»   »  ಸಖಿಗೋಪಾಲ ದೇಗುಲದಲ್ಲಿ ಶಿಲ್ಪಾಗೆ ದಕ್ಕಿದ ಮುತ್ತು!

ಸಖಿಗೋಪಾಲ ದೇಗುಲದಲ್ಲಿ ಶಿಲ್ಪಾಗೆ ದಕ್ಕಿದ ಮುತ್ತು!

Subscribe to Filmibeat Kannada

ಬಾಲಿವುಡ್ ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿಗೂ ವಿವಾದಗಳಿಗೂ ಏನೋ ಒಂಥರಾ ನೆಂಟಸ್ತಿಕೆ. ಒಂದಾದ ನಂತರ ಒಂದು ಚುಂಬನ ವಿವಾದಗಳಲ್ಲಿ ಶಿಲ್ಪಾ ಸಿಲುಕುತ್ತಲೇ ಇರುತ್ತಾರೆ. ಈ ಹಿಂದೆ ಹಾಲಿವುಡ್ ನಟ ರಿಚರ್ಡ್ ಗೇರ್ ಸಾರ್ವಜನಿಕವಾಗಿ ಶಿಲ್ಪಾರನ್ನು ಚುಂಬಿಸಿ ವಿವಾದವೆಬ್ಬಿಸಿದ್ದ.

''ಚುಂಬನ ಕೊಟ್ಟದ್ದು ಅವನು, ಸ್ವೀಕರಿಸಿದ್ದು ನಾನು... ನಿಮ್ಮದೇನು ತಂಟೆ'' ಎಂಬ ಧಾಟಿಯಲ್ಲಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದರು. ಇದೀಗ ಅರ್ಚಕರೊಬ್ಬರು ಶಿಲ್ಪಾರನ್ನು ಚುಂಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ನಾಗರಪಂಚಮಿಯಂದು ದೇಗುಲಕ್ಕೆ ಭೇಟಿ ನೀಡಿದ್ದ ಶಿಲ್ಪಾರನ್ನು ದೇಗುಲದ ಅರ್ಚಕರು ಆತ್ಮೀಯವಾಗಿ ಅಪ್ಪಿ ಕೆನ್ನೆಗೆ ಮುತ್ತು ನೀಡಿದರು.

ಘಟನೆ ನಡೆದದ್ದು ಹೀಗೆ...ಚಿತ್ರೀಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈನ ಸಖಿಗೋಪಾಲ್ ಮಂದಿರಕ್ಕೆ ಶಿಲ್ಪಾ ಭೇಟಿ ಕೋಟ್ಟಿದ್ದರು. ಪೂಜೆ ಎಲ್ಲಾ ಮುಗಿದ ಬಳಿಕ ಅರ್ಚಕರನ್ನು ಆಶೀರ್ವದಿಸುವಂತೆ ಕೇಳಿದರು. ಅರ್ಚಕರು ಶಿಲ್ಪಾರನ್ನು ಆತ್ಮೀಯವಾಗಿ ಅಪ್ಪಿ, ಕೆನ್ನೆಗೆ ಮುತ್ತುಕೊಟ್ಟು ಆಶೀರ್ವದಿಸಿದರು. ಶಿಲ್ಪಾ ಮುಖದಲ್ಲಿ ಎಂಥದೋ ಧನ್ಯತಾ ಭಾವ ಮೂಡಿತ್ತು.

ಈ ಘಟನೆಯಿಂದ ಮಂದಿರದಲ್ಲಿದ್ದ ಇತರೆ ಭಕ್ತಾದಿಗಳ ಪಿತ್ತ ನೆತ್ತಿಗೇರಿತು. '' ಚಿತ್ರೀಕರಣದ ಸಿಬ್ಬಂದಿ ತಮ್ಮ ಎಲ್ಲಾ ಸರಕು ಸರಂಜಾಮುಗಳನ್ನು ಮಂದಿರದ ಆವರಣದಲ್ಲಿ ತಂದಿಟ್ಟಿದ್ದಾರೆ. ಪಾದರಕ್ಷೆ ಸಮೇತ ಅವರೆಲ್ಲಾ ಮಂದಿರಕ್ಕೆ ಪ್ರವೇಶಿಸಿದ್ದಾರೆ. ನಮ್ಮ ಪವಿತ್ರ ಭಾವನೆಗಳಿಗೆ ಧಕ್ಕೆಯಾಗುವಂತೆ ವರ್ತಿಸಿದ್ದಾರೆ'' ಎಂದು ಭಕ್ತಾದಿಗಳು ದೂರಿದರು. ನಂತರ ಅವರೆಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಶಿಲ್ಪಾ ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada