ಎನ್ನುತ್ತಾರೆ ಶೋಭಾರಾಣಿ.

ತಾವು ಯಾವುದೋ ಚಿತ್ರೀಕರಣದಲ್ಲಿ ಒಮ್ಮೆ ಮಾತ್ರ ಪ್ರಕಾಶ್ ರೈ ಅವರನ್ನು ಭೇಟಿಯಾಗಿದ್ದೆ. ಅವರಿಗೂನನಗೂ ಯಾವುದೇ ಗುರುತು ಪರಿಚಯವಿಲ್ಲ. ಇದೆಲ್ಲಾ ತಮಗಾಗದವರ ಕೃತ್ಯ. ಮುಂದಿನ ಎರಡು ಮೂರು ದಿನಗಳಲ್ಲಿ ಈ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದು ಶೋಭಾರಾಣಿ ತಿಳಿಸಿದ್ದಾರೆ.

ಶೋಭಾರಾಣಿ ಅವರೇ ಈ ಕೃತ್ಯದ ರೂವಾರಿ ಎನ್ನುತ್ತವೆ ಕೆಲವೊಂದು ಮೂಲಗಳು. ಪ್ರಕಾಶ್ ರೈ ಅವರ ಕೆಲವೊಂದು ಯಶಸ್ವಿ ಚಿತ್ರಗಳ ವಿತರಕರೂ ಆಗಿದ್ದರು ಶೋಭಾರಾಣಿ.ಕೆಲವು ಮಾಧ್ಯಮಗಳ ಮೂಲಕ ಈ ಫೋಟೋಗಳನ್ನು ಅವರೇ ಬಹಿರಂಗಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಬಿಟ್ಟಿ ಪ್ರಚಾರ ಸಿಕ್ಕುತ್ತ್ತದೆ ಎಂಬುದು ಅವರ ಎಣಿಕೆ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada