»   » ಹೈದರಾಬಾದ್ ಕರ್ನಾಟಕದಲ್ಲಿ ತಮಸ್ಸುಗೆ ತಥಾಸ್ತು!

ಹೈದರಾಬಾದ್ ಕರ್ನಾಟಕದಲ್ಲಿ ತಮಸ್ಸುಗೆ ತಥಾಸ್ತು!

Posted By:
Subscribe to Filmibeat Kannada

ಹೈದರಾಬಾದ್ ಕರ್ನಾಟಕದಲ್ಲಿ 'ತಮಸ್ಸು' ಚಿತ್ರದ ವಿವಾದ ಸದ್ಯಕ್ಕೆ ಪರಿಹಾರ ಕಂಡಿದೆ. ಇದೇ ಶುಕ್ರವಾರ(ಸೆ.11) 'ತಮಸ್ಸು' ಚಿತ್ರ ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪ್ರದರ್ಶಕರು ಹಾಗೂ ಸೆನ್ಸಾರ್ ಮಂಡಳಿಯೊಂದಿಗಿನ ಗುದ್ದಾಟಕ್ಕೆ ತೆರೆಬಿದ್ದಿದೆ.

ಮಾತುಕತೆಗೆ ರಾಕ್ ಲೈನ್ ವೆಂಕಟೇಶ್ ಹುಬ್ಬಳ್ಳಿಗೆ ಬರಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಚಿತ್ರ ಪ್ರದರ್ಶಕರ ಮಹಾ ಮಂಡಳ ಅಧ್ಯಕ್ಷ ಓದುಗೌಡರ್ ಆಗ್ರಹಿಸಿದ್ದರು. ಅವರ ಆಗ್ರಹಕ್ಕೆ ಸ್ಪಂದಿಸಿದ ರಾಕ್ ಲೈನ್ ವೆಂಕಟೇಶ್ ಇಂದು ಹುಬ್ಬಳ್ಳಿಗೆ ಆಗಮಿಸಿದ್ದರು. ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸಂಧಾನ ಸಭೆಯ ಬಳಿಕ 'ತಮಸ್ಸು' ವಿವಾದ ಸುಖಾಂತ್ಯ ಕಂಡಿದೆ.

ತಮಸ್ಸು ನಿರ್ಮಾಪಕರು, ಹೈದರಾಬಾದ್ ಕರ್ನಾಟಕ ಪ್ರದರ್ಶಕರು ಮತ್ತು ಚಿತ್ರ ಮಂದಿರಗಳ ಮಾಲೀಕರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ಬುಧವಾರ ಸಂಜೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಹಾಗಾಗಿ ಸಮಸ್ಯೆಯನ್ನು ಬಗೆಹರಿಸಲು ಇಂದು ಹುಬ್ಬಳ್ಳಿಗೆ ಸ್ವತಃ ರಾಕ್ ಲೈನ್ ವೆಂಕಟೇಶ್ ಅವರು ಆಗಮಿಸಿದ್ದರು.

ಬೆಂಗಳೂರು ಪ್ರದರ್ಶಕರು ಹಾಗೂ ಚಿತ್ರಮಂದಿರದ ಮಾಲೀಕರನ್ನಷ್ಟೇ ಪರಿಗಣಿಸಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ಭಾಗವನ್ನು ಕಡೆಗಣಿಸಲಾಗುತ್ತಿದೆ. ನಮಗೆ ನಿರಂತರವಾಗಿ ಕನ್ನಡ ಚಿತ್ರಗಳನ್ನು ನೀಡುತ್ತಿಲ್ಲ. ಈಗ ಏಕಾಏಕಿ 'ತಮಸ್ಸು' ಚಿತ್ರವನ್ನು ಶುಕ್ರವಾರವೇ ಬಿಡುಗಡೆ ಮಾಡಿ ಎಂಬುದು ಎಷ್ಟು ಸರಿ? ಪರಭಾಷಾ ಚಿತ್ರ ಪ್ರದರ್ಶನದ ಹಕ್ಕುಗಳನ್ನು ಈಗಾಗಲೆ ಖರೀದಿಸಲಾಗಿದೆ. ತಮಗೆ ನಷ್ಟವಾಗುತ್ತದೆ ಎಂಬುದು ಹೈದರಾಬಾ ಕರ್ನಾಟಕದ ಪ್ರದರ್ಶಕರು ಅಳಲು ತೋಡಿಕೊಂಡಿದ್ದರು.

ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಓದುಗೌಡ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಮನವರಿಕೆ ಮಾಡಿದ್ದಾರೆ. ಅವರು ಎಲ್ಲಾ ಬೇಡಿಕೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಚಿತ್ರ ಪ್ರದರ್ಶಕರ ಮಹಾ ಮಂಡಳ ಜುಲೈ 9ರವರೆಗೆ ಫಿಲಂ ಚೇಂಬರ್ ಗೆ ಗಡುವು ನೀಡಿದೆ. ತಮಸ್ಸು ಚಿತ್ರದ ಜೊತೆಗೆ ಶ್ರೀಮೋಕ್ಷ ಚಿತ್ರವೂ ಜೂ.11ರಂದು ತೆರೆಕಾಣುತ್ತಿದೆ. ಮುಂದಿನ ತಿಂಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿಣಿ ಸಭೆಯನ್ನು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada