»   » ಅಂತರ್ಜಾಲದಲ್ಲಿ ಪುನೀತ್ 'ಜಾಕಿ' ಹಾಡು ಸೋರಿಕೆ

ಅಂತರ್ಜಾಲದಲ್ಲಿ ಪುನೀತ್ 'ಜಾಕಿ' ಹಾಡು ಸೋರಿಕೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರದ ಹಾಡೊಂದು ಧ್ವನಿಸುರುಳಿ ಬಿಡುಗಡೆಗೂ ಮುನ್ನ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಚಿತ್ರ ಇದಾಗಿದ್ದು 'ಜಾಕಿ' ಹಾಡು ಅಂತರ್ಜಾಲದಲ್ಲಿ ಸೋರಿಕೆಯಾಗಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿ ಹರಿಕೃಷ್ಣ ಸಂಗೀತ ಸಂಯೋಜಿಸಿ ಯೋಗರಾಜ್ ಭಟ್ ಸಾಹಿತ್ಯದ "ಯಕ್ಕಾ ರಾಜಾ..."ಎಂಬ ಹಾಡು ಅದು ಹೇಗೋ ಏನೋ ಕಿಡಿಗೇಡಿಗಳ ಕೈಸೇರಿ ಅಂತರ್ಜಾಲಕ್ಕೆ ಸೇರ್ಪಡೆಯಾಗಿದೆ. ಪೈರಸಿ ಹಾಡನ್ನು ದಯವಿಟ್ಟು ಡೌನ್ ಲೋಡ್ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳಲ್ಲಿ ರಾಘಣ್ಣ ಫೇಸ್ ಬುಕ್ ಮೂಲಕ ವಿನಂತಿಸಿಕೊಂಡಿದ್ದರು.

ರಾಘಣ್ಣನ ವಿನಂತಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಘಣ್ಣ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಆಗಸ್ಟ್ 20ರಂದು 'ಜಾಕಿ' ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ರಾಘಣ್ಣ ಫೇಸ್ ಬುಕ್ ನಲ್ಲಿ ನೀಡಿದ್ದಾರೆ. ಇದರಿಂದ ಪುನೀತ್ ಅಭಿಮಾನಿಗಳು ಸಂತುಷ್ಟರಾಗಿದ್ದಾರೆ.

ಫೇಸ್ ಬುಕ್ ನಲ್ಲಿ ರಾಘಣ್ಣ ಹೀಗೆ ಬರೆದಿದ್ದು ಅದರ ಸಾರಸಂಗ್ರಹ ಹೀಗಿದೆ..."ಪೈರಸಿಯನ್ನು ತಡೆಗಟ್ಟಿ ಎಂಬ ನನ್ನ ಮಾತಿಗೆ ಬೆಲೆ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು. ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ಆಗಸ್ಟ್ 20ರ ವರಮಹಾಲಕ್ಷ್ಮಿ ಹಬ್ಬದದಿನ ಧ್ವನಿಸುರುಳಿ ಬಿಡುಗಡೆ ಮಾಡುತ್ತಿದ್ದೇವೆ " ಎಂದಿದ್ದಾರೆ.

ಕಾನೂನು ಬಾಹಿರವಾಗಿ ಚಿತ್ರದ ಹಾಡುಗಳು ಸೋರಿಕೆಯಾಗಿರುವ ಬಗ್ಗೆ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರ ಸಲಹೆ ಹೀಗಿದೆ..."ಪೈರಸಿಯನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಲು ಇದು ಸಕಾಲ. ಈ ರೀತಿಯ ಚಟುವಟಿಕೆಗಳನ್ನು ತಡೆಯುವ, ಅಂತರ್ಜಾಲದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಂತೆ ಬ್ಲಾಕ್ ಮಾಡುವ ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ" ಎಂದಿದ್ದಾರೆ.

"ಈಗ ಅಂತರ್ಜಾಲಕ್ಕೆ ಸೇರಿಸಿರುವ 'ಜಾಕಿ' ಚಿತ್ರದ ಹಾಡು ಅಪೂರ್ಣವಾಗಿದ್ದು ಕೇಳಲು ಕರ್ಕಶವಾಗಿದೆ. ಮೂಲ ಹಾಡಿನ ಸಂಗೀತ ಹಾಗೂ ಧ್ವನಿಗೆ ಹೋಲಿಸಿದರೆ ಅದು ಸಂಪೂರ್ಣ ಭಿನ್ನವಾಗಿದೆ. ವರಮಹಾಲಕ್ಷ್ಮಿ ಹಬ್ಬದ ತನಕ ಕಾಯಿರಿ 'ಜಾಕಿ' ಧ್ವನಿಸುರುಳಿ ಬಿಡುಗಡೆಯಾಗಲಿದೆ" ಎಂದು ರಾಘಣ್ಣ ತಿಳಿಸಿದ್ದಾರೆ. ಅಂದಹಾಗೆ 'ಜಾಕಿ' ಚಿತ್ರ ಸೆಪ್ಟೆಂಬರ್ 23ರಂದು ಬಿಡುಗಡೆಯಾಗಲಿದೆ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada