»   » ಸ್ವಾಮಿಗಳೆ ಆಹಾ ಏನು ನಿಮ್ಮಲೀಲೆ: ಗುರು

ಸ್ವಾಮಿಗಳೆ ಆಹಾ ಏನು ನಿಮ್ಮಲೀಲೆ: ಗುರು

Posted By: *ಉದಯರವಿ
Subscribe to Filmibeat Kannada

ಸ್ವಾಮಿ ನಿತ್ಯಾನಂದ ಲೈಂಗಿಕ ಪ್ರಕರಣ ಬಗ್ಗೆ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಪ್ರಜ್ಞಾವಂತ ನಾಗರೀಕನಾಗಿ 'ಸ್ವಾಮೀಜಿ ರಾಸಲೀಲೆ'ಯನ್ನು ಅವರು ಖಂಡಿಸಿದ್ದಾರೆ. ಸ್ವಾಮೀಜಿ ತಾವು ಶುದ್ಧಹಸ್ತರು ಎನ್ನುವುದಾದರೆ, ಅವರ ಎಲ್ಲ ಅಕ್ರಮ ಆಸ್ತಿಯನ್ನು ಸರಕಾರಕ್ಕೆ ಹಸ್ತಾಂತರಿಸಿ ತಾವೊಬ್ಬ ಸರ್ವಸಂಗ ಪರಿತ್ಯಾಗಿ ಎಂಬುದನ್ನು ಸಾಬೀತುಪಡಿಸಲಿ ಎಂದು ನಿತ್ಯಾನಂದ ಸ್ವಾಮೀಜಿಗೆ ಸವಾಲೆಸೆದಿದ್ದಾರೆ.

ಮೂರು ವರ್ಷಗಳ ಹಿಂದೆ 'ಮಠ'ದಂತಹ ವೈಚಾರಿಕ ಚಿತ್ರದ ಮೂಲಕ ಗುರುಪ್ರಸಾದ್ ಕಾವಿಯ ಪವಿತ್ರತೆಯ ಕುರಿತು ಬೆಳಕು ಚೆಲ್ಲಿದ್ದರು. ಮಠಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತಮ್ಮ ಚಿತ್ರದ ಮೂಲಕ ಸಂದೇಶ ರವಾನಿಸಿದ್ದರು. ಇದೀಗ ಕಳ್ಳ ಸ್ವಾಮೀಜಿಗಳು, ಕಾವಿಯುಟ್ಟ ಕಪಟ ಸಂನ್ಯಾಸಿಗಳ ವಿರುದ್ಧ ಮತ್ತೊಮ್ಮೆ ಗುರು ಪ್ರಸಾದ್ ಚಾಟಿ ಬೀಸಿದ್ದಾರೆ.

ಟಿವಿ 9 ಕನ್ನಡ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ವಿಡಿಯೋ ಮೂಲಕ ಸ್ವಾಮೀಜಿಯ 'ಲೀಲೆ' ಏನು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಆದರೆ ಸ್ವಾಮೀಜಿ ಮಾತ್ರ ತಮ್ಮ 'ಲೀಲೆ'ಯನ್ನು ಒಪ್ಪುತ್ತಿಲ್ಲ. ಇದೆಲ್ಲಾ ನಕಲಿ ಎನ್ನುತ್ತಿದ್ದಾರೆ. ಅವರೇನು ತಪ್ಪು ಮಾಡಿಲ್ಲ, ಯಾವುದೇ ಅಕ್ರಮ ಆಸ್ತಿ ಪಾಸ್ತಿ ಮಾಡಿಲ್ಲ ಅನ್ನುವುದಾದರೆ ಭಯ ಯಾಕೆ? ಅವರ ಎಲ್ಲ ಅಕ್ರಮ ಆಸ್ತಿಯನ್ನು ಸರಕಾರಕ್ಕೆ ಹಸ್ತಾಂತರಿ ತಾವೊಬ್ಬ ನಿಜವಾದ ಸ್ವಾಮೀಜಿ ಎಂದು ನಿರೂಪಿಸಿಕೊಳ್ಳಲಿ.

ನಿತ್ಯಾನಂದನನ್ನು ನಂಬಿ ಅವನ ಹಿಂದೆ ಬಿದ್ದಿರುವ ಅನುಯಾಯಿಗಳು ಮೂರ್ಖರು. ಬಿಡದಿ ಆಶ್ರಮದಲ್ಲಿ ನಟಿ ರಂಜಿತಾ ಜೊತೆ ಸಿಕ್ಕಿಬಿದ್ದಿದ್ದರೂ ಇನ್ನೂ ನಿತ್ಯಾನಂದನೇ ತಮ್ಮ ಗುರು ಎಂದು ನಂಬಿದ್ದಾರೆ. ಅವನೊಬ್ಬ ಅದ್ಭುತ 'ನಟ' ಎಂಬುದು ಇನ್ನೂ ಅವರ ಗಮನಕ್ಕೆ ಬಂದಿಲ್ಲ. ನಿತ್ಯಾನಂದನನ್ನು ಇನ್ನೂ ಬೆಂಬಲಿಸುತ್ತಿದ್ದಾರೆ. ಅವನೊಬ್ಬ ದೇವಮಾನವ ಎಂದು ನಂಬಿದ್ದಾರೆ ಎಂದು ಗುರುಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜಸೇವೆಯೆ ತಮ್ಮ ಬೀಜಮಂತ್ರ ಎಂದು ತಿಳಿದ ಶಿವಕುಮಾರಸ್ವಾಮಿಯಂತಹ ಅನೇಕ ಸ್ವಾಮಿಗಳಿದ್ದಾರೆ. ನಿತ್ಯಾನಂದನಂತಹ ಕಪಟ ಸ್ವಾಮಿಗಳು ನಿಜವಾದ ಸ್ವಾಮಿಗಳ ಹೆಸರಿಗೆ ಕಳಂಕ ತರುತ್ತಿದ್ದಾರೆ. ಕೊನೆಯದಾಗಿ ನಾನು ಹೇಳುವುದೇನೆಂದರೆ, ನಿತ್ಯಾನಂದನ ಅನುಯಾಯಿಗಳು ಎಚ್ಚೆತ್ತುಕೊಳ್ಳಬೇಕು. ಕಪಟ ಸ್ವಾಮಿಗೆ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು. ಹಾಗೆಯೇ ಸ್ವಾಮೀಜಿ ಸಹ ಈ ನಾಟಕವನ್ನು ನಿಲ್ಲಿಸಿ, ತಮ್ಮ ಮುಖವಾಡವನ್ನು ತೆಗೆದು ಶುದ್ಧಹಸ್ತರಾಗಿ ಜನರ ಮುಂದೆ ಬರಲಿ ಎಂದು ಗುರುಪ್ರಸಾದ್ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada