»   »  ಕಾವೇರಿ ತಿಳಿನೀರನ್ನು ಕದಡುತ್ತಿರುವ ತಮಿಳು ಚಿತ್ರ

ಕಾವೇರಿ ತಿಳಿನೀರನ್ನು ಕದಡುತ್ತಿರುವ ತಮಿಳು ಚಿತ್ರ

Subscribe to Filmibeat Kannada

ಕನ್ನಡ ಮತ್ತು ತಮಿಳು ಸೋದರ ಭಾಷೆಗಳ ನಡುವೆ ಉತ್ತಮ ಬಾಂಧ್ಯವ್ಯ ವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.ಆದರೆ ತಮಿಳಿನ 'ತಂಬಿವುದೈನ್' ಎಂಬ ಚಿತ್ರ ಇದಕ್ಕೆ ತದ್ವಿರುದ್ಧವಾದ ಕತೆಯನ್ನು ಒಳಗೊಂಡಿದೆ!

ಕಾವೇರಿ ನದಿ ನೀರಿನ ವಿವಾದ ಇತ್ಯರ್ಥವಾಗಬೇಕಾದರೆ ನೆರೆ ರಾಜ್ಯದ ಪ್ರಮುಖ ಸಚಿವರೊಬ್ಬರನ್ನು (ಕರ್ನಾಟಕ) ಅಪಹರಿಸಬೇಕು ಎಂಬ ಚಿತ್ರಕಥೆಯನ್ನು ತಮಿಳಿನ 'ತಂಬಿವುದೈನ್' ಚಿತ್ರ ಒಳಗೊಂಡಿದೆ. ವಿವಾದಾತ್ಮಕ ಚಿತ್ರಕಥೆಯನ್ನು ಒಳಗೊಂಡಿರುವ ಈ ಚಿತ್ರ ಈಗ ಸೆನ್ಸಾರ್ ಮಂಡಳಿಯ ಆಕ್ಷೇಪಕ್ಕೆ ಗುರಿಯಾಗಿದೆ.

ಈ ಚಿತ್ರವನ್ನು ರಾಜಾ ಮಹೇಶ್ ನಿರ್ದೇಶಿಸಿದ್ದಾರೆ. ಕಾವೇರಿ ನದಿ ನೀರಿನ ವಿವಾದದಿಂದ ತಂಜಾವೂರಿನ ರೈತರು ಪಡುವ ಕಷ್ಟಗಳ ಸರಮಾಲೆಯೇ ಚಿತ್ರದ ಕಥಾವಸ್ತು. ನದಿನೀರಿನ ವಿವಾದವನ್ನು ಪರಿಹರಿಸಲು ಚಿತ್ರದ ನಾಯಕ ನೆರೆ ರಾಜ್ಯದ (ಕರ್ನಾಟಕ) ಸಚಿವರೊಬ್ಬರನ್ನು ಹಾಗೂ ಆತನ ಹೆಂಡತಿ ಮಕ್ಕಳನ್ನು ಅಪಹರಿಸುತ್ತಾನೆ. ಕಾವೇರಿ ನೀರು ಬಿಟ್ಟರೆ ಅವರನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಾನೆ.. ಚಿತ್ರದ ಕತೆ ಹೀಗೆ ಸಾಗುತ್ತದೆ .

ಈ ವಿವಾದಾತ್ಮಕ ಸನ್ನಿವೇಶವನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ನಿರ್ದೇಶಕರಿಗೆ ಸೂಚಿಸಿದೆ. ಆದರೆ ನಿರ್ದೇಶಕ ರಾಜಾ ಮಹೇಶ್ ಮಾತ್ರ ಇದನ್ನು ಸುತಾರಾಂ ಒಪ್ಪುತ್ತಿಲ್ಲ. ''ಚಿತ್ರದ ಮುಖ್ಯ ಸನ್ನಿವೇಶವೇ ಇದು. ಈ ದೃಶ್ಯವನ್ನು ತೆಗೆಯಲು ಸಾಧ್ಯವಿಲ್ಲ'' ಎಂದು ಅವರು ಸೆನ್ಸಾರ್ ಮಂಡಳಿಗೆ ಸ್ಪಷ್ಟಪಡಿಸಿದ್ದಾರೆ. ವಿಧಿಯಿಲ್ಲದೆ ಸೆನ್ಸಾರ್ ಮಂಡಳಿ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ದೇಶಕರಿಗೆ ಸೂಚಿಸಿದೆ.

ಚಿತ್ರದ ನಿರ್ದೇಶಕ ರಾಜಾ ಮಹೇಶ್ ಮೂಲತಃ ತಂಜಾವೂರು ಜಿಲ್ಲೆಯವರು. ಕಾವೇರಿ ನದಿ ನೀರಿನ ಸಮಸ್ಯೆಯನ್ನು ತಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಜನರ ಸಮಸ್ಯೆಯ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ. ಕಾವೇರಿ ನದಿ ನೀರಿನ ವಿವಾದದಿಂದ ಅಲ್ಲಿನ ರೈತರು ಪಡಬಾರದ ಕಷ್ಟಪಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ತಮ್ಮ ಚಿತ್ರದ ಮೂಲಕ ಪರಿಹಾರ ಸೂಚಿಸಿದ್ದೇನೆ ಎನ್ನುತ್ತಾರೆ ರಾಜಾ ಮಹೇಶ್.

ಆದರೆ ಈ ವಾದವನ್ನು ಸೆನ್ಸಾರ್ ಮಂಡಳಿ ಒಪ್ಪುವ ಸ್ಥಿತಿಯಲ್ಲಿಲ್ಲ. ತಮ್ಮ ಚಿತ್ರ ತಂಬಿವುದೈನ್ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ಸೆನ್ಸಾರ್ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಚಿತ್ರಕ್ಕೆ ಮಹೇಶ್ವರಿ ರಾಜಾ ಮತ್ತು ಅಂಗೀಶ್ವರ್ ಅನ್ಬುಮ್ ನಿರ್ಮಾಪಕರು. ಹೊಸಬರಾದ ಆದಿತ್ಯಾ ಮತ್ತು ಮನೀಶಾ ಚಟರ್ಜಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada